ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಜರಾಸಂಧನನ್ನು ಎದುರಿಸಿ ನಿಂತಿದ್ದಾರೆ, ಪಾಂಡವರಿಬ್ಬರು, ಹಾಗೂ ಕೃಷ್ಣ. ವೇಷಾಂತರದಲ್ಲಿ ಬಂದಿರುವುದಾದರೂ ತಾವು ವಾಸ್ತವವಾಗಿ ಯಾರೆಂಬುದನ್ನು ತಿಳಿಸಹೊರಟ ಕೃಷ್ಣನು ತನ್ನ ಮಾತನ್ನು ಮುಂದುವರೆಸುತ್ತಿದ್ದಾನೆ.
"ಜರಾಸಂಧನೇ, ಸ್ವರ್ಗಪ್ರಾಪ್ತಿಗೆ ಕಾರಣವಾಗಬಲ್ಲವು ಹಲವು: ಸ್ವರ್ಗವು ದೊರಕುವುದು ವೇದಾಧ್ಯಯನದಿಂದ; ಸ್ವರ್ಗವನ್ನು ಹೊಂದಲು ಕಾರಣವೆನಿಸುವುದು ಮಹಾಯಶಸ್ಸು; ಸ್ವರ್ಗಸಂಪಾದನೆಗೆ ಹೇತುವಾದದ್ದು ತಪಸ್ಸು; ಇವೆಲ್ಲಕ್ಕಿಂತಲೂ ಮಿಗಿಲಾದದ್ದೆಂದರೆ ಹಿಂಜರಿಯದೆಯೇ ಯುದ್ಧದಲ್ಲಿ ಕ್ಷತ್ರಿಯನು ಮೃತ್ಯುವನ್ನು ಹೊಂದುವಂತಹುದು.
ಯುದ್ಧದಲ್ಲಿಯ ಸಾವೆಂದರೆ ಕ್ಷತ್ರಿಯನು ವೈಜಯಂತವನ್ನು ಹೊಂದಿದಂತೆಯೇ – ಅದಂತೂ, ಇಂದ್ರನ ಪ್ರಾಸಾದ, ಎಂದರೆ ರಾಜಗೃಹವೇ! ಸರ್ವಗುಣಗಳಿಂದಲೂ ಪರಿಪೂರ್ಣವಾದುದು ಅದು. ಯುದ್ಧವೆಂಬುದನ್ನು ಆಧರಿಸಿಯೇ ಅಸುರರನ್ನು ಪರಾಭವಗೊಳಿಸಿ ಇಂದ್ರನು ಜಗದ್ರಕ್ಷಕನಾಗಿರುವುದು.
ಈಗ ನಮ್ಮೊಂದಿಗೆ ಯುದ್ಧವೆಂಬುದೇನುಂಟೋ ಅದು ನಿನಗೆ ಸ್ವರ್ಗ-ಪ್ರಾಪಕವೇ ಸರಿ. ಈ ಬಗೆಯು ಮತ್ತಾರಿಗೆ ದೊರಕೀತು?
"ಮಾಗಧರ ವಿಪುಲವಾದ ಸೈನ್ಯವೆನಗಿದೆ" ಎಂಬ ಬಾಹುಲ್ಯದ ಬಲದಿಂದ ನೀನು ದರ್ಪಗೊಂಡಿರುವೆ. ಹಾಗೆ ನೀನು ದರ್ಪಗೊಂಡು ಅನ್ಯರನ್ನು ಅವಮಾನಿಸುವುದಲ್ಲ, ತಿಳಿದುಕೋ. ನರ-ನರನಲ್ಲೂ - ಎಂದರೆ ಪ್ರತಿಯೊಬ್ಬ ಮನುಷ್ಯನಲ್ಲೂ - ವೀರ್ಯವಿರುವುದು, ನಿನಗೆ ಸಮಾನವೆನಿಸುವ ತೇಜಸ್ಸಿರುವುದು. ನಿನಗಿಂತಲೂ ಅತಿಶಯವಾದದ್ದೂ ಉಂಟು, ರಾಜನೇ!
ಎಲ್ಲಿಯವರೆಗೆ ಇದೆಲ್ಲಾ ನಿನ್ನ ಅರಿವಿಗೆ ಬರುವುದಿಲ್ಲವೋ, ಅಲ್ಲಿಯವರೆಗಷ್ಟೆ ಇದನ್ನೆಲ್ಲಾ ನಾವು ಸಹಿಸಿಕೊಳ್ಳಬೇಕಾಗಿಬರುವಂತಹುದು! ಎಂದೇ, ರಾಜನೇ, ನಾನು ನಿನಗೆ ಹೇಳುತ್ತಿರುವುದು - ನಿನಗೆ ಯಾರು ಸಮಾನರೋ ಅಂತಹವರ ವಿಷಯದಲ್ಲಿ ನಿನ್ನ ಸ್ವಾಭಿಮಾನವನ್ನೂ ದರ್ಪವನ್ನೂ ಬಿಡು, ಮಾಗಧನೇ!
ನಿನ್ನ ಮಕ್ಕಳು ಮಂತ್ರಿಗಳೊಂದಿಗೆ ಹಾಗೂ ಸೈನ್ಯದೊಂದಿಗೆ ನೀನು ಯಮಲೋಕವನ್ನು ಸೇರಬಾರದಲ್ಲವೇ?
