Saturday, August 8, 2020

ಪರಮ ಪುರುಷ ಶ್ರೀಕೃಷ್ಣ (Parama Puruṣha Srikrishṇa)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ : lekhana@ayvm.in)



ಕೃಷ್ಣಜನ್ಮಾಷ್ಟಮೀ ನಮ್ಮ ದೇಶದ ಉದ್ದಗಲದಲ್ಲೂ ಸಂಭ್ರಮ ಸಡಗರಗಳಿಂದ ಆಚರಿಸುವ ಹಬ್ಬ, ಹರಿದಿನ. ಜಗತ್ತಿನ ಇತರ ದೇಶಗಳಲ್ಲೂ ಈ ಸಂಭ್ರಮ ವಿಸ್ತರಿಸಿರುವುದನ್ನು ಕಾಣುತ್ತೇವೆ. ಭಗವಂತನ ಅಮೋಘವಾದ ಅವತಾರ ಶ್ರೀಕೃಷ್ಣ ಎಂದು ಶ್ರದ್ಧೆಭಕ್ತಿಗಳಿಂದ ಪೂಜೆ ಪ್ರಾರ್ಥನೆಯಲ್ಲಿ ತೊಡಗುವ ಬಹಳ ದೊಡ್ಡ ಜನಸಮೂಹ ಇರುವಂತೆಯೇ ಕೃಷ್ಣನ ಜೀವನದ ಬಗ್ಗೆ

ಪ್ರಶ್ನಾರ್ಥಕವಾದ ಮನಸ್ಸಿನ ಪ್ರಜಾ ಸಮೂಹವೂ ಇರುವುದನ್ನು ಅಲ್ಲಗಳೆಯಲಾಗದು. ಶ್ರೀಕೃಷ್ಣನು ಹೇಗೆ ಆದರ್ಶವಾದಾನು? ಬೆಣ್ಣೆ ಕದಿಯುವುದು ಹೇಗೆ ಆದರ್ಶವಾಗುತ್ತದೆ? ಗೋಪಿಕೆಯರಲ್ಲಿ ಅವನ ವ್ಯವಹಾರ,ರಾಸಕ್ರೀಡೆ, ಹದಿನಾರು ಸಾವಿರ ಹೆಂಗಸರನ್ನು ವರಿಸಿದುದು ಎಂತಹ ಆದರ್ಶ? ಮಹಾಭಾರತದ ಯುದ್ಧದಲ್ಲಿ ನಡೆದ ಹಿಂಸೆ, ಕಾಪಟ್ಯಗಳಿಗೆಲ್ಲ ಸಾಕ್ಷಿಯಾದುದಲ್ಲದೆ ಅಂತಹ ಅನೇಕ ಪ್ರಸಂಗಗಳಲ್ಲಿ ಭಾಗಿಯೂ ಆದನಲ್ಲವೇ? ಅರ್ಜುನನು ತನಗೆ ಯುದ್ಧದಲ್ಲಿ ಆಸಕ್ತಿ ಇಲ್ಲವೆಂದರೂ ಯುದ್ಧಮಾಡುವುದು ಅವನ ಕರ್ತವ್ಯ ಎಂದು ಬೋಧಿಸಿದನಲ್ಲ! ಇಂತಹವನ ಪೂಜೆ, ಗುಣಗಾನ, ಅವನಲ್ಲಿ ಶರಣಾಗತಿ, ಭಕ್ತಿ ಇವುಗಳೆಲ್ಲ ಎಷ್ಟು ಅರ್ಥಪೂರ್ಣ ಎಂದು ಅನೇಕ ತಥಾಕಥಿತ ವಿಚಾರವಂತರು ಪ್ರಶ್ನಿಸಿದಾಗ ಸಾಮಾನ್ಯರಿಗೂ ಗೊಂದಲವಾಗುವುದು ಸಹಜವೇ ಆಗಿದೆ.


