Saturday, August 29, 2020

ತೆಂಗಿನ ಕಾಯಿಯ ಮಹತ್ವ (Tengina Kayiya Mahatva)

ಲೇಖಕರು: ವಾದಿರಾಜ. ಪ್ರಸನ್ನ
(ಪ್ರತಿಕ್ರಿಯಿಸಿರಿ lekhana@ayvm.in)ಭಾರತ ದೇಶದಾದ್ಯಂತ ತೆಂಗಿನಕಾಯಿ ನಿತ್ಯಜೀವನ ಹಾಗೂ ಶುಭಸಮಾರಂಭಗಳಲ್ಲಿ ಉಪಯೋಗಿಸಲ್ಪಡುವ ಪದಾರ್ಥವಾಗಿದೆ.    ತೆಂಗಿನಕಾಯಿಗೆ ಅರಿಶಿನ, ಕುಂಕುಮ ಹಚ್ಚಿ ಮಂಗಳ ಕಾರ್ಯಗಳಲ್ಲಿ ಬಳಸುತ್ತಾರೆ.  ಮದುವೆ, ಮುಂಜಿಯಂತಹ ಶುಭ ಸಮಾರಂಭಗಳಲ್ಲಿ ಎಲೆ-ಅಡಿಕೆಯೊಂದಿಗೆ ಇದನ್ನು ದಾನಕೊಡುವುದನ್ನು  ಅತಿಶ್ರೇಷ್ಠವೆಂಬುದಾಗಿ ಭಾವಿಸುತ್ತಾರೆ. ದುಷ್ಟದೃಷ್ಟಿಯ ನಿವಾರಣೆಗೆ ನೂತನ ವಾಣಿಜ್ಯ ಮಳಿಗೆ, ಗೃಹಪ್ರವೇಶದ ಸಂದರ್ಭಗಳಲ್ಲಿ, ವಿವಾಹಸಂದರ್ಭಗಳಲ್ಲಿ ತೆಂಗಿನಕಾಯಿಯನ್ನು ನೀವಾಳಿಸಿ  ಒಡೆಯುವ ಪದ್ಧತಿಯುಂಟು. 

ಜ್ಞಾನಿಗಳನ್ನು ಸ್ವಾಗತಿಸಲು  ಸುಮಂಗಲಿಯರೊಡನೆ ಪೂರ್ಣಕುಂಭದೊಂದಿಗೆ ಸ್ವಾಗತವನ್ನು ಕೋರುವರು. ಪೂರ್ಣಕುಂಭವೆನ್ನುವುದು ಶುದ್ಧವಾದ, ಶೀತಲವಾದ ಜಲತುಂಬಿದ ಕೊಡ. ಅದರ ಮೇಲೆ ಮಾವಿನ ಸೊಪ್ಪನ್ನಿಟ್ಟು ಅದರ ಮೇಲೆ ಊರ್ಧ್ವಶಿಖೆಯುಳ್ಳ ತೆಂಗಿನಕಾಯನ್ನು ಇಡುತ್ತಾರೆ. 

ದಿನನಿತ್ಯದ  ಅಡುಗೆಯಲ್ಲಿ ತೆಂಗಿನ ಪಾತ್ರ ಅತಿಪ್ರಮುಖ. 'ಇಂಗೂ ತೆಂಗೂ  ಇದ್ದರೆ  ಮಂಗನ ಅಡುಗೆಯೂ ಚೆಂದ' ಎನ್ನುವ ಮಾತು ಇದನ್ನು ಪುಷ್ಟೀಕರಿಸುತ್ತದೆ.   ಇನ್ನು ಹಬ್ಬ ಹರಿದಿನಗಳಲ್ಲಂತೂ ಇದು ಕೋಸಂಬರಿ, ಪಲ್ಯ, ಚಿತ್ರಾನ್ನ, ಸಾರು ಹಾಗೂ ಸಿಹಿ ತಿನಿಸುಗಳ ಅವಿಭಾಜ್ಯ ಅಂಗ. 


