Sunday, August 9, 2020

ಆರ್ಯಸಂಸ್ಕೃತಿ ದರ್ಶನ - 5 (Arya Samskruti Darshana - 5)

ಗ್ರಹಣ - ಅದರ ಆಚರಣೆಯ ಮೂಲ
" ಅಜ್ಞಾನವೊ? ಅರಿವೊ?" ಒಂದು ವಿವೇಚನೆ 

ಲೇಖಕರು : ವಿದ್ವಾನ್ ಛಾಯಾಪತಿ
 


"ಚಂದ್ರಗ್ರಹಣದಲ್ಲಿ ಚಂದ್ರನು ಭೂಮಿಯ ನೆರಳಿನೊಳಗೆ ಪ್ರವೇಶಿಸುತ್ತಾನೆ ಮತ್ತು ಸೂರ್ಯ ಗ್ರಹಣದಲ್ಲಿ ಚಂದ್ರನು ಸೂರ್ಯನನ್ನು ಪ್ರವೇಶಿಸುತ್ತಾನೆ.(ಅಂದರೆ ಸೂರ್ಯ ಮತ್ತು ಭೂಮಿಗಳ ನಡುವೆ ಬರುತ್ತಾನೆ). ದಿವ್ಯದೃಷ್ಟಿಯುಳ್ಳ  ಪೂರ್ವಾಚಾರ್ಯರಿಂದ ಗ್ರಹಣಗಳಿಗೆ ಈ ಕಾರಣವು ಕಂಡುಹಿಡಿಯಲ್ಪಟ್ಟಿತು."   ಕ್ರಿ.ಶ.ಆರನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ವರಾಹಮಿಹಿರನ ಮಾತಿದು; ಈ ಮಾತೇ ಆತನಿಂದಲೂ, ಬಹಳ ಹಿಂದಿನ ಕಾಲದಿಂದಲೂ ಗ್ರಹಣದ ಬಗ್ಗೆ ಸರಿಯಾದ ಅರಿವು ಭಾರತೀಯ ಖಗೋಲಜ್ಞರಿಗಿತ್ತು ಎಂಬ ಅಂಶವನ್ನು ಎತ್ತಿ ತೋರಿಸುತ್ತದೆ. ಅಂತೆಯೇ ಗ್ರಹಣವನ್ನು ಪೂರ್ವಭಾವಿಯಾಗಿಯೇ ಅಳೆಯಬಲ್ಲ ಗಣಿತ ಪ್ರಜ್ಞೆಯೂ ಬೆಳೆದಿತ್ತು ಎಂಬ ಅಂಶವೂ ನಮಗೆ ತಿಳಿದು ಬಂದಿದೆ.
(ಬೃಹತ್ಸಂಹಿತಾ ೬,೮, ಮತ್ತು೧೩)

ಇದರ ಜೊತೆಗೆ, ಗ್ರಹಣಕಾಲಕ್ಕಿಂತ ಎಂಟು ಆಥವಾ ಹನ್ನೆರಡು ಘಂಟೆಗಳಷ್ಟು ಕಾಲದ ಉಪವಾಸ, ಗ್ರಹಣಕಾಲ ಮತ್ತು ನಂತರದ ಸ್ನಾನ, ಗರ್ಭಿಣಿಯರನ್ನು ಹೊರಗೆ ಬರದಂತೆ ತಡೆದು ಕಬ್ಬಿಣ ಕೊಟ್ಟು ಕೂರಿಸುವುದು, ಬಟ್ಟೆ, ಅಡಿಗೆಗೆ ಉಪಯೋಗಿಸುವ ವಸ್ತುಗಳು, ಹಾಲು ಮೊಸರು ಮೊದಲುಗೊಂಡು ಎಲ್ಲ ವಸ್ತುಗಳಿಗೂ ದರ್ಭೆ ಹಾಕಿಡುವುದು, ದನಗಳ ಕೊಂಬಿಗೆ ಕಬ್ಬಿಣದ ಬಳೆ ಹಾಕುವುದು, ಗ್ರಹಣಕಾಲವನ್ನು ಪುಣ್ಯಕಾಲವೆಂದು ಭಾವಿಸಿ, ಜಪ, ದೇವತಾಧ್ಯಾನ, ತರ್ಪಣ, ದಾನಾದಿಗಳನ್ಮು ಮಾಡುವುದು ಮುಂತಾದ ಆಚರಣೆಗಳೂ ಬಹಳ ಹಿಂದಿನಿಂದಲೇ ನಮ್ಮ ದೇಶದಲ್ಲಿ ಬಳಕೆಗೆ ಬಂದಿವೆ. ಇಂದೂ ಗ್ರಹಣಕಾಲದಲ್ಲಿ ಪುಣ್ಯ ನದೀಸ್ನಾನಗಳಿಗಾಗಿ ವಿಶೇಷ ರೈಲು, ಬಸ್ಸುಗಳ ಸಂಚಾರ ವ್ಯವಸ್ಥೆ ಯಿರುವುದನ್ನೂ ಅದಕ್ಕಾಗಿ ಹೋಗುವ ಅಸಂಖ್ಯ ಯಾತ್ರಿಕರನ್ನೂ ನಾವುನೋಡುತ್ತೇವೆ.

