Sunday, August 30, 2020

ವಾಮನನಾಗಿ ಬಂದು ತ್ರಿವಿಕ್ರಮನಾಗಿ ಅನುಗ್ರಹಿಸಿದ ! (Vamananagi Bandu Trivikramanagi Anugrahisida !)

 ಲೇಖಕರು: ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)


  

ಶ್ರೀಮಹಾವಿಷ್ಣುವಿನ  ಪ್ರಸಿದ್ಧವಾದ  ದಶಾವತಾರಗಳಲ್ಲಿ ಒಂದಾದ ವಾಮನಾವತಾರವು ಅನೇಕ ಪುರಾಣಗಳಲ್ಲಿ  ಸ್ಥಾನವನ್ನು ಗಳಿಸಿದೆ.  

ಭಾಗವತೋತ್ತಮನಾದ ಪ್ರಹ್ಲಾದನ ಮೊಮ್ಮಗನೂ, ಅಸುರ ರಾಜನೂ ಆದ ಬಲಿಚಕ್ರವರ್ತಿಯು(ಇಂದ್ರಸೇನಮಹಾರಾಜನು) ಮಹಾತ್ಮ, ಮಹಾಭಾಗವತ, ವಿಷ್ಣುಭಕ್ತ. ಪರಮಭಾಗವತರ ಪಟ್ಟಿಯಲ್ಲಿ ಈತನೂ ಸೇರಿಸಲ್ಪಟ್ಟಿದ್ದಾನೆ.  

ಶುಕ್ರಾಚಾರ್ಯರು ಮಾಡಿಸಿದ ಯಜ್ಞಫಲವಾಗಿ ದೊರಕಿದ ವರ-ಅನುಗ್ರಹ ಬಲದಿಂದ  ಬಲಿಯು ಇಂದ್ರನನ್ನು ಪರಾಜಯಗೊಳಿಸಿ  ದೇವಲೋಕದಲ್ಲೂ ತನ್ನ ಅಧಿಕಾರವನ್ನು ಚಲಾಯಿಸತೊಡಗಿದನು. ದೇವಮಾತೆಯಾದ ಅದಿತಿದೇವಿಯ  ಪ್ರಾರ್ಥನೆಗೆ ಓಗೊಟ್ಟು ಶ್ರೀಹರಿಯು ಶ್ರಾವಣಮಾಸದ ಶ್ರವಣ ನಕ್ಷತ್ರ, ದ್ವಾದಶಿಯದಿನ ಅದಿತಿಯ ಪುತ್ರನಾಗಿ ಜನಿಸಿದ. ಶಂಖ-ಚಕ್ರ-ಗದಾಧಾರಿಯಾಗಿ  ಆಕೆಗೆ ದರ್ಶನವಿತ್ತು ಕೂಡಲೇ ವಾಮನನ(ಕಿರಿದಾದ) ರೂಪವನ್ನು ತಾಳುತ್ತಾನೆ.  ಆ ಸಮಯಕ್ಕೆ ಬಲಿಚಕ್ರವರ್ತಿಯು  ಯಜ್ಞವನ್ನಾಚರಿಸುತ್ತಿದ್ದ.  ಎಲ್ಲರಿಂದಲೂ ಸ್ತುತಿಸಲ್ಪಟ್ಟ ಆ ವಾಮನಬ್ರಹ್ಮಚಾರಿಯು ಅತ್ಯಂತ ತೇಜೋರೂಪಿಯಾಗಿ  ಛತ್ರಿಯನ್ನು ಹಿಡಿದು ಬಲಿಯ ಯಜ್ಞವಾಟಿಕೆಯ ಬಳಿ ಸಾರಿದನು.

