Sunday, August 30, 2020

ಆರ್ಯಸಂಸ್ಕೃತಿ ದರ್ಶನ - 8 (Arya Samskruti Darshana - 8)

ಗೀತಾಚಾರ್ಯ - ಸಂಗೀತಾಚಾರ್ಯ-ಶ್ರೀಕೃಷ್ಣ 

ಲೇಖಕರು: ವಿದ್ವಾನ್ ಛಾಯಾಪತಿ 
ಕರಕಮಲನಿದರ್ಶಿತಾತ್ಮಮುದ್ರಃ
ಪರಿಕಲಿತೋನ್ನತ ಬರ್ಹಿಬರ್ಹ ಚೂಡಃ|
ಇತರ ಕರಗೃಹೀತ ವೇತ್ರತೋತ್ರಃ
ಮಮ ಹೃದಿ ಸನ್ನಿಧಿಮಾತನೋತು ಶೌರಿಃ||  

"ಒಂದು ಕೈಯಿಂದ ಆತ್ಮಮುದ್ರೆಯನ್ನು ತೋರಿಸುತ್ತಾ, ನವಿಲು ಗರಿಯನ್ನು ಪರಮೋನ್ನತವಾದೆಡೆಯಲ್ಲಿ, ಅಲಂಕಾರವಾಗಿ ಧರಿಸಿ , ಮತ್ತೊಂದು ಕೈಯಿಂದ ಕುದುರೆಗಳನ್ನು ನಿಯಂತ್ರಿಸುವ ಚಾವಟಿ ಹಿಡಿದ ಶ್ರೀಕೃಷ್ಣನು ನನ್ನ ಹೃದಯದಲ್ಲಿ ಸನ್ನಿಹಿತವಾಗಿರಲಿ."

ಇದು ಗೀತಾಚಾರ್ಯನ ಚಿತ್ರ. ಅವನು ಬಲಗೈನಲ್ಲಿ ಆತ್ಮಮುದ್ರೆಯನ್ನು ಧರಿಸಿದ್ದಾನೆ. ಹೆಬ್ಬೆರಳೂ ತೋರುಬೆರಳೂ ಬಾಗಿ ಒಂದುಗೂಡಿ, ಉಳಿದ ಬೆರಳುಗಳು ನೇರವಾಗಿ ನಿಂತಿರುವಂತೆ ವಿನ್ಯಾಸವುಳ್ಳ ಮುದ್ರೆ ಆತ್ಮಮುದ್ರೆ. ಹೆಬ್ಬೆರಳು ದೇವನನ್ನೂ,ತೋರುಬೆರಳು ಜೀವವನ್ನೂ ಸೂಚಿಸುತ್ತಾ ಆ ಎರಡರ ಒಂದು ಗೂಡುವಿಕೆ, ಜೀವದೇವರ ಸಮಾಗಮವನ್ನು ಸೂಚಿಸುತ್ತದೆ. ಈ ಮುದ್ರೆ ಜೀವಾತ್ಮನು ಪರಮಾತ್ಮನಲ್ಲಿ ಏಕೀಭವಿಸಿದಾಗ ಆ ಯೋಗದಿಂದಾಗುವ ಪರಮಾನಂದವನ್ನು (ಮುದವನ್ನು) ಹೊಮ್ಮಿಸುವ ಮುದ್ರೆಯಾದುದರಿಂದಲೇ ಅದಕ್ಕೆ ಆತ್ಮಮುದ್ರೆಯೆಂಬ ಹೆಸರು ಅನ್ವರ್ಥವಾಗಿಯೇ ಇದೆ. ಈ ಮುದ್ರೆಯು ಒಳಗೆ ಜೀವ-ದೇವ ಯೋಗವುಂಟಾದಾಗ ಸಹಜವಾಗಿಯೇ ಆ ಬೆರಳುಗಳ ವಿನ್ಯಾಸರೂಪದಲ್ಲಿ ಹೊಮ್ಮುತ್ತದೆ. ಆದ್ದರಿಂದಲೇ  ಒಳಗೆ ಉಂಟಾಗಿರುವ ಆ ಯೋಗವನ್ನು ಹೊರಸೂಸುತ್ತಿದೆ ಆ ಮುದ್ರೆ.  ಅಂತೆಯೇ ಶ್ರೀಕೃಷ್ಣನ  ಸಹಜಸ್ವರೂಪವನ್ನು ಚಿತ್ರಿಸುವ, ಆತ್ಮಭಾವವನ್ನು ಚಿತ್ರಿಸುವ ಮುದ್ರೆಯೂ ಆಗಿದೆ. ಉಳಿದ ಮೇಲೆದ್ದ ಬೆರೆಳುಗಳ ವಿನ್ಯಾಸದೊಡನೆ ಹಸ್ತ ವಿನ್ಯಾಸವನ್ನು ಗಮನಿಸಿದಾಗ ಅಭಯಮುದ್ರೆಯೂ ಅಲ್ಲಿದೆ. ಜೀವವು ತನ್ನ ಮೂಲಸ್ವರೂಪವಾದ ಆತ್ಮಜ್ಯೋತಿಯೊಡನೆ ಒಂದಾದಾಗ ಯಾವ ಭಯಕ್ಕೂ ಅವಕಾಶವಿಲ್ಲ. ಅಲ್ಲಿ ನಿರ್ಭಯ. ಅಂತೆಯೇ "ಅಭಯಂ ಸರ್ವ ಭೂತೇಭ್ಯೋ ಜ್ಞಾನಮಾಹು  ರ್ಮನೀಷಿಣಃ"  (ಸರ್ವಭೂತಗಳಿಗೂ  ಜ್ಞಾನದ ಪ್ರಾಪ್ತಿಯಾದಾಗಲೇ ಅಭಯ ಎಂದು ಜ್ಞಾನಿಗಳು ತಿಳಿಯುತ್ತಾರೆ) ಎಂಬಂತೆ ಒಳಗೆ ಬೆಳಗುವ ಜ್ಞಾನದೀಪದ ಸೂಚನೆಯೂ ಆ ಮುದ್ರೆಯಲ್ಲಿರುವುದರಿಂದ ಆ ಮುದ್ರೆಯು  ಜ್ಞಾನಮುದ್ರೆಯೂ ಹೌದು. ಅಂತೆಯೇ ಆತ್ಮಸ್ವರೂಪವರಿಯದೇ ಮೋಹಗೊಂಡಿರುವ ನರನಿಗೆ (ಅರ್ಜುನನಿಗೆ) ದಾರಿ ತೋರಲು ನಾರಾಯಣನು ಆತ್ಮಭಾವವನ್ನು ವಿವರಿಸುತ್ತಿರುವ ವ್ಯಾಖ್ಯಾಮುದ್ರೆಯೂ  ಹೌದು.

