Thursday, August 20, 2020

ಕೆರೆಯ ನೀರನು ಕೆರೆಗೆ ಚೆಲ್ಲಿ (Kereya Niranu Kerege Celli)

ಲೇಖಕರು: ಗಣೇಶ್ ಕುಮಾರ್. ಬಿ. ಎನ್  

(ಪ್ರತಿಕ್ರಿಯಿಸಿರಿ lekhana@ayvm.in) 




ವ್ಯವಸಾಯಿಗಳ ಒಂದು ಪುಟ್ಟ ಗ್ರಾಮ. ಗ್ರಾಮಸ್ಥರು  ವ್ಯವಸಾಯಕ್ಕೆ ಮಳೆಯನ್ನೇ ಅವಲಂಬಿಸಿದ್ದರಿಂದ ಅದು ಯೋಗ್ಯವಲ್ಲವೆಂದು, ಮುಂಜಾಗ್ರತಾ ಕ್ರಮವಾಗಿ ಒಂದು ದೊಡ್ಡ ವಿಸ್ತೀರ್ಣವುಳ್ಳ ಕೆರೆಯನ್ನು ಕಟ್ಟಿಸುವುದಾಗಿ  ಹಿರಿಯರು ನಿಶ್ಚಯಿಸಿದರು. ಬೃಹತ್ತಾದ ನಿರ್ಮಾಣದ ಖರ್ಚುವೆಚ್ಚಗಳಿಗೆ ಊರಿನ ಎಲ್ಲ ಕುಟುಂಬಗಳು ತಮ್ಮ ಕೊಡುಗೆಯನ್ನು ನೀಡಬೇಕೆಂದು ಸುತ್ತೋಲೆಯನ್ನು ಹೊರಡಿಸಿದರು. ಗ್ರಾಮದ ಕುಟುಂಬಗಳೆಲ್ಲವೂ ಅನುಕೂಲಸ್ಥರಾಗಿದ್ದುದರಿಂದ ಹಣವನ್ನು ಸಂದಾಯ ಮಾಡುವುದು ಕಷ್ಟಕರವಾಗಿರಲಿಲ್ಲ.

ಆದರೆ ಗ್ರಾಮದ ಧನಿಕನೊಬ್ಬ ಹೀಗೆ ಆಲೋಚಿಸಿದನು- "ನನ್ನ ಕೃಷಿ ಭೂಮಿಯ ಬಾವಿಯಲ್ಲಿ ಸಮೃದ್ಧವಾಗಿ ನೀರು ತುಂಬಿದೆ, ನಾನೇಕೆ ಊರಕೆರೆಗೆ ಹಣವನ್ನು ವ್ಯಯಿಸಬೇಕು", ಎಂದು. ಕುಬುದ್ಧಿಯಿಂದ ಕೂಡಿದ ಆತನು ಬಹಳ ನಷ್ಟದಲ್ಲಿರುವೆನೆಂದು ಸುಳ್ಳು ಹೇಳಿ ಕಳುಹಿಸಿದನು. ಧನಿಕನ ಈ ನಡೆಯನ್ನು ನೋಡಿ, ಗ್ರಾಮದ ಬಹುಜನರು ನಾವೂ ಈ ರೀತಿಯಲ್ಲಿ ನಡೆದರೆ ಹಣವು ಉಳಿಯುವುದು ಎಂದು ಆಲೋಚಿಸಿ, ಧನಿಕನ ಹಾಗೆ ಸುಳ್ಳು ಕಾರಣಗಳನ್ನು ನೀಡಿ ಹಿರಿಯರನ್ನು ಹಿಂತಿರುಗಿಸಿದರು. ನಿರೀಕ್ಷಿಸಿದ ಹಣ ಸಂಗ್ರಹವಾಗದ ಕಾರಣ ಕೆರೆ ನಿರ್ಮಾಣವಾಗಲಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಭೀಕರ ಕ್ಷಾಮವು ತಲೆದೋರಿತು. ಎಲ್ಲರ ಬಾವಿಗಳು ಬತ್ತಿದವು; ನೀರಿನ ಹಾಹಾಕಾರ ಉಂಟಾಗಿ ರೋಗಗಳು ಹರಡಿದವು; ಅನಾಹುತಗಳು ಸಂಭವಿಸಿದವು. ಗ್ರಾಮ ಹಾಗೂ ಅಲ್ಲಿಯ ಜನಜೀವನ ನಷ್ಟವಾಯಿತು.