ಆತನನ್ನು ಕಂಡೊಡನೆಯೇ  ವಯಸ್ಸಿನಲ್ಲಿ ಹಿರಿಯರಾದ ಭೃಗುವಂಶದ  ಋಷಿಗಳೆಲ್ಲರೂ ತಟ್ಟನೆ ಎದ್ದುನಿಂತರು. ಅವನ ತೇಜಸ್ಸು ಅವರನ್ನು ಎಬ್ಬಿಸಿ ನಿಲ್ಲಿಸುತ್ತದೆ. ಬಂದಿರುವ ಬ್ರಹ್ಮಚಾರಿಯು ಸಾಕ್ಷಾತ್ ಮಹಾವಿಷ್ಣು ಎಂಬುದನ್ನು ಅರಿತ ಶುಕ್ರಾಚಾರ್ಯರು ರಾಜನನ್ನು ಎಚ್ಚರಿಸಿದರು. ಆದರೆ ಭಕ್ತಷ್ರೇಷ್ಠನಾದ ಬಲಿಯು "ಯಾರಿಗೆ ದಾನಕೊಡುವುದಾದರೂ ವಿಷ್ಣುವನ್ನೇ ಸ್ಮರಿಸಿಕೊಡಬೇಕೆಂದಿರುವಾಗ ಸಾಕ್ಷಾತ್ ವಿಷ್ಣುವೇ ಯಾಚಿಸಿದಾಗ ಕೊಡದಿರುವುದು ಹೇಗೆ?" ಎಂದು ಹೇಳಿದನು. ದಾನಕೊಡುವುದರಲ್ಲಿ ಎತ್ತಿದ ಕೈಯಾಗಿದ್ದ ಬಲಿಚಕ್ರವರ್ತಿ ಆತನನ್ನು ಸಂತೋಷದಿಂದ ಸ್ವಾಗತಿಸಿ "ಏನು ಅಪ್ಪಣೆ?" ಎಂದ.

ವಾಮನನು ತನ್ನ ಕಾಲಿನಳತೆಯಲ್ಲಿ ಮೂರಡಿ ಜಾಗವನ್ನು ಕೊಡಬೇಕೆಂದು ಯಾಚಿಸಿದಾಗ ಬಲಿಚಕ್ರವರ್ತಿಯ ಅಹಂಕಾರವು ಮತ್ತೆ ತಲೆಯೆತ್ತಿತು. "ಎಷ್ಟೋ ಜನರಿಗೆ ಆಶ್ರಯವನ್ನು ನೀಡಿರುವ ನನ್ನ ಬಳಿ ಧನ-ಕನಕವೇ ಮುಂತಾದ ಅಮೂಲ್ಯವಾದ ವಸ್ತುಗಳನ್ನು ಬಿಟ್ಟು ಬಾಲಿಶಬುದ್ಧಿಯಿಂದ ಇಂಥಹ ಸಣ್ಣ ಬೇಡಿಕೆಯೇಕೆ?" ಎಂದನು. ಆದರೆ ವಾಮನನು ತಾನು ಬಯಸಿದ್ದನ್ನೇ ಕೊಡಬೇಕೆಂದು ಒತ್ತಾಯ ಮಾಡಿದಾಗ ಬಲಿಯು ಒಪ್ಪಲೇಬೇಕಾಯಿತು.

ಅದರಂತೆಯೇ ಸಂಕಲ್ಪಮಾಡಿ ಆತನಿಗೆ ದಾನವನ್ನು ಕೊಟ್ಟ. ಕೂಡಲೇ ವಾಮನನು ಎಲ್ಲರೂ ನೋಡುತ್ತಿದ್ದಂತೆಯೇ ತನ್ನ ಸರ್ವವ್ಯಾಪಿಯಾದ  ತ್ರಿವಿಕ್ರಮರೂಪವನ್ನು  ತಾಳಿದ. ಒಂದಡಿಯಿಂದ ಬ್ರಹ್ಮಾಂಡವೆಲ್ಲವನ್ನೂ ಆಕ್ರಮಿಸಿದ. ಎರಡನೆಯ ಹೆಜ್ಜೆಯಿಂದ ಅಂತರಿಕ್ಷ, ದ್ಯುಲೋಕಗಳನ್ನಳೆದ. ಮೂರನೆಯ ಹೆಜ್ಜೆಗೆ ಜಾಗವೆಲ್ಲಿ ಎಂದು ಬಲಿಯನ್ನು ಕೇಳಿದ. ಸತ್ಯನಿಷ್ಠನಾದ ಬಲಿಯು ಮೂರನೆಯ ಹೆಜ್ಜೆಯನ್ನು ತನ್ನ ತಲೆಯಮೇಲಿಟ್ಟು ಅಳೆಯುವಂತೆ ಪ್ರಾರ್ಥಿಸಿದ. ಭಗವಂತನು ತನ್ನ ಅನುಗ್ರಹಪಾದವನ್ನು ಆತನ ಶಿರಸ್ಸಿನಲ್ಲಿಟ್ಟು ಅನುಗ್ರಹಿಸಿ ಅವನನ್ನು ಸುತಲಲೋಕಕ್ಕೆ ಅದುಮಿದ.

