ಡಾII ಶ್ರುತಿ ಪ್ರಸಾದ್
(ಪ್ರತಿಕ್ರಿಯಿಸಿರಿ: lekhana@ayvm.in)
ಒಂದು ಊರಲ್ಲಿ ಬಡಪಾಯಿ ಮನುಷ್ಯನೊಬ್ಬ ಸಾಮಾನ್ಯ ವಿಷಯಗಳಲ್ಲಿ ಆನಂದವನ್ನನುಭವಿಸುತ್ತಾ ಪ್ರತಿನಿತ್ಯವೂ ದೇವರ ಪೂಜೆಯನ್ನು ಮಾಡುತ್ತಿದ್ದ. ಒಮ್ಮೆ ದೇವರು ಪ್ರತ್ಯಕ್ಷವಾಗಿ ಏನು ವರ ಬೇಕೆಂದಾಗ ಆತ ಚಿನ್ನದ ನಾಣ್ಯಗಳು ಬೇಕೆಂದ. ಆಗ ದೇವರು,"ನೀನು ಸಾಕೆಂದು ಹೇಳುವ ತನಕ ನಿನ್ನ ಕಿಸೆಯಲ್ಲಿ ನಾಣ್ಯಗಳನ್ನು ತುಂಬಿಸುತ್ತೇನೆ, ಆದರೆ ಒಂದು ಸಾರಿ ನಾಣ್ಯಗಳು ಕೆಳಗೆ ಬಿದ್ದರೆ ಅವೆಲ್ಲವೂ ಮಣ್ಣಾಗಿ ಹೋಗುತ್ತವೆ" ಎಂದು ಎಚ್ಚರಿಸಿದರು. ಆತನಿಗೆ ದೇವರು ಕೊಟ್ಟ ಎಚ್ಚರಿಕೆಯ ಬಗ್ಗೆ ಗಮನವಿರದೆ, ಕೇವಲ ನಾಣ್ಯಗಳನ್ನು ನೋಡಿ ಮಹದಾನಂದವಾಯಿತು. ದುರಾಸೆಯಿಂದ, ತನ್ನ ಕಿಸೆ ಪೂರ್ತಿಯಾದರೂ, ಸಾಕೆನ್ನಲಿಲ್ಲ. ನಾಣ್ಯಗಳನ್ನು ನೋಡುತ್ತಲಿರುವ ಕ್ಷಣಿಕಾನಂದದಲ್ಲಿ ವಿವೇಕವನ್ನು ಕಳೆದುಕೊಂಡ. ಆಗ ಕಿಸೆ ಹರಿದು ನಾಣ್ಯಗಳೆಲ್ಲಾ ಕೆಳಗೆ ಚೆಲ್ಲಿ ಮಣ್ಣಾಗಿಹೋದವು.
ಕೇವಲ ಭೌತಿಕಪ್ರಪಂಚದಲ್ಲಿ ವ್ಯವಹರಿಸುತ್ತಾ ಚಿನ್ನದಂತೆ ಕಾಣುವ ಕ್ಷಣಿಕವಾದ ಇಂದ್ರಿಯ ಸುಖವನ್ನೇ ಬಯಸುತ್ತೇವೆ. ಕ್ಷಣಿಕವಾದ, ಪರಿಭಾಷೆ ಬದಲಾಗುವಂತಹ ಇಂದ್ರಿಯ ಸುಖಗಳಿಗೆ ಮಾರುಹೋಗಿ ದೀರ್ಘಕಾಲದ ಮಹದಾನಂದವನ್ನು ಕಳೆದುಕೊಳ್ಳುತ್ತೇವೆ. ಹಾಗಿದ್ದರೆ ಶಾಶ್ವತವಾದ ಮಹದಾನಂದ ಯಾವುದು ಮತ್ತು ಅದರ ಮಾನದಂಡ ಯಾವುದು?
ಭಾರತೀಯ-ಮಹರ್ಷಿಗಳು ಕಂಡುಕೊಂಡ ಆನಂದದ ಸ್ತರಗಳನ್ನು ತೈತ್ತಿರೀಯ ಉಪನಿಷತ್ತು ತಿಳಿಸುತ್ತದೆ. ಈ ಆನಂದಾನುಭವವು ಮಾನುಷ, ಗಂಧರ್ವ-ಪಿತೃ-ದೇವತಾನಂದ-ಬ್ರಹ್ಮಾನಂದದವರೆಗೂ ಪ್ರತಿಹಂತದಲ್ಲೂ ೧೦೦ ಪಟ್ಟು ಹೆಚ್ಚಾಗುತ್ತದೆ. ಎಲ್ಲ ರೀತಿಯ ಭೌತಿಕ-ಸಂಪತ್ತುಗಳನ್ನೂ ಪಡೆದ ಮನುಷ್ಯನ ಸುಖಕ್ಕಿಂತ ಕೋಟಿ-ಕೋಟಿಪಾಲು ಹೆಚ್ಚು ಆನಂದ, ಭಗವತ್ಸಾಕ್ಷಾತ್ಕಾರದಿಂದ ಸಿಗುತ್ತದೆ ಎಂಬುದು ಮಹರ್ಷಿಗಳ ಅನುಭವ. ಮನುಷ್ಯ ಇಂದ್ರಿಯ ಸುಖವನ್ನು ಅನುಭವಿಸಬಾರದು ಎಂದಲ್ಲ, ಆದರೆ ಅಷ್ಟರಲ್ಲೇ ನಿಲ್ಲದೆ, ಅದಕ್ಕಿಂತ ಮಿಗಿಲಾದ ಶಾಶ್ವತ-ಆನಂದಕ್ಕಾಗಿ ಪ್ರಯತ್ನಪಡಬೇಕೆಂಬುದು ಅವರ ಆಶಯ. ವಿಪರ್ಯಾಸವೇನೆಂದರೆ ಈ ಕಥೆಯಲ್ಲಿ ಭೌತಿಕ ಚಿನ್ನಕ್ಕೆ ಅತಿ ಆಸೆಪಟ್ಟದ್ದರಿಂದ ವಿವೇಕ ನಷ್ಟವಾಗಿ ಅದು ಮಣ್ಣುಪಾಲಾದಂತೆ, ಅವಿವೇಕಿಗಳಾಗಿ ನಮ್ಮೊಳಗೇ ಬೆಳಗುತ್ತಿರುವ ಪರಂಜ್ಯೋತಿಯೆಂಬ ಚಿನ್ನದ-ಗಣಿಗೆ ಹಾತೊರೆಯದಿದ್ದರೆ ನಮ್ಮ ಜೀವನವೂ ಮಣ್ಣುಪಾಲಾದಂತೆಯೇ ಸರಿ.
ಪುನಃ-ಪುನಃ ಪಡೆಯಬೇಕು ಎಂದೆನಿಸುವ ಶಾಶ್ವತಪರಮಾನಂದವನ್ನು 'ನಿತ್ಯಾನಂದ ವಪು'ವಾದ ದೇವನೇ ನೀಡಬೇಕು. "ಭಗವತ್ಸಾಕ್ಷಾತ್ಕಾರವು ಪ್ರತಿ ಮಾನವನ ಜನ್ಮಸಿದ್ಧ ಹಕ್ಕು" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಈ ಹಕ್ಕಿಗಾಗಿ ಹೋರಾಡಿ ಪಡೆದು ಆನಂದಿಸೋಣ.
ಸೂಚನೆ: 19/08/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.