Monday, August 17, 2020

ಶಾಂತಿ -ಸಮೃದ್ಧಿಗಳನ್ನು ತುಂಬುವ ಗೌರೀಪೂಜೆಯ ಅಂತರಂಗ (Shanthi -Samruddhigalannu Tumbuva Gauri PUjeya Antaranga )

 ಲೇಖಕರು : ಡಾII ಮೋಹನ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)




ಕಥಾಭಾಗ 


 ಭಾದ್ರಪದ ಮಾಸದ ಶುಕ್ಲ ತದಿಗೆಯಂದು ಬರಲಿರುವ ಸ್ವರ್ಣಗೌರೀ ವ್ರತದ ಸಂಭ್ರಮ ಹಬ್ಬಿದೆ. ಎಲ್ಲರಿಗೂ ತಿಳಿದಂತೆ ಗೌರೀ ಪರ್ವತರಾಜ ಹಿಮವಂತನ ಪುತ್ರಿ. ಶಿವನೋ ಮಹಾತಪಸ್ವಿ. ಯೋಗಿಗಳ ಪೈಕಿ ಅಗ್ರಗಣ್ಯ. ಯೋಗಿಗಳ ಈಶ್ವರ - ಯೋಗೀಶನೆಂದು ಪ್ರಖ್ಯಾತ. ಬೈರಾಗಿಯಾಗಿ ಲೋಕವಿಮುಖನಾಗಿ ಕುಳಿತಿರುವ ಆತನ ತಪಸ್ಯೆಯನ್ನು ಭಂಗ ಮಾಡುವುದಕ್ಕಾಗಿ, ಕಾಮನು ತನ್ನ ಪುಷ್ಪಬಾಣವನ್ನು ಪ್ರಯೋಗಿಸುತ್ತಾನೆ. ಶಿವನ ಮನಸ್ಸು ತಪಸ್ಸಿನಿಂದ ಕದಲಿ ಅವನು ಮದುವೆಯಾಗುವಂತೆ ಮಾಡುವುದಕ್ಕಾಗಿ ದೇವತೆಗಳು ಕೈಗೊಂಡ ಉಪಾಯವಿದು. ಆದರೆ ಈ ಉಪಾಯವು ಶಿವನ ತಪೋಭಂಗ ಮಾಡಲಿಲ್ಲ. ಬದಲಾಗಿ ಅವನು ರೌದ್ರರೂಪವನ್ನು ತಾಳಿ ತನ್ನ ದೃಷ್ಟಿಯಿಂದ ಕಾಮನನ್ನೇ ಭಸ್ಮ ಮಾಡಿಬಿಟ್ಟ. ಈ ಹಿನ್ನೆಲೆಯಲ್ಲಿ ಗೌರಿಯು ಹಿಮವಂತನ ಪುತ್ರಿಯಾಗಿ ಜನಿಸಿದಳು. ಕಠೋರವಾದ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡು ಶಿವನನ್ನೇ ಮದುವೆಯಾದಳು. ಶಿವ-ಪಾರ್ವತಿಯರ ವಿವಾಹದ ಸಂದರ್ಭದಲ್ಲಿ ಶಿವನು ಕರುಣೆಯಿಂದ ಕಾಮನನ್ನು ಪುನಃ ಬದುಕಿಸುತ್ತಾನೆ.


