ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)
ಶಂಕರರು: ನಿನ್ನ ಬೆಳಕು ಯಾವುದು?
ಶಿಷ್ಯ: ಹಗಲು ಸೂರ್ಯನಿಂದ, ರಾತ್ರಿ ದೀಪಾದಿಗಳಿಂದ ನೋಡುತ್ತೇನೆ.
ಶಂ: ಸೂರ್ಯನ ಬೆಳಕು, ದೀಪಗಳ ಬೆಳಕನ್ನು ನೋಡಲು ನಿನ್ನಲ್ಲಿರುವ ಬೆಳಕು ಯಾವುದು?
ಶಿ: ನನ್ನ ಕಣ್ಣುಗಳು
ಶಂ: ಕಣ್ಣು ಮುಚ್ಚಿದಾಗ ನಿನ್ನ ಬೆಳಕು?
ಶಿ: ಬುದ್ಧಿಯಿಂದ ಎಲ್ಲವನ್ನೂ ಗ್ರಹಿಸುತ್ತೇನೆ. ಅದರಿಂದ ಬುದ್ಧಿಯೇ ನನ್ನ ಬೆಳಕು.
ಶಂ: ಬುದ್ಧಿಯ ಹಿಂಬದಿಯಲ್ಲಿ ಬೆಳಗುವ ಬೆಳಕಾವುದು?
ಶಿ: ಅದು ನಾನೇ ಗುರುಗಳೇ..ನಾನು ಎಂಬ ಒಳಗಿನ ಆತ್ಮವೇ ಆ ಬೆಳಕು.
ಶಂ: ನಿಜ. ಆ ಎಂದೆಂದಿಗೂ ಬೆಳಗುವ ಬೆಳಕು ನೀನೇ ಆಗಿದ್ದೀ." ತತ್ ತ್ವಮಸಿ".
ಇಷ್ಟು ಪರಿಮಿತವಾದ ಮಾತುಗಳಲ್ಲಿ ಆತ್ಮಸ್ವರೂಪದ ಅರಿವನ್ನು ಮೂಡಿಸಿದುದು ಜ್ಞಾನಿಗಳಲ್ಲಿ ಅಗ್ರಗಣ್ಯರಾದ ಶಂಕರರ ವಿಶೇಷ. ಈ ಸಂಭಾಷಣೆ ಏಕ ಶ್ಲೋಕೀ ಎಂದೇ ಪ್ರಸಿದ್ಧವಾಗಿದೆ.
ಎಲ್ಲ ನಮ್ಮ ಚಟುವಟಿಕೆಗಳಿಗೂ ಒಳಗಿರುವ ನಮ್ಮ ಚೈತನ್ಯವೇ ಪ್ರೆರಕಶಕ್ತಿ. ಆ ಚೈತನ್ಯವಾದರೋ ಮಹಾಚೈತನ್ಯನಾದ ಭಗವಂತನ ಅಂಶ, ಕಿಡಿ. ಇದನ್ನು ತಮ್ಮೊಳಗೆ ಅನುಭವಿಸಿ ಸುಖಿಸಿದವರೇ ಈ ದೇಶದ ಮಹರ್ಷಿಗಳು. ಲೋಕದ ಮಾನವರೆಲ್ಲ ಅದನ್ನು ಅನುಭವಿಸಿ ತುಂಬಿದ ಆನಂದದಿಂದ ಬಾಳಲಿ ಎಂಬುದು ಅವರ ಆಶಯ. ಆ ಮಹಾ ಶಕ್ತಿಯನ್ನೇ ಅದ್ವೈತ ಎಂದುದು. ನಮ್ಮ ಮನೆಗಳಲ್ಲಿ ಫ್ಯಾನ್ ನ ಕೆಲಸ, ದೂರದರ್ಶನದ ಕೆಲಸ, ಮಿಕ್ಸಿ ಕೆಲಸ, ಬಲ್ಬ್ ಕೆಲಸ, ಮೋಟಾರ್ ಕೆಲಸ ಎಲ್ಲವೂ ಬೇರೆ ಬೇರೆ. ಆದರೆ ವಿದ್ಯುಚ್ಚಕ್ತಿ ಒಂದು ಇಲ್ಲವಾದರೆ ಈ ಯಾವುದೂ ಕೆಲಸ ಮಾಡುವುದಿಲ್ಲ. ಒಂದೇ ಆಗಿ ಎಲ್ಲದಕ್ಕೂ ಬೆಳಕನ್ನು,ಶಕ್ತಿಯನ್ನು