Wednesday, August 12, 2020

ಮುರುಳೀಧರನ ವೇಣುಗಾನದ ಮಹಿಮೆ (Muruklidharana Venuganada Mahime)

ಲೇಖಕರು: ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)


  

ಶ್ರೀಕೃಷ್ಣಚರಿತ್ರೆಯನ್ನರಿತವರಿಗೆ 'ಕೃಷ್ಣ' ಎಂದೊಡನೆಯೇ ಸ್ಮೃತಿಪಥದಲ್ಲಿ ಸುಳಿಯುವುದು ಆತನ ವೇಣುಗಾನದ ಸನ್ನಿವೇಶಗಳು. ಶ್ರೀಕೃಷ್ಣಜನ್ಮಾಷ್ಟಮಿಯ ಸುಸಂದರ್ಭದಲ್ಲಿ ಶುಕಬ್ರಹ್ಮರ್ಷಿಯು ಶ್ರೀಮದ್ಭಾಗವತದಲ್ಲಿ ವರ್ಣಿಸಿರುವ ಆ ಪ್ರಸಂಗಗಳ ಮಧುರಸ್ಮರಣೆಯು ಸೂಕ್ತವಾಗುವುದೆಂದು ಭಾವಿಸುತ್ತೇನೆ.

 ಶ್ರೀಕೃಷ್ಣನು ನಿತ್ಯವೂ ಗೋವಳರೊಡನೆ ಹಸು-ಕರುಗಳನ್ನು ಮೇಯಿಸಲು ವೃಂದಾವನಕ್ಕೆ ತೆರಳುತ್ತಿದ್ದನು. ಅಲ್ಲಿ ಆತನು ಮಾಡುತ್ತಿದ್ದ ವೇಣುಗಾನವು ಇನ್ನೆಲ್ಲೂ ಕೇಳಿ ಅರಿಯದ ವಿಶಿಷ್ಟ ಪರಿಣಾಮವನ್ನು ಎಲ್ಲೆಡೆಯಲ್ಲೂ ಬೀರುತ್ತಿತ್ತು. ಗೋಪಾಲಬಾಲಕರನ್ನು ಸಂಭ್ರಮಗೊಳಿಸುತ್ತಿತ್ತು.  ಹಸುಕರುಗಳೂ ಸಹ ವೇಣುನಾದದಿಂದ ಆಕರ್ಷಿತವಾಗಿ ಮೇವು ಮರೆತು ಕೃಷ್ಣನನ್ನೇ ದಿಟ್ಟಿಸುತ್ತ, ಕಿವಿಗಳನ್ನು ನಿಮಿರಿಸಿ ಮುರಳೀಗಾನವನ್ನು ಆಲಿಸುತ್ತಿದ್ದವಂತೆ! ಸದಾ ಆತನ ನಿಕಟವರ್ತಿಗಳಾದ್ದರಿಂದಲೇ ಅವುಗಳಿಗೆ ಕೃಷ್ಣಪ್ರೇಮ-ಆಕರ್ಷಣೆಯಿರಬಹುದೇನೋ ಎಂದರೆ, ಬೃಂದಾವನದಲ್ಲಿನ ನವಿಲುಗಳೂ ಸಹ ಆ ಗಾನವನ್ನು ಕೇಳಿ ಸಂತೋಷದಿಂದ ನರ್ತಿಸುತ್ತಿದ್ದವಂತಲ್ಲಾ! ಜಿಂಕೆಗಳೂ ಓಡೋಡಿ ಬಂದು ತಮ್ಮ ಕಣ್ಣುಗಳಿಂದ ಆತನ ರೂಪವನ್ನು ಪಾನಮಾಡುತ್ತ ಗಾನವನ್ನು ಆಲಿಸುತ್ತಿದ್ದವಂತಲ್ಲಾ! ಮುರಳಿಯ ಗಾನದಿಂದ  ಮೋಹಗೊಂಡ ಯಮುನೆಯೂ ತನ್ನ ಸುಳಿಗಳಿಂದ ಆತನ ಪರಿಸರದಲ್ಲೇ ಇರಬೇಕೆಂಬ ತನ್ನ ಬಯಕೆಯನ್ನು ತೋರುತ್ತಾ, ನಿಧಾನವಾಗಿ ಚಲಿಸತೊಡಗಿದಳಂತೆ!