ಇತರ ಯಾವ ದೇಶದಲ್ಲಿಯೂ, ಈ ಸಂದರ್ಭದಲ್ಲಿ ಕಂಡು ಬರದ ಈ ಆಚರಣೆಗಳು ಅಸಂಖ್ಯ ಜನಗಳ ಮನಸ್ಸಿನಲ್ಲಿ ತುಮುಲವೆಬ್ಬಿಸಿ ಬಗೆ ಬಗೆಯ ಪ್ರತಿಕ್ರಿಯೆಯನ್ನು ಮೂಡಿಸಿವೆ. ಶಾಸ್ತ್ರ, ಪರಂಪರೆಗಳಲ್ಲಿ ತಮಗಿರುವ ನಂಬಿಕೆಯಿಂದ ಯಾವ ವಿಚಾರದ ಗೋಜಿಗೂ ಹೋಗದೇ ಈ ಆಚರಣೆಗಳನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವವರೂ ಸಾಕಷ್ಟು ಮಂದಿ ಇದ್ದಾರೆ. ಶಾಸ್ತ್ರಗಳಲ್ಲಿ ಪ್ರೀತಿ  ಇದ್ದರೂ ವಿಚಾರದತ್ತ ಒಲವುಳ್ಳ ಅಂತೆಯೇ ವಿಚಾರಸಿದ್ಧವೂ, ವೈಜ್ಞಾನಿಕವೂ ಆದ ನಡವಳಿಕೆಗಳನ್ನು ಮಾತ್ರವೇ ನಂಬುವ ಪ್ರವೃತ್ತಿಯುಳ್ಳ ಜನಗಳ ಸಂಖ್ಯೆಯೂ ಗಣನೀಯವಾಗಿಯೇ ಇದೆ. ಅಂತಹ ಜನಗಳು ಈ ಆಚರಣೆಗಳು ಯಾವ ಹಿನ್ನಲೆಯ ಮೇಲೆ ಬಂದಿವೆ? ಇದರ ಮೂಲ - ಅರಿವೋ? ಅಜ್ಞಾನವೋ? ಅರಿವಿನಿಂದೆಲೇ ಈ ನಡವಳಿಕೆಗಳು ಬಳಕೆಗೆ ಬಂದಿವೆ ಎನ್ನೋಣವೆಂದರೆ ಇತರ ಯಾವ ದೇಶಗಳಲ್ಲೂ ಇವು ಬಳಕೆಯಲ್ಲಿಲ್ಲ. ಮೇಲಾಗಿ ಗ್ರಹಾಂತರಯಾನದಷ್ಟು   ಮುಂದುವರೆದಿರುವ ಹೊಸನಕ್ಷತ್ರ ಪುಂಜಗಳ ಅರಿವಿನಿಂದ ವಿಶ್ವದ ಆಯಾಮವನ್ನು ದಿನ ದಿನವೂ ವಿಸ್ತರಿಸುತ್ತಿರುವ ವಿಜ್ಞಾನವೂ ಈ ಆಚರಣೆಗಳಿಗೆ ಯಾವ ಸಮರ್ಥನೆಯನ್ನೂ ಇದುವರೆಗೆ ನೀಡಿರುವುದುಕಂಡು ಬಂದಿಲ್ಲ. ಹೀಗಿರುವಾಗ ಇಂತಹ ಆಚರಣೆಗಳೂ ಅಜ್ಞಾನದಿಂದಲ್ಲದೇ ಅರಿವಿನಿಂದ ಬೆಳೆದಿವೆ ಎನ್ನುವುದು ಹೇಗೆ ಎಂಬ ಪ್ರಶ್ನೆಯು ಇಲ್ಲಿ ಏಳುತ್ತದೆ.