ಪರಮೋನ್ನತ ಸ್ಥಾನದಲ್ಲಿ ನವಿಲುಗರಿಯನ್ನು ತನ್ನ ಶಿರೋಭೂಷಣವಾಗಿ ಧರಿಸಿದ್ದಾನೆ ಈ ಗೀತಾಚಾರ್ಯ. ನವಿಲುಗರಿ ಅವನ ಆತ್ಮಭಾವಕ್ಕೊಪ್ಪುವ ಅಲಂಕಾರವಾಗಿದೆ. ಮೂರು ವೃತ್ತಗಳನ್ನೊಳಗೊಂಡ ಆ ಗರಿ ಸೋಮ-ಸೂರ್ಯ-ಅಗ್ನಿಮಂಡಲಗಳನ್ನು ಸೂಚಿಸಿ ಅದರೊಳಗಿರುವ ನೀಲಮೇಘಶ್ಯಾಮನಾದ ಕೃಷ್ಣ ಜ್ಯೋತಿಯನ್ನು ಸೂಚಿಸುತ್ತದೆ. ಅದರ ಜೊತೆಗೆ ಚಿತ್ರ ವಿಚಿತ್ರವರ್ಣಶೋಭಿತವಾದ ಅದು ಶ್ರೀಕೃಷ್ಣನಿಂದ ವಿಸ್ತೃತವಾದ ಸೃಷ್ಟಿವೈಭವವನ್ನೂ ಬಿತ್ತರಿಸುತ್ತದೆ. ಹೀಗೆ ಸೃಷ್ಟಿಯನ್ನೂ, ಸೃಷ್ಟೀಶನನ್ನೂ ಸೂಚಿಸಬಲ್ಲ ಗುರುತುಳ್ಳದ್ದಾದ ಕಾರಣದಿಂದಲೇ ನವಿಲುಗರಿಯು  ಶ್ರೀಕೃಷ್ಣನಿಗೆ – ಗೀತಾಚಾರ್ಯನಿಗೆ ಯೋಗ್ಯವಾದ ಭೂಷಣವಾಗಿದೆ. ನವಿಲುಗರಿಯನ್ನು ಧರಿಸುವ ಎಡೆಯೂ ಇಂದ್ರಿಯ ಭೂಮಿಕೆಯನ್ನು ದಾಟಿದ ಜ್ಞಾನಭೂಮಿಕೆಯ ಎಡೆಯಾದ ಶಿರಸ್ಸು. ಜೀವವು ಯಾವ ಮೂರ್ಧ್ನಿ ಪ್ರದೇಶದವರೆಗೂ ಮೇಲೇರಿದಾಗ ಪರಮಾನಂದಸ್ಥಿತಿಯುಂಟಾಗುವುದೆಂಬುದು ಜ್ಞಾನಿಗಳ ಅನುಭವ ಗೋಚರವಾದ ಸತ್ಯವೋ, (ತುರೀಯಂ  ಮೂರ್ಧ್ನಿ ಸಂಸ್ಥಿತಿಮ್) ಅಂತಹ ಪರಮಾನಂದದೆಡೆಯಲ್ಲಿ ಹೋದಾಗ ದಿವ್ಯದೃಷ್ಟಿಯು ಅರಳಿ, ಸೃಷ್ಟಿ, ಸೃಷ್ಟೀಶನ ರಹಸ್ಯವು ಪ್ರಕಾಶಕ್ಕೆ ಬರುವುದೋ ಆ ಎಡೆಯಲ್ಲಿಯೇ ಆ ಭಾವವನ್ನು ಬಿತ್ತರಿಸುವ ನವಿಲುಗರಿ ಅಲಂಕಾರವಾಗಿ ಧರಿಸಲ್ಪಟ್ಟಿದೆ. ಹಾಗಿದ್ದರೆ ತಾನೇ ಅದು ಅಲಂಕಾರ, ಅದರ ಸಮಗ್ರಸ್ವರೂಪವನ್ನೂ ಬಿತ್ತರಿಸಲು (ಅಲಂ) ಸಮರ್ಥವಾಗುತ್ತದೆ.