ಶ್ರೀಕೃಷ್ಣನ ಲೋಕೋಪಕಾರಕ ಸಂಕಲ್ಪವನ್ನೂ ಅದರ ಅನುಷ್ಠಾನಕ್ಕೆ ಅವನು ಕೈಗೊಂಡ ಕ್ರಮಗಳನ್ನೂ ನಮ್ಮ ನಮ್ಮ ಬುದ್ಧಿಮಟ್ಟದಲ್ಲೇ ಅರ್ಥಮಾಡಿಕೊಳ್ಳ ಹೊರಟಾಗ ಆಗುವ ಸಮಸ್ಯೆ ಇದು. ಶ್ರೀಕೃಷ್ಣನನ್ನು ಪರಮೋನ್ನತ ಭಾವದಲ್ಲಿ ಅರ್ಥಮಾಡಿಕೊಂಡ ಋಷಿಮುನಿಗಳ, ಜ್ಞಾನಿಗಳ ಮಾತೇ ಪ್ರಮಾಣವಾಗುತ್ತದೆ.


ಶ್ರೀಕೃಷ್ಣನೇ ಗೀತೆಯಲ್ಲಿ-"ಅವಜಾನಂತಿ ಮಾಂ ಮೂಢಾಃ ಮಾನುಷೀಂ ತನುಮಾಶ್ರಿತಮ್| ಪರಂಭಾವಮಜಾನಂತಃ ಮಮ ಭೂತಮಹೇಶ್ವರಮ್ "- "ಸರ್ವಭೂತಗಳಿಗೆ ಮಹೇಶ್ವರನಾದ  ನನ್ನ ಪರಭಾವವನ್ನು ಅರಿಯದ ಮೂಢರು ಮನುಷ್ಯ  ದೇಹವನ್ನು ಆಶ್ರಯಿಸಿರುವ ನನ್ನನ್ನು ಅನಾದರಿಸುತ್ತಾರೆ" ಎಂದಿದ್ದಾನೆ. ಹಾಗಾಗಿ, ಕೃಷ್ಣನ ಪರ ಭಾವವನ್ನು ಅರಿತ ಮಹಾತ್ಮರ ಮಾತುಗಳಲ್ಲಿ ಅವನ ಮೇರು ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳೋಣ.


ಶ್ರೀರಂಗ ಮಹಾಗುರುಗಳು ಹೇಳಿದ ಎರಡು ವಿಷಯಗಳು ಇಲ್ಲಿ ಸ್ಮರಣೀಯ-ಒಂದು, ಶ್ರೀ ಕೃಷ್ಣನು ಬೆಣ್ಣೆ ಕದಿಯುತ್ತಿದ್ದುದರ ಬಗ್ಗೆ- "ಅವನು ಗುಟ್ಟಾಗಿ ಗೋಪಿಯರ ಮನೆಗಳನ್ನು ಹೊಕ್ಕು ಅಲ್ಲಿದ್ದ ಹಾಲು ಮೊಸರು ಬೆಣ್ಣೆ ಮುಂತಾದವುಗಳನ್ನು