ಪರಂಪರಾಗತವಾದ ಅಂಧ ವಿಶ್ವಾಸವನ್ನು ಬಿಡಲು ಹೋರಾಡುವಂತಹ ಮೂಢರಿಂದಲೇ ನಮ್ಮ ದೇಶಕ್ಕೆ ಇಂತಹ ಅಧೋಗತಿಯೆಂಬ ಹರಿತ ನಾಲಿಗೆಯ ಆಕ್ರೋಶದ ಕೂಗು ಬೇರೆ. ಇದುವರೆಗೆ ತಮ್ಮ ಅರಿವಿಗೆ ಬಂದ ಯಾವ ವಿಚಾರಕ್ಕೂ ಹೊಂದಿಕೆಯಾಗದ ಈ ನಡವಳಿಕೆಗಳನ್ನು ನೋಡಿ ಇವುಗಳನ್ನು ಅರ್ಥವಿಹೀನ ಆಚರಣೆಗಳೆಂದು  ತೆಗಳುವವರ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಕಾಶಿಯಲ್ಲಿ ಗಂಗಾತೀರದಲ್ಲಿ ಗ್ರಹಣವೊಂದರ ಸಂದರ್ಭದಲ್ಲಿ ಉಪವಾಸವಿದ್ದು ಸ್ನಾನಮಾಡುತ್ತಿದ್ದ ಜನಗಳನ್ನೂ, ದಡದಲ್ಲಿ ನೆಮ್ಮದಿಯಾಗಿ ಹುಲ್ಲು ಮೇಯುತ್ತಿ ದ್ದ  ಪಶುವೊಂದನ್ನು ನೋಡಿದ, ವಿದೇಶೀಯ ಆಂಗ್ಲ ಲೇಖಕನೊಬ್ಬ, ಈ ಜನಗಳಿಗೆ ಪಶುವಿನಷ್ಟು ಬುದ್ಧಿ ಇಲ್ಲವಲ್ಲಾ ಎಂದು  ಪರಿತಪಿಸಿ ಅದನ್ನು ತನ್ನ ಲೇಖನದಲ್ಲೂ  ಎತ್ತಿ ಹೇಳಿದ್ದಾನೆ.

ಗ್ರಹಣ ಒಂದು ನೈಸರ್ಗಿಕ ಘಟನೆ. ಅದರ ಪರಿಣಾಮ ಪ್ರಭಾವಗಳು ಸ್ಥೂಲವಾಗಿ ವಿಶ್ವದ ಮೇಲೆ ಇರುವುದನ್ನು ಅಲ್ಲಗಳೆಯಲಾಗದಿದ್ದರೂ ಈ ಆಚರಣೆಗಳು ಸಮರ್ಥನೀಯವಲ್ಲ. ಗ್ರಹ, ಅವುಗಳ ಪ್ರಭಾವವನ್ನು ನಿಷ್ಕೃಷ್ಟ ವಾಗಿ ಅಳೆಯಬಲ್ಲಷ್ಟು ವಿಜ್ಞಾನ ವ್ಯಾಪಕವಾಗಿ ಬೆಳೆದಿರುವಾಗ ಈ ಅಳತೆಗೆ ನಿಲುಕದ ಆಚರಣೆಗಳನ್ನು ಮೌಢ್ಯವೆಂದು ಒಪ್ಪಿಕೊಂಡು ಕೈ ಬಿಡುವುದೇ ಜಾಣ್ಮೆ ಎಂಬ ಅಭಿಪ್ರಾಯ ವ್ಯಾಪಕವಾಗಿ ಹರಡಿದೆ.

ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದ ಬೆಳೆದಿರುವ ಅಳತೆಗೋಲುಗಳು ಬಹು ವ್ಯಾಪಕವಾಗಿವೆ ಎಂಬುದು ನಿಜವಾದರೂ, ಎಲ್ಲವನ್ನೂ ಅಳೆದಾಯಿತು. ಇನ್ನು ಅಳೆಯಬೇಕಾದುದು ಏನೂ ಇಲ್ಲ. ಎನ್ನುವ ಹಂತವನ್ನು ವಿಜ್ಞಾನ ಮುಟ್ಟಿಲ್ಲಎಂಬುದೂ ಅಷ್ಟೇ ನಿಜ. ದಿನ ದಿನವೂ ಹೊರಬರುತ್ತಿರುವ ನಿಸರ್ಗರಹಸ್ಯಗಳೇ ಇನ್ನೂ ಅಳೆಯಬೇಕಾದುದು ಬಹಳವಿದೆ ಎಂದು ಸಾರಿ ಹೇಳುತ್ತಿವೆ.ಆದ್ದ ರಿಂದ  ಮತ್ತಾವುದಾದರೂ ಅಳತೆಗೋಲು ಈ ನಿಸರ್ಗದ ಘಟನೆಯನ್ನು ನಿಖರವಾಗಿ ಅಳೆಯಲು ಇದ್ದು ಆ ಅಳತೆಯ ಅರಿವಿನಿಂದ ಮೂಡಿಬಂದಿರಬಹುದಾದ ನಡವಳಿಕೆಗಳೂ ಇದ್ದರೆ ಅದನ್ನು ತಿರಸ್ಕರಿಸುವುದರಲ್ಲಿ ವಿವೇಕವೇನೂ ಇಲ್ಲವೆಂಬುದು ನಮ್ಮ ನಂಬಿಕೆ.

ಇದುವರೆಗಿನ ವಿಜ್ಞಾನಕ್ಕೂ ಸಿಕ್ಕದ ಆ ಅಳತೆಗೋಲಾವುದು? ಅದರಿಂದ ಈ ಗ್ರಹಣವನ್ನೂ ಅದರ ಪರಿಣಾಮವನ್ನೂ ಅಳೆಯುವುದು ಹೇಗೆ ಸಾಧ್ಯ? ಹಾಗೆ ಅರಿತು ತಂದ ಆಚರಣೆಗಳಾದರೂ ಯಾವುವು? ಎಂಬುದನ್ನು ತಾನು ಅಳೆದು ಅದರಿಂದ ಮೂಡಿದ ಅರಿವಿನ ಆಧಾರದ ಮೇಲೆ ಈ ಸಂದರ್ಭದಲ್ಲಿನ ಆಚರಣೆಗಳನ್ನು ಪರಿಶೀಲಿಸಿ ಅವುಗಳ ನಿಜವನ್ನು ಬಯಲಿಗೆಳೆದ ಶ್ರೀರಂಗ ಮಹಾಗುರುವಿನ ಪ್ರಯೋಗ ಪುರಸ್ಸರವಾದ ಅನ್ವೇಷಣೆಗಳ.ಸಾರವನ್ನು ಸಂಕ್ಷೇಪವಾಗಿ ಇಲ್ಲಿ ನಿರೂಪಿಸ ಬಯಸುತ್ತೇನೆ.

