Saturday, August 22, 2020

ಗಣೇಶನ ಆರಾಧನೆಯ ಮಹತ್ವ (Ganeshana Aradhaneya Mahatva)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)


 
ಭಾದ್ರಪದ ಶುಕ್ಲ ಚತುರ್ಥಿ ಭಾರತೀಯರಿಗೆಲ್ಲ ಅತಿ ಸಂಭ್ರಮದ ಹಬ್ಬ - ಗಣೇಶಚತುರ್ಥಿ. ಆಸೇತುಹಿಮಾಚಲ, ಇಡೀ ದೇಶವೇ ಆಚರಿಸುವ ಹಬ್ಬ. ಶಿವಗಣಗಳ ಅಧಿಪತಿ, ವಿಘ್ನವಿನಾಶಕ, ವಿಘ್ನೇಶ್ವರ, ಗಜಮುಖ ಇತ್ಯಾದಿ ಬಿರುದಾಂಕಿತನಾದ ಈ ದೇವತೆ ಎಲ್ಲರಿಗೂ ಪ್ರಿಯ. ಅವನ ಆರಾಧನೆಯನ್ನು ಅಂದು ಆಬಾಲ ವೃದ್ಧರೆಲ್ಲರೂ ಭಕ್ತಿ-ಶ್ರದ್ಧೆಗಳಿಂದ ಆಚರಿಸುವುದನ್ನು ನೋಡುತ್ತೇವೆ.ಇದರ ಮಧ್ಯೆ ಗಣಪತಿಯ ಆಕಾರ, ಅವನ ಹುಟ್ಟು, ಅವನ ವಿಸರ್ಜನೆಯ ಕ್ರಮ ಇವುಗಳ ಬಗ್ಗೆ ತಥಾಕಥಿತ ವಿಚಾರವಂತರಆಕ್ಷೇಪಗಳು, ವ್ಯಂಗ್ಯೋಕ್ತಿಗಳು ಸಹ ಹೇರಳವಾಗಿವೆ. ಆನೆಯ ಮುಖ, ಮನುಷ್ಯದೇಹ, ಡೊಳ್ಳು ಹೊಟ್ಟೆ, ದೊಡ್ಡಗಾತ್ರದ ದೇಹಕ್ಕೆ ಮೂಷಕ ವಾಹನವಂತೆ. ಏನಿದು ರೂಪರಹಸ್ಯ? ಸುಂದರವಾದ ಮೂರ್ತಿಯನ್ನಾದರೂ ದೇವರೆಂದು ಇಟ್ಟುಕೊಳ್ಳಬಾರದೇ?ಪಾರ್ವತಿಯ ದೇಹದ ಕೊಳೆಯಿಂದ ಇವನ ಹುಟ್ಟು ಬೇರೆ. ಜಗನ್ಮಾತೆಯ ದೇಹದಲ್ಲಿ ಗಣಪತಿಯ ಮೂರ್ತಿಯಾಗುವಷ್ಟುಕೊಳೆಯೇ? ಹೋಗಲಿ ಭಕ್ತಿ-ಶ್ರದ್ಧೆಗಳಿಂದ ಅವನನ್ನು ಪೂಜಿಸಿದ ನಂತರ ನೀರುಪಾಲು ಎಂಬಂತೆ ಜಲದಲ್ಲಿ ವಿಸರ್ಜನೆ. ಎಲ್ಲವೂಮೂಢನಂಬಿಕೆ. ಕಲ್ಪನಾ ವಿಲಾಸ. ಹೀಗೆ ಹರಿಯುತ್ತದೆ ಅಂತಹವರ ವಾಗ್ದಾಳಿ. ಕೆಲವರು ಈ ದೇವತೆಯು ಆರ್ಯರಿಗೆ ದ್ರಾವಿಡರಿಂದ ಬಂದಿದ್ದು ಎಂದೂ ಬಣ್ಣಿಸುತ್ತಾರೆ. ಇನ್ನು ಕೆಲವರು ಡಾರ್ವಿನ್ನನ ವಿಕಾಸವಾದದ ನೀತಿಯನ್ನು ಅನ್ವಯಿಸುತ್ತಾರೆ. ಪ್ರಾಣಿಗಳಿಂದ ಮಾನವನಾದ ವಾದದಂತೆ ಆಂಜನೇಯ, ನರಸಿಂಹ, ಗಣೇಶ ಎಲ್ಲರನ್ನೂ ಆ ವಾದಕ್ಕೆ ತಳುಕು ಹಾಕುವ ಜಾಣ್ಮೆಯನ್ನು ಮೆರೆಯುವುದನ್ನೂ ನೋಡುತ್ತೇವೆ. ಹಾಗಾದರೆ ಏನಿದರ ರಹಸ್ಯ? ಇಷ್ಟು ಚಿಕ್ಕ ಲೇಖನದಲ್ಲಿ ಸಾಧ್ಯವಾದಷ್ಟನ್ನು ವಿವೇಚಿಸೋಣ.

