Saturday, August 1, 2020

ಹುರುಪು ಕೊಡುವ ಹಬ್ಬ – ಉಪಾಕರ್ಮ (Hurupu Koduva Habba – Upakarma)

ಲೇಖಕರು: ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಶಿಕ್ಷಣಕ್ಕೆ ಭಾರತೀಯರು ಕೊಟ್ಟ ಮನ್ನಣೆ ಬೇರೆಲ್ಲೂ ಕಾಣಸಿಗದು. ವಿದ್ಯೆಯನ್ನು ಪಡೆಯುವುದೇ ಶಿಕ್ಷಣದ ಮೂಲ ಉದ್ದೇಶ. ಭಾರತೀಯರು ಪಡೆಯುವ ಶಿಕ್ಷಣವು ಶಾಶ್ವತವಾದ ಸುಖವನ್ನು ಕೊಡಿಸುತ್ತಿತ್ತು. ಈ ನೇರದಲ್ಲಿ ವಿದ್ಯಾಭ್ಯಾಸದ ಅಂಗವಾದ ಅಧ್ಯಯನ ಮತ್ತು ಅಧ್ಯಾಪನಕ್ಕೆ ವಿಶಿಷ್ಟ ಸ್ಥಾನವಿದೆ. ಇದನ್ನು ತೈತ್ತಿರೀಯ ಉಪನಿಷತ್ತು ಹೇಳುವಂತೆ "ಸ್ವಾಧ್ಯಾಯಪ್ರವಚನಾಭ್ಯಾಂ ನ ಪ್ರಮದಿತವ್ಯಮ್" ಎಂಬುದಾಗಿ ನಿತ್ಯಕರ್ಮವಾಗಿ ಹೇಳಿದರು. ಇದು ಪ್ರತಿನಿತ್ಯವೂ ಮಾಡಲೇಬೇಕಾದ ಕಾರ್ಯ. ಬಿಟ್ಟರೆ ದೋಷ ಎನ್ನುವಷ್ಟರ ಮಟ್ಟಿಗೆ ಇದರ ಪ್ರಾಶಸ್ತ್ಯವನ್ನು ಎತ್ತಿ ಹೇಳಿದ್ದಾರೆ. ಅದಕ್ಕಾಗಿ ಪ್ರತಿಯೊಬ್ಬರೂ ಹುರುಪಿನಿಂದ ಕೂಡಿರಬೇಕು. ವಿದ್ಯೆಯ ಗ್ರಹಣ ಮತ್ತು ವಿದ್ಯೆಯ ಪ್ರದಾನ ಎರಡರಲ್ಲೂ ಯಾವುದೇ ಕಾರಣಕ್ಕೂ ದೋಷ ಸಂಭವಿಸಬಾರದು. ಹಾಗೇನಾದರೂ ದೋಷ ಉಂಟಾದರೆ ಅದು ಅನರ್ಥಕ್ಕೆ ಕಾರಣ. ಇದಕ್ಕೆ ಬೇಕಾದ ಹುರುಪು ಕಳೆಯದಂತೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚುತ್ತಾ ಬರಬೇಕು ಎಂಬ ಕಾರಣಕ್ಕಾಗಿಯೇ ಬಂದ ಒಂದು ಸಂಸ್ಕಾರ 'ಉಪಾಕರ್ಮ'.