ಅವನ ಮತ್ತೊಂದು ಕೈಯಾದರೋ ಏಳುಗಿಣ್ಣುಗಳುಳ್ಳ ಬೆತ್ತದ ಚಾವಟಿಯನ್ನು ಹಿಡಿದು ರಥಾಶ್ವಗಳನ್ನು ನಿಯಂತ್ರಿಸಲು ತೊಡಗಿದೆ. ಕ್ಷಣಕಾಲವೂ ನಿಲ್ಲದೆ ಈ ಜೀವವನ್ನು ಕೂರಿಸಿಕೊಂಡು ಸೆಳೆದೊಯ್ಯುವ ಇಂದ್ರಿಯಗಳೇ ಅಶ್ವಗಳು. ನರನೇ ರಥಿಕ. ನಾರಾಯಣನೇ ಸಾರಥಿ. ದೇಹವೇ ಜೀವದೇವರನ್ನು ಹೊತ್ತ ರಥ. ಬಾಹ್ಯಕರಣಗಳಾದ  ಇಂದ್ರಿಯಗಳಂತೆ ಅಂತಃಕರಣಗಳಾದ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವುಗಳೂ ಅಶ್ವಗಳೇ. ಈ ಅಶ್ವಗಳು ತಮ್ಮ ಮನಬಂದತ್ತ ಹರಿಯಬಾರದು. ಬಲಗೈಯಲ್ಲಿ ಹಿಡಿದಿರುವ ಆತ್ಮ ಮುದ್ರೆಯನ್ನು ಜಾರಿಸದಂತೆ ಸಂಚರಿಸಬೇಕು. ಆತ್ಮ ಹಾನಿಯಾಗಕೂಡದು. ಅದಕ್ಕಾಗಿಯೇ ಅವುಗಳಿಗೆ ನಿಯಂತ್ರಣ, ಆತ್ಮಶಕ್ತಿಯು ಇಂದ್ರಿಯಗಳವರೆಗೆ ಹರಿದುಬರುವುದು ಏಳುಪರ್ವಸ್ಥಾನಗಳುಳ್ಳ  ಜ್ಞಾನರಜ್ಜುವಿನ ಮೂಲಕ. ಬ್ರಹ್ಮದಂಡದ ಮೂಲಕ, ಬೆನ್ನು ಮೂಳೆಯ ಮೂಲಕ. ಆದ್ದರಿಂದ ಆ ಹಾದಿಯನ್ನು ಮರೆಸದೆ ಮುನ್ನಡೆಸಲು ಹಿಡಿದಿರುವ ಬೆತ್ತವೂ ಏಳು ಗಿಣ್ಣುಳ್ಳ  ಜ್ಞಾನರಜ್ಜುವಿನ ಪ್ರತೀಕವಾದುದು. ಅದನ್ನು ಹಿಡಿದು ಶಾಸನ ಮಾಡುವ ಶ್ರೀಕೃಷ್ಣನೂ ಹೃಷೀಕೇಶ. ಇಂದ್ರಿಯಗಳ ಸ್ವಾಮಿ. ಆತ್ಮ ಜ್ಯೋತಿ. ಅದನ್ನು ಎಡಗೈಯಲ್ಲೇ ಹಿಡಿಯಲು ಕಾರಣ, ಎಡಗೈಯೇ ಪ್ರವೃತ್ತಿಮಾರ್ಗಸೂಚಕ. ಇಂದ್ರಿಯಾಶ್ವಗಳು  ಹೊರಗೆ ಸಂಚರಿಸಲು ಅಡ್ಡಿಯಿಲ್ಲ. ಆದರೆ ಆತ್ಮಭಾವಕ್ಕೆ ಅವಿರೋಧವಾಗಿರಬೇಕು ಅವುಗಳ ಸಂಚಾರ. ಹೀಗಿದ್ದಾಗ ಜೀವನಿಗೆ ನೆಮ್ಮದಿಯುಂಟು.

ಆತ್ಮಸ್ವರೂಪವನ್ನು ತೋರಿಸುವ ಆತ್ಮ ಮುದ್ರೆ, ತನ್ನ ಸ್ವರೂಪಕ್ಕೊಪ್ಪುವ ನವಿಲುಗರಿಯ ಅಲಂಕಾರ, ಎಡಗೈಯಲ್ಲಿ ಆತ್ಮಭಾವಕ್ಕೆ ವಿರೋಧವಾಗಿ ಜೀವನರಥವನ್ನೆಳೆಯುವ ಇಂದ್ರಿಯಾಶ್ವಗಳನ್ನುಹದದಲ್ಲಿಡುವ ಚಾವಟಿ, ಇವುಗಳಿಂದ ಕೂಡಿ  ತನ್ನ ಭಾವಭಂಗಿಗಳಿಂದಲೇ ಆತ್ಮಭಾವವನ್ನುಪದೇಶಿಸುತ್ತಿರುವವನು ಶ್ರೀಕೃಷ್ಣ, ಗೀತಾಚಾರ್ಯ. ಅವನ ಈ ಭಂಗಿಯೇ ಗೀತೆಯಸಾರವನ್ನುಪದೇಶಿಸುತ್ತದೆ. ಗೀತೆಯೂ ಆತ್ಮವಿದ್ಯೆಯೇ. ಅಂತಹ ಗೀತಚಾರ್ಯನೂ, ಗೀತಾಸಾರನೂ, ಗೀತಾಹೃದಯನೂ ಆದ ಶ್ರೀಕೃಷ್ಣ ನನ್ನ ಹೃದಯದಲ್ಲಿ ಸನ್ನಿಹಿತನಾಗಲಿ- ಎಂಬುದು ಮೇಲಿನ ಗೀತಾಚಾರ್ಯನ ಚಿತ್ರ ನೀಡುವ ಪದ್ಯದ ಭಾವ.