ಕೆರೆಗೆ ಸಲ್ಲಿಸುವ ಕರವು, ನಷ್ಟವಲ್ಲ, ತಮ್ಮ ಒಳಿತಿಗಾಗಿಯೇ ಮಾಡುವ ಕೆಲಸ ಎಂಬುದನ್ನು ಮರೆಯಬಾರದು. "ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ" ಎಂಬ ದಾಸರ ವಾಣಿಯನ್ನು ಜ್ಞಾಪಿಸುವೀ ಕಥೆಯು ಗೂಢವಾದ ಅರ್ಥವನ್ನು ಕೊಡುತ್ತಿದೆ. ನಮ್ಮ ದೇಹವೇ ಈ ಗ್ರಾಮ. ಇದು ನಮ್ಮ ಇಂದ್ರಿಯಗಳಿಂದ ಕೂಡಿದ ಗ್ರಾಮ. ಯಜ್ಞ, ದಾನ, ಪೂಜೆಗಳಿಗೆ ಏಕೆ ಧನವ್ಯಯವೆಂದು, ತಮ್ಮ ಸ್ವಂತ ಅನುಭವಕ್ಕಾಗಿ ಕೂಡಿಡುವ ಬುದ್ಧಿ ಸಹಜ. ಆದರೆ, ಯಜ್ಞದಲ್ಲಿ ಕೊಟ್ಟ ಹವಿಸ್ಸು ಹೊರನೋಟಕ್ಕೆ ವ್ಯಯದಂತೆ ಕಂಡರೂ ನಮ್ಮನ್ನು ಧರಿಸುವ ದೇವತಾ ರೂಪವಾದ ಶಕ್ತಿ ಎಂಬ ಕೆರೆಗೆ ಚೆಲ್ಲಿದ ಕಾಣಿಕೆಯದು. ಇದು ಸಸಿಯ ಬೇರಿಗೆ ಎರೆದ ನೀರಿನಂತೆ, ಎಂಬುದು ಶ್ರೀರಂಗಮಹಾಗುರುಗಳ ಪ್ರಯೋಗಬದ್ಧವಾದ ದರ್ಶನ. ನಮ್ಮ ಅಸ್ತಿತ್ವದ ಬೇರಾಗಿರುವ ಚೈತನ್ಯಶಕ್ತಿಗಳಿಗೆ ಎರೆದ ನೀರಿದು ಎಂಬುದು ಅವರ ಸಿದ್ಧಾಂತ. ಆದರೆ ಬೇರಿಗೆ ಸರಿಯಾಗಿ ನೀರೆರೆವ ಕಲೆಯು ತಿಳಿದಿರಬೇಕು.  ಯಜ್ಞದಲ್ಲಿ ಹವಿಸ್ಸನ್ನು ಸಮರ್ಪಿಸುವಂತೆ ಸದ್ಗೃಹಸ್ಥನು ಮನೆಯ ಅಡುಗೆಯನ್ನು ಭಗವಂತನಿಗೆ ನಿವೇದಿಸಿ ಪ್ರಸಾದವಾಗಿ ಸ್ವೀಕರಿಸುತ್ತಾನೆ. ಇದು ನಮ್ಮ ಒಳಿತಿಗಾಗಿ; ದೇವರ ಒಳಿತಿಗಾಗಲ್ಲ. ಅಂತೆಯೇ ಧರ್ಮಿಷ್ಠನಾದ ರಾಜನಿಗೆ ಸಲ್ಲಿಸಿದ ಕರವು ವರದಂತೆ ಕೆಲಸಮಾಡುತ್ತದೆ. ನಮ್ಮ ದೇಶದ ಋಷಿ-ಮುನಿಗಳು ಇಂತಹ ಕಲೆಯನ್ನು ಬಲ್ಲವರಾಗಿದ್ದರು.  

ಅಂತಹ ಋಷಿಗಳು ಹೇಳುವ ಸೂತ್ರರೂಪದ ಮಾತೆಂದರೆ, ಸಮರ್ಪಿಸುವುದು ಅಲ್ಪವಾದರೂ, ಸಮರ್ಪಣಾ ಭಾವದಿಂದ, "ನ ಮಮ" (ನನಗಲ್ಲ) ಎಂದು ಸಮರ್ಪಿಸಿದರೆ ಅದು ಬೃಹತ್ತಾದ ವರವಾಗಿ ಮರಳಿ  ಬರುವುದು. ಸಮರ್ಪಣೆಯು ಪಾರಮಾರ್ಥಿಕವಾಗಿ ಶಾಶ್ವತವಾದ ನೆಮ್ಮದಿ, ಸೌಖ್ಯಗಳನ್ನು  ತರುತ್ತದೆ.

ಸೂಚನೆ: 20/08/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.