ನೋಡಿದಾಗ, ಮುಟ್ಟಿದಾಗ, ಮತ್ತು ಸೇವಿಸಿದಾಗ ಅವು ಆ ಯೋಗಿಪುರುಷನ ಮಹಾಪ್ರಸಾದವೇ ಆದವು. ಆ ಶೇಷಪ್ರಸಾದವನ್ನು ಸೇವಿಸಿದವರ ಪ್ರಕೃತಿಯು ಶುದ್ಧವಾಯಿತು. ಪರಮಾನಂದಲಾಭವನ್ನು ಪಡೆಯಲು ಸಿದ್ಧವಾಯಿತು.ಇದಕ್ಕಾಗಿಯೇ ಕರುಣಾಳುವಾದ ಗೋವಿಂದನು ಚೌರ್ಯಮಾಡಿದ" ಎಂದಿದ್ದರು. ಇನ್ನೊಂದು ಮಾತು-"ಶ್ರೀಕೃಷ್ಣನ ಅವತಾರದಲ್ಲಿ ಒಂದು ವೈಶಿಷ್ಟ್ಯವಿದೆ. ಬಾಲರ ಜೊತೆ ಬಾಲನಾಗಿ,ವೃದ್ಧರ ಜೊತೆ ವೃದ್ಧನಾಗಿ, ಯುವಕರ ಜೊತೆಯಲ್ಲಿ ಯುವಕನಾಗಿ ಋಷಿಗಳ ಜೊತೆಯಲ್ಲಿ ಋಷಿಯಾಗಿ, ರಾಜರ ಜೊತೆಯಲ್ಲಿ ರಾಜನಾಗಿ, ಗೋಪಿಯರ ಜೊತೆ ಗೊಲ್ಲನಾಗಿ,ಎಲ್ಲಾ ಕ್ಷೇತ್ರಗಳಲ್ಲಿಯೂ ಓಡಾಡಿದ ಮಹಾಮಹಿಮ, ಕೃಷ್ಣ. ಎಲ್ಲಾ ಕಡೆಯಲ್ಲಿ ಓಡಾಡಿ ಸುಳಿದಾಡಿ, ಎಲ್ಲ ಕಡೆಯಿಂದಲೂ ಚೈತನ್ಯಗಳನ್ನು ಆಕರ್ಷಿಸುವ ಮಹಾಶಕ್ತಿಯೇ ಶ್ರೀಕೃಷ್ಣ. ದೈವೀಶಕ್ತಿಯನ್ನು ಜೊತೆಯಲ್ಲಿ ಹೊತ್ತು ಮನುಷ್ಯನಾಗಿ ಬಾಳಿದರೂ ನರನ ಜೊತೆಯಲ್ಲಿದ್ದ ನಾರಾಯಣನಾಗಿ ಬಾಳಿದ ನಿರ್ಲಿಪ್ತ ಮಹಾಪ್ರಭು ಶ್ರೀಕೃಷ್ಣ. ಆದ್ದರಿಂದ ಅಂತಹ ಪೂರ್ಣಪ್ರಭುವೂ,ಧರ್ಮಪ್ರಭುವೂ ಆದ ಶ್ರೀಕೃಷ್ಣನ ಅವತಾರದ ದಿನದಂದು ಪೂಜೆಯಲ್ಲಿ ಎಲ್ಲಕ್ಕೂ ವಿಷಯವಿರಬೇಕು"