ದೋಷಮಾರ್ಜಕ-ಉಪಾಕರ್ಮ

ಉಪ-ಆ-ಕರ್ಮ ಅಂದರೆ ಋಷಿಗಳ ಮತ್ತು ಆಚಾರ್ಯರ ಬಳಿ ಇದ್ದು ನಿರಂತರವಾಗಿ ಮಾಡುವ ಕಾರ್ಯವೇ ಉಪಾಕರ್ಮ. ಬ್ರಹ್ಮಚಾರಿ ಮತ್ತು ಗೃಹಸ್ಥನು ಇದುವರೆಗೆ ಸಂಪಾದಿಸಿದ ವಿದ್ಯೆಗಿಂತಲೂ ಅಧಿಕವಾದ ವಿದ್ಯೆಯನ್ನು ಪಡೆಯಬೇಕು ಎಂಬ ಕಾರಣಕ್ಕೆ ಋಷಿಗಳ ಮತ್ತು ಉಪಾಧ್ಯಾಯರ ಸಾನ್ನಿಧ್ಯದಿಂದ ಪಡೆಯಲು ಮಾಡುವ ಒಂದು ವಿಶಿಷ್ಟಕರ್ಮ. ಹಾಗಾಗಿ ಉಪಾಕರ್ಮ ಎಂದರೆ ಉಪಕ್ರಮ- ಆರಂಭ ಎಂದರ್ಥ. ಪ್ರತಿವರ್ಷವೂ ಆರಂಭವನ್ನು ಮಾಡುವುದು ಎಂಬುದರ ಅರ್ಥವೇನು? ಒಮ್ಮೆ ಆರಂಭವಾದದ್ದಕ್ಕೆ ಮತ್ತೆ ಮತ್ತೆ ಪ್ರತಿವರ್ಷವೂ ಮಾಡುವ ಆರಂಭಕ್ಕೆ ಔಚಿತ್ಯವೇನು? ಎಂಬ ಪ್ರಶ್ನೆ ಬರುತ್ತದೆ. ಅಧ್ಯಯನ ಮಾಡಿದ ಮತ್ತು ಮುಂದೆ ಅಧ್ಯಯನ ಮಾಡಲಿಕ್ಕಿರುವ ವಿದ್ಯೆಗೆ 'ಯಾತಯಾಮ-ಹಳಸು' ಎಂಬ ದೋಷ ಬರುತ್ತದೆ. ಅದನ್ನು ಪರಿಹರಿಸಲು ಈ ಕಾರ್ಯವನ್ನು ಹೇಳಲಾಗಿದೆ. ನಾವು ಅಧ್ಯಯನ ಮಾಡುವ ಸಂದರ್ಭದಲ್ಲಿ ತಿಳಿದೋ ತಿಳಿಯದೆಯೋ ಅನೇಕ ನಿಯಮಗಳನ್ನು ಪಾಲಿಸುವುದಿಲ್ಲ. ಕಾಲಕಳೆದಂತೆ ಅಶ್ರದ್ಧೆ, ಅನುತ್ಸಾಹಗಳು ಅಧ್ಯಯನಕ್ಕೆ ಬೇಕಾದ ಶಕ್ತಿಯನ್ನು ನಾಶಮಾಡುತ್ತವೆ. ಈ ಕಾರಣದಿಂದ ಗ್ರಹಿಸುವ ಮತ್ತು ಕೊಡುವ ವಿದ್ಯೆಯಲ್ಲೂ ದೋಷವು ಸಂಭವಿಸಬಹುದು. ವೇದಮಂತ್ರಗಳಿಗೆ ಅಥವಾ ನಾವು ಪಡೆಯುವ ವಿದ್ಯೆಗೆ ಕಾಲಕಳೆದಂತೆ ಶಕ್ತಿಯು ಕುಂದುತ್ತದೆ. ಆಗ ವಿದ್ಯೆಯಲ್ಲಿ ಪರಿಪೂರ್ಣತೆ ಸಾಧ್ಯವಾಗದೇ ಇರಬಹುದು. ಈ ಸಮಸ್ಯೆಯನ್ನು ಪರಿಹರಿಸಲೆಂದೇ ಪ್ರತಿವರ್ಷವೂ ಪುನಶ್ಚೇತನದಾಯಕವಾದ ಈ ಉಪಾಕರ್ಮವೆಂಬ ಪವಿತ್ರಕರ್ಮವನ್ನು ನಮ್ಮ ಋಷಿಗಳು ತಂದರು. ಈ ನೇರದಲ್ಲಿ ವಿದ್ಯಾರ್ಥಿ ಮತ್ತು ಆಚಾರ್ಯರು ಇಬ್ಬರೂ ಪ್ರತಿವರ್ಷ ಮಾಡಿಕೊಳ್ಳಬೇಕಾದ ಹಬ್ಬವಿದಾಗಿದೆ. ಹಬ್ಬವೆಂದರೆ ಹುರುಪು ಕೊಡುವುದಲ್ಲವೇ !