ಶಿವ-ಶಕ್ತಿಯರ ರಹಸ್ಯ  


ಈ ಕಥೆಯು ಗೌರಿಯ(ಪಾರ್ವತಿಯ) ತತ್ತ್ವದ ಸಾರವನ್ನೇ ಹೇಳುತ್ತದೆ. ಸೃಷ್ಟಿಯಲ್ಲಿ ಶಿವ-ಶಕ್ತಿ ಎಂಬ ಇಬ್ಬಗೆಯ ತತ್ತ್ವಗಳುಂಟು. ಚೈತನ್ಯ ಸ್ವರೂಪವಾದ ತತ್ತ್ವವು ಶಿವ. ಎಲ್ಲ ಜೀವಿಗಳಲ್ಲಿಯೂ ಇರುವವನು ( ‘ಸತ್’) ಅವನು. ಆದ್ದರಿಂದಲೇ ಈ ಚೈತನ್ಯವು ಶರೀರವನ್ನು ಬಿಟ್ಟುಹೋದರೆ ‘ಸತ್ತು’ ಹೋಯಿತು ಎಂಬುದಾಗಿ ವ್ಯವಹಾರ ಬಂದಿದೆ. ಆದರೆ ಶಿವ-ಚೈತನ್ಯ ಏಕಾಕಿಯಾಗಿದ್ದರೆ ವ್ಯವಹಾರವೇ ಇಲ್ಲ.  ಶಕ್ತಿಯು ಪಂಚಭೂತಗಳಿಂದ ಕೂಡಿದ ಈ ಶರೀರವನ್ನು ಸೃಷ್ಟಿಮಾಡಿ, ಶಿವನ ಶಕ್ತಿಯನ್ನು ಇಲ್ಲಿ ಹರಿಯುವಂತೆ ಮಾಡುತ್ತಾಳೆ. 