ಸುತಲಲೋಕದಲ್ಲಿ ಇಂದ್ರಲೋಕವನ್ನೂ ಮೀರಿಸುವ ಸುಖಭೋಗಗಳಿಂದಕೂಡಿ ತನ್ನ ಪರಿವಾರದೊಡನೆ ವಾಸಿಸುವಂತೆ ಮಾಡಿದನು. ಅಷ್ಟೇ ಅಲ್ಲ, ಆತನ ರಕ್ಷಣೆಗೆ ತಾನೇ ಗದಾಪಾಣಿಯಾಗಿ ದ್ವಾರದಲ್ಲಿ ನಿಂತ! ಬಲಿಯನ್ನು ಆಸುರೀಶಕ್ತಿಗಳು ಮೆಟ್ಟದಂತೆ  ಸುದರ್ಶನಚಕ್ರವನ್ನೂ ನೇಮಿಸಿದ! ಇಂದ್ರಪದವಿಯ ಇಚ್ಚೆ ಅವನಲ್ಲಿದ್ದುದರಿಂದ ಭಗವಂತನು ಮುಂದೆ ಸಾವರ್ಣಿಕ ಮನ್ವಂತರದಲ್ಲಿ  ಇಂದ್ರಪದವಿಯನ್ನು ಗಳಿಸಿ ಕೊನೆಗೆ ತನ್ನ ಬಳಿಗೇ ಬಂದು ಸೇರುವಂತೆ ಅನುಗ್ರಹಿಸಿದನು.

ಕಥೆಯ ತತ್ತ್ವಾರ್ಥ

ಈ ಕಥೆಯ ಬಗೆಗೆ ಶ್ರೀರಂಗಮಹಾಗುರುಗಳು ನೀಡಿದ ಪರಮಾದ್ಭುತವಾದ ವಿವರಣೆಯನ್ನು ಸ್ಮರಿಸುವುದಾದರೆ ಇದು ಐತಿಹಾಸಿಕವಾಗಿ ನಡೆದ ಕಥೆಯಲ್ಲ. ಪರಿಪೂರ್ಣವಾಗಿ ತತ್ತ್ವಾರ್ಥಗರ್ಭಿತವೂ, ಧ್ಯಾನದಲ್ಲಿ ವೊಳರಂಗದಲ್ಲಿ ದರ್ಶನಕ್ಕೆ ವಿಷಯ ಆದ ಕಥೆಯಾಗಿದೆ. ಪುರಾಣಗಳಲ್ಲಿ ಐತಿಹಾಸಿಕ ಘಟನೆಗಳ ಜೊತೆಗೆ ಜಟಿಲವಾದ ತತ್ತ್ವಗಳನ್ನು ಸುಲಭವಾಗಿ ಮನವರಿಕೆಮಾಡಲು ರೂಪಕಗಳಾಗಿ ಕಲ್ಪಿಸಿಕೊಟ್ಟಿರುವುದುಂಟು. ವಾಮನಾವತಾರವೂ ಅಂತಹದೊಂದು ರೂಪಕವೇ ಆಗಿದೆ.