ವಿಷಾದದಲ್ಲಿ ಮುಳುಗಿದ ನರನ (ಅರ್ಜುನನ) ವಿಷಾದವನ್ನು ಕಳೆದು ಪ್ರಸಾದದಲ್ಲಿ ನಿಲ್ಲಿಸಿದ, ಪ್ರಸನ್ನನಾಗಿ ಮಾಡಿದ ಕೃತಿ, ಗೀತೆ. ಅಂತೆಯೇ ಜೀವಿಗಳ ವಿಷಾದವನ್ನು ಕಳೆದು ಪ್ರಸನ್ನತೆಯನ್ನು ನೀಡುವ ಕೃತಿಯೂ ಹೌದು. ಧರ್ಮಾಧರ್ಮಗಳ ತುಮುಲದಲ್ಲಿ ಧರ್ಮವಿಜಯಕ್ಕಾಗಿ ವಿಜಯ (ಅರ್ಜುನ)ನನ್ನು ಪ್ರೇರೇಪಿಸಿದ ಧರ್ಮ ಸಂಸ್ಥಾಪನಾಚಾರ್ಯ ಈ ಗೀತಾಚಾರ್ಯ. ಜೀವಿಯ ಮೇಲ್ಮೆಗೆ ಶ್ರೇಯಸ್ಸಿಗೆ ಬೇಕಾದ ದಿವ್ಯಾಮೃತವನ್ನೊಳಗಂಡ ಈ ಗೀತೆ ಸರ್ವೋಪನಿಷತ್ಸಾರ. ಆತ್ಮ ಸ್ವರೂಪವನ್ನೂ, ಅದನ್ನು ಕಾಪಾಡಿಕೊಳ್ಳುವ ವಿಧಾನವನ್ನೂ, ಅದರಿಂದಾಗುವ ಮೇಲ್ಮೆಯನ್ನೂ, ಭಾವದಿಂದಲೂ, ಭಂಗಿಯಿಂದಲೂ ಸೂಚಿಸಿದ ಗೀತಾಚಾರ್ಯನ ಭಾವದ ಭಾಷಾರೂಪವಾದ ವಿಸ್ತಾರವೇ ಗೀತೆ. "ಗೀತಾ ಮೇ ಹೃದಯಂ ಪಾರ್ಥ" ಎಂಬಂತೆ ಶ್ರೀಕೃಷ್ಣನ ಹೃದಯ. ಗೀತೆ ಶ್ರೀಕೃಷ್ಣನ ಹೃದಯವಾದರೆ ಗೀತಾಹೃದಯ ಶ್ರೀಕೃಷ್ಣನೇ. ಅವನ ಗೀತೆ ಒಣವೇದಾಂತವಲ್ಲ. ಬ್ರಹ್ಮರಸನಿರ್ಝರಿಣಿ. ಕವಿಯಾದ ಶ್ರೀಕೃಷ್ಣನಿಂದ ಅರಳಿದ ವಿಶ್ವಕಾವ್ಯ. ವಿಶ್ವಕ್ಕೇ ಇಂಪನ್ನು ತರುವ ವಿಶ್ವ ಸಂಗೀತ.

ಅಂತೆಯೇ  ಶ್ರೀಕೃಷ್ಣ ಕೇವಲ ಗೀತಾಚಾರ್ಯನಲ್ಲ. ಸಂಗೀತಾಚಾರ್ಯನೂ ಹೌದು. ಅವನು ವೇಣುಗಾನಲೋಲ. ಆತ್ಮಜ್ಯೋತಿಯ ನಾದರೂಪವಾದ ವಿಸ್ತಾರವನ್ನೂ, ಸೊಬಗನ್ನೂ, ಅರಿತು ಬಿತ್ತರಿಸಿದ ನಾದಮುರ್ತಿ. ಜ್ಞಾನಿಗಳಿಂದ ಬೆಳೆದ ಸಂಗೀತ ಕೇವಲ ಶ್ರೋತ್ರರಂಜಕ-ಮನೋರಂಜಕವಷ್ಟೇ ಅಲ್ಲ. ಅದು ನಾದಬ್ರಹ್ಮೋಪಾಸನೆ. ಅದರ ಮರ್ಮವರಿತವನು ಮುರಳೀ ಮನೋಹರನಾದ ಸಂಗೀತಾಚಾರ್ಯ. ಇದೋ ಅವನ ಚಿತ್ರ ಇಲ್ಲಿದೆ.ಅಂಸಾಲಂಬಿತ ವಾಮಕುಂಡಲಭರಂ ಮಂದೋನ್ನತ ಭ್ರೂಲತಂ |
ಕಿಂಚಿತ್ ಕುಂಚಿತಕೋಮಲಾಧರಪುಟಂ ಸಾಚೀಪ್ರಸಾರೇಕ್ಷಣಂ ||
ಆಲೋಲಾಂಗುಲಿಪಲ್ಲವೈಃ ಮುರಲಿಕಾಮಾಪೂರಯಂತಂ ಮುದಾ |
ಮೂಲೇಕಲ್ಪತರೋಸ್ತ್ರಿಭಂಗಿಲಲಿತಂ ಜಾನೇ ಜನ್ಮೋಹನಮ್ ||