ಇದುವರೆಗೆ ಬೆಳೆದಿರುವ ಶಾಸ್ತ್ರ, ಜನಗಳಲ್ಲಿ ಸಾಂಪ್ರದಾಯಿಕವಾಗಿ ಉಳಿದು ಬಂದಿರುವ ಆಚರಣೆಗಳು, ವಿಜ್ಞಾನಿಗಳ ಅನ್ವೇಷಣೆ, ಅದರ ಫಲಿತಾಂಶಗಳು, ಈ ಆಚರಣೆಗಳನ್ನು ಒಪ್ಪುವ ಅಥವಾ ಒಪ್ಪದ ಜನಗಳ ಹೇಳಿಕೆಗಳು, ಸ್ವದೇಶೀಯರ ಮತ್ತು ವಿದೇಶೀಯರ ದೃಷ್ಟಿಕೋನಗಳು, ಇದರ ಬಗ್ಗೆ ಇರುವ ಟೀಕಾಟೋಕೆಗಳು ಈ ಎಲ್ಲವನ್ನೂ ಮುಂದಿಟ್ಟು ತನ್ನ ಪರಿಶೀಲನೆಗಳನ್ನು ಅವನಿಡುತ್ತಿದ್ದ ವಿಧಾನ ಮನೋಜ್ಞ ವಾದುದು. ತನ್ನ ಪರಿಶೀಲನೆಗಳನ್ನು ಯಾವ ಭ್ರಮೆಗೂ ಒಳಗಾಗದೆ ಪರೀಕ್ಷಿಸಿ ಸ್ವೀಕರಿಸಬೇಕೆಂಬುದೇ ಅವನ ನಿಲುವು. "ಅಹುದಾದರೆ ಅಹುದೆನ್ನಿ, ಇಲ್ಲವಾದರೆ ಇಲ್ಲವೆನ್ನಿ" ಎನ್ನುವುದೇ ಅವನ ಸೂತ್ರ. "ವಿಷಯ, ಪ್ರಯೋಗ, ಅನುಭವ ಇವು ನನ್ನ ಶಾಸ್ತ್ರ" ಎಂಬ ಧೋರಣೆ ಅವನದು. ವಿಷಯನವೇನಿದೆ ? ಅದು ಪ್ರಯೋಗಕ್ಕೆ ಬರುತ್ತದೆಯೇ? ಅನುಭವಕ್ಕೆ ನಿಲುಕುತ್ತದೆಯೇ?  ಹಾಗಿದ್ದರೆ ಒಪ್ಪಿ. ಇಲ್ಲದಿದ್ದರೆ ಬೇಡ ಎಂಬ ನಿರ್ಭೀತ ಧೋರಣೆಯೊಡನೆ ಅವನು ಇಡುತ್ತಿದ್ದ  ಕ್ರಮ ಸತ್ಯ ಒಪ್ಪುವಂತಹದು. ಗ್ರಹಣದ ಬಗ್ಗೆ ಶಾಸ್ತ್ರ, ಆಚರಣೆ, ಜನಗಳ ಹೇಳಿಕೆ, ವಿಜ್ಞಾನದ ಹೇಳಿಕೆ, ಇವುಗಳನ್ನೆಲ್ಲಾ ತಿಳಿಸಿದ ಬಳಿಕ "ಗ್ರಹಣದ. ಬಗ್ಗೆ ಇತರರು ಹೇಳುವುದನ್ನು, ಕೇಳಿಯಾಯಿತು.ಗ್ರಹಣವೇ ತನ್ನ  ಬಗ್ಗೆ ಏನು ಹೇಳುತ್ತದೆ ಕೇಳಿ" ಎಂಬ ಒಗಟೆಯ ಮಾತಿನಿಂದ ಗ್ರಹಣ ಕಾಲದಲ್ಲಿಯೇ ಪ್ರಯೋಗಗಳನ್ನಿಡುತ್ತಿದ್ದ ಅವನ ಧೋರಣೆ ವಿಸ್ಮಯಗೊಳಿಸುತ್ತಿತ್ತು.

ನಾಡೀವಿಜ್ಞಾನವೇ ಅವನು ಗ್ರಹಣವನ್ನು ಅಳೆಯಲು ಬಳಸಿಕೊಳ್ಳುತ್ತಿದ್ದ ಅಳತೆಗೋಲು. ಪ್ರತಿ ಜೀವಿಯ ಕೈಯ [ಪುರುಷನಾದರೆ ಬಲಗೈ ,ಸ್ತ್ರೀಯಾದರೆ ಎಡಗೈ) ಮಣಿಕಟ್ಟಿನ ಸಮೀಪದಲ್ಲಿ ಈ ನಾಡೀಗತಿಗಳು ಸುಮಾರು ಒಂದು ಅಂಗುಲದಷ್ಟು ಪ್ರದೇಶದಲ್ಲಿ ದೊರಕುತ್ತವೆ. ಕೇವಲ ಬಡಿತಗಳು ಯಾರು ಮುಟ್ಟಿದರೂ ತಿಳಿಯುವುದಾದರೂ ಆ ನಡೆಯಲ್ಲಿ ತಾರತಮ್ಯವಿದ್ದು, ವಾತ, ಪಿತ್ತ, ಶ್ಲೇಷ್ಮ ಎಂಬ ಮೂರುಬಗೆಯ ನಡೆಯನ್ನು ಅವುಗಳ ವ್ಯತ್ಯಾಸವನ್ನೂ ಗುರುತಿಸಬಹುದು. ನಾಡೀಪರೀಕ್ಷೆಯು ರೋಗವನ್ನರಿಯುವುದರಲ್ಲಿ ಒಂದು  ವಿಧಾನವೆಂದು ಆಯುರ್ವೇದವು ಹೇಳುತ್ತದೆ. ಈ ನಾಡೀಗತಿಗಳ ಸೂಕ್ಷ್ಮವಾದ ನಡೆಗಳು ಈ ಜೀವಿತದ ಸಾರಸರ್ವಸ್ವವನ್ನು, ಭೌತಿಕ, ದೈವಿಕ, ಆಧ್ಯಾತ್ಮಿಕ  ಕ್ಷೇತ್ರಗಳ ಅಳತೆಗಳನ್ನು ನೀಡಬಲ್ಲವು ಎಂಬುದನ್ನು ಶ್ರೀರಂಗಮಹಾಗುರುವಿನ ಮಹಾಮೇಧೆ ಗುರುತಿಸಿತು. ಅಂತೆಯೇ ಯೋಗಬಲದ ಜೊತೆಗೆ ಈ ಅಳತೆಗೋಲಿನ ಆಧಾರದಿಂದ ಭಾರತೀಯ ಮಹರ್ಷಿಗಳು ತಪಸ್ಸು ಮತ್ತು ಅನ್ವೇಷಣೆಗಳಿಂದ ತಂದ ಸತ್ಯಗಳೆಲ್ಲವನ್ನೂ ಮನವರಿಕೆ ಮಾಡಿಕೊಂಡು ನಿಜವನ್ನು ಬಯಲುಪಡಿಸುವ ಸಾಮರ್ಥ್ಯವು ಅವನಲ್ಲಿತ್ತು. ಈ ವಿಷಯಗಳನ್ನು ಶ್ರೀಗುರುವಾಣಿಯ ಶೀರ್ಷಿಕೆಯಲ್ಲಿ ಪ್ರಕಟವಾಗುವ ಅವನ ಮಾತುಗಳಲ್ಲಿಯೇ ನಾವು ನೋಡ ಬಹುದು.