ಮಹರ್ಷಿಗಳ ಕೊಡುಗೆ 
ಮೂಲಾಧಾರದಲ್ಲಿ ಬೆಳಗುವ ದೇವಗಣೇಶನ ಆರಾಧನೆಯನ್ನು ನಮಗೆ ತಂದುಕೊಟ್ಟಿರುವವರು ಈ ದೇಶದ ಜ್ಞಾನಿಗಳು. ಜೀವನದಲ್ಲಿ ಸ್ಥೂಲ-ಸೂಕ್ಷ್ಮ-ಪರಾ ಎಂಬಮೂರೂ ಕ್ಷೇತ್ರಗಳನ್ನೂ ತಮ್ಮ ತಪಸ್ಯೆಯಿಂದ ಅರಿತು, ಜೀವನದ ಸಮಗ್ರತೆಯನ್ನೂ ಅಂತಹ ಸಮಗ್ರವಾದ ಜೀವನವನ್ನು ಸರ್ವಾಂಗ ಸುಂದರವಾಗಿ ನಡೆಸಲು ಬೇಕಾದ ಜೀವನಕ್ರಮವನ್ನೂ ಅರುಹಿದ ಮಹಾತ್ಮರಿಂದಲೇ, ಪ್ರಸ್ತುತ ಗಣೇಶನ ಆರಾಧನೆಯೂ ಬೆಳಕಿಗೆ ಬಂದಿದೆ ಎಂಬುದನ್ನು ನಾವು ಮರೆಯಬಾರದು. ದೇವರು ನಮ್ಮ ಕಲ್ಪನೆಯ ಕೂಸಲ್ಲ; ವಸ್ತುಸ್ಥಿತಿ. ನಮಗೆ ಇಷ್ಟವೆನಿಸಿದ ರೂಪವನ್ನು ಅವನಿಗೆ ನಾವು ಕೊಡಬೇಕಾಗಿಲ್ಲ. ದೇಹದ ಮೂಲಾಧಾರ ಎಂಬ ಚಕ್ರಸ್ಥಾನದಲ್ಲಿ ಯೋಗಿಗಳು ಮನೋಲಯ ಮಾಡಿದಾಗ ಅವರಿಗೆ ಗಜಮುಖನಾದ ಈ ದೇವನ ದರ್ಶನವಾಗುತ್ತದೆ. ಎಂದೇ ಈ ರೂಪ ಯೋಗಿಜನ ಪ್ರತ್ಯಕ್ಷ. ಆ ಕೇಂದ್ರಕ್ಕೆ "ಗಜಕುಂಡಪ್ರದೇಶ" ಎಂದೇ ಯೋಗಶಾಸ್ತ್ರದ ಹೆಸರು. ಆ ಅಂತರಂಗದ ಗಜವು ನಾವು ನೋಡುವ ಆನೆಯಷ್ಟೇ ಎಂದು ಭ್ರಮಿಸಬಾರದು. ಅದಕ್ಕೇ- "ತ್ವಂ ಮೂಲಾಧಾರೇ ಸ್ಥಿತೋsಸಿ ನಿತ್ಯಮ್" ಎಂದು ಅವನನ್ನು ಗಣೇಶ ಅಥರ್ವಶೀರ್ಷದಲ್ಲಿ ಸ್ತುತಿಸಿರುವುದು. ಅದು ಪ್ರಥಮ ಚಕ್ರ. ಅಲ್ಲಿ ನಿತ್ಯವೂ ದರ್ಶನೀಯವಾದ ದೇವತಾರೂಪವದು. ನಾವು ಸಾಧನಾಮಾರ್ಗದಲ್ಲಿ ಕ್ರಮಿಸಬೇಕಾದ ಮೊದಲ ಕೇಂದ್ರ. ನಮ್ಮ ಮುಂದಿನ ಹಾದಿ ಸುಗಮವಾಗಲು ಅದಕ್ಕೇ ಆ ಕೇಂದ್ರದ ಅಧಿಪತಿಯಾದ ಗಜಮುಖನಿಗೆ ಪ್ರಥಮಪೂಜೆ. ಅವರು ಒಳಗೆ ಕಂಡಿದ್ದನ್ನು ನಮ್ಮ ಅನುಗ್ರಹಕ್ಕಾಗಿ ಹೊರಗೂ ಅದೇ ರೂಪವನ್ನು ನಮ್ಮ ಧ್ಯಾನಕ್ಕಾಗಿ ಕೊಟ್ಟಿದ್ದಾರೆ. ಆ ರೂಪದ ಸಹಜತೆಯೇ ಅದರ ಸೌಂದರ್ಯ. ಈ ತತ್ತ್ವಾರ್ಥದ ಅರಿವಿಲ್ಲದ ಪಾಮರರಿಗೆ ಅದು ವಿಚಿತ್ರವಾಗಿರಬಹುದು. ಆದರೆ ಸಾಧನೆಯಲ್ಲಿ ಅಂತರಂಗಕ್ಕೆ ಪ್ರವೇಶಿಸಿದಾಗ ಪರಮಾನಂದವನ್ನು ಉಂಟುಮಾಡುವುದರಿಂದ ಆ ಸಹಜವಾದ ರೂಪವನ್ನು ಭಕ್ತರು ಸುಂದರಮೂರ್ತಿ ಎಂದೇ ಕರೆಯಬೇಕಲ್ಲವೇ?