ಎಡಕಿವಿಯ ಕುಂಡಲ ಎಡಹೆಗಲಿನತ್ತ ವಾಲಿದೆ. ನಾದಾನುಸಂಧಾನದಿಂದ ಬಲಹುಬ್ಬು ಮೇಲೆದ್ದು ಒಳ ಔನ್ನತ್ಯವನ್ನು ಸೂಚಿಸುತ್ತಿದೆ. ಅತಿ ಕೋಮಲವಾದ ಅವನ ಅಧರ ಕೊಳಲಿನ ಮೇಲೆ ಸ್ವಲ್ಪ ಬಾಗಿ ಇರಿಸಲ್ಪಟ್ಟಿದೆ. ಆತನ ದೃಷ್ಟಿ ಎಲ್ಲೆಡೆಯನ್ನೂ ತುಂಬಿದೆ. ತಳಿರಿನಂತಹ ಅವನ ಬೆರಳುಗಳು ಕೊಳಲಿನ ಮೇಲಾಡುತ್ತಿವೆ. ತನ್ನ ಉಸಿರಿನಮೂಲಕ ಆ ಪರಮಾನಂದ ಮಾಧವನು ಆನಂದವನ್ನೇ ಕೊಳಲಿನಲ್ಲಿ ತುಂಬುತ್ತಿದ್ದಾನೆ. ಬಲಮಂಡಿಯನ್ನು ಎಡದತ್ತ ಬಾಗಿಸಿ, ಎಡಕಟಿಯನ್ನು ಬಲದತ್ತಲೂ, ಶಿರವನ್ನು ಎಡಹೆಗಲಿನತ್ತಲೂ ಬಾಗಿಸಿ, ಈ ಮೂರೂ ಭಂಗಿ (ಬಾಗು) ಗಳಿಂದ ಮನೋಹರನಾದ, ಸಂಕಲ್ಪತರುವಾದ, ಮನೋಮೂಲದಲ್ಲಿ ಜಗನ್ಮೋಹನಾಕಾರನಾಗಿ ಎಲ್ಲವನ್ನೂ ತನ್ನೆಡೆಗೆ ಆಕರ್ಷಿಸುತ್ತಿರುವ ಸಂಗೀತಾಚಾರ್ಯನನ್ನು ತಾನು ಬಲ್ಲೆ ಎಂದು ಲೀಲಾಶುಕ ಸಾರುತ್ತಾನೆ.

ಅವನ ಗೀತೆಯು ಹೇಗೆ ಅವನ ಉಸಿರೋ, ಅವನ ಸಂಗೀತವೂ ಹಾಗೆಯೇ ಅವನ ಉಸಿರು. ಕೊಳಲಿನಲ್ಲಿ ತನ್ನ ಉಸಿರನ್ನು ತುಂಬುವ ಆ ಜಗನ್ಮೋಹನ ಅಲ್ಲಿ ತುಂಬಿ ಹರಡುತ್ತಿರುವುದು ಆನಂದವನ್ನೇ. ಆತ್ಮಭಾವವನ್ನರಳಿಸಿ, ಹುಬ್ಬನ್ನು ಮೇಲೇರಿಸಿ, ಬಲಭಾಗದ ಉನ್ನತಿಯನ್ನು ಸೂಚಿಸುವುದರ ಮೂಲಕ, ಎಡವನ್ನು ಬಾಗಿಸಿದರೂ, ಉನ್ನತವಾದ ಬಲಗಿವಿಯಲ್ಲಿ, ಒಳಗೆ ಮೊಳುಗುವ ಪ್ರಣವನಾದವನ್ನು ಆಸ್ವಾದಿಸುತ್ತಾ, ಹುಬ್ಬಿನ ಉನ್ನತಿಯಿಂದ ಆ ಸ್ಥಿತಿಯನ್ನು ಸೂಚಿಸುತ್ತಾ ನಿಂತಿದ್ದಾನೆ – ಈ ಸಂಗೀತಾಚಾರ್ಯ. ಅವನ ಸಂಗೀತದ ಪರಿಣಾಮವಾದರೂ ಏನು?