ಪ್ರಕೃತ ಗ್ರಹಣಕ್ಕೆ ಸಂಬಂಧಪಟ್ಟ ವಿಷಯವನ್ನು ಈ ನಾಡೀ ವಿಜ್ಞಾನದಿಂದ ಅಳೆಯಬಹುದೆಂಬುದನ್ನು ಅವನು ಮನಗಂಡಿದ್ದ ನು. ಗ್ರಹಣ ಮತ್ತು ಅದರ ಪರಿಣಾಮ, ಅದನ್ನು ಅಳೆದು ತಂದ ನಡವಳಿಕೆ, ಇವುಗಳನ್ನಳೆದು ಈ ವ್ಯವಹಾರಗಳ ಸಾರಾಸಾರತೆಯನ್ನು ಅವನು ಮನಗಂಡಿದ್ದು ದರಿಂದಲೇ ಎಂತಹ ಸದೃಢವಾದ ಸವಾಲನ್ನೆದುರಿಸಲೂ ಅವನೊಪ್ಪುತ್ತಿದ್ದನು. ಗ್ರಹಣವಾಗುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆಯ ಕೋಣೆಯಲ್ಲಿ ಕೂಡಿಸಿದರೂ, ಗ್ರಹಣ  ಹಿಡಿಯುವ ದಿಕ್ಕು, ಅದರ ಪ್ರಮಾಣ, ಅದು ವ್ಯಾಪಿಸುವ ಕ್ರಮ, ಅದು ಬಿಡುವ ಕ್ರಮ, ಬಿಟ್ಟಕಾಲ, ಇಷ್ಟನ್ನೂ ಇತರ ಯಾವ ಸಹಾಯವೂ ಇಲ್ಲದೇ ತಿಳಿಸಬಹುದೆಂದು ಹೇಳುತ್ತಿದ್ದನು. ಅಷ್ಟೇ ಅಲ್ಲದೆ ಸ್ವತಃ ತಾನೇ ಈ ಪರೀಕ್ಷೆಗೆ ಒಳಪಟ್ಟು ಕರಾರುವಾಕ್ಕಾಗಿ ಇತರರಿಗೆ ವಿವರ ನೀಡಿದ ಸನ್ನಿವೇಶವೂ ಒಂದುಂಟು.                    