ದಂಭೋದ್ಭವ, ಕಾರ್ತವೀರ್ಯ, ಉತ್ತರ, ಬೃಹದ್ರಥ - ಎಂಬೀ ನಾಲ್ವರು ರಾಜರೂ ನಾಶಹೊಂದಿದರು - ತಮ್ಮ ಸೈನ್ಯಸಮೇತರಾಗಿಯೇ. ಏಕೆ? ತಮಗಿಂತಲೂ ಹಿರಿಯರನ್ನು ಅವಮಾನಗೊಳಿಸಿಯೇ !
ನಿನ್ನೊಡನೆ ಯುದ್ಧಮಾಡಬಯಸುತ್ತಿರುವ ನಾವು ಬ್ರಾಹ್ಮಣರಲ್ಲ. ನಾನು ಶೌರಿಯಾದ ಹೃಷೀಕೇಶ, ಎಂದರೆ ವಸುದೇವಪುತ್ರ. ಹಾಗೂ ಇವರಿಬ್ಬರೂ ಪಾಂಡವರು. ಇವರಿಬ್ಬರಿಗೂ ನಾನು ಮಾತುಲೇಯ, ಎಂದರೆ ಸೋದರಮಾವನ ಮಗನಾದ ಕೃಷ್ಣ, ನಿನ್ನ ಶತ್ರು - ಎಂಬುದಾಗಿ ತಿಳಿ.
ಇದೋ, ಯುದ್ಧಕ್ಕೆ ನಿನ್ನನ್ನು ಆಹ್ವಾನಿಸುತ್ತಿದ್ದೇವೆ, ರಾಜನೇ. ಸ್ಥಿರನಾಗಿ ಯುದ್ಧಮಾಡು, ಮಾಗಧ! ನಿನಗಿರುವುದು ಎರಡೇ ಆಯ್ಕೆಗಳು:ಇಲ್ಲವೇ ಎಲ್ಲ ರಾಜರನ್ನೂ ಬಂಧಮುಕ್ತಗೊಳಿಸು; ಇಲ್ಲವೇ ಯಮಸದನಕ್ಕೆ ಹೋಗು" – ಎಂದನು.
ಕೃಷ್ಣನು ಹೀಗೆ ಹೇಳಲು, ಜರಾಸಂಧನು ನುಡಿದನು: "ಮೊದಲು ನೀನಿದನ್ನು ತಿಳಿದುಕೋ, ಕೃಷ್ಣಾ! ಯಾವ ರಾಜರು ನನ್ನೊಡನೆ ಸೆಣಸಿನಲ್ಲಿ ಸೋತಿಲ್ಲವೋ, ಅಂತಹವರನ್ನೊಬ್ಬರನ್ನೂ ನಾನು ಕೈದಿಯಾಗಿಸಿಲ್ಲ. ನನಗೆ ಪ್ರತಿಭಟಿಸಿಯೂ ನನ್ನಿಂದ ಸೋಲನ್ನು ಕಾಣದ ಯಾವೊಬ್ಬ ವ್ಯಕ್ತಿಯೂ ಇಲ್ಲಿಲ್ಲ.
ಕೃಷ್ಣಾ! ಇದನ್ನೇ ಅಲ್ಲವೆ ಕ್ಷತ್ರಿಯನ ಜೀವಿಕೆಯೆಂಬುದಾಗಿ ಹೇಳುವುದು?: ಏನೆಂದರೆ, ಪರಾಕ್ರಮವನ್ನು ತೋರಿಸಿ, ಶತ್ರುವನ್ನು ವಶಕ್ಕೆ ತೆಗೆದುಕೊಂಡು, ಬಳಿಕ ತನಗೆ ತೋಚಿದಂತೆ ಆಚರಿಸುವುದು - ಎಂಬುದು.
ದೇವತೆಗಳಿಗೆ ಬಲಿಗೊಡಲೆಂದು ಈ ರಾಜರುಗಳನ್ನು ನಾನು, ಕ್ಷತ್ರಿಯ-ವ್ರತವನ್ನು ಮರೆಯದೆ, ಸೆರೆಯಾಗಿಸಿದ್ದೇನೆ. ಈಗೇನು ನಿನಗೆ ಭಯಪಟ್ಟುಕೊಂಡು ಅವರುಗಳನ್ನು ನಾನು ವಿಮುಕ್ತಗೊಳಿಸಬೇಕೇನು?
ನಿನ್ನ ಸೇನಾವ್ಯೂಹದೊಂದಿಗೆ ನನ್ನ ಸೇನಾವ್ಯೂಹವು ಹೋರಲಿ. ಅಥವಾ ಒಂಟಿಯಾಗಿ ಒಂಟಿಯಾದವನ ಮೇಲೆ ಹೋರಾಡುವುದೆಂದರೆ ಹಾಗೂ ಸರಿಯೇ. ಅಥವಾ ಇಬ್ಬರೊಂದಿಗೋ ಮೂವರೊಂದಿಗೋ ಸೆಣಸುವುದೆಂದರೆ ಹಾಗೂ ಸರಿಯೇ! ನಾನು ಯಾವುದಕ್ಕೂ ಸಿದ್ಧ! " ಎಂದನು, ಜರಾಸಂಧ.
ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.