ವ್ರಜದಲ್ಲಿದ್ದ ಗೋಪಿಯರನ್ನೂ ಕೂಡ ಮರುಳು ಮಾಡಿತು ವೃಂದಾವನದ ಕೊಳಲನಾದ! ಅತಿ ಮುಗ್ದರಾದ ಗೋಪಸ್ತ್ರೀಯರು ಕೃಷ್ಣನಲ್ಲಿ ವಿಶೇಷಪ್ರೇಮವನ್ನು ಹೊಂದಿದವರಾಗಿದ್ದರು. ಹೊರವಿದ್ಯಾಭ್ಯಾಸಗಳಾವುವೂ ಇಲ್ಲದಿದ್ದರೂ ಕೃಷ್ಣಭಕ್ತಿಯಲ್ಲಿ ಸರ್ವಶ್ರೇಷ್ಠರಾಗಿದ್ದರು. ಕಾಮದಿಂದಲೇ ಭಗವಂತನನ್ನು ಪಡೆಯಬಹುದೆಂಬುದಕ್ಕೆ (ಪ್ರೇಮಭಕ್ತಿಗೆ) ಉತ್ತಮ ನಿದರ್ಶನವಾಗಿದ್ದರು.  ಮುರಳೀನಾದವು ಅವರನ್ನು ಪೂರ್ಣವಾಗಿ  ಕೃಷ್ಣನಲ್ಲೇ ಲಯಗೊಳಿಸುತ್ತಿತ್ತು. ವನಕುಸುಮಗಳಿಂದ ಸಿಂಗರಿಸಿಕೊಂಡು ರಂಗಮಂಟಪದ ನಟನಂತೆ ಕಾಣುತ್ತಿದ್ದ ಶ್ಯಾಮಸುಂದರನ ದಿವ್ಯಮಂಗಳ ವಿಗ್ರಹವು ಹೃದಯವನ್ನೆಲ್ಲ ವ್ಯಾಪಿಸಿಬಿಡುತ್ತಿತ್ತು. ಗೋಪಿಯರು ಪರಸ್ಪರ ಮಾತನಾಡುತ್ತ 'ವಂಶೀನಾದದಿಂದ ಹಸುಗಳ ಮೊಲೆಯುಣ್ಣುತ್ತಿದ್ದ ಎಳೆಕರುಗಳೂ ಕೂಡ ಹಾಲು ಕುಡಿಯುವುದನ್ನು ಬಿಟ್ಟು, ಬಾಯಲ್ಲಿದ್ದ ನೊರೆಹಾಲನ್ನು ಒಳಕ್ಕೆ ತೆಗೆದುಕೊಳ್ಳುವುದನ್ನೂ ಮರೆತು ಸ್ತಬ್ಧವಾಗಿ ನಿಂತುಬಿಡುತ್ತವೆಯಲ್ಲ! ವೃಂದಾವನದ ಪಕ್ಷಿಗಳು ಎವೆಯಿಕ್ಕದೇ ಕೃಷ್ಣನನ್ನೇ ನೋಡುತ್ತಿರುವುದನ್ನು ನೆನೆದರೆ ಅವು ಪಕ್ಷಿಗಳೇ ಅಲ್ಲ, ತಪೋವನದಲ್ಲಿನ ಮುನಿಗಳೇ ಸರಿಯೆನಿಸುತ್ತದೆ. ಕೃಷ್ಣನ ಕರವನ್ನೇರಿ ಆತನ ಅಧರಾಮೃತವನ್ನು ಪಾನಮಾಡುವ ಕೊಳಲಿನ ಭಾಗ್ಯವದೆಷ್ಟು!! ಆ ಕೊಳಲನ್ನಿತ್ತ ಬಿದಿರು ಅದೆಷ್ಟು ಧನ್ಯ!' ಮುಂತಾಗಿ ಕೃಷ್ಣನ ಮಹಿಮೆಯನ್ನೇ ನೆನೆದು ಪರವಶರಾಗುತ್ತಿದ್ದರು.

