ಶ್ರೀಮದ್ರಾಮಾಯಣದ ಪ್ರಾರಂಭವೇ ಶಾಂತರಸದ ಸ್ರೋತಸ್ಸಾದ ಋಷ್ಯಾಶ್ರಮದಲ್ಲಿ. ದೇವರ್ಷಿನಾರದರು ಮಾಡಿದ ಶ್ರೀರಾಮನ ಗುಣಗಾನದಿಂದ ವಾಲ್ಮೀಕಿಗಳ ಮನಸ್ಸು ಶಾಂತರಸದಲ್ಲಿ ಪ್ರತಿಷ್ಠಿತವಾಗಿರುತ್ತದೆ. ಸ್ನಾನಕ್ಕಾಗಿ ತಮಸಾನದಿಗೆ ಬಂದ ವಾಲ್ಮೀಕಿಗಳು ಕೊಳೆಯಿಲ್ಲದೇ ಶುದ್ದವೂ ತಿಳಿಯೂ ಪ್ರಸನ್ನವೂ ರಮಣೀಯವೂ ಆಗಿರುವ ತಮಸಾ ತೀರ್ಥವನ್ನು ಸತ್ಪುರುಷನ ಮನಸ್ಸಿಗೆ ಹೋಲಿಸುತ್ತಾ 'ಸನ್ಮನುಷ್ಯ ಮನೋ ಯಥಾ' ಎಂದು ವರ್ಣಿಸುತ್ತಾರೆ.
ಶ್ರೀರಾಮ ಶಾಂತಿಯ ನೆಲೆ. ಯಜ್ಞರಕ್ಷಣೆಗಾಗಿ ಶ್ರೀರಾಮನನ್ನು ವಿಶ್ವಾಮಿತ್ರರ ಜೊತೆ ಕಳುಹಿಸಿಕೊಡಲು ಹೆದರಿದ ದಶರಥನನ್ನು ಕುರಿತು 'ಸತ್ಯಪರಾಕ್ರಮನೂ, ಮಹಾತ್ಮನೂ ಆದ ಶ್ರೀರಾಮನಾರೆಂದು ನಾನು ಬಲ್ಲೆ. ಅಷ್ಟೇ ಅಲ್ಲದೇ ವಸಿಷ್ಠರಾದಿಯಾಗಿ ಎಲ್ಲಾ ತಪಸ್ವಿಗಳಿಗೂ ಶ್ರೀರಾಮನಾರೆಂದು ಗೊತ್ತು' ಎಂದು ಶ್ರೀರಾಮನಾರೆಂಬ ಗುಟ್ಟನ್ನು ವಿಶ್ವಾಮಿತ್ರರು ಬಿಚ್ಚಿಡುತ್ತಾರೆ.
ದಂಡಕಾರಣ್ಯವು ಅಗಸ್ತ್ಯ-ವಾಲ್ಮೀಕಿ-ಸುತೀಕ್ಷ್ಣ-ಶರಭಂಗರೇ ಮೊದಲಾದವರ ಅನೇಕ ಮಹರ್ಷ್ಯಾಶ್ರಮಗಳಿಂದ ಕೂಡಿದ ತಪೋಭೂಮಿ. ಮೋಕ್ಷೈಕಲಕ್ಷ್ಯವುಳ್ಳ ಅನೇಕ ಸಾಧಕರು, ರಾಕ್ಷಸರಿಗೆ ಹೆದರಿ, ಮಹರ್ಷಿಗಳ ಆಶ್ರಮಗಳಲ್ಲಿ ಆಶ್ರಯಪಡೆದಿದ್ದರು. ಧರ್ಮೈಕನಿರತರಾದ, ದೃಢವ್ರತರಾದ, ಸೂರ್ಯಾಗ್ನಿತೇಜಸ್ಸಿನಿಂದ ಕೂಡಿದ, ನಿಯತಾಹಾರಿಗಳಾದ, ಅವರು ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ನಾನಾಮಾರ್ಗಗಳನ್ನು ಆಶ್ರಯಿಸಿದ್ದರು. ಶ್ರೀಶಂಕರ ಭಗವತ್ಪಾದಾಚಾರ್ಯರು ತಮ್ಮ ಯೋಗತಾರಾವಳಿಯಲ್ಲಿ ತಿಳಿಸಿರುವ ಹಾಗೆ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಪರಶಿವನಿಂದುಪದಿಷ್ಟವಾದ ಒಂದೂಕಾಲು ಲಕ್ಷಮಾರ್ಗಗಳಿವೆಯಷ್ಟೇ. ವನವಾಸಕ್ಕಾಗಿ ದಂಡಕಾರಣ್ಯವನ್ನು ಪ್ರವೇಶಿಸಿದ ಶ್ರೀರಾಮ ಅಲ್ಲಿನ ಋಷ್ಯಾಶ್ರಮಗಳಲ್ಲಿ ಕೆಲವೆಡೆ ಹತ್ತು ಮಾಸಗಳು, ಕೆಲವೆಡೆ ಒಂದುವರ್ಷ, ಕೆಲವೆಡೆ ನಾಲ್ಕು ತಿಂಗಳು, ಮತ್ತೆ ಕೆಲವೆಡೆ ಐದು-ಆರು-ಎಂಟು ತಿಂಗಳುಗಳಿರುತ್ತಾ, ಅವರ ಸಾಧನಾಮಾರ್ಗದಲ್ಲಿ ತನ್ನ ಇರುವಿಕೆಯಿಂದಲೇ ನೆರವನ್ನು ನೀಡುತ್ತಾ ಅಧ್ಯಾತ್ಮಮಾರ್ಗಬಂಧುವಾಗಿ, ದೀರ್ಘಬಂಧುವಾಗಿದ್ದ. ಶಾಂತಿಸಮೃದ್ಧಿಯಾದ ಅಮೃತತ್ತ್ವದ ಪ್ರಾಪ್ತಿಯನ್ನು ಶೀಘ್ರವಾಗಿ ದೊರಕಿಸಿಕೊಟ್ಟ. 'ಯಾವನನ್ನು ಭಗವಂತನು ವರಿಸುತ್ತಾನೆಯೋ ಅವನಿಂದ ಭಗವಂತನು ಹೊಂದಲ್ಪಡುತ್ತಾನೆ' ಎಂಬ ಕಠೋಪನಿಷತ್ತಿನ ವಾಣಿಗೆ ನಿದರ್ಶನವಾಗಿದೆ ಈ ಸಂದರ್ಭ.ಧ್ಯೇಯವಸ್ತುವೇ ಮುಂದಿರುವಾಗ ಸಾಧನೆ ಸುಲಭವಲ್ಲವೇ? ಪರಮ ಭಾಗವತರಾದ ಶ್ರೀವೇದಾಂತದೇಶಿಕರು ತಮ್ಮ ರಘುವೀರಗದ್ಯದಲ್ಲಿ ದಂಡಕಾರಣ್ಯದಲ್ಲಿರುವ ಶ್ರೀರಾಮನನ್ನು, 'ಬೇಡಿದ್ದನ್ನು ಕೊಡುವ ನಡೆದಾಡುವ ಪಾರಿಜಾತವೃಕ್ಷ'ಕ್ಕೆ ಹೋಲಿಸುತ್ತಾ 'ದಂಡಕಾವನ-ತಪೋಭೂಮಿ-ಜಂಗಮ-ಪಾರಿಜಾತಃ' ಎಂದು ವರ್ಣಿಸಿದ್ದಾರೆ.
ಶ್ರೀರಾಮನ ಅನುಗ್ರಹಕ್ಕೆ ಪಾತ್ರರಾದವರಲ್ಲಿ ಶರಭಂಗ ಮಹರ್ಷಿಗಳು, ಜಟಾಯು, ಕಬಂಧ, ಶಬರೀ ಮೊದಲಾದವರು ಅಗ್ರಗಣ್ಯರು. ತನ್ನ ಅವತಾರವನ್ನು ಮುಗಿಸಿ ಮಹಾಪ್ರಸ್ಥಾನವನ್ನು ಮಾಡುವಾಗ ತನ್ನೊಂದಿಗೆ ಬಂದ ಸಾಕೇತಪುರವಾಸಿಗಳಿಗೆ ಬ್ರಹ್ಮಲೋಕಕ್ಕಿಂತಲೂ ಮೇಲಿರುವ 'ಸಾಂತಾನಿಕ'ವೆಂಬ ಲೋಕವನ್ನು ಅನುಗ್ರಹಿಸುತ್ತಾನೆ ಶ್ರೀರಾಮ.
ಕಟು-ಕಷಾಯ-ರೂಕ್ಷಾದಿರಸಗಳೂ ಹೇಗೆ ಕಡೆಯಲ್ಲಿ ಮಧುರರಸದಲ್ಲಿಯೇ ಬಂದು ನಿಲ್ಲುವುದೋ ಹಾಗೆಯೇ ಶೃಂಗಾರಾದಿರಸಗಳಿಗೆ ಶಾಂತರಸವೇ ಗಮ್ಯಸ್ಥಾನ. 'ಕೇಂದ್ರವೊಂದನ್ನಿಟ್ಟುಕೊಂಡು ಆರಂಭವಾದ ವೃತ್ತವು ಆರಂಭಿಸಿದೆಡೆಯಲ್ಲಿಯೇ ಬಂದು ನಿಂತಾಗ ಹೇಗೆ ಪೂರ್ಣವಾಗುವುದೋ ಹಾಗೆಯೇ ಶಾಂತಿಧಾಮನಾದ ಭಗವಂತನಿಂದ ಆರಂಭವಾದ ಜೀವನವೃತ್ತವು ಆ ಶಾಂತಿಧಾಮನಲ್ಲಿಯೇ, ಆ ಶಾಂತರಸದಲ್ಲಿಯೇ ಬಂದು ನೆಲೆನಿಂತಾಗಲೇ ಪೂರ್ಣವಾಗುವುದು' ಎಂಬ ಶ್ರೀರಂಗಮಹಾಗುರುವಿನ ಅಮೃತವಾಣಿಯನ್ನು ಇಲ್ಲಿ ಸ್ಮರಿಸಬಹುದಾಗಿದೆ.