ಭೋರ್ಗರೆವ ಜೋಗ್ ಜಲಪಾತವು ವಿದ್ಯುತ್ ಶಕ್ತಿಸಾಮರ್ಥ್ಯದ ಗಣಿ. ಆದರೆ ಆ ಶಕ್ತಿಯು ನಮ್ಮ ಉಪಯೋಗಕ್ಕೆ ಬರಬೇಕಾದರೆ, ನೀರಿನ ವೇಗವನ್ನು ವಿದ್ಯುಚ್ಛಕ್ತಿಯಾಗಿ ಪರಿಣಮಿಸಿ, ತಂತಿಯಲ್ಲಿ ಹರಿಸಿ ಬಲ್ಬ್ನವರೆಗೆ ತಂದಾಗ ಮಾತ್ರ  ಸಾಧ್ಯ. ಜೋಗ ಜಲಪಾತದಲ್ಲಿ ಅವ್ಯಕ್ತವಾಗಿ ಇರುವ ಸಾಮರ್ಥ್ಯವನ್ನು ಶಿವನೆಂದು ಭಾವಿಸಿದರೆ, ವಿದ್ಯುಚ್ಛಕ್ತಿಯನ್ನು ಶಕ್ತಿಯೆಂದೂ ಶಿವೆಯೆಂದೂ ಭಾವಿಸಬಹುದು.  ಪ್ರಾಜ್ಞನು ಬಲ್ಬ್ ಅನ್ನು ಗಮನಿಸಿದಾಗ ಅದರೊಳಗಿನ ಶಕ್ತಿಯನ್ನೂ ಅದರ ಹಿಂದಿನ ಜಲಪಾತವನ್ನೂ ಸ್ಮರಿಸುತ್ತಾನೆ. ಅಂತೆಯೇ ಜ್ಞಾನಿಗಳು ಶರೀರದೊಳಗೆ ಹರಿಯುವ ಶಕ್ತಿಯನ್ನೂ ಕಂಡುಕೊಂಡು ಒಳ ಯೋಗಮಾರ್ಗದಲ್ಲಿ ಶಿವನನ್ನು ಹುಡುಕುತ್ತಾ ಸಾಗುತ್ತಾರೆ. ತಮ್ಮೊಳಗೆ ಮಸ್ತಿಷ್ಕದಲ್ಲಿ, ಬೆನ್ನು ಮೂಳೆಯೆಂಬ ಬೆಟ್ಟದ ತುದಿಯಲ್ಲಿ ಶಿವನನ್ನು ಕಂಡು ಅವರ್ಣನೀಯ ಆನಂದವನ್ನು ಅನುಭವಿಸುತ್ತಾರೆ. ಆದರೆ ಈ ಸ್ಥಿತಿಯಲ್ಲಿ ಹೊರಮೈಯಿನ ಪರಿವೆ ಇರುವುದಿಲ್ಲ, ಯಾವ ಇಂದ್ರಿಯವೂ ಕೆಲಸ ಮಾಡುವುದಿಲ್ಲ. ಹೊರಗಿನಿಂದ ನೋಡುವವರಿಗೆ ಆಸಾಮಿ ಗತಿಸಿಹೋದಂತೆ ಕಾಣುವುದು. ಇದು ನಿರ್ಲಿಪ್ತನಾಗಿ ಧ್ಯಾನಮಗ್ನನಾದ ಶಿವನ ಸ್ಥಿತಿ. ಆದರೆ ಈ ಜ್ಞಾನಿಯ ಜ್ಞಾನಲಾಭ ಲೋಕಕ್ಕೆ ಆಗಬೇಕಾದರೆ ಅವನು ಧ್ಯಾನದಿಂದ ಹೊರಬಂದು ಲೋಕವ್ಯವಹಾರದಲ್ಲಿ  ತೊಡಗಬೇಕು. ಇಂದ್ರಿಯಗಳ ಹಿಂಬದಿಯ ಶಕ್ತಿಗಳೇ ದೇವತೆಗಳು. ಇವರು ಈ ಜ್ಞಾನಿಯ ಮನಸ್ಸನ್ನು ಹೊರಗೆ ಆಕರ್ಷಿಸುವ ಪ್ರಯತ್ನ ಮಾಡುತ್ತಾರೆ. ಆಕರ್ಷಣೆ ಎಂಬ ಕಾಮನಿಂದಲೇ ಸೃಷ್ಟಿ ಸಾಧ್ಯವಾದೀತು. ಆದರೆ ಅಕಾಲದಲ್ಲಿ ಕಾಮನನ್ನು ವೈರಿಯಂತೆ ಭಾವಿಸಬೇಕು. ಕಾಲ ಕೂಡಿಬಂದಾಗ ಬೆನ್ನುಹುರಿ ಎಂಬ ಪರ್ವತರಾಜನ ಮಗಳಾಗಿ ಶಕ್ತಿಸ್ವರೂಪಿಣಿಯಾದ ಗೌರಿಯು ಶಿವನನ್ನು ಒಲಿಸಿ, ಅವನನ್ನು ಲೋಕವ್ಯವಹಾರದ ಕಡೆ ಕರೆದೊಯ್ಯುತ್ತಾಳೆ. ಶಿವನೂ ಲೋಕಕಲ್ಯಾಣಕ್ಕಾಗಿ ಸ್ವೇಚ್ಛೆಯಿಂದ ಮಾಯೆಯ ತೆರೆಯನ್ನು ಭೂಷಣವಾಗಿ ಸ್ವೀಕರಿಸಿ ಬರುತ್ತಾನೆ.  ಹೀಗೆಂದು  ಪಾರ್ವತೀ-ಪರಮೇಶ್ವರರ ವಿವಾಹ ರಹಸ್ಯವನ್ನು ಶ್ರೀರಂಗಮಹಾಗುರುಗಳು ಬಿಚ್ಚಿ ಹೇಳುತ್ತಿದ್ದರು.