' ಹೀಗೆ ಅನುಗಾಲವೂ ತನ್ನನ್ನೇ ಸ್ಮರಿಸುತ್ತಿದ್ದ ಗೋಪಸ್ತ್ರೀಯರಿಗೆ ಹಿಂದೊಮ್ಮೆ ತಾನು ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ಸಂಕಲ್ಪಿಸಿದ ಶ್ರೀಕೃಷ್ಣ.  ಶರತ್ಕಾಲದ ಹುಣ್ಣಿಮೆಯ ರಾತ್ರಿಯಲ್ಲಿ ವೃಂದಾವನದಲ್ಲಿ ಮನಮೋಹಕವಾಗಿ ವೇಣುಗಾನಾಮೃತವರ್ಷವನ್ನು ಸುರಿಸತೊಡಗಿದನು. ಅದನ್ನು ಕೇಳಿದೊಡನೆಯೇ ವ್ರಜಸ್ತ್ರೀಯರಿಗೆ ಕೊಳಲನಾದವು ತಮ್ಮನ್ನೇ ಕರೆಯುತ್ತಿರುವುದೆಂಬ ಭಾವನೆಯು ಉಕ್ಕಿ ಹರಿಯಲಾರಂಭಿಸಿತು. ವಂಶೀನಾದದ ಉತ್ಕಟ ಆಕರ್ಷಣೆಯಿಂದ ಪ್ರೇರಿತರಾದ ಅವರು ತಮ್ಮ ಕೆಲಸಕಾರ್ಯಗಳೆಲ್ಲವನ್ನೂ ಅರ್ಧದಲ್ಲೇ ಬಿಟ್ಟು ವೃಂದಾವನಕ್ಕೆ ಧಾವಿಸಿದರು. ಅಲ್ಲಿ ಗೋಪಿಯರೊಡನೆ ಕೃಷ್ಣನು ಅದ್ಭುತವಾದ ರಾಸಕ್ರೀಡೆಯನ್ನಾಡಿದನು. ಒಬ್ಬೊಬ್ಬ ಗೋಪಿಯೊಡನೆಯೂ ಒಬ್ಬ ಕೃಷ್ಣ! ಹೀಗೆ ನಾನಾ ರೂಪಗಳಲ್ಲಿ ಪ್ರಕಟಗೊಂಡು ನಡೆಸಿದ ರಾಸೋತ್ಸವವನ್ನು ಕಾಣಲು ಸಕಲದೇವತೆಗಳೂ ಆಕಾಶದಲ್ಲಿ ನೆರೆದರಂತೆ! ಗೋಪಿಯರ ಆನಂದಕ್ಕೆ ಎಣೆಯೇ ಇಲ್ಲ. ಕೃಷ್ಣನ ಸಾಮೀಪ್ಯ-ಸಾನ್ನಿಧ್ಯ-ದರ್ಶನ-ಸ್ಪರ್ಶಗಳಿಂದ ಅವರಲ್ಲಿ ತಲೆದೋರಿದ್ದ ಕಾಮವು ಭಗವತ್ಕಾಮವಾಗಿ ಅವರನ್ನು ಭಗವತ್ಭಾವಕ್ಕೇರಿಸಿತು. ಕೃಷ್ಣನಲ್ಲಿಯೇ ತಲ್ಲೀನರಾದರು. ಆ ಶರದ್ರಾತ್ರಿಯಲ್ಲಿ ಕೃಷ್ಣನನ್ನು ಪರಿಪರಿಯಾಗಿ ಸೇವಿಸಿ, ಆತನೊಡನೆ ಕ್ರೀಡಿಸಿ ಆನಂದಿಸಿದ ಗೋಪಿಕೆಯರೆಲ್ಲರೂ 'ಬ್ರಹ್ಮಭಾವ'ಕ್ಕೇರಿಸಲ್ಪಟ್ಟರು! ಆದ್ದರಿಂದಲೇ ಅಂದಿನ ರಾತ್ರಿಯು "ಬ್ರಹ್ಮರಾತ್ರ"ವೆಂಬುದಾಗಿ ಕೊಂಡಾಡಲ್ಪಟ್ಟಿದೆ.

ಅಂದು ಮನೆಯಿಂದ ಹೊರಬರಲು ಸಾಧ್ಯವಿಲ್ಲದ ಕೆಲವರು ಇದ್ದಲ್ಲಿಯೇ ಧ್ಯಾನಮಗ್ನರಾಗಿ ಬಿಟ್ಟರು! ಶುಕಮುನಿಯು ಹೇಳುತ್ತಾರೆ-ವಿರಹವೇದನೆಯಿಂದ ಅವರ ಪಾಪಗಳು ಕ್ಷಯಿಸಿದವು; ಧ್ಯಾನಾರೂಢರಾಗಿ ಆತನನ್ನು ಹೃದಯಕಮಲದಲ್ಲಿ ದರ್ಶನಮಾಡಿ ಪುಣ್ಯಾಪುಣ್ಯ ವಿವರ್ಜಿತ ಪಂಥರಾದ ಅವರು ಕರ್ಮಬಂಧನಗಳಿಂದ ಮುಕ್ತರಾದರು!

ವೇಣುವಾದ್ಯದ ರೂಪ-ನಾದಗಳಿಗೆ ಯೋಗಿಗಳ ಅಂತರ್ದರ್ಶನಗಳೇ ಮೂಲ. ಕೃಷ್ಣನ ಕರದಲ್ಲಿನ ಕೊಳಲಿನಲ್ಲೂ ಅಂತಃಪ್ರಪಂಚದಲ್ಲಿರುವಂತೆಯೇ ನಾದಮೂರ್ತಿ ರುದ್ರನ ಅನುಪ್ರವೇಶವಿದ್ದುದರಿಂದಲೇ ಈ ಅದ್ಭುತ ಪರಿಣಾಮವುಂಟಾಯಿತೆಂಬುದಾಗಿ ಶ್ರೀರಂಗಮಹಾಗುರುಗಳು ನೀಡಿದ ವಿವರಣೆಯನ್ನು ಸ್ಮರಿಸುತ್ತೇವೆ.

ಅಂತಹ ಪವಿತ್ರವಾದ ಮುರಳಿಗೂ, ಮುರಳೀಧರನಿಗೂ ಅನಂತಾನಂತ ಪ್ರಣಾಮಗಳಿರಲಿ.

ಸೂಚನೆ: 11/08/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.