ಗ್ರಹಣಕಾಲದಲ್ಲಿಯೇ ಅವನು ಇದಕ್ಕೆ ಸಂಬಂಧಪಟ್ಟ ಪ್ರಯೋಗಗಳನ್ನಿಟ್ಟು ಕೊಳ್ಳುತ್ತಿದ್ದನು. ತನ್ನನ್ನು ಸಮೀಪಿಸಿದ ಅನೇಕ ಮಂದಿಗೆ ಅವನು ನಾಡೀ ಪರಿಚಯವನ್ನು ಮಾಡಿಸಿ ಕೊಟ್ಟದ್ದೂ ಉಂಟು.  ಅಂತಹವರನ್ನು ಇಟ್ಟುಕೊಂಡು ಅವನು ಪ್ರಯೋಗಗಳನ್ನು ನಡೆಸುತ್ತಿದ್ದನು. ಗ್ರಹಣ ಕಾಲಕ್ಕೆ ಮೊದಲಿನ ನಾಡೀಗತಿಯನ್ನು ಪರೀಕ್ಷಿಸಿ ಗುರುತು ಹಾಕುವಂತೆ ಸೂಚನೆಗಳನ್ನು ನೀಡುತ್ತಿದ್ದನು. ಇದಾದ ಬಳಿಕ ಗ್ರಹಣಕಾಲದಲ್ಲಿ ಕ್ರಮವಾಗಿ ಯಾವ ವ್ಯತ್ಯಾಸಗಳುಂಟಾಗುತ್ತವೆ ಎಂಬುದನ್ನು ಗಮನಿಸಿ ಪ್ರತ್ಯೇಕವಾಗಿ ಗುರುತು ಹಾಕುವಂತೆ ಅವನು ತಿಳಿಸುತ್ತಿದ್ದನು. ನೀರು, ದರ್ಭೆ, ಕಬ್ಬಿಣ ಮೊದಲಾದ ಗ್ರಹಣಸಂದರ್ಭದಲ್ಲಿ ಆಚರಣೆಯಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಒಂದೊಂದಾಗಿ ಪರೀಕ್ಷಿಸಿ, ಅದರ ಫಲಿತಾಂಶವನ್ನೂ  ಗುರುತು ಹಾಕುವಂತೆ ತಿಳಿಸುತ್ತಿದ್ದ ನು. ಆದರೆ ಈ ಪರಿಶೀಲನೆಯ ಮುನ್ನ ಪರೀಕ್ಷಾ ವಿಧಾನವೊಂದನ್ನು ಬಿಟ್ಟು ಇತರ ಯಾವ ವಿವರಣವನ್ನೂ ಅವನು ನೀಡುತ್ತಿರಲಿಲ್ಲ. ಕೊನೆಯಲ್ಲಿ  ಪರಿಶೀಲನೆಗಳೆಲ್ಲವನ್ನೂ ಅವನು ಓದಿಸುತ್ತಿದ್ದನು. ಬಹುಪಾಲು ಎಲ್ಲ ಪರಿಶೀಲನೆಗಳೂ ಸಮಾನ ಫಲಿತಾಂಶಗಳನ್ನು ನೀಡುತ್ತಿದ್ದವು. ಈ ತಿಳುವಳಿಕೆಯನ್ನು  ನೀವು ಗ್ರಹಣದಿಂದಲೇ ಪಡೆದಿರಿ ತಾನೇ? ಇದು ನನ್ನ ಹೇಳಿಕೆಯಲ್ಲವಲ್ಲ, ಗ್ರಹಣದ ಹೇಳಿಕೆ ತಾನೆ? ಎಂದು ಆ ಫಲಿತಾಂಶವನ್ನು ಮಧುರ ಹಾಸ್ಯದೊಡನೆ  ಸಮ್ಮತಿಸಿ ಒಗಟನ್ನು ಬಿಚ್ಚುತ್ತಿ ದ್ದನು.