ಅವನು ತನ್ನ ವೇಣುಗಾನದಿಂದ ಕೇಳಿದವರ ಇಂದ್ರಿಯ ಮನಸ್ಸು ಬುದ್ಧಿಗಳನ್ನು ಪರಮೋನ್ನತ ಭಾವಕ್ಕೆ ಆಕರ್ಷಿಸಿದ ವರ್ಣನೆಯೇ ಭಾಗವತದಲ್ಲಿದೆ. ಎಂತಹ ಅದ್ಭುತವಾದ ಗಾನವದು! ಮನೋಬುದ್ಧಿಗಳು ಪರಮಾತ್ಮನಲ್ಲಿ ನೆಲೆಸುವಂತೆ ಮಾಡುವ ತಾರಕ, ನಾದಬ್ರಹ್ಮ, ಪ್ರಣವ, ಹಂಸ, ನಾರಾಯಣ, ಧ್ರುವ, ಶಂಭು ಇತ್ಯಾದಿ ನಾಮಗಳಿಂದ ಯೋಗಶಾಸ್ತ್ರಗಳಲ್ಲಿ ಪ್ರಸಿದ್ಧವಾದ ಓಂಕಾರವದು. ಅದರ ಆಕರ್ಷಣೆಗೆ ಒಳಪಟ್ಟ ಗೊಪಬಾಲೆಯರು ಅವನ ಬಳಿಸಾರಿ ಅವನ ದರ್ಶನ, ಸ್ಪರ್ಶನ, ಚುಂಬನ, ನರ್ತನ ಇತ್ಯಾದಿ ಕ್ರೀಡೆಗಳನ್ನು ನಡೆಸಿದಾಗ ಶ್ರೀಕೃಷ್ಣನು ನೆಲೆಸಿದ್ದ ಸ್ಥಿತಿಯೂ ಅಪ್ರಾಕೃತವೇ. ಆ ಪರಮೋನ್ನತ ಪರಮಾತ್ಮ ಸಮಾಧಿಯ ಸ್ಥಿತಿ- ಶ್ರೀಮದ್ಭಾಗವತವು ಹೇಳುವಂತೆ ಆತ್ಮನಿಷ್ಠವಾದ ರತಿಯ ಸ್ಥಿತಿ. ಎಲ್ಲ ಮಾನವರೂ ತಮ್ಮ ಜೀವನವನ್ನು ನೆಲೆಗಾಣಿಸಬೇಕಾದ ಪರಮಾನಂದದ ಸ್ಥಿತಿ. ಯೋಗಸಮಾಧಿಯಲ್ಲಿ ನೆಲೆಸಿದ ಅದರ ಫಲವಾದರೋ ಗೋಪಿಯರ ಆತ್ಮೋದ್ಧಾರ. ಪಶುಭಾವದಲ್ಲೇ ರಮಿಸುವ ಮನಸ್ಸುಗಳಿಗೆ ಈ ಪಶುಪತಿಯ ಭಾವದ ಪರಿಚಯ ಕಷ್ಟಸಾಧ್ಯವೇ. ಅದನ್ನು ಶುಕಬ್ರಹ್ಮರ್ಷಿಗೆ ಇದ್ದಂತಹ ಪರಿಶುದ್ಧ ಭಾವದಿಂದಲೇ ಅಳೆಯಬೇಕಾಗುತ್ತದೆ. ಹದಿನಾರು ಸಾವಿರ ಹೆಂಗಸರನ್ನು ದುಷ್ಟ ನರಕಾಸುರ ತನ್ನ ವಶದಲ್ಲಿಟ್ಟಿದ್ದರಿಂದ ಅವರನ್ನು ವಿಮೋಚನೆಗೊಳಿಸಿ ಅವರಿಗೆಲ್ಲ ರಕ್ಷಕನಾಗಿ ಪತಿಯಾಗಿ ಅವರ ಉದ್ಧಾರವನ್ನೇ ಮಾಡಿದ. ಇಲ್ಲೂ ಅವನ ಪರಭಾವವನ್ನೇ ನೋಡಬೇಕು. ಲೋಕಕ್ಕೆಲ್ಲ ಪತಿ ಅವನು. ಶ್ರೀರಂಗಪ್ರಿಯ ಸ್ವಾಮಿಗಳು ಅಪ್ಪಣೆ ಕೊಡಿಸಿದಂತೆ ನಮ್ಮ ಶರೀರದಲ್ಲಿ ಹದಿನಾರು ಸಾವಿರ ನಾಡಿಗಳುಂಟು. ಅವುಗಳಲ್ಲಿ ಪರಮ ಚೇತನನಾದ ಶ್ರೀಕೃಷ್ಣನ ಅನುಪ್ರವೇಶವಾದರೆ ಮಾತ್ರವೇ ಜೀವನ ನಡೆಯುವುದು. ನಮ್ಮಲ್ಲಿ ಚೇತನವನ್ನು ಇಟ್ಟಿರುವವನು,ಇಂದ್ರಿಯಗಳಿಗೆ ಸುಖವನ್ನು ಅನುಭವಿಸುವ ಯೋಗ್ಯತೆಯನ್ನು ಕೊಟ್ಟವನು, ಪದಾರ್ಥಗಳಲ್ಲಿ ರುಚಿಯನ್ನಿಟ್ಟವನೂ ಎಲ್ಲವೂ ಅವನೇ. ಇಂತಹ ಪರಮಪುರುಷನ ನಡೆಗಳನ್ನು ಕೇವಲ ಇಂದ್ರಿಯಭಾವಗಳಿಂದ ಮಾತ್ರವೇ ಅಳೆಯುವುದು ಮೂರ್ಖತನವಾಗುತ್ತದೆ.


ಇನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಧರ್ಮವಿರೋಧಿಗಳಾದ, ಲೋಕ ಕಂಟಕರಾದ ದುಷ್ಟರನ್ನು ಸಂಹರಿಸಿ ಧರ್ಮಸೇತುವನ್ನು ರಕ್ಷಿಸುವುದು ಕ್ಷತ್ರಿಯ ಶ್ರೇಷ್ಠನಾದ ಅವನ ಕರ್ತವ್ಯವೆಂದು ಬೋಧಿಸುತ್ತಾನೆ. ಬೆಳೆಯನ್ನು ಬೆಳೆಸಹೊರಟಾಗ ಪಕ್ಕದಲ್ಲಿ ಬೆಳೆಯನ್ನು ನಿರ್ಮೂಲಮಾಡುವ ಕಳೆಯನ್ನು ವ್ಯವಸಾಯಜ್ಞನಾದವನು ನಿರ್ದಾಕ್ಷಿಣ್ಯವಾಗಿ ಕಿತ್ತೊಗೆಯಬೇಡವೇ?

ಲೋಕದಲ್ಲಿ ಧರ್ಮವ್ಯವಸಾಯಜ್ಞನಾಗಿ ಬಂದ ಶ್ರೀಕೃಷ್ಣನೂ ಮಾಡಿದ ಕೆಲಸ ಇದೇ ಆಗಿದೆ. ಮೇಲಾಗಿ ಯುದ್ಧವನ್ನು ತಪ್ಪಿಸಲು ಸ್ವತಃ ಶ್ರೀಕೃಷ್ಣನೇ ಸಂಧಾನಕ್ಕೆ ಹೋದುದನ್ನು ಮರೆಯಲಾದೀತೇ? ಕೌರವ ಪಾಂಡವರಿಬ್ಬರೂ ಸಿಂಹ ಮತ್ತು ಅರಣ್ಯಗಳಂತೆ ಒಟ್ಟಿಗೆ ಪರಸ್ಪರ ರಕ್ಷಕರಾಗಿರಲಿ ಎಂದು ಧೃತರಾಷ್ಟ್ರನನ್ನು ಪ್ರಾರ್ಥಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಧರ್ಮಕ್ಕೆ ಸೂಜಿ ಮೊನೆಯಷ್ಟು ಜಾಗವೂ ಇಲ್ಲವೆಂದ ದುರ್ಯೋಧನನನ್ನು ಸಂಹರಿಸದೇ ಉಳಿಸಬೇಕಿತ್ತೆ? ಇನ್ನು ಯುದ್ಧದಲ್ಲಿ ಕಪಟೋಪಾಯಗಳ ವಿಷಯ. ಕುಟಿಲ ಬುದ್ಧಿಯುಳ್ಳವರಲ್ಲಿ ಸರಳತೆಯನ್ನು ತೋರುವುದು ನೀತಿಯಲ್ಲ ಎಂಬ ಉಪದೇಶವನ್ನು ಶ್ರೀಕೃಷ್ಣನು ಮಾಡಿದ್ದರಲ್ಲೂ ಧರ್ಮವಿರೋಧವಿಲ್ಲ. ಕಪಟಿಗಳನ್ನು ಕಪಟದಿಂದಲೇ ಸೋಲಿಸುವುದು ಧರ್ಮಯುದ್ಧದ ನಿಯಮವೇ. ಹೀಗೆ ಶ್ರೀಕೃಷ್ಣನು ತಾನು ಯಾವ ಲೋಕೋದ್ಧಾರದ ಸಂಕಲ್ಪದಿಂದ ಅವತರಿಸಿ ಬಂದನೋ ಅದೆಲ್ಲವನ್ನೂ ಸಾಂಗವಾಗಿ ಮಾಡಿದ್ದಾನೆ. ತನ್ನ ಬಗ್ಗೆ ಅವರಿವರು ಏನು ಹೇಳುತ್ತಾರೆ ಎಂಬುದನ್ನು ಚಿಂತಿಸದೇ ಕೇವಲ ಲೋಕಹಿತವನ್ನೇ ಲಕ್ಷ್ಯದಲ್ಲಿಟ್ಟು ಉಪಕರಿಸಿದ ಪರಮ ಪುರುಷ ಅವನು.


ಅಂತಹ ಮಹಾಪುರುಷನ ಕಾರುಣ್ಯ, ಪರಮ ಪ್ರೇಮ, ನಿಸ್ಪೃಹ ಜೀವನ, ಧರ್ಮದ ನಡೆ ಎಲ್ಲವನ್ನೂ ಭಕ್ತಿ-ಶ್ರದ್ಧೆಗಳಿಂದ ನೆನೆದು ಆನಂದಭರಿತರಾಗಿ ಈ ಬಾರಿಯ ಕೃಷ್ಣಾಷ್ಟಮಿಯನ್ನು ಆಚರಿಸೋಣ.


ಸೂಚನೆ: 08/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.