೨೧ ಸಂಖ್ಯೆಯ ವಿಶೇಷ
ಸೃಷ್ಟಿಯ ೨೧ ತತ್ತ್ವಗಳನ್ನು ತನ್ನ ಲಂಬೋದರದಲ್ಲಿ ಧರಿಸಿ ನಿಯಮನ ಮಾಡುತ್ತಿರುವುದರಿಂದ ಅವನ ಹೊಟ್ಟೆಯ ಗಾತ್ರದೊಡ್ಡದು. ಈ ತತ್ತ್ವದ ಪ್ರತೀಕವಾಗಿಯೇ ಅವನ ಪೂಜೆಯಲ್ಲಿ ೨೧ ಸಂಖ್ಯೆಗೆ ಮಹತ್ತ್ವವಿರುವುದು. ತಾತ್ತ್ವಿಕವಾಗಿ ಮೂಷಕವುಸಾಧನೆಗೆ ಅಡ್ಡಿಪಡಿಸುವ ಆಸುರೀ ಶಕ್ತಿ;  ಹವಿರ್ಭಾಗಗಳನ್ನು ಕದಿಯುವ ಶಕ್ತಿ ಎಂಬುದು ಜ್ಞಾನಿಗಳ ಮಾತು. ಅಂತಹ ಆಸುರೀಶಕ್ತಿಯನ್ನು ಮೆಟ್ಟಿ ಅದನ್ನು ತನ್ನ ವಾಹನವನ್ನಾಗಿಸಿ ಯೋಗವಿಘ್ನಗಳನ್ನು ಪರಿಹರಿಸುವ ದೇವ, ಮೂಷಕ ವಾಹನ, ಅವನು.

