ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಈಗಂತೂ ನಿತ್ರ್ಯವೂ ಪತ್ರಿಕೆಗಳಲ್ಲಿ ಯುದ್ಧದ ಸಮಾಚಾರವೇ. ಗೀತೋಪದೇಶವಾದುದೂ ಒಂದು ಯುದ್ಧಸಂದರ್ಭದಲ್ಲೇ. ಅಣ್ಣತಮ್ಮಂದಿರ ಮಕ್ಕಳು ರಾಜ್ಯನಿಮಿತ್ತವಾಗಿ ಹೊಡೆದಾಡುವ ಸಂದರ್ಭವದು. ಏಕೆ ಬೇಕು ರಾಜ್ಯ? ಏಕೆ ಬೇಡ ರಾಜ್ಯ? - ಈ ಜಿಜ್ಞಾಸೆಯು ಗೀತೆಯ ಆದಿ-ಅಂತಗಳಲ್ಲೂ, ಅಲ್ಲಲ್ಲಿ ಮಧ್ಯದಲ್ಲಿಯೂ, ಕಂಡುವಂತಹುದೇ.
ನಮಗೇ ಅದೇಕೋ ಅರ್ಜುನನ ಮಾತೇ ಒಮ್ಮೊಮ್ಮೆ ಹತ್ತಿರವಾಗುತ್ತದೆ. ಕೃಷ್ಣನ ತರ್ಕವೂ ಸಿದ್ಧಾಂತವೂ ಗಹನವೆಂದೇ ತೋರುತ್ತದೆ. ಆದರೂ ಕೃಷ್ಣನ ಮಾತನ್ನು ಎತ್ತಿಹಾಕಲು ಮನಸ್ಸೂ ಬರುವುದಿಲ್ಲ: ಎಷ್ಟಾದರೂ ದೇವನಲ್ಲವೆ, ಅವನು? ದೇವರೇ ತಪ್ಪು ಮಾಡುವನೇ? ಮಾಡಿಸುವನೇ? ಈ ಭರವಸೆಯೇ ನಮಗೆ ಕೃಷ್ಣನ ಮಾತನ್ನು ಒಪ್ಪಲು ಆಧಾರವಾಗಿಬಿಡುತ್ತದೆ.
ಏಕೆ ಹೀಗೆ?
ಮೊದಲು ಕೃಷ್ಣನ ಒಂದೆರಡು ಮಾತುಗಳನ್ನು ಗಮನಿಸೋಣ. ಅದೂ ಯುದ್ಧವನ್ನೇ ಕುರಿತು. ಅರ್ಜುನಾ, ನೀನು ಯುದ್ಧವನ್ನು ಮಾಡುವುದಿಲ್ಲವೆನ್ನುವೆಯಾ? ಅಲ್ಲಿಗೆ ನೀನು ಸ್ವಧರ್ಮವನ್ನೂ ಬಿಟ್ಟು, ಕೀರ್ತಿಯನ್ನು ಕಳೆದುಕೊಂಡಂತೆ! ಪಾಪವನ್ನೂ ಸಂಪಾದಿಸಿಕೊಂಡಂತೆ!
ಮುಂದೇನು? ಜನರು ನಿನ್ನ ಅಪಕೀರ್ತಿಯನ್ನು ಸಾರುವರು. ಸಂಭಾವಿತರಾದವರಿಗೆ ಅಕೀರ್ತಿಯೆಂಬುದು ಮರಣಕ್ಕಿಂತಲೂ ಹೀನವಲ್ಲವೇ? ಹೆದರಿಕೆಯಿಂದ ರಣಾಂಗಣದಿಂದ ಓಡಿಹೋದ ಹೇಡಿಯೆನ್ನುತ್ತಾರೆ, ಮಹಾರಥರು! ಬದಲಾಗಿ ನೀನು ಯುದ್ಧ ಮಾಡಿದಲ್ಲಿ, ಸತ್ತೆಯೋ ಸ್ವರ್ಗವನ್ನು ಪಡೆಯುವೆ. ಗೆದ್ದೆಯೋ ಭೂಮಂಡಲವನ್ನು ಭೋಗಿಸುವೆ!
ಅಷ್ಟೇಕೆ? ನಾನೇ ಎಲ್ಲರನ್ನೂ ಕೊಂದಾಗಿದೆ, ನೀನು ನಿಮಿತ್ತಮಾತ್ರ - ಎಂದೂ ಉದ್ಗರಿಸಿದ!