ಉಪಾಕರ್ಮಕ್ಕೆ ಕಾಲ

ಅನುತ್ಸಾಹ ಮತ್ತು ಅಶ್ರದ್ಧೆ ಎಂಬ ದೋಷವನ್ನು ನಿವಾರಿಸುತ್ತಾ ಮುಂದೆ ಮಾಡುವ ಮಂತ್ರಶಕ್ತಿಯನ್ನು ಜಾಗೃತಗೊಳಿಸುವುದರಿಂದ ಸಂಸ್ಕಾರಕರ್ಮವೂ ಆಗಿದೆ. ಶ್ರಾವಣಮಾಸದಲ್ಲಿ ಆಚರಿಸುವ ಹಬ್ಬ. ಹಬ್ಬ ಎಂಬುದು ಶ್ರೀರಂಗಮಹಾಗುರುಗಳು ಹೇಳುವಂತೆ "ತನ್ನ ಕಾಲರೂಪವಾದ ಶರೀರದಲ್ಲಿ ಭಗವಂತನು ಗೊತ್ತಾದ ಸ್ಥಾನಗಳಲ್ಲಿ ಜೀವಿಗಳಿಗೆ ಅವುಗಳ ಉದ್ಧಾರಕ್ಕಾಗಿ ಒದಗಿಸಿಕೊಡುವ ಸೌಲಭ್ಯಗಳು. ಆ ಅನುಗ್ರಹದ ಉಪಯೋಗವನ್ನು ಕಳೆದುಕೊಳ್ಳಬಾರದು". ಈ ಪರ್ವವು ನಮ್ಮ ದೋಷಗಳನ್ನು ಕಳೆದು ಹೊಸ ಉತ್ಸಾಹವನ್ನು ಪಡೆಯಲು ಇರುವ ಪವಿತ್ರಸಮಯ. ಶ್ರಾವಣಮಾಸ ಪೂರ್ಣಿಮೆ ಅಥವಾ ಶ್ರವಣನಕ್ಷತ್ರದ ನಿಮಿತ್ತವಾಗಿ ಆಚರಿಸುವುದರಿಂದ ನಿಮಿತ್ತಕರ್ಮ ಎಂದೂ, ಪ್ರತಿವರ್ಷ ಈ ಸಮಯದಲ್ಲಿ ತಪ್ಪದೇ ಮಾಡಲೇಬೇಕಾದ್ದರಿಂದ ನಿತ್ಯಕರ್ಮವೆಂತಲೂ ಹೇಳುತ್ತಾರೆ. ಶ್ರಾವಣ, ಭಾದ್ರಪದ ಅಥವಾ ಆಷಾಢಮಾಸದಲ್ಲೂ, ಪೂರ್ಣಿಮಾ, ಪಂಚಮೀ ತಿಥಿಯಲ್ಲೂ, ಶ್ರವಣ ಮತ್ತು ಹಸ್ತಾನಕ್ಷತ್ರದಲ್ಲೂ ಉಪಾಕರ್ಮ ಶ್ರೇಷ್ಠವಾದುದು. ಋಗ್ವೇದಿಗಳಿಗೆ ಶ್ರಾವಣಮಾಸದಲ್ಲಿ ಬರುವ ಶ್ರವಣನಕ್ಷತ್ರ ಶ್ರೇಷ್ಠ ಎಂದೂ, ಯಜುರ್ವೇದಿಗಳಿಗೆ ಅದೇ ಮಾಸದ ಪೂರ್ಣಿಮೆ ಶ್ರೇಷ್ಠವಾದರೆ, ಸಾಮವೇದಿಗಳಿಗೆ ಭಾದ್ರಪದಮಾಸದ ಹಸ್ತನಕ್ಷತ್ರದಿಂದ ಕೂಡಿದ ಪಂಚಮೀ ತಿಥಿಯು ಪ್ರಶಸ್ತವೆಂದಿದ್ದಾರೆ. ಜಾತಾಶೌಚ ಮತ್ತು ಮೃತಾಶೌಚವಿದ್ದರೆ ಉಪಾಕರ್ಮವನ್ನು ಮಾಡಬಾರದು. ಶ್ರಾವಣಮಾಸದಲ್ಲಿ ಆಶೌಚ, ಮಲಮಾಸ, ಗ್ರಹಣ, ಸಂಕ್ರಮಣ, ಗುರುಶುಕ್ರರ ಅಸ್ತವಾಗಿದ್ದರೆ ಭಾದ್ರಪದಮಾಸದಲ್ಲಿ ಮಾಡಬೇಕು. ಈ ಮೂರೂ ಮಾಸಗಳಲ್ಲೂ ದೋಷವಿದ್ದರೆ ಶ್ರಾವಣದಲ್ಲೇ ಮಾಡಬೇಕು. ಹಾಗಾಗಿ ಉಪಾಕರ್ಮಕ್ಕೆ ಶ್ರಾವಣಮಾಸ ಮತ್ತು ಶ್ರವಣನಕ್ಷತ್ರ ಅತ್ಯಂತ ಪ್ರಶಸ್ತ.




