Sunday, August 2, 2020

ಆರ್ಯಸಂಸ್ಕೃತಿ ದರ್ಶನ - 4 (Arya Samskruti Darshana - 4)

ದೇವರ ದೀಪ



ದೇವರ ಸನ್ನಿಧಿಯಲ್ಲಿ ಬೆಳಗು ಮತ್ತು ಸಂಜೆಗಳಲ್ಲಿ ತುಪ್ಪ ಅಥನಾ ಎಣ್ಣೆಯ ದೀಪಗಳನ್ನು ಹಚ್ಚಿಸಿಡುವ ಪದ್ಧತಿ ಭಾರತೀಯರ ಮನೆಯಲ್ಲಿ ಬೆಳೆದು ಬಂದಿದೆ. ನಂದಿಹೋಗದ ನಂದಾದೀಪವೊಂದನ್ನು ಹಚ್ಚಿಸಿಡುವವರೂ ಉಂಟು. ಏಕೆ ಈ ದೀಪ? ಗಿರಿ-ಗುಹೆಗಳಲ್ಲಿ ವಾಸ ಮಾಡುತ್ತಿದ್ದ ಅನಾಗರಿಕ ಜನಾಂಗ ಅಲ್ಲಿನ ಕತ್ತಲೆಯನ್ನು ಹೋಗಲಾಡಿಸಿಕೊಳ್ಳಲು ಎಣ್ಣೆ –ತುಪ್ಪ ಅಥವಾ ಪ್ರಾಣಿಗಳ ಕೊಬ್ಬಿನ ದೀಪಗಳನ್ನು ಹಚ್ಚಿಡುತ್ತಿದ್ದುದರಲ್ಲಿ ಅರ್ಥವುಂಟು. ವಿದ್ಯು ದ್ದೀಪಗಳಿಂದ ರಾತ್ರಿಯನ್ನೂ ಹಗಲಾಗಿಸುವ ನವ ನಾಗರಿಕ ಜನಾಂಗ ಏಕೆ ಆ ನಡೆಯನ್ನು ಅನುಸರಿಸಬೇಕೋ ತಿಳಿಯದು. ಪ್ರತಿ ಮನೆಯಲ್ಲಿಯೂ ಎಣ್ಣೆ-ಬತ್ತಿ ಗಳಿಗಾಗಿ ಆಗುವ ವೆಚ್ಚ ವಾದರೂ ಎಷ್ಟು? ಇದೊಂದು ರಾಷ್ಟೀಯ ಅಪಯವ್ಯಯಲ್ಲವೇ? ದೇವರೇ ಸೂರ್ಯಚಂದ್ರರಿಗೂ ಬೆಳಕನ್ನು ಕೊಡುವ ಬೆಳಕು ಎನ್ನುವುದೊಂದು ಕಡೆ; ಹಣತೆಯ ದೀಪವೊಂದು ಕಡೆ. ಏನಿದೀ ವಿಪರ್ಯಾಸ? ದೇವರಿಗೇನು ದೀಪ ವಿಲ್ಲದೇ ಕಾಣದೇ? ಸೂರ್ಯನನ್ನು ನೋಡಲು  ಬ್ಯಾಟರಿ  ಹಣತೆಗೆಳ ಅಗತ್ಯವಿದೆಯೇ? ಒಂದು ವೇಳೆ ದೀಪವಿದ್ದ ರೂ ಹಣತೆ ದೀಪದ ಬದಲು ವಿದ್ಯುದ್ದೀಪವಿದ್ದರೆ ಏನು ತಪ್ಪು? ಎಂಬ ಪ್ರಶ್ನೆಗಳು ವಿಚಾರವಂತ ಮಾನವ ಮತಿಯನ್ನು ಮುಸುಕಿದ್ದರೆ ಅಚ್ಚರಿಯೇನೂ ಇಲ್ಲ. 

ದೇವರ ಮನೆಯಲ್ಲಿ ದೀಪವಿಡುವ  ಪದ್ಧತಿ ಯಾರಿಂದ ಹೇಗೆ ಬೆಳೆದು ಬಂದಿತು? ಇದರ ಹಿನ್ನೆಲೆಯಲ್ಲಿರುವ ವಿಷಯವೇನು? ಕೇವಲ ಗಿರಿ-ಗುಹಾ ನಿವಾಸಿಗಳ ಅಂಧಾನುಕರಣೆಯಾಗಿಯೇ ಈ ದೀಪ ಹಚ್ಚಿಸುವ ಪದ್ಧತಿ ಬೆಳೆದು ಬಂದಿದೆಯೇ? ಅಥವಾ ಬೇರೇನಾದರೂ ವಿಷಯವಿಲ್ಲುಂಟೇ? ಎಂಬ ಪ್ರಶ್ನೆಗಳೂ ಇಲ್ಲೇಳುತ್ತವೆ.