ಗೌರೀ ಪೂಜೆಗೆ ಆದರ್ಶ 


ಜ್ಞಾನಸಾಧನೆಯನ್ನು ಮಾಡಿ ಮುಗಿಸಿದ ವಟುವು ಪಾರ್ವತೀ-ಸುಂದರೇಶ್ವರರ ವಿವಾಹಸ್ಮರಣೆಯಲ್ಲಿ  ಶಕ್ತಿರೂಪಳಾದ ಮಡದಿಯ ಕೈ ಹಿಡಿದು ತನ್ನಂತೆಯೇ ಇರುವ ಪ್ರಜೆಗಳನ್ನು ಮುಂದುವರೆಸಲು  ಉದ್ಯುಕ್ತನಾಗುತ್ತಾನೆ. ಲೋಕದಲ್ಲಿ  ವರನು ಶಿವನಾಗಿ  ಪಾತ್ರವನ್ನು ವಹಿಸಿ ಕಾಶೀಯಾತ್ರೆಗೆ ಹೊರಡುತ್ತಾನೆ. ಶಕ್ತಿಯ ಪಾತ್ರವನ್ನು ವಹಿಸುವ ವಧುವು ಶುದ್ಧವಾದ ಲೋಕವ್ಯವಹಾರಕ್ಕೆ ಹಜ್ಜೆ ಇಡುವಾಗ, ವಿವಾಹ ಸಂದರ್ಭದಲ್ಲಿ ಗೌರೀ ವ್ರತವನ್ನಾಚರಿಸುತ್ತಾಳೆ. ವಿವಾಹಾನಂತರವೂ ಐದು ವರ್ಷಗಳು ಶ್ರಾವಣದ ಮಂಗಳವಾರಗಳಂದು ‘ಮಂಗಳಗೌರೀ’ ಎಂಬ  ವ್ರತವನ್ನು ಆಚರಿಸುವ  ಸಂಪ್ರದಾಯವೂ ಇದೆ. ಗೋಪಿಕೆಯರು ಶ್ರೀಕೃಷ್ಣನನ್ನು ಪಡೆಯಲು ನಡೆಸಿದ ಕಾತ್ಯಾಯನೀ ವ್ರತಾಚರಣೆ  ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸುಖಮಯವಾದ ದಾಂಪತ್ಯ-ಜೀವನವನ್ನು ಕರುಣಿಸುವ ವ್ರತವಿದು. 