ಒದಗಿಸುತ್ತಿರುವ ಭಗವಂತನೇ ಅದ್ವೈತ. ಅವನ ಪ್ರೇರಣೆಯಿಂದಲೇ ಎಲ್ಲವೂ ನಡೆಯುತ್ತಿರುವುದು. ಉಳಿದೆಲ್ಲವೂ ಇವತ್ತಿದ್ದು ನಾಳೆ ಇಲ್ಲವಾಗುವಂತಹವು. ಎಂದೇ-ಮಿಥ್ಯ. ಆದರೆ ಆ ಶಕ್ತಿಯು ಎಂದೆಂದಿಗೂ ಇರುವುದಾದ್ದರಿಂದ ಅದು ಸತ್ಯ-ಬ್ರಹ್ಮ ಸತ್ಯ. ಈ ವೈದಿಕವಾದ ಅರಿವನ್ನು ಲೋಕದಲ್ಲಿ ಪುನಃ ಪ್ರತಿಷ್ಠಾಪಿಸಲು ಅವತರಿಸಿ ಬಂದ ಆಚಾರ್ಯಪುರುಷರೇ ಪೂಜ್ಯ ಶಂಕರ ಭಗವತ್ಪಾದರು. ಅವರ ಅತ್ಯಲ್ಪ ಜೀವಿತಕಾಲದಲ್ಲಿ ಇಂತಹ ಅರಿವನ್ನು ಮೂಡಿಸಲು ಅವರು ಕೈಗೊಂಡ ಸಾಧನೆಗಳೇ ಪವಾಡ ಸದೃಶ. ಅದ್ವೈತದ ಅರಿವು ನಿರಂತರ ಸಾಧನೆ, ತಪಸ್ಸುಗಳಿಂದ ಸಾಧ್ಯ. ಸಾಮಾನ್ಯರಿಗೆ ಕಷ್ಟ ಸಾಧ್ಯ. ಎಂದೇ ಸಾಮಾನ್ಯರೂ ತಮ್ಮ ಚಿತ್ತ ಶುದ್ಧಿಗೊಳಿಸಿಕೊಂಡು ಆ ಆನಂದದ ಶಿಖರಕ್ಕೆ ಏರುವಂತಾಗಲೆಂದು ಸೋಪಾನ ರೂಪವಾಗಿ ಅನೇಕ ಸ್ತೋತ್ರ ಸಾಹಿತ್ಯಗಳನ್ನು, ಭಾಷ್ಯಗಳನ್ನು, ಪ್ರಕರಣ ಗ್ರಂಥಗಳನ್ನು ಅವರು ರಚಿಸಿದರು. ನಮ್ಮೊಳಗೇ ಬೆಳಗುವ ದೇವತೆಗಳ ಸ್ತುತಿಯಿಂದ ನಮ್ಮ ಪ್ರಕೃತಿ ಶುದ್ಧವಾಗಿ ಪರಮಾತ್ಮಾನುಭವಕ್ಕೆ ಅಣಿಯಾಗುವಂತೆ ಮಾಡಿದ ಉಪಾಯ ಅವರದು. ಇದಲ್ಲದೇ ಸಮಾಜದಲ್ಲಿ ಸುಶಿಕ್ಷಣ ಇಲ್ಲದೇ ಜೀವನದ ಬಗೆಗೆ ಉಂಟಾದ ತಪ್ಪು ಗ್ರಹಿಕೆಗಳನ್ನು ದೂರಮಾಡಿ ತಮ್ಮ ಬುದ್ಧಿವೈಭವದಿಂದ ನಿಜದ ಪರಿಚಯವಾಗುವಂತೆ ಮಾಡಿದ ಶ್ರೇಯಸ್ಸು ಅವರಿಗೇ ಸಲ್ಲಬೇಕು. ದೇಶದ ನಾಲ್ಕೂ ದಿಕ್ಕುಗಳಲ್ಲಿ ಇಡೀ ಭಾರತ ಸಮಾಜ ಸುವ್ಯವಸ್ಥಿತವಾದ ಇಹ-ಪರಗಳ ಜೀವನ ನಡೆಸಲು ಅನುಗುಣವಾಗಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿದ ಅವರ ದೂರದೃಷ್ಟಿ ಅದ್ಭುತ. ಅಂತಹ ಶಂಕರ ಭಗವತ್ಪಾದರ ಜೀವನ ನಮಗೆಲ್ಲ ದಾರಿದೀಪವಾಗಲಿ.