ಲೋಕಾನುನ್ಮದಯನ್ ಶ್ರುತೀರ್ಮುಖರಯನ್ ಕ್ಷೋಣೀರುಹಾನ್ ಹರ್ಷಯನ್|
ಶೈಲಾನ್ವಿದ್ರವಯನ್ ಮೃಗಾನ್ವಿವಶಯನ್ ಗೋಬೃಂದಮಾನಂದಯನ್ ||
ಗೋಪಾನ್ಸಂಭ್ರಮಯನ್ ಮುನೀನ್ ಮುಕುಳಯನ್ ಸಪ್ತಸ್ವರಾನ್ ಜೃಂಭಯನ್|
ಓಂಕಾರಾರ್ಥಮುದೀರಯನ್  ವಿಜಯತೇ ವಂಶೀನಿನಾದಃ ಶಿಶೋಃ||

ಇಂದ್ರಿಯಾಶ್ವಗಳಿಂದ ಕೆಳಗೆ ಸೆಳೆಯಲ್ಪಡುತ್ತಿದೆ ಜೀವಲೋಕದ ಮನಸ್ಸು. ಅಂತಹ ಅಧೋಮನರನ್ನು ತಿಳಿಯದ ಸಂತೋಷದಿಂದ ತುಂಬಿ ಉನ್ಮನರನ್ನಾಗಿ ಮಾಡುತ್ತಿದೆ ವೇಣುನಾದ. ಮದವೆಂದರೆ ಹರ್ಷವೆಂಬರ್ಥವೂ ಉಂಟು. ಜೀವಲೋಕವನ್ನು ಪರಮಾನಂದಭಾವದ ಕಡೆಗೆ ಸೆಳೆಯುತ್ತಾ ಉನ್ಮದಿಸುವಂತೆ ಉಕ್ಕಿ ಹರ್ಷಿಸುವಂತೆ-ಹರ್ಷ ಉಕ್ಕುವಂತೆ ಮಾಡುತ್ತಿದೆ.  ಮನಸ್ಸನ್ನು ಜಾರದಂತೆ ತಡೆಯುವುದೇ ಶ್ರೀಕೃಷ್ಣನ ಚಾವಟಿಯ ಕೆಲಸ. ಅಂತೆಯೇ ಈ ಸಂಗೀತಾಚಾರ್ಯನೂ ಮಾಡುತ್ತಿರುವುದೂ ಅದೇ.

ಗಾನಕ್ಕೆ ಆಧಾರವಾದ ಶ್ರುತಿಗಳನ್ನು ಹಿಡಿದು ಮೊಳಗುತ್ತಿದೆ ಆ ಗಾನ. ಅಂತೆಯೇ ಎಲ್ಲಕ್ಕೂ ಆಧಾರಶ್ರುತಿಯಾದ ಪ್ರಣವದಿಂದ ಹೊಮ್ಮಿದ ವೇದಗಳನ್ನೂ ಅದರ ಹೃದಯವನ್ನೂ ಪ್ರತಿಧ್ವನಿಸುತ್ತಿದೆ- ಮುರಳೀಲೋಲನ ಮುರಳಿ.ಗೀತೆಯೂ ವೇದಸಾರ. ಸಂಗೀತೆಯೂ ವೇದಸಾರ. ಅಂತೆಯೇ ಆ ವೇಣುನಾದದ ಪ್ರಭಾವದಿಂದ ಮರಗಿಡಗಳೂ ಹರ್ಷದಿಂದ ಹಿಗ್ಗುತ್ತವೆ. ಮರಗಿಡಗಳಿಗೂ ಭಾವಸಂವೇದನೆಯುಂಟೆಂದು ಇತ್ತೀಚಿನ ಪ್ರಯೋಗಗಳೂ ದೃಢಪಡಿಸಿವೆ. ಮರಗಿಡಗಳನ್ನೂ ಆನಂದದಿಂದ ತುಂಬಿದೆ ಶ್ರೀಕೃಷ್ಣನ ಸಂಗೀತ.ಅತಿಕಠಿಣವಾದ ಬೆಟ್ಟಗಳನ್ನೂ ಗಾನ ತನ್ನ ಮಾಧುರ್ಯದಿಂದ ಕರಗಿಸುತ್ತಿದೆ. ದ್ರವ್ಯದ ಸಂಯೋಜನೆಯ ಮರ್ಮವರಿತು, ಅದರ ವಿಘಟನೆಗನುಗುಣುವಾದ ನಾದ ಯೋಗವೂ ಭೌತಿಕವಾಗಿಯೂ ಕಲ್ಲನ್ನು ಕರಗಿಸುವುದು ಅಸಂಭವವೇನೂ ಅಲ್ಲ. ಗಾನದ ಇಂಪು ಪಾಷಾಣ ಹೃದಯವನ್ನೂ, ಜಡ್ಡುಕಟ್ಟಿದ ಘನೀಭೂತಹೃದಯವನ್ನೂ ತುಂಬಿ ಕರಗಿ ನೀರಾಗಿಸುತ್ತಿದೆ. ಗೀತೆ ತುಂಬುವುದು ಹೃದಯವನ್ನೇ.