ತೆಂಗಿನಕಾಯಿಯ ಆರ್ಥಿಕ ಲಾಭ 

ನಮ್ಮ ದೇಶದಲ್ಲಿನ ಅನೇಕ ರೈತರ ಕುಟುಂಬದವರು ತೆಂಗಿನ ಮರವನ್ನು ಬೆಳೆಸಿ ಅದರ  ಆದಾಯದ ಆಧಾರದಮೇಲೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇದು ಸಾಮಾನ್ಯವಾಗಿ ನಷ್ಟವಿಲ್ಲದ ಬೆಳೆ. ಬೇರೆ ವ್ಯವಸಾಯಕ್ಕೆ ಹೋಲಿಸಿದರೆ ಇದರ ಆರೈಕೆ ಸುಲಭ . ತೆಂಗಿನತೋಟದಲ್ಲಿ ವರ್ಷಪೂರ್ತಿಯಾಗಿ ಫಲವನ್ನು ಪಡೆಯಬಹುದಾಗಿದೆ.  ಅನೇಕ ವರ್ಷಗಳವರೆಗೂ ಫಲ ನಿಡುವ  ಉತ್ಕೃಷ್ಟ ಬೆಳೆಯಾಗಿದೆ. ತೆಂಗಿನ ಮರದಲ್ಲಿನ ಎಳೆನೀರಿನಲ್ಲಿ ರೋಗನಿರೋಧಕ ಹಾಗು ಆಯುರ್ವರ್ಧಕ ಅಂಶಗಳಿವೆ. ಇದರ ಹೊಂಬಾಳೆಯಲ್ಲೂ  ಓಷಧಿ ಗುಣಗಳಿರುವ ಕಾರಣ ಆಯುರ್ವೇದದಲ್ಲಿ  ಹೆಚ್ಚು ಪ್ರಮಾಣದಲ್ಲಿ ಚಿಕಿತ್ಸೆಗಳಿಗೆ ಬಳಕೆಯಾಗುತ್ತದೆ.  ಇನ್ನು ಇದರ ಗರಿಗಳಿಂದ ಮಂಗಳ ಕಾರ್ಯಕ್ಕೆ ಚಪ್ಪರವನ್ನು ಹಾಕುವರು. ಇದಲ್ಲದೆ ಹತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. 


ಪೂಜಾಕಾರ್ಯಗಳಲ್ಲಿ ತೆಂಗಿನ ಪಾತ್ರ 

ಎಲ್ಲ ಪೂಜೆಗಳಲ್ಲೂ ತೆಂಗಿನಕಾಯನ್ನು ನಿವೇದಿಸುವುದು ಸಾಮಾನ್ಯವಾದ ರೂಢಿ. ದೇವಾಲಯಗಳಲ್ಲೂ ಸಹ  ದೇವರಿಗೆ ತೆಂಗಿನಕಾಯಿಯು ನೈವೇದ್ಯಕ್ಕೆ ಒದಗಿಬರುತ್ತದೆ. 

'ಈ ಸೃಷ್ಟಿಯಲ್ಲಿ ಇರುವ ಪದಾರ್ಥಗಳೆಲ್ಲವೂ ನಿನ್ನದೇ ಎಂಬ ಸತ್ಯಾರ್ಥವನ್ನು ಭಗವಂತನಲ್ಲಿ ನಿವೇದಿಸುವುದೇ ನೈವೇದ್ಯ. "ನಿನ್ನ ಪ್ರಸನ್ನತೆ ಇದರ ಮೇಲೆ ಹರಿದು,  ನನ್ನ ವಿಷಾದವು ತೊಲಗಿ ಪ್ರಸಾದವಾಗಲಿ" ಎಂಬ ಪ್ರಾರ್ಥನೆ. ಮೊದಲು ಬರಿಯ ತೆಂಗಿನಕಾಯಿಯಾಗಿದ್ದದ್ದು ನೈವೇದ್ಯದ ನಂತರ 'ಪ್ರಸಾದ'ವೆಂಬ  ಪವಿತ್ರ ಭಾವವನ್ನುಪಡೆಯುತ್ತದೆ. ಪ್ರಸಾದವನ್ನು ಸ್ವೀಕರಿಸುವುದರಿಂದ ನಮ್ಮಲ್ಲಿ ಧಾತುಪ್ರಸನ್ನತೆ ಉಂಟಾಗುತ್ತದೆ. ಹಾಗಾದಾಗ ಜೀವನದಲ್ಲಿ ನೆಮ್ಮದಿ ಶಾಂತಿ. ನಮ್ಮೆಲ್ಲರ ಪರಮ ಲಕ್ಷ್ಯವಾದ ಭಗವಂತನ ದರ್ಶನಕ್ಕೂ ಈ ಧಾತು ಪ್ರಸನ್ನತೆ ಅತಿಮುಖ್ಯ.ಎಂದು ಶ್ರುತಿಯು ಅಪ್ಪಣೆ ಕೊಡಿಸುವಂತೆ "ತಮಕ್ರತುಂ ಪಶ್ಯತಿ ವೀತಶೋಕೋ ಧಾತುಪ್ರಸಾದಾನ್ಮಹಿಮಾನಮೀಶಂ" ಎಂಬಂತೆ ಪ್ರಸಾದದ ಪರಮ ಫಲವಿದು.  "ಫಲಂ ಮನೋರಥಫಲಂ" ಎಂಬಂತೆ ಅದರಲ್ಲಿ ಆತ್ಮ ಭಾವದ ಸವಿಯೂ ಸೇರಿಕೊಳ್ಳುತ್ತದೆ, ಮನೋರಥ ಫಲವಾಗುತ್ತದೆ.  


