Saturday, August 8, 2020

ನವರಸನಾಯಕ ಶ್ರೀರಾಮ-ಉಪಸಂಹಾರ (Navarasanayaka Sri Rama-Upasanhara)

ಲೇಖಕರು: ಡಾII ನಂಜನಗೂಡು ಸುರೇಶ್    
(ಪ್ರತಿಕ್ರಿಯಿಸಿರಿ lekhana@ayvm.in)


  

ಆದಿಕವಿ, ಶ್ರೀವಾಲ್ಮೀಕಿಮಹರ್ಷಿಗಳು ಶ್ರೀರಾಮನನ್ನು ನವರಸನಾಯಕನನ್ನಾಗಿ ಚಿತ್ರಿಸುವುದರಲ್ಲಿ ಯಶಸ್ವಿಯಾಗಿದ್ದಾರೆಂಬುದು ಶ್ರೀಮದ್ರಾಮಾಯಣವನ್ನು ಅಧ್ಯಯನಮಾಡಿದ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಶ್ರೀಮದ್ರಾಮಾಯಣದಲ್ಲಿ ಎಲ್ಲಾ ರಸಗಳೂ ಸಕಾಲದಲ್ಲಿ ಅತ್ಯಂತ ಸಹಜವಾಗಿ ಹರಿದುಬಂದು, ಅತ್ಯಂತ ಔಚಿತ್ಯಪೂರ್ಣವಾಗಿವೆ. ರಸಗಳು ಎಷ್ಟೆಷ್ಟು ಇರಬೇಕೋ ಅಷ್ಟಷ್ಟೇ ಇರುತ್ತಾ ಸರ್ವಾಂಗಸುಂದರವಾಗಿದೆ. ತಾನು ಒಳಗೆ ಅನುಭವಿಸಿದ ಶ್ರೀರಾಮರಸಾಯನವನ್ನು ಸ್ವಲ್ಪವೂ ಅಲುಗಿಸದೇ ಯಥಾವತ್ತಾಗಿ ಹೊರತಂದಿರುವ ರಸರ್ಷಿಗಳಾದ ವಾಲ್ಮೀಕಿಮಹರ್ಷಿಗಳು ಓದುಗರ ಮನಸ್ಸನ್ನು ರಸಪುರುಷನಾದ ಶ್ರೀರಾಮನಲ್ಲಿ ನೆಲೆನಿಲ್ಲುವಂತೆ ಮಾಡಿರುತ್ತಾರೆ.  'ಷಡ್ರಸಗಳು ನಿಸ್ಸತ್ತ್ವನಾದ ನರನಿಗೆ ಸತ್ತ್ವವನ್ನುಂಟುಮಾಡಿ ಚೈತನ್ಯವನ್ನುಂಟುಮಾಡುವಂತೆ ಉತ್ಸಾಹರಹಿತನಾದವನಿಗೆ ನವರಸಗಳು ಚೈತನ್ಯವನ್ನು ತುಂಬಿ ಉತ್ಸಾಹಸಂಪನ್ನನನ್ನಾಗಿಸುತ್ತದೆ'ಯೆಂಬ ಶ್ರೀರಂಗಮಹಾಗುರುವಾಣಿಯು ಇಲ್ಲಿ ಸ್ಮರಣೀಯ.