ಪಾರ್ವತಿಯ ಶರೀರದ ಕೊಳೆಯಿಂದ ಇವನ ಉತ್ಪತ್ತಿ ?



ಪುರಾಣದ ಆಲಂಕಾರಿಕವಾದ ಹೇಳಿಕೆಯನ್ನು ನೇರವಾದ ಅರ್ಥದಲ್ಲಿ ತೆಗೆದುಕೊಳ್ಳಲಾಗದು. ಪಾರ್ವತಿಯು ಪ್ರಕೃತಿಮಾತೆ. ಪ್ರಕೃತಿಯ ಮೊದಲ ಪದರವಾದ ಪೃಥಿವೀತತ್ತ್ವವನ್ನೇ ಇಲ್ಲಿ ಕೊಳೆ ಎನ್ನಲಾಗಿದೆ. ಆ ಪೃಥಿವೀತತ್ತ್ವದ ದೇವತೆಯಾಗಿರುವ ಚೈತನ್ಯವೇ ಶ್ರೀಗಣೇಶಮೂರ್ತಿ. ಗಣೇಶನ ಧಾಮವೆಂದು ಆಗಮಗಳಲ್ಲಿ ಹೇಳಿರುವ ಮೂಲಾಧಾರ ಪ್ರದೇಶವು ಪೃಥಿವೀತತ್ತ್ವಾತ್ಮಕವಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.

ಜಲದಲ್ಲಿ ವಿಸರ್ಜನೆ?
ಪೂಜೆಯ ನಂತರ ಜಲದಲ್ಲಿ ವಿಸರ್ಜನೆ ಮಾಡುವಲ್ಲಿನ ವಿಜ್ಞಾನದ ಬಗ್ಗೆ ಶ್ರೀರಂಗಮಹಾಗುರುಗಳ ಅಭಿಪ್ರಾಯ ಹೀಗಿತ್ತು-ಮಹಾಯೋಗಿಗಳು ಮೂಲಾಧಾರ ಪ್ರದೇಶದಲ್ಲಿ ಗಣೇಶನನ್ನು ಪೂಜಿಸಿ ಅದಕ್ಕೆ ಮೇಲಿರುವ ಸ್ವಾಧಿಷ್ಠಾನ ಚಕ್ರದಲ್ಲಿಗಣೇಶನೊಡನೆ ಮನೋಲಯ ಮಾಡುತ್ತಾರೆ. ಮೂಲಾಧಾರವು ಪೃಥಿವೀತತ್ತ್ವದ ಸ್ಥಾನ. ಸ್ವಾಧಿಷ್ಠಾನವು ಜಲತತ್ತ್ವದ ಸ್ಥಾನ.ಪೃಥಿವೀತತ್ತ್ವವನ್ನು ಜಲತತ್ತ್ವದಲ್ಲಿ ಯೋಗಿಗಳು ತಮ್ಮ ಅಂತಃಪ್ರಪಂಚದಲ್ಲಿ ಲಯಗೊಳಿಸುತ್ತಾರೆ. ಯೋಗಿಗಳಲ್ಲದವರಿಗೆ ಆಅಂತರಂಗದ ಅನುಭವದ ಸಂಸ್ಕಾರವನ್ನುಂಟುಮಾಡಲು ಹೊರಪ್ರಪಂಚದಲ್ಲಿ ಮಹರ್ಷಿಗಳು ರೂಪಿಸಿದ ತಂತ್ರವೇ ಪೃಥಿವೀತತ್ತ್ವದ ಹೊರರೂಪವಾದ ಮಣ್ಣಿನಿಂದ ನಿರ್ಮಿತವಾದ ಗಣೇಶನನ್ನು ಜಲತತ್ತ್ವದ ಹೊರರೂಪವಾದ ಶುದ್ಧವಾದಜಲಾಶಯದಲ್ಲಿ ವಿಧಿಪೂರ್ವಕವಾಗಿ ಲಯಗೊಳಿಸುವುದಾಗಿದೆ. ಆದ್ದರಿಂದ ಅಂದು ಪೂಜಿಸಲ್ಪಟ್ಟ ಮಣ್ಣಿನ ಗಣೇಶ ವಿಗ್ರಹವನ್ನುಜಲಾಶಯದಲ್ಲಿ ವಿಸರ್ಜನೆ ಮಾಡುವುದು ಅಂತರ್ಯಜ್ಞಕ್ಕೆ ಪೋಷಕವಾದ ಒಂದು ಶ್ರೇಷ್ಠವಾದ ಬಾಹ್ಯಯಜ್ಞವಾಗಿದೆ.