ತೆಂಗಿನಕಾಯಿಯ ವಿಶೇಷತೆ:

ನಮ್ಮ ಸಂಸ್ಕೃತಿಯಲ್ಲಿ ತೆಂಗಿಗೆ ಇಂಥಹ ಹಿರಿದಾದ ಸ್ಥಾನವೇಕೆ ?  ಏನು ತೆಂಗಿನ ವೈಶಿಷ್ಟ್ಯ? ತೆಂಗಿನ ಕಾಯಿಯ ಬಗ್ಗೆ ಶ್ರೀರಂಗ ಮಹಾಗುರುಗಳ ಸತ್ಯಾರ್ಥಪೂರ್ಣವಾದ ನೋಟವನ್ನು ಗಮನಿಸೋಣ. ಜ್ಞಾನಿಗಳ ಶಿರಸ್ಸಿನ  ಪ್ರತಿನಿಧಿಯಾಗಿದೆ ಈ ತೆಂಗಿನ ಕಾಯಿ.  ತಲೆಯಲ್ಲಿ ಎರಡು ಹೋಳುಗಳಿರುವಂತೆ ಇದರಲ್ಲಿಯೂ ಎರಡು ಸಮನಾದ ಹೋಳುಗಳುಂಟು. ನಮ್ಮ ತಲೆಯ ಮೇಲ್ಭಾಗದಲ್ಲಿನ ಶಿಖೆಯ ಸ್ಥಾನದಲ್ಲಿ ಒಳ ಧ್ಯಾನಸ್ಥಿತಿಯಲ್ಲಿ ದೀಪಶಿಖೆಯು ಬೆಳಗುವುದನ್ನು ಕಂಡ ಜ್ಞಾನಿಗಳು, ಒಳ ದೀಪಶಿಖೆಯನ್ನು ನೆನಪಿಸುವಂತೆ ಈ ಕಾಯಿಯಲ್ಲೂ ಶಿಖೆ ಇರುವುದನ್ನು ಗಮನಿಸಿದ್ದಾರೆ. ತಲೆಯಲ್ಲಿ "ರಸೋ ವೈ ಸಃ"   ಎಂದು ಹೇಳಲ್ಪಟ್ಟಿರುವ ರಸಸ್ವರೂಪಿಯಾದ ಪರಮಾನಂದಸ್ವರೂಪಿಯಾದ ಪರಮಾತ್ಮನು  ತುಂಬಿರುವಂತೆ  ತೆಂಗಿನಕಾಯಿಯಲ್ಲೂ ಮಧುರರಸವನ್ನು ತುಂಬಿಕೊಂಡು ಮಧುಮಯವಾಗಿರುವ ಸಾರವತ್ತಾದ ಎಳನೀರಿದೆ.   ಇನ್ನು ನಮ್ಮಂತಹ  ಸಾಮಾನ್ಯರಿಗೆ ಎರಡು ಕಣ್ಣುಗಳು ಮಾತ್ರವೇ ಅನುಭವಕ್ಕೆ ಬರುವುದು. ಆದರೆ  ಜ್ಞಾನಿಗಳಿಗೆ ಈ ಎರಡು ಕಣ್ಣುಗಳಲ್ಲದೆ, ಅಂತರ್ದರ್ಶನವನ್ನು  ಮಾಡಿಸುವ ಮೂರನೇ ಕಣ್ಣು ಇದೆ. ಅಂತೆಯೇ ತೆಂಗಿನಕಾಯಿಯಲ್ಲೂ ಮೂರುಕಣ್ಣುಗಳು ಉಂಟು. ಜೀವನದಲ್ಲಿ ಈ ಮೂರನೇ ಕಣ್ಣಿನ ನೆನಪು ಮಾಡಿಕೊಡುತ್ತಿದೆ ಈ ಫಲ. ಆದ್ದರಿಂದಲೇ "ನಾರಿಕೇಲ ಸಮುದ್ಭೂತ ತ್ರಿನೇತ್ರ ಹರಸಮ್ಮತ" ಎಂದು ಹೇಳುವುದು. ಇದರಲ್ಲಿ ಮತ್ತೊಂದು ರಹಸ್ಯವಿದೆ.  ಚೆನ್ನಾಗಿ ಬಲಿತಿರುವ ತೆಂಗಿನಕಾಯಿಯಲ್ಲಿ ಆ ಮೂರನೇ ಕಣ್ಣಿನ ಸ್ಥಾನದಲ್ಲಿ ಒಂದು ಹಳದಿ ಬಣ್ಣದ ಲಿಂಗಾಕಾರವಾದ ಪದಾರ್ಥ ಇರುವುದು. ಅದನ್ನು ತಿನ್ನದೆ ತಲೆಯಲ್ಲಿ ಮುಡಿದುಕೊಳ್ಳುವ ವಾಡಿಕೆ ಇದೆ. ಇದು ತನ್ನ ಆಕಾರ, ವರ್ಣಗಳಲ್ಲಿ ಜ್ಞಾನಿಗಳ  ಭ್ರೂಮಧ್ಯದ ಸ್ಥಾನದಲ್ಲಿ ದರ್ಶನನೀಡುವ  ಜ್ಯೋತಿರ್ಮಯವಾದ ಲಿಂಗವನ್ನು ಹೋಲುವುದರಿಂದ ಅದರ ನೆನಪಿಗಾಗಿ ಹಾಗೆ ಶಿರದಲ್ಲಿ ಧರಿಸುವ ಸಂಪ್ರದಾಯ ಬಂದಿದೆ.  ಹೀಗೆ ಅಂತರ್ದರ್ಶನದ ನೆನಪನ್ನು ಕೊಡುವ ಹೊರಗಿನ ಶ್ರೇಷ್ಠವಾದ ಫಲವಿದಾಗಿದೆ.