ಅಂತೆಯೇ ಮೃಗಗಳನ್ನೂ ಅವಕ್ಕೆ ಅರಿಯದ ಆನಂದದಿಂದ ತುಂಬಿ ಪರವಶರನ್ನಾಗಿ ಮಾಡುತ್ತಿದೆ. ಮೃಗಗಳೂ ಜೀವಿಗಳು ತಾನೇ! ಅಲ್ಲಿ ಆನಂದವನ್ನರಳಿಸಿ ಅವುಗಳನ್ನು ತನ್ನೆಡೆಗೆ ಆಕರ್ಷಿಸುವ ಸಂಗೀತಾಚಾರ್ಯ ಶ್ರೀಕೃಷ್ಣ ಸಮದರ್ಶಿಯಾದ ಗೀತಾಚಾರ್ಯನೂ ಹೌದು.ಗೋಬೃಂದವನ್ನು ಆನಂದದಿಂದ ತುಂಬುತ್ತಿದೆ ಶ್ರೀಕೃಷ್ಣನ ವೇಣುನಾದ. ಜಡ ಚೇತನಗಳಲ್ಲಿ ಆನಂದಲಹರಿಯನ್ನು ಹರಿಸುವ ಪರಮಾನಂದ ಮಾಧವನ ವೇಣುನಾದ ಆನಂದವನ್ನಲ್ಲದೆ ಮತ್ತೇನನ್ನು ತುಂಬೀತು! ಗೋವುಗಳಂತೂ ಅವನ ಧರ್ಮದ ಒಂದು ರೂಪವೇ ತಾನೆ! ಗೀತೆ ತೋರುವುದು ಆನಂದದ ನೆಲೆಯನ್ನೇ.

ಗೆಳೆಯನೆಂದು ನೋಡುವ ಗೋಪರನ್ನು ಅವ್ಯಕ್ತಾನಂದದಿಂದ ತುಂಬಿ ಸಡಗರಗೊಳ್ಳುವಂತೆ ಮಾಡಿದೆ. ಗೆಳೆಯರಿಗೆ ಇದಕ್ಕಿಂತ ಮತ್ತೇನು ಉಪಕಾರಬೇಕು. ಆನಂದನಿಧಿಯನ್ನು ಅವರ ಹೃದಯದಲ್ಲಿ ಉಕ್ಕಿಸುವ ಸಂಭ್ರಮ. ಅದನ್ನು ನೀಡುತ್ತಿದೆ ಸಂಗೀತ.ಮನನ ಭಾವದಲ್ಲಿದ್ದು ಆತ್ಮಭಾವಭಾವಿತರಾದ ಮುನಿಗಳ ಮನಸ್ಸನ್ನು ಮೊಗ್ಗಾಗಿ ಮಾಡುತ್ತಿದೆ. ಅರಳಿದ ಮನಸ್ಸನ್ನು ಮುಗುಳನ್ನಾಗಿಸಿ, ಏಕಾಗ್ರಭಾವವನ್ನು ತುಂಬಿ ಮನೋಮೂಲದತ್ತ ಒಯ್ದು ಒಳಗೆ ಪರಮಾನಂದನಿಧಿಯತ್ತ ಸೆಳೆಯುತ್ತಿದೆ. ಈ ಆತ್ಮಪ್ರಬೋಧನೆ ಗೀತೆಯ ಹೃದಯ. ಸಂಗೀತದಿಂದಾಗುತ್ತಿರುವುದೂ ಅದೇ.

ಸ.ರಿ.ಗ.ಮ.ಪ.ಧ.ನಿ. ಎಂಬ ಏಳುಸ್ವರಗಳನ್ನೂ ವಿಸ್ತಾರಪಡಿಸುತ್ತಿದೆ. ಮುನಿಗಳನ್ನು ಮುಕುಲೀಭಾವಕ್ಕೊಯ್ದು ಪ್ರಣವದ ನೆಲೆಮುಟ್ಟಿಸಿದ, ಆ ಪ್ರಣವ ನಾದದ ಮೂಲದಿಂದಲೇ  ಸಪ್ತಸ್ವರಗಳನ್ನು ವಿಸ್ತರಿಸುತ್ತದೆ.
ಕೊನೆಗೆ ಆ ಗಾನ ಪ್ರಣವದ ಅರ್ಥವನ್ನು ಹೇಳುತ್ತಿದೆ. ಅಂದರೆ ಆ ಗಾನವನ್ನು ಅನುಸರಿಸಿ ಹೋದರೆ ಪ್ರಣವದ ಮೂಲವಾದ ಪರಂಜ್ಯೋತಿಯಲ್ಲಿ ನಿಲ್ಲಿಸುತ್ತದೆ. ಅದರ ಮರ್ಮವನ್ನು ಬಿತ್ತರಿಸುತ್ತದೆ. ಆ ಓಂಕಾರದ ಅರ್ಥವೇ ಶ್ರೀಕೃಷ್ಣಪರಂಜ್ಯೋತಿ. ಆತ್ಮ ಸ್ವರೂಪ, ಅದನ್ನು ಬಿತ್ತರಿಸುವುದೇ ಗೀತಾಚಾರ್ಯನ ಹೃದಯ. ಸಂಗೀತಾಚಾರ್ಯನು  ಮಾಡುತ್ತಿರುವುದೂ ಅದೇ. ಹೀಗೆ ಲೋಕದ ಕಣ್ಣಿಗೆ ಶಿಶುವಾದ ಶ್ರೀಕೃಷ್ಣನ ವೇಣುನಾದ ವಿಜಯ ಪಡೆಯುತ್ತಿದೆ. ಆತ್ಮಭಾವದ ಜಯವೇ ಗಾನದ ಜಯ. ಗೀತೆಯ ಉತ್ಕರ್ಷವೂ ಅದೇ.