ಸ್ವರ್ಣಗೌರೀ(ಮಂಗಳಗೌರೀ) ವ್ರತದ ಆಚರಣೆ-ಅಂತರಾರ್ಥ 


ಇಂತಹ ವ್ರತದ ಆಚರಣೆಯಲ್ಲಿನ ಕೆಲವು ಅಂಶಗಳನ್ನು ನೋಡೋಣ. ಸಂಪಿಗೆ ಬಣ್ಣದಲ್ಲಿ ಬೆಳಗುವ ಈಕೆಯ ಅರಿಸಿನ ಮೂರ್ತಿಯನ್ನು  ಗೌರಿಯಾಗಿ ಪೂಜಿಸುತ್ತಾರೆ. ಅರಿಸಿನದ  ಹೊಂಬಣ್ಣವು ಜ್ಞಾನಿಯ ಅಂತರಂಗದಲ್ಲಿ ಆಗುವ ಆಕೆಯ ದರ್ಶನವನ್ನು ಜ್ಞಾಪಿಸುತ್ತದೆ. ಅರಿಸಿನದ  ಸ್ಪರ್ಶವೂ ಮಂಗಲಕರವಾಗಿದೆ. ಗೌರಿಯ ಮುಂದಿಡುವ ತ್ರಿಕೋಣಾಕಾರದ ಕಂಚುಕಗಳು ಮಾಯೆಯ ಪ್ರತೀಕವಾಗಿವೆ. ಮಾಯೆಯ ತೆರೆಯನ್ನು ಆಶ್ರಯಿಸದೇ ಶಿವನು ಸೃಷ್ಟಿಯ ಕಡೆಗೆ ಇಳಿಯುವಂತಿಲ್ಲ. ಐದೆಳೆ, ಹದಿನಾರು ಗ್ರಂಥಿ(ಗಂಟು)ಗಳಿಂದ ಕೂಡಿದ,   ಶಿವಶಕ್ತಿಯರ ತತ್ತ್ವವನ್ನು ಹೇಳುವ ಕಂಕಣವನ್ನು ವ್ರತವನ್ನು ಆಚರಿಸುವವರು ಪೂಜಿಸಿ ಧರಿಸುತ್ತಾರೆ. ಪಂಚಭೂತಗಳಿಂದ ಕೂಡಿದ ಶರೀರವಿದು;  ಹದಿನಾರು ಕಲೆಗಳು-ಅಂಶಗಳು-ಹೆಜ್ಜೆಗಳು ಇಲ್ಲುಂಟು. ಒಂದು ಗಂಟು   ಶಾಶ್ವತವಾದ ಶಿವನ ಸ್ಥಾನವನ್ನು ಸೂಚಿಸಿದರೆ, ವೃದ್ಧಿ ಕ್ಷಯಗಳನ್ನು ಹೊಂದುವ ಚಂದ್ರನ ಹದಿನೈದು ಕಲೆಗಳನ್ನು ಉಳಿದ ಹದಿನೈದು ಗಂಟುಗಳು ಸೂಚಿಸುತ್ತವೆ. ಈ ಹದಿನಾರೂ (ಶಿವ-ಶಕ್ತಿಯರು)  ಸೇರಿದರೆ ಲೋಕವ್ಯವಹಾರ.   ಅಂತೆಯೇ ಮಂಗಳಗೌರಿಗೆ ಹದಿನಾರು ಉಪಚಾರಗಳಿಂದ ಪೂಜೆ. ಅಕ್ಕಿಹಿಟ್ಟು, ಬೆಲ್ಲ, ತುಪ್ಪಗಳಿಂದ ಕಲಸಿದ ತಂಬಿಟ್ಟು, ಶಕ್ತಿಯ ಕೊಡುಗೆಯಾದ ನಮ್ಮ ಮಂಗಲಮಯವಾದ ಶರೀರ. ಇದನ್ನು ಕೆಲವರು ಕೈಲಾಸ ಬೆಟ್ಟದ ಆಕಾರದಲ್ಲಿ ಮಾಡುವುದೂ ಉಂಟು. ಬೆನ್ನುಹುರಿಯೆಂಬ ಬೆಟ್ಟದ ತುದಿಯಲ್ಲಿ ಬೆಳಗುವ ಶಿವದೀಪವನ್ನು ಸೂಚಿಸುವ ಈ ತಂಬಿಟ್ಟು ದೀಪವನ್ನು ಬೆಳಗಿಸಿ ಈ ವ್ರತಕ್ಕೆ ಸಾರ್ಥಕ್ಯ ಕಲ್ಪಿಸುತ್ತಾರೆ. ಈ ದೀಪದಿಂದಲೇ ತೆಗೆದ ಕಾಡಿಗೆಯನ್ನು ಕಣ್ಣಿಗೆ ಹಚ್ಚುವುದು ವಾಡಿಕೆ. 


ಇಂತಹ ಮಂಗಳಗೌರಿಯ ವ್ರತವು ನಮ್ಮೆಲ್ಲರಿಗೂ ಮಂಗಲಮಯವಾದ ಬಾಳಾಟವನ್ನು ಕರುಣಿಸಲಿ. ನಮ್ಮಗಳ ಜೀವನದಲ್ಲಿ ಶಿವಶಕ್ತಿಯರ ಅನುಗ್ರಹವನ್ನು ತುಂಬಲಿ. ಮನೆಯಲ್ಲಿ ಸಮೃದ್ಧಿಯನ್ನೂ, ಸದ್ಬುದ್ಧಿಯುಳ್ಳ ಸತ್ಪ್ರಜೆಗಳನ್ನೂ ದೊರಕಿಸಿ ಕೊಡಲಿ. ಗೌರಿಯ ಕರುಣೆಯಿಂದ ಗೃಹದಲ್ಲಿ ಸೌಂದರ್ಯದ ಲಹರಿಯೂ, ಹೃದಯದಲ್ಲಿ ಶಿವನ ಆನಂದಲಹರಿಯೂ ಹರಿದು ಬರಲಿ.  


ಸೂಚನೆ: 16/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.