ಪ್ರೇರಕಶಕ್ತಿ ಆತ್ಮಾ
'ನಾನು ಹೋಗುತ್ತೇನೆ' ಎಂದಾಗ ಕಾಲು ಕ್ರಿಯಾಶೀಲವಾಗಿದೆ. ಆದರೆ ಕೇವಲ ಕಾಲು ಹೋಗಲಾರದು. 'ನಾನು ತಿನ್ನುತ್ತೇನೆ' ಎಂದಾಗ ಕೇವಲ ಬಾಯಿ ತಿನ್ನಲಾರದು. 'ನಾನು ನೋಡುತ್ತೇನೆ' ಎಂದಾಗ ಕಣ್ಣು ಮಾತ್ರ ನೋಡದು. ಕಾಲಿಗಾಗಲಿ, ನಾಲಿಗೆಗಾಗಲಿ, ಕಣ್ಣಿಗಾಗಲಿ ಸ್ವತಃ ಚೇಷ್ಟೆ ಇದೆಯೇ? ಅಥವಾ ಇವುಗಳಿಗೆ ಪ್ರೇರಕವಾದ ಶಕ್ತಿ ಎಂಬುದು ಬೇರೊಂದು ಇದೆಯೇ? ಎಂದಾಗ ಅನೇಕರು ಅನೇಕ ಬಗೆಯಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿರುವುದುಂಟು. ಕೆಲವರು ಈ ವ್ಯವಹಾರಗಳೆಲ್ಲವೂ ಶರೀರಕ್ಕೆ ಸಂಬಂಧಿಸಿದ್ದು ಎಂದು ಹೇಳಿದರೆ, ಇನ್ನು ಕೆಲವರು ಮನಸ್ಸಿಗೆ ಸಂಬಂಧಿಸಿದ್ದು ಎಂದೂ, ಮತ್ತೆ ಕೆಲವರು ಬುದ್ಧಿಶಕ್ತಿಗೆ ಸಂಬಂಧಿಸಿದ್ದು ಎಂದೂ, ಬಹಳಷ್ಟು ಮಂದಿ ಇವೆಲ್ಲಕ್ಕೂ ಆತ್ಮವೇ ಪ್ರೇರಕ ಎಂದೂ ಹೇಳುತ್ತಾರೆ. ಆತ್ಮನ ಜ್ಞಾನ- ಇಚ್ಛಾ-ಕೃತಿರೂಪವಾದ ಕಾರಣದಿಂದಲೇ ಈ ಎಲ್ಲಾ ಕ್ರಿಯೆಗಳು ನಡೆಯುತ್ತವೆ. ಹಾಗಾಗಿ ಶರೀರದ ಎಲ್ಲಾ ಅಂಗಗಳಿಗೆ, ಮನಸ್ಸು, ಬುದ್ಧಿ, ಹೀಗೆ ಎಲ್ಲಕ್ಕೂ ಒಂದು ಪ್ರೇರಕಶಕ್ತಿ ಇದೆ. ಅದನ್ನೇ 'ಆತ್ಮಾ' ಎಂಬುದಾಗಿ ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ನಾವಿಂದು ಆತ್ಮಗುಣಗಳನ್ನು ಆರ್ಥಮಾಡಿಕೊಳ್ಳಲು ಹೊರಟಿದ್ದೇವೆ.
ಯಾವ ಗುಣಗಳನ್ನು ಬೆಳೆಸಿಕೊಂಡರೆ ನಾವು ಭಗವಂತನನ್ನು ಕಾಣಬಹುದೋ ಅವುಗಳನ್ನೇ ಆತ್ಮಗುಣಗಳೆನ್ನುವರು. ಶ್ರೀಶ್ರೀರಂಗಪ್ರಿಯ ದೇಶಿಕ ಮಹಾಸ್ವಾಮಿಗಳು ಹೇಳುವಂತೆ – "ಯಾವ ಗುಣಗಳು ಆತ್ಮಸ್ವರೂಪವನ್ನು ಹೊಂದಿಸುತ್ತವೆಯೋ ಅವು ಆತ್ಮಗುಣಗಳು. ಆತ್ಮಸ್ವರೂಪವನ್ನುಂಟುಮಾಡಿ ಆತ್ಮಸ್ವರೂಪಕ್ಕೆ ವಿರೋಧವಾಗಿರುವ ವಿಘ್ನಗಳನ್ನು ಯಾವುವು ಪರಿಹಾರ ಮಾಡುತ್ತವೆಯೋ, ಶುದ್ಧವಾದ ಕಲ್ಯಾಣಗುಣಗಳು ಯಾವುವುಟೋ ಅವೇ ಆತ್ಮಗುಣಗಳು. ಆತ್ಮಪ್ರಾಪಕವಾದ ಸ್ವರೂಪಾನುಭವವನ್ನು ಉಂಟುಮಾಡುವ ಗುಣಗಳಿಗೆ ಆತ್ಮಗುಣಗಳೆಂದು ಹೆಸರು."
ಎಂಟು ಆತ್ಮಗುಣಗಳು
ಗೌತಮಮಹರ್ಷಿಗಳು ತಮ್ಮ ಧರ್ಮಸೂತ್ರದಲ್ಲಿ ನಲವತ್ತು ಸಂಸ್ಕಾರಗಳನ್ನು ಹೇಳಿ, ಅವುಗಳಲ್ಲಿ - ದಯಾ, ಕ್ಷಾಂತಿ, ಅನಸೂಯಾ, ಶೌಚ, ಅನಾಯಾಸ, ಮಂಗಲ, ಅಕಾರ್ಪಣ್ಯ ಮತ್ತು ಅಸ್ಪೃಹಾ (ಗೌತಮಧರ್ಮಸೂತ್ರ 1.8.240) ಎಂಬ ಎಂಟು ಆತ್ಮಗುಣಗಳನ್ನು ಅತ್ಯಂತ ಪ್ರಧಾನವಾದ ಸಂಸ್ಕಾರ ಎಂಬುದಾಗಿ ಹೇಳಿದ್ದಾರೆ. ಯಾವನು ಗರ್ಭಾಧಾನ ಮೊದಲಾದ ಸಂಸ್ಕಾರಗಳಿಂದ ಸಂಸ್ಕೃತನಾಗಿದ್ದರೂ ಆತ್ಮಗುಣಗಳನ್ನು ಹೊಂದಿರುವುದಿಲ್ಲವೋ ಅವನು ಬ್ರಹ್ಮಸಾಯುಜ್ಯವನ್ನು ಪಡೆಯಲಾರ. ಮತ್ತು ಆತ್ಮಗುಣಸಂಪನ್ನನಿಗೆ ಗರ್ಭಾಧಾನಾದಿ ಸಂಸ್ಕಾರಗಳು ಲೋಕಶಿಕ್ಷಣಕ್ಕಾಗಿ ಅಷ್ಟೇ ಎಂಬುದು ಗೌತಮಮಹರ್ಷಿಗಳ ಸ್ಪಷ್ಟವಾದ ಅಭಿಪ್ರಾಯವಾಗಿದೆ. ಉಳಿದೆಲ್ಲಾ ಸಂಸ್ಕಾರಗಳ ಉದ್ದೇಶ ಈ ಆತ್ಮಗುಣಗಳನ್ನು ಪ್ರಬೋಧಗೊಳಿಸುವುದು. ಹಾಗಾಗಿ ಪ್ರತಿಯೊಂದು ಆತ್ಮಗುಣದ ಬಗ್ಗೆ ತಿಳಿದುಕೊಳ್ಳೋಣ.