ಕೊನೆಯಲ್ಲಂತೂ, “ನೀನೇನಾದರೂ ಅಹಂಕಾರಕ್ಕೆ ಪಕ್ಕಾಗಿ ನಾನು ಯುದ್ಧ ಮಾಡುವುದಿಲ್ಲವೆಂದುಕೊಂಡೆಯೋ, ಅಂತಹ ನಿನ್ನ ನಿಶ್ಚಯವೇ ನಿರರ್ಥಕ. ಏಕೆನ್ನುವೆಯೋ? ನಿನ್ನ ಪ್ರಕೃತಿಯೇ ನಿನ್ನನ್ನು ಪ್ರೇರಿಸುವುದು. ಮೋಹದಿಂದ ನೀನು ಒಲ್ಲೆಯೆನ್ನುವುದನ್ನು ನೀನು ಪರವಶನಾಗಿಯೇ ಮಾಡುವೆ!”
ಇವೆಲ್ಲಾ ಯುದ್ಧಪ್ರೇರಕವಾದ ಮಾತುಗಳೇ!
ಯುದ್ಧವನ್ನು ಬೇಡವೆನ್ನುವ ಅರ್ಜುನನ ಮಾತುಗಳನ್ನೊಮ್ಮೆ ನೋಡುವಾ ಎರಡು ಕಡೆ ಇದ್ದ ಮಂದಿಯನ್ನು ಕಂಡು ಕಂಗಾಲಾದ, ಅರ್ಜುನ. ಎಲ್ಲರೂ ತನ್ನವರೇ: ಪಿತೃ-ಪಿತಾಮಹರು, ಭ್ರಾತೃ-ಪುತ್ರ-ಪೌತ್ರರು, ಮಾತುಲ-ಶ್ವಶುರ-ಆಚಾರ್ಯರುಗಳು!
ಆತನಿಗೆ ತೀವ್ರದಯೆಯುಕ್ಕಿತು. ನಡುಕವೂ ಜೊತೆಗೇ ಉಂಟಾಯಿತು! ಸ್ವಜನಹನನ ಸರಿಯಲ್ಲವೆಂದ. ನನಗೆ ವಿಜಯ-ರಾಜ್ಯ-ಸುಖಗಳು ಬೇಡವೆಂದ. ಬದುಕಿದ್ದು ತಾನೇ ಪ್ರಯೋಜನವೇನೆಂದ. ಕುಲಕ್ಷಯದ ಪರಿಣಾಮಗಳನ್ನು ಪಟ್ಟಿಮಾಡಿದ. ರಾಜ್ಯಸುಖದ ಲೋಭದಿಂದ ಕೊಲ್ಲುವುದು ಮಹಾಪಾಪವಲ್ಲವೇ? - ಎಂದ. ಕೌರವರೇ ನಮ್ಮನ್ನು ಕೊಲ್ಲುವುದೇ ತೆರನೆಂದೂ ವಾದಿಸಿದ. ಸೆಣಸಲು ನೆರೆದಿರುವವರನ್ನು ರಕ್ತಸಿಕ್ತಭೋಗಕ್ಕಾಗಿ ಕೊಲ್ಲುವುದೇ? ಎಂದ.
ಅರ್ಜುನನ ಮಾತಿನಲ್ಲಿ ಹೆಜ್ಜೆಹೆಜ್ಜೆಗೂ ರಾಜ್ಯ-ಸುಖ-ಲೋಭಗಳ ಮಾತುಗಳೇ! ಎಲ್ಲವೂ ಲೋಭದ ಕೈವಾಡವೆಂದಂತಾಯಿತು! ಎಂದೇ ಕೃಷ್ಣನು ಲೋಭದ ಮೂಲಕ್ಕೇ ಹೋದದ್ದು.
“ಕಾಮ-ಕ್ರೋಧ-ಲೋಭಗಳೇ ನರಕದ್ವಾರ. ಇವುಗಳನ್ನು ಗೆಲ್ಲಲು ಬೇಕಾದದ್ದು ಇಂದ್ರಿಯ-ನಿಯಮನ. ಲೋಭದ ಸಹಚಾರಿಗಳಾದ ಕಾಮ-ಕ್ರೋಧಗಳೇ, ಅಥವಾ ಕಾಮವೇ, ನಿಜವಾದ ಶತ್ರು.” ಭಗವದ್ಗೀತೆಯು ಮಹಾಭಾರತದ ಭೀಷ್ಮಪರ್ವದಲ್ಲಿ ಬರುವಂತಹುದು. ಆಶ್ವಮೇಧಿಕಪರ್ವದಲ್ಲಿ ಬರುವ ಅನುಗೀತಾಪರ್ವದಲ್ಲಿಯ ಒಂದು ಪ್ರಸಂಗವನ್ನು ಶ್ರೀರಂಗಮಹಾಗುರುಗಳು ಉಲ್ಲೇಖೀಸುತ್ತಿದ್ದರು. ಇದು ಅಂಬರೀಷಗೀತೆಯೆನಿಸುವುದು.