ಹೀಗೆ ಗೀತ – ಸಂಗೀತ ಎರಡೂ ಆತ್ಮ ವಿಜಯವನ್ನು ಸಾರುತ್ತವೆ. ಅಂತೆಯೇ ಶ್ರೀಕೃಷ್ಣ ಎಲ್ಲ ಯೋಗರಹಸ್ಯಗಳನ್ನೂ ಬಲ್ಲ ಯೋಗೇಶ್ವರ.ಅವನಿದ್ದಲ್ಲಿ ಆತ್ಮಶ್ರೀ. ಅವನ ಆಶಯವನ್ನು ಧನುರ್ಧಾರಿಯಾಗಿ ತರಹೊರಟ ವಿಜಯನಿದ್ದಲ್ಲಿ ಆತ್ಮ ವಿಜಯ. ಯೋಗೇಶ್ವರನಿದ್ದಲ್ಲಿ ಜ್ಞಾನವಿಭೂತಿ, ಅದನ್ನು ಜಾರಿಗೆ ತರಹೊರಟ ಪಾರ್ಥನಿದ್ದಲ್ಲಿ ನೀತಿ, ಇದು ಗೀತೆಯ ಸಾರ.  ಆತ್ಮವಿಭೂತಿ, ನಾದಮಯ  ವಿಸ್ತಾರವೇ ಸಂಗೀತದ ಸಾರ. ಈ ಮರ್ಮಬಲ್ಲ ತ್ಯಾಗರಾಜರು "ಗೀತಾರ್ಥಮು ಸಂಗೀತಾನಂದಮು" ಎಂಬ ತಮ್ಮ ಕೃತಿಯಲ್ಲಿ "ಗೀತಾರ್ಥ-ಸಂಗೀತಾನಂದ ಎರಡನ್ನೂ ಆತ್ಮಾರಾಮನನ್ನು ಬಲ್ಲ ಆಂಜನೇಯ ಬಲ್ಲ" ಎಂದು ಸಾರುತ್ತಾರೆ.

ಗೀತಾಹೃದಯ-ಸಂಗೀತಹೃದಯ ಎರಡೂ ಶ್ರೀಕೃಷ್ಣನೇ. ಒಂದು ಅವನ ಭಾಷಾರೂಪವಾದ ಉಸಿರಾದರೆ, ಮತ್ತೊಂದು ಕೊಳಲಿನ ಗಾನರೂಪವಾಗಿ ಹೊರ ಹೊಮ್ಮುವ ಉಸಿರು, ಗೀತ-ಸಂಗೀತ ಎರಡೂ ಆ ಕೃಷ್ಣನ ಉಸಿರುಗಳೇ. ಅಂತೆಯೇ ಗೀತಾಚಾರ್ಯನೂ ಸಂಗೀತಾಚಾರ್ಯನೂ ಆದ ಅನುಪಮ ಜ್ಯೋತಿ ಶ್ರೀಕೃಷ್ಣನೇ. ಅವನ ಗೀತ-ಸಂಗೀತಗಳ ಮರ್ಮವನ್ನು ಬಲ್ಲವನಾಗಿ, ಆತ್ಮಯೋಗ ನಾದಯೋಗಗಳ ನೆಲೆ ಬೆಲೆಗಳನ್ನೂ ಬಲ್ಲ ಶ್ರೀರಂಗಮಹಾಗುರುವಿಗಲ್ಲದೇ ಈ ಬರಹದ ಶ್ರೇಯಸ್ಸು ಮತ್ಯಾರಿಗೆ ಸಂದೀತು! ಆತ್ಮ ಸ್ವರೂಪದ ಅರಿವೇ ಗೀತಾ ಹೃದಯವೆಂಬುದನ್ನು "ಎನ್ನೈ ಪಾರಮ್" (ನನ್ನನ್ನು–ಆತ್ಮವಸ್ತುವನ್ನು ನೋಡಿರಿ) ಎಂಬ ನಾಲ್ಕೇ ಅಕ್ಷರಗಳಲ್ಲಿ ಸಂಗ್ರಹಿಸಿದ ಗೀತಾಹೃದಯಜ್ಞನಾದ  ಆಚಾರ್ಯನವನು. ಅಂತೆಯೇ ಯೋಗಗಾನದ ಮರ್ಮವರಿತ ಗಾನಾಚಾರ್ಯನೂ ಹೌದು. ಗೀತಾಚಾರ್ಯ-ಸಂಗೀತಾಚಾರ್ಯನಾದ ಶ್ರೀಕೃಷ್ಣನ ಮರ್ಮವನ್ನು ನನ್ನ ಬುದ್ಧಿ ಮತ್ತು ಹೃದಯ ಭೂಮಿಕೆಗಳಲ್ಲಿ ಬಿಚ್ಚಿಟ್ಟ ಮಹಾಗುರುವಿಗೆ ನಮಿಸಿ ಶ್ರೀ ಕೃಷ್ಣಜನ್ಮೋತ್ಸವದ ಸವಿನೆನಪಿನೊಡನೆ ಶ್ರೀ ಕೃಷ್ಣಪರಂಜ್ಯೋತಿಗೆ ಈ ಬರಹವನ್ನು ಅರ್ಪಿಸುತ್ತೇನೆ.  

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ 1982 ಜನವರಿಯ ಸಂಪುಟ 04 ಸಂಚಿಕೆ 03 ರಲ್ಲಿ ಪ್ರಕಟವಾಗಿದೆ.