ಶ್ರೀಸೀತಾರಾಮರ ಮಧುರ ದಾಂಪತ್ಯದಲ್ಲಿ ಶೃಂಗಾರರಸ, ಶಿವಧನುರ್ಭಂಜನ ಮತ್ತು ರಾಕ್ಷಸರೊಡನೆ ಯುದ್ಧ ಸನ್ನಿವೇಶಗಳಲ್ಲಿ ವೀರರಸ, ಕ್ರೌಂಚವಧೆ, ದಶರಥಪುತ್ರಶೋಕವೇ ಮೊದಲಾದ ವಿಷಯಗಳಲ್ಲಿ ಕರುಣರಸ, ಸೇತುಬಂಧ ಮತ್ತು ಸೀತೆಯು ಭೂಮಿಯನ್ನು ಪ್ರವೇಶಿಸಿದ ಸಂದರ್ಭಗಳಲ್ಲಿ ಅದ್ಭುತರಸ, ಶೂರ್ಪಣಖೆಯ ತಿರಸ್ಕಾರಸಮಯದಲ್ಲಿ ಹಾಸ್ಯರಸ, ಯುದ್ಧಸನ್ನಿವೇಶಗಳಲ್ಲಿ ಭಯಾನಕರಸ ಮತ್ತು ಬೀಭತ್ಸರಸಗಳು, ರಾವಣಕುಂಭಕರ್ಣಾದಿಗಳ ವಧಪ್ರಸಂಗಗಳಲ್ಲಿ ರೌದ್ರರಸ ಮತ್ತು ಆಶ್ರಮವಾಸಿಗಳಾದ ಋಷಿಗಳಸಾನ್ನಿಧ್ಯದಲ್ಲಿ ಶಾಂತರಸ– ಹೀಗೆ ನವರಸಗಳನ್ನೂ ಶ್ರೀರಾಮನ ಜೀವನದಲ್ಲಿ ಚಿತ್ರಿಸುವ ಮೂಲಕ ಸಹೃದಯನಲ್ಲಿ ಈ ರಸಗಳೆಲ್ಲವುಗಳ ಉದಯಕ್ಕೆ ಕಾರಣರಾಗಿದ್ದಾರೆ, ಆದಿಕವಿವಾಲ್ಮೀಕಿಗಳು. ಯೋಗಭೋಗಾಯತನವಾದ ಶರೀರಕ್ಕೆ  ಬೇಕಾದ ಶೃಂಗಾರರಸದಿಂದ ಆರಂಭಿಸಿ ಶಾಂತರಸಪರ್ಯಂತ ಎಲ್ಲಾ ರಸಗಳನ್ನೂ ಉಣಬಡಿಸುತ್ತಾ,  ಜೀವಾತ್ಮನು ಪರಮಾತ್ಮನಲ್ಲಿ ನೆಲೆನಿಲ್ಲುವಂತೆ ಮಾಡಿದ್ದಾರೆ ವಾಲ್ಮೀಕಿಗಳು.  'ಶಾಂತಿಸಮೃದ್ಧಮಮೃತಮ್' ಎಂಬ ವೇದವಾಕ್ಯದಂತೆ ಶಾಂತಿಸಮೃದ್ಧವಾದ ಅಮೃತತ್ತ್ವಕ್ಕೆ ಕಾರಣರಾಗಿದ್ದಾರೆ.  'ರಸೋ ವೈ ಸಃ, ರಸಂ ಹ್ಯೇವಾಯಂ ಲಬ್ಧ್ವಾಽಽನಂದೀ ಭವತಿ', 'ಭಗವಂತನೇ ರಸ. ಅವನನ್ನು ಪಡೆದಾಗಲೇ ನರನು ಆನಂದವನ್ನು ಹೊಂದುತ್ತಾನೆ' ಎಂಬ ನೆಲೆಗೆ ಸಹೃದಯನನ್ನು ಒಯ್ಯುತ್ತಾರೆ.  ಕಾವ್ಯದ ಸಕಲಪ್ರಯೋಜನಗಳಲ್ಲಿ ಅತ್ಯಂತ ಮುಖ್ಯವಾದ, 'ಸದ್ಯಃ ಪರನಿರ್ವೃತಯೇ', ಎಂದರೆ, ಸಂಸ್ಕಾರಿಯಾದ ಸಹೃದಯನಿಗೆ ತತ್ಕ್ಷಣದಲ್ಲಿಯೇ ದುಃಖದಿಂದ ಕೂಡಿರುವ ಸಂಸಾರಬಂಧನದಿಂದ ಬಿಡುಗಡೆಯನ್ನು ಉಂಟುಮಾಡುವ ಮತ್ತು ಅಂತಃಸುಖವನ್ನು ತಂದುಕೊಡುವ ಆದಿಕಾವ್ಯ(ರಾಮಾಯಣ) ಮತ್ತು ಆದಿಕವಿ(ವಾಲ್ಮೀಕಿ)ಗಳು ಆದರಣೀಯರೇ ಸರಿ.


'ಆತ್ಮಾರಾಮನಾಗಿ ಆತ್ಮದಾಳದಲ್ಲಿರುವ ಭಗವಂತನು 'ರಸರೂಪನಾಗಿದ್ದಾನೆ'. ರಸರೂಪನಾದ ಆತ್ಮನನ್ನರಿತು ಅವನ ವಿಶ್ವರೂಪವಾದ ಬೆಳವಣಿಗೆಯನ್ನು ಅರಿತು ಬಾಳಿದಾಗಲೇ ರಸಮಯವಾದ ಬಾಳಾಟವನ್ನು ಪಡೆಯಬಹುದು' ಎಂಬ ಶ್ರೀರಂಗಮಹಾಗುರುವಿನ ವಾಣಿಯನ್ನು ಸ್ಮರಿಸುತ್ತಾ, ಶ್ರೀಮದ್ರಾಮಾಯಣದ ಅಂತರಾರ್ಥವನ್ನು ನನ್ನ ಬುದ್ಧಿಭೂಮಿಕೆಗೆ ಇಳಿಸಿಕೊಟ್ಟ ಪೂಜ್ಯ ಶ್ರೀರಂಗಪ್ರಿಯದೇಶಿಕರನ್ನು ವಂದಿಸುತ್ತಾ 'ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ' ಎಂದು ಈ ಲೇಖನಮಾಲಿಕೆಯನ್ನು ಭಗವದರ್ಪಣ ಮಾಡುತ್ತಿದ್ದೇನೆ.


ಸೂಚನೆ: 08/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.