ಅಂಬರೀಷನು ಬಂದಾಗ ರಾಜ್ಯದಲ್ಲಿ ದುಷ್ಟರು ಹೆಚ್ಚಾಗಿದ್ದರು - ಸಜ್ಜನರಿಗೆ ತೀವ್ರಬಾಧೆಯಾಗಿತ್ತು. ರಾಜ್ಯಸೂತ್ರವನ್ನು ಕೈಗೆತ್ತಿಕೊಂಡ ಅಂಬರೀಷನು ಮೊಟ್ಟಮೊದಲು ಮಾಡಿದುದು ತನ್ನಲ್ಲಿಯ ದೋಷಗಳನ್ನೇ ಮೀರಿ ನಿಂತದ್ದು, ಸಜ್ಜನರನ್ನು ಆದರಿಸಿದ್ದು. ಬಳಿಕವೇ ಸರ್ವಶತ್ರುಗಳನ್ನೂ ಸಂಹರಿಸಿದುದು.
ಅದು ಹೇಗೆ ಸಾಧ್ಯವಾಯಿತೆನ್ನುವುದನ್ನು ವಿವರಿಸುತ್ತಾ ತಾನೇ ಹೇಳುತ್ತಾನೆ: ಮನುಷ್ಯನನ್ನು ದುರ್ಮಾರ್ಗದಲ್ಲಿ ಪ್ರೇರಿಸುವುದು ಲೋಭ. ಅದರ ಒಂದು ಸಮ್ಯಗ್- ಅವೇಕ್ಷಣವು ಬೇಕು. ಎಂದರೆ ಚೆನ್ನಾಗಿ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು. ಧೃತಿಯಿಂದ ಲೋಭವನ್ನು ನಿಗ್ರಹಿಸಿಕೊಳ್ಳಬೇಕು. ಹಾಗೆ ಮಾಡಿಕೊಂಡು ಆತ್ಮನಲ್ಲಿಯ, ಎಂದರೆ ತನ್ನೊಳಗಿನದೇ ಆದ, ರಾಜ್ಯವನ್ನು ಆಳಲು ಬಯಸಬೇಕು. ನಿಜವಾದ ರಾಜ್ಯವೆಂದರೆ ಇದೇ, ಬೇರೆ ರಾಜ್ಯವೆಂಬುದಿಲ್ಲ (ಏತದ್ ರಾಜ್ಯಂ, ನಾನ್ಯದಸ್ತಿ). ಸರಿಯಾಗಿ ಅರಿತುಕೊಂಡರೆ ಜ್ಞಾನಸ್ವರೂಪಿಯಾದ ಆತ್ಮನೇ ರಾಜ.
ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ "ಆತ್ಮರಾಜನು ಈ ಶರೀರವನ್ನು ಹೇಗೆ ಆಳುತ್ತಾನೆಯೋ, ಅಂತೆಯೇ ಆತನ ಪ್ರತೀಕವಾಗಿ ಹೊರಗೆ ರಾಜನು ಆಳುತ್ತಾನೆ." ಕೌಟಲ್ಯನೂ ಸಹ ತನ್ನ ಅರ್ಥಶಾಸ್ತ್ರದಲ್ಲಿ ಅಂಬರೀಷನನ್ನು ಒಬ್ಬ ಆದರ್ಶರಾಜನನ್ನಾಗಿ ಹೇಳಿರುವನು. ಅದೂ ಇಂದ್ರಿಯಸಂಯಮಾಧ್ಯಾಯದಲ್ಲಿಯೇ.
ಮಹಾಭಾರತದಲ್ಲೂ ಕೃಷ್ಣನು ಏತಕ್ಕಾಗಿ ಯುದ್ಧಕ್ಕೆ ಪ್ರಚೋದನೆ ನೀಡಿದುದು? ದುರ್ಯೋಧನನು ಅಮಿತವಾದ ಲೋಭಕ್ಕೆ ವಶನಾಗಿದ್ದನೆಂದೇ. ಒಳಗಣ ಶತ್ರುವನ್ನು ಜಯಿಸದ ಅಧರ್ಮಿಷ್ಠನು ರಾಜ್ಯವನ್ನೆಂತು ಸರೊಯಾಗಿ ಆಳಿಯಾನು? ರಾಜ್ಯಸುಖದ ಲೋಭಕ್ಕಾಗಿ ಅಲ್ಲ ಯುದ್ಧಮಾಡುವುದು, ಧರ್ಮಪ್ರತಿಷ್ಠಾಪನೆಗಾಗಿ.
ಹೀಗಾಗಿ ಲೋಭಕ್ಕಾಗಿ ಆದರೆ ಯುದ್ಧ ಬೇಡ. ಧರ್ಮಸಂಸ್ಥಾಪನೆಗಾಗೆಂದರೆ ಅದು ಅವಶ್ಯವೇ ಸರಿ.
ಸೂಚನೆ: 11/4//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.