ಋಷಿ ಸಂಸ್ಕೃತಿಯ ಮೂಲಕ ದೇವರ ದೀಪವಿಡುವ ಪದ್ಧತಿ ಬೆಳೆದುಬಂದಿದೆ. ಜೀವನದ ಮೂಲವನ್ನು ಒಳನೋಟದಿಂದ ಅರಿತು ಅದನ್ನು ಬಯಲು ಪಡಿಸಿದ ಜನಾಂಗವೇ ಋಷಿಕುಲ. ಪ್ರತಿ ಜೀವಿಯ ಹೃದಯಗುಹೆಯಲ್ಲಿ ತಾನೇತಾನಾಗಿ ಬೆಳಗುವ ದೀಪವೊಂದುಂಟೆಂಬುದನ್ನು ಋಷಿಜನಾಂಗ ಒಳನೋಟದಿಂದ ಗುರುತಿಸಿತು. ಆ ದೀಪವು ಬಾಳಬೆಳಕಾದ ದೀಪ. ಬಾಳಿನ ಯಾವ ವಿಕಾರ ಗಳಿಗೂ ತುತ್ತಾಗದಂತೆ ಬಾಳಿನ ಒಳಮೈಯಲ್ಲಿ ನಿಗೂಢವಾಗಿರುವ ದೀಪವದು. ಆ ಬೆಳಕಿನ ಜಾಡು ಹಿಡಿದು ಹುಡುಕು ನೋಟದಿಂದ ಬಾಳ ಒಳಗನ್ನು ಹುಡುಕುತ್ತ ತನ್ನತ್ತ ಒಲಿದು ಬಂದವರಿಗೆ ಪರಮಾನಂದವನ್ನು ತುಂಬಿದ ದೀಪವದು. ಅಂತಹ ದೀಪವೇ ದೇವರು. ಪರಂಜ್ಯೋತಿ. ಬಾಳಿನಲ್ಲಿ ನಿಗೂಢವಾಗಿ ಹುದುಗಿರುವ ಆ ದೀಪದತ್ತ ಜೀವಿ ಸಾಮಾನ್ಯನ ಗಮನ ಸೆಳೆದು ಪ್ರತಿ ಜೀವಿಯನ್ನೂ ಪರಮಾನಂದದಿಂದ ತುಂಬಿ ನಲಿಯುವಂತೆ ಮಾಡುವುದೇ ದೇವರ ದೀಪವನ್ನು ಬೆಳಗು ಸಂಜೆಗಳಲ್ಲಿ ಬೆಳಗಿಸುವ ಯೋಜನೆಯ ತಿರುಳು. ಮೈಯೇ ಒಂದು ದೀಪ ಪಾತ್ರೆ ಅಥವಾ ಸೊಡಲು. ಆದರ ಪ್ರತಿನಿಧಿಯೇ ಹಣತೆ. ಒಳದೀಪದತ್ತ ಹರಿಯುವ ಒಲಿವಿನಿಂದ ತುಂಬಿದ ಮನೋಧಾರೆಯೇ ಸ್ನೇಹ-ಅಂದರೆ ದೀಪ  ಬೆಳಗಿಸಲು ಬೇಕಾಗುವ ಎಣ್ಣೆ. ಮೂರುಗುಣಗಳಿಂದ ಕೂಡಿದ ಪ್ರಕೃತಿಯ ಪ್ರತೀಕವೇ ಮುಪ್ಪುರಿಯಾದ ಭಕ್ತಿ. ತ್ರಿಗುಣಾತ್ಮಕವಾದ ಪ್ರಕೃತಿಯತ್ತ ಆ ಬೆಳಕು ಒಲಿದಾಗಲೇ, ಆ ಬೆಳಕು ತನ್ನನ್ನು ವಿಸ್ತರಿಸಿಕೊಂಡಾಗಲೇ ಪ್ರಪಂಚ ಬೆಳೆದುದು. ಅದರ ವಿಸ್ತಾರವೇ ಬಾಳು ಮತ್ತು ಬಾಳಲು ಬೇಕಾದ ಸಮಸ್ತ ಸಾಮಗ್ರಿಯೂ ಆಗಿದೆ. ಬಾಳ ಮೂಲವಾದ ಶಕ್ತಿಯು ತನ್ನನ್ನು ಹೇಗೆ ವಿಸ್ತರಿಸಿಕೊಂಡಿದೆ, ಅದರ ಮೂಲವೆಲ್ಲಿದೆ ಎಂಬುದರ ನಕ್ಷೆಯೇ ದೇವರ ದೀಪ. ಆದ್ದರಿಂದಲೇ ಹಣತೆಯ ದೀಪ. ದೀಪಪಾತ್ರೆ-ಎಣ್ಣೆ- ಬತ್ತಿಗಳಿಲ್ಲದ ವಿದ್ಯುದ್ದೀಪ ದೇವರ-ದೀಪವಾಗಲಾರದು. ಭಕ್ತಿಭಾವದಿಂದ ಪ್ರಕೃತಿಯ ಪಾರ [ದಡ]ದತ್ತ ಒಲಿದಾಗ ಪ್ರಕೃತಿಯ ಪಾರದಲ್ಲಿ ಆ ಬೆಳಕು ಕಾಣುವುದು.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಆಗಸ್ಟ 1986 ರಲ್ಲಿ  ಪ್ರಕಟವಾಗಿದೆ.