ದೇವತೆಗಳು-ಅಸುರರು ಇಬ್ಬರೂ ನಮ್ಮೊಳಗೇ ಇರುವ ಶಕ್ತಿಗಳು. ನಮ್ಮನ್ನು ಧರ್ಮಮಾರ್ಗದಲ್ಲಿ ನಡೆಸಲು ಪರಮಾತ್ಮನಿಂದ ನೇಮಿಸಲ್ಪಟ್ಟ ಶಕ್ತಿಗಳೇ ದೇವತೆಗಳು. ರಜಸ್ತಮೋಗುಣಗಳಿಂದ ತುಂಬಿದ  ಆಸುರೀಶಕ್ತಿಗಳು ಅಧರ್ಮದೆಡೆಗೆ ನಮ್ಮನ್ನು ಸೆಳೆಯುವ ಶಕ್ತಿಗಳು. ಸೃಷ್ಟಿಯಲ್ಲಿ ಈ ಎರಡೂ ಶಕ್ತಿಗಳಿಗೂ ನಿರಂತರ ಯುದ್ಧವಾಗುತ್ತಲೇ ಇರುವುದು. ಕೆಲವೊಮ್ಮೆ ದೇವತೆಗಳಿಗೆ ಜಯ, ಕೆಲವೊಮ್ಮೆ ಅಸುರರಿಗೆ ಜಯ. ಒಮ್ಮೊಮ್ಮೆ ಇಬ್ಬರೂ ಸಂಧಿ ಮಾಡಿಕೊಳ್ಳುವುದೂ ಉಂಟು. ದೇವತೆಗಳು ನಮ್ಮನ್ನು ಮೇಲಕ್ಕೆಳೆದರೆ ಆಸುರರು ಕೆಳಕ್ಕೆಳೆಯುತ್ತಾರೆ. ಇಬ್ಬರ ಮಧ್ಯದಲ್ಲಿ ಹೃದಯಸ್ಥಾನದಲ್ಲಿ ಅಂಗುಷ್ಠಪರ್ವಮಾತ್ರ ಪುರುಷನಾಗಿ ಬೆಳಗುವವನೇ ವಾಮನ ಎಂಬುದಾಗಿ ಶ್ರುತಿಯು ಸಾರುತ್ತದೆ.

ಆಸುರೀಶಕ್ತಿಗೆ ಜಯವಾಗಿ ನಮ್ಮನ್ನು ಪೂರ್ಣವಾಗಿ ಆಕ್ರಮಿಸಿಕೊಂಡಾಗ ಅವರಿಂದ ಬಿಡುಗಡೆಯನ್ನು ಹೊಂದಲು ನಾವೇನಾದರೂ ಹೃದಿಸ್ಥನಾದ ವಾಮನನನ್ನು ಶರಣುಹೊಂದಿದರೆ, ನಮ್ಮನ್ನು ಪೂರ್‍ಣವಾಗಿ ಆತನಿಗೆ ಅರ್ಪಿಸಿಕೊಂಡರೆ ಆತನು ಆಸುರೀ ಶಕ್ತಿಯನ್ನು ಪಾತಾಳಕ್ಕೆ ಮೆಟ್ಟಿ ತಾನೇ ನಮ್ಮಲ್ಲಿ ಪೂರ್ತಿಯಾಗಿ ವ್ಯಾಪಿಸಿಕೊಂಡು ತ್ರಿವಿಕ್ರಮ ವಿಷ್ಣುವಾಗಿ ('ವಿಷ್ಣು' ಎಂದರೆ ವ್ಯಾಪಕನಾಗಿರುವವನು ಎಂದರ್ಥ) ಅನುಗ್ರಹಿಸುತ್ತಾನೆ. ಈತನು ವ್ಯಾಪಿಸುವ ಲೋಕಗಳೆಂದರೆ ಬೆನ್ನು ಹುರಿಯೊಳಗಿನ ಯೋಗಮಾರ್ಗ. ಮೂಲಾಧಾರದಿಂದ ಶಿರದ ಬ್ರಹ್ಮರನ್ಧದವರೆಗೂ ವ್ಯಾಪಿಸುವ ಒಳಬ್ರಹ್ಮಾಂಡವನ್ನು ಭಗವಂತನು ತುಂಬಿಕೊಂಡಾಗ, ಬಲಿಯಂತೆ ತಲೆಬಾಗುವುದು ಸಹಜವೇ. ಆಗ ಶಿರಸ್ಥಾನದಲ್ಲಿನ ಅಮೃತವು ಧಾರಾಕಾರವಾಗಿ ಗಂಗೆಯಂತೆ ಹರಿಯುವ ಒಳ ಅನುಭವವನ್ನೇ ಕಥಾರೂಪದಲ್ಲಿ 'ವಿಷ್ಣುಪಾದೋದ್ಭವಾ ಗಂಗಾ' ಎಂದು ಋಷಿಗಳು ಹೇಳುತ್ತಾರೆ.