ಆರ್ಯ-ದ್ರಾವಿಡ ವಾದ:
ಗಣೇಶನನ್ನು ಆರ್ಯರ ದೇವತೆ, ದ್ರಾವಿಡರ ದೇವತೆ ಎನ್ನುವುದು ಸೂರ್ಯನನ್ನು ಆರ್ಯರ ಸೂರ್ಯ, ದ್ರಾವಿಡರ ಸೂರ್ಯ ಎಂದಷ್ಟೇ ಹಾಸ್ಯಾಸ್ಪದ. "ಸತ್ಯಂ ಜ್ಞಾನಮನಂತಂ ಬ್ರಹ್ಮ", " ಅಖಂಡ ಮಂಡಲಾಕಾರಂ ವ್ಯಾಪ್ತಂ ಏನ ಚರಾಚರಂ " ಎಂದಂತೆ ಸರ್ವವ್ಯಾಪಿಯಾದ ದೇವನನ್ನು ಭೌಗೋಳಿಕವಾಗಿ ವರ್ಗೀಕರಿಸುವುದೇ ಅಜ್ಞಾನದ ವಿಲಾಸ. ಗಣೇಶನನ್ನು ಒಳಗೆ ನಿತ್ಯವಾಗಿ ನೋಡುತ್ತಿರುವ ಜ್ಞಾನಿಗಳ ಮಾತೇ ಇಲ್ಲಿ ಪರಮಪ್ರಮಾಣ. ಈ ಅಂತರ್ದರ್ಶನದ ಸತ್ಯವನ್ನು ವಿಕಾಸವಾದಕ್ಕೆ ಹೋಲಿಸುವುದೂ ಅಷ್ಟೇ ಹಾಸ್ಯಾಸ್ಪದ.ಕೇವಲ ಸ್ಥೂಲ ಬುದ್ಧಿಯಿಂದ ವಿಷಯವನ್ನು ನೋಡಹೋಗದೇ, ಮಹರ್ಷಿಗಳಂತೆ ತಪಸ್ಯೆಯಿಂದ ಸೂಕ್ಷ್ಮ, ಪರಾ ದೃಷ್ಟಿಯನ್ನೂಪಡೆದಾಗ ಗಣೇಶನ ಆರಾಧನೆಯ ಮಹತ್ತ್ವ ಅರಿವಿಗೆ ಬಂದೀತು. ಅಲ್ಲಿಯವರೆಗೆ ಅವರ ಆನುಭವಿಕ ಸತ್ಯವನ್ನು ಮನದಲ್ಲಿಸ್ಮರಿಸುತ್ತಾ, ನಮಗೂ ಅಂತಹ ಆನಂದಾನುಭವವನ್ನು ದಯಪಾಲಿಸು ಎಂದು ಆ ವಿಘ್ನನಾಶಕನನ್ನು ಪ್ರಾರ್ಥಿಸುತ್ತಾ ಶ್ರದ್ಧಾ-ಭಕ್ತಿಗಳಿಂದ ಶ್ರೀಗಣೇಶನನ್ನು ಆರಾಧಿಸೋಣ.

ಸೂಚನೆ: 22/08/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.