ಆಚರಣೆಯ ವಿಧಾನ

ಬ್ರಹ್ಮಚಾರಿ, ಗೃಹಸ್ಥ ಮತ್ತು ವಾನಪ್ರಸ್ಥ ಈ ಮೂವರೂ ಪ್ರತಿವರ್ಷವೂ ಮಾಡಲೇಬೇಕು. ಈ ದಿನ ಸಂಕಲ್ಪ ಮಾಡಿ, ಕಲಶದಲ್ಲಿ ದೇವತೆಗಳನ್ನು ಆವಾಹನೆ ಮಾಡಬೆಕು. ಸಪ್ತರ್ಷಿಗಳನ್ನು ಧಾನ್ಯದ ಮೇಲೆ ಆವಾಹಿಸಬೇಕು. ಪೂಜೆ ಮಾಡಿ, ಕೆಲವರು ಅಕ್ಕಿಹಿಟ್ಟನ್ನು ಮೊಸರಿನಲ್ಲಿ ಬೆರೆಸಿ ನೈವೇದ್ಯಮಾಡಿ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಅದರಿಂದ ಅಗ್ನಿಯಲ್ಲಿ ಆಹುತಿಯನ್ನೂ ಸಮರ್ಪಿಸಬೇಕು. ಅಂತೆಯೇ ದೇವ ಋಷಿ ಪಿತೃತರ್ಪಣವನ್ನು ಮಾಡಬೇಕು. ಅನಂತರ ಆ ಶಾಖೆಗೆ ಸಂಬಂಧಿಸಿದ ವೇದಮಂತ್ರಗಳನ್ನು ಪಠಿಸಬೇಕು. 'ಹುತ್ವಾ ದತ್ವಾ ಧಾರಯೇತ್" ಎಂಬ ಮಾತಿನಂತೆ ಯಜ್ಞೋಪವೀತವನ್ನು ಅಗ್ನಿಯಲ್ಲಿ ಆಹುತಿಯಾಗಿ ಸಮರ್ಪಿಸಿ, ಯಜ್ಞೋಪವೀತವನ್ನು ದಾನಮಾಡಿ ಆಮೇಲೆ ಅವರವರ ಸಂಪ್ರದಾಯಕ್ಕನುಗುಣವಾಗಿ ಧಾರಣೆಮಾಡಬೇಕು ಮತ್ತು ಬ್ರಹ್ಮಯಜ್ಞವನ್ನು ಮಾಡಬೇಕು. ಅನಂತರ ಮಿಥ್ಯಾಧ್ಯಯನ ದೋಷದ ಪರಿಹಾರಕ್ಕಾಗಿ 1008 (ಯಥಾಶಕ್ತಿ) ಗಾಯತ್ರೀಜಪವನ್ನು ಮಾಡಬೇಕು.

ಅಧ್ಯಯನಕ್ಕೆ ಸಂಬಂಧಿಸಿದ ಇನ್ನೊಂದು ಪ್ರಧಾನವಾದ ಕರ್ಮ ಎಂದರೆ ಉತ್ಸರ್ಜನ. ಉಪಾಕರ್ಮದ ದಿನ, ಋಷಿ, ದೇವತೆಗಳನ್ನು ಪೂಜಿಸಿ, ಕೆಲವು ಕಾಲದವರೆಗೆ ಅಧ್ಯಯನಮಾಡಿ ತಾತ್ಕಾಲಿಕವಾಗಿ ವಿಸರ್ಜನೆ ಮಾಡಿ ಅಧ್ಯಯನವನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ. ಈ ಸಂದರ್ಭದಲ್ಲಿ ಕಾಲ ವೃಥಾ ಹರಣವಾಗಬಾರದು ಎಂದು ವೇದಾಂಗಗಳನ್ನು ಅಭ್ಯಾಸಮಾಡುವ ಕ್ರಮವಿದೆ. ಹೀಗೆ ಬಿಟ್ಟಂತಹ ಅಧ್ಯಯನಕ್ಕೆ ಮತ್ತೆ ಚಾಲನೆ ಕೊಟ್ಟು ಉಪಾಕರ್ಮದಿಂದ ಆರಂಭಿಸುತ್ತೇವೆ.

ಹೀಗೆ ಹಬ್ಬದ ರೀತಿಯಲ್ಲಿ ಅಚರಿಸಿ ಅಧ್ಯಯನಕ್ಕಿರುವ ಸಮಸ್ತದೋಷಗಳನ್ನು ನಿವಾರಿಸಿಕೊಂಡು, ಯಾವುದೇ ಕೆಲಸಕ್ಕೂ ಆರಂಭದಲ್ಲಿ ಎಷ್ಟು ಉತ್ಸಾಹವಿರುತ್ತದೋ ಅಷ್ಟೇ ಉತ್ಸಾಹದಿಂದ ಮುಂದಿನ ಅಧ್ಯಯನವನ್ನು ಮಾಡುವಂತಾಗಬೇಕೆಂಬ ಮಹತ್ತರವಾದ ಧ್ಯೇಯದಿಂದ ತಂದಿರುವ ಶ್ರೇಷ್ಠವಾದ ಸಂಸ್ಕಾರಕರ್ಮವೇ ಈ ಉಪಾಕರ್ಮ.

ಸೂಚನೆ: 01/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.