ಒಟ್ಟಾರೆ ನೋಡುವುದಾದರೆ ತೆಂಗಿನಿಂದ ಜೀವನೋಪಾಯವೂ ಉಂಟು, ಇಂದ್ರಿಯತೃಪ್ತಿ- ಉದರ ತೃಪ್ತಿಯೂ ಉಂಟು, ಅಂತೆಯೇ ದಾಮೋದರನ ಸ್ಮರಣೆಯೂ ಉಂಟು. ಯೋಗ ಭೋಗಗಳೆರಡಕ್ಕೂ ಸಹಕಾರಿಯಾಗಿ ಉಪಕರಿಸುತ್ತಿರುವ ಸೃಷ್ಟೀಶನ ವರದಾನವಾದ  ವೃಕ್ಷವಿದು. ತೆಂಗಿನ ಮರದಲ್ಲಿ ಉಪಯೋಗವಿಲ್ಲದ ಭಾಗವೇ ಇಲ್ಲ. ಆದ್ದರಿಂದ ತೆಂಗಿನ ಮರವನ್ನು ಕಲ್ಪವೃಕ್ಷವೆಂದು ಕರೆಯುತ್ತಾರೆ. ಕಲ್ಪವೃಕ್ಷವಾಗಿರುವಂತೆ, ಇದು ಭಗವತ್ ಸಂಕಲ್ಪವೃಕ್ಷವೂ ಆಗಿದೆ. ಭಗವಂತನ ಒಳ ಅನುಭವವನ್ನೂ ಜ್ಞಾಪಿಸುತ್ತದೆ. ಜೀವನದ ಗುರಿಯಾದ ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ಪುರುಷಾರ್ಥವನ್ನು ಜ್ಞಾಪಿಸುತ್ತದೆ. ಅವುಗಳ ಸಾಧನೆಯಲ್ಲಿ ಸಹಕಾರಿಯಾಗಿದೆ. ಹೀಗೆ ಐಹಿಕ ಪಾರಮಾರ್ಥಿಕ ಪ್ರಯೋಜನಗಳಿರುವ  ಈ ನಾರಿಕೇಳ ಫಲವನ್ನು ಜ್ಞಾನಿಗಳು  ನಮಗೆ ಕರುಣಿಸಿದ್ದಾರೆ ಎಂಬುದನ್ನು ನೆನೆಯುತ್ತಾ ಇದರ ಸದುಪಯೋಗವನ್ನು ಪಡೆಯೋಣ.


ಸೂಚನೆ: 29/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