ಅಹಂಕಾರ ಆವರಿಸಿಕೊಂಡಾಗ ಭಗವಂತನನ್ನು ಕಾಣುವುದು ಅಸಾಧ್ಯ. ಆದರೆ ಅವನನ್ನು ಶರಣು ಹೊಂದಿದರೆ ಬಲಿಯನ್ನು ಅನುಗ್ರಹಿಸಿದಂತೆ ನಮ್ಮ ಅಹಂಕಾರವನ್ನು ತೊಲಗಿಸಿ ನಮ್ಮಲ್ಲಿ ಬ್ರಹ್ಮಭಾವವನ್ನು ತುಂಬುತ್ತಾನೆ. ವಾಮನನು ಒಬ್ಬ ಸದ್ಗುರುವಿನ   ರೂಪವನ್ನೂ ತಾಳಿ ಬರಬಹುದು. ಆಗ ಗುರುವಿಗೇ ನಮ್ಮನ್ನು ಸಮರ್ಪಿಸಿಕೊಂಡಾಗ ನಿಷ್ಠೆ-ಪ್ರಾಮಾಣಿಕತೆಗಳಿಂದ ಅವನ ಆದೇಶವನ್ನು ಪಾಲಿಸಿದರೆ ಬ್ರಹ್ಮಭಾವಕ್ಕೇರಿಸಿ ನಮ್ಮನ್ನು ಉದ್ಧರಿಸುತ್ತಾನೆ.

ಅನುಗ್ರಹ ಅವತಾರ

ಭಗವಂತನು ನೃಸಿಂಹ, ರಾಮ, ಕೃಷ್ಣನಾಗಿ ಬಂದಾಗ ದೈತ್ಯರ ನಿಗ್ರಹದಿಂದ ಅವರ ಏಳಿಗೆಗೆ ಕಾರಣನಾದನು. ಆದರೆ  ವಾಮನಾವತಾರವು ಪೂರ್ಣಾನುಗ್ರಹ ಅವತಾರವೆನಿಸಿಕೊಳ್ಳುತ್ತದೆ. ಇಲ್ಲಿ ಇಂದ್ರನಿಗೆ ಪುನಃ ರಾಜ್ಯಪ್ರಾಪ್ತಿಯ ಅನುಗ್ರಹ, ಅದಿತಿದೇವಿಗೆ ಇಷ್ಟಾರ್ಥಸಿದ್ಧಿಯ ಅನುಗ್ರಹ, ಬಲಿಗೆ ಮೇಲೆ ಹೇಳಿದಂತೆ ಪರಮಾನುಗ್ರಹ. ಬ್ರಹ್ಮನಿಗೆ ತ್ರಿವಿಕ್ರಮನ ಪಾದತೊಳೆಯುವ ಅನುಗ್ರಹ. ಗಂಗೆಯು ಭುವಿಗಿಳಿದು ಲೋಕಕ್ಕೆಲ್ಲಾ ಅನುಗ್ರಹ.

ಇಂತಹ ಅನುಗ್ರಹಮೂರ್ತಿ ವಾಮನ-ತ್ರಿವಿಕ್ರಮನಿಗೆ ನಮ್ಮ ಅನಂತಾನಂತ ನಮನಗಳು.

ಸೂಚನೆ: 29/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.