ಪ್ರಯೋಗ ಪರಿಶೀಲನೆಯಿಂದ ಬೆಳಕಿಗೆ ಬಂದ ಅಂಶಗಳನ್ನು ಇಲ್ಲಿ ಸ್ಥೂಲವಾಗಿ ಉಲ್ಲೇಖಿಸಬಹುದು. ಗ್ರಹಣಕಾಲಕ್ಕೆ ಮೊದಲು ಸಹಜವಾಗಿದ್ದ ನಾಡೀಗತಿಯು ಗ್ರಹಣ ಸಮೀಪಿಸಿದಂತೆ ನಿಧಾನವಾಗುತ್ತಾ ಬರುತ್ತದೆ. ಗ್ರಹಣ ಆರಂಭವಾದ ಮೇಲೆ ನಡೆಗಳು ಕಲಸಿಕೊಳ್ಳಲು ಆರಂಭವಾಗುತ್ತವೆ. ಸ್ಫುಟವಾಗಿ ತಿಳಿಯುತ್ತಿದ್ದ ವಾತ, ಪಿತ್ತ,, ಶ್ಲೇಷ್ಮಗಳ ವ್ಯತ್ಯಾಸವು ಅರಿವಿಗೆ ಬಾರದೆ ಕಲಸಿಕೊಂಡಂತೆ ತೋರುತ್ತವೆ. ನಂತರ ಸೂಕ್ಷ್ಮವಾಗಿ ಗಮನಿಸಿದರೆ ಪಿತ್ತನಾಡಿಯ ನಡೆಯಲ್ಲಿ ವಿಕಾರವೇರ್ಪಟ್ಟಿ ರುವುದು ಕಂಡು ಬರುತ್ತದೆ. ಗ್ರಹಣವಲ್ಲದೇ ಇತರ ಸಂದರ್ಭಗಳಲ್ಲಿ ಆ ನಾಡೀಗತಿಯುಂಟಾದರೆ ಅದು ಅಜೀರ್ಣ, ಅಸ್ಥಿ, ಜ್ವರಗಳ ಲಕ್ಷಣವೆಂದು ಹೇಳಬೇಕಾಗುತ್ತದೆ. ಜೀರ್ಣಾಂಗಗಳಲ್ಲಿ ದೌರ್ಬಲ್ಯ ಸೂಚಕವಾದ ಅಂತಹ ನಾಡೀಗತಿ ಉಂಟಾಗಿರುವುದರಿಂದಲೇ ಆ ಸಂದರ್ಭದಲ್ಲಿ ಆಹಾರ ಶೇಷ ಉಳಿಯದಂತೆ ಇಷ್ಟು ಕಾಲ ಉಪವಾಸವಿರಿ ಎಂಬ ನಡವಳಿಕೆ ಅರ್ಥಪೂರ್ಣವಾಗಿದೆ ಮತ್ತು ಆ ಸಂದರ್ಭದಲ್ಲಿಯೂ ಆಹಾರ ಬೇಡವೆಂಬ ನಿಷೇಧದ ಅರ್ಥವೂ ಇದೇ. ಪ್ರಾಣಿ ಸಂಗ್ರಹಾಲಯವೊಂದರಲ್ಲಿ ಹಲವು ಪ್ರಾಣಿಗಳು ಈ ಗ್ರಹಣ ಸಂದರ್ಭದಲ್ಲಿ ಆಹಾರವನ್ನೇ ಸ್ವೀಕರಿಸಲಿಲ್ಲವೆಂಬ ವರದಿಯನ್ನು ಪತ್ರಿಕೆಯಲ್ಲಿ ಓದಿ ವಿಸ್ಮಯ ವ್ಯಕ್ತಪಡಿಸಿದವರೂ ಉಂಟು. ಇದು ಆ ಸಂದರ್ಭಕ್ಕೆ ಸಹಜವಾದ ವರ್ತನೆಯಾಗಿಯೇ ಇದೆ. ಮತ್ತು ಈ ನಡೆಯು ಕುಷ್ಠರೋಗದ ನಡೆಯನ್ನು ಹೋಲುವುದರಿಂದ ಈ ದೋಷ ನಿಲ್ಲದಂತೆ ಸ್ನಾನ ಮಾಡಬೇಕು ಎಂಬ ಎಚ್ಚರಿಕೆಗಾಗಿ, ಸ್ನಾನ ಮಾಡದಿದ್ದರೆ "ಸಪ್ತ ಜನ್ಮಸು ಕುಷ್ಠೀ ಸ್ಯಾತ್‌" ಎಂಬ ಎಚ್ಚರಿಕೆಯ ಮಾತೇ ಹೊರತು ಕೇವಲ ಬೆದರುಬೊಂಬೆಯಾಗಿ ಅಲ್ಲ.

ವಿದ್ಯುದ್ವಾಹಕವಾದ ಲೋಹಗಳಿರುವಂತೆಯೇ ವಿದ್ಯುನ್ನಿರೋಧಕಗಳಾದ ಮರ, ರಬ್ಬರ್‌ ಮೊದಲಾದವುಗಳೂ ಇವೆ. ಇವುಗಳು ತಾವೂ ಆಘಾತಕ್ಕೆ ಸಿಕ್ಕದೆ ಇತರರನ್ನೂ ಆಘಾತದಿಂದ ತಪ್ಪಿಸುತ್ತವೆ. ಅಂತೆಯೇ ಈ ಗ್ರಹಣ ಕಾಲದಲ್ಲಿಯೂ ಗ್ರಹಣದ ಪರಿಣಾಮಕ್ಕೆ ತಾವೂ ತುತ್ತಾಗದೇ ಇತರರನ್ನೂ ಆ ಪ್ರಭಾವದಿಂದ ಪಾರುಮಾಡಬಲ್ಲ ಯೋಗ್ಯತೆಯುಳ್ಳ ವಸ್ತುಗಳೂ ಉಂಟು, ನೀರು, ಕಬ್ಬಿಣ, ದರ್ಭೆ ಮತ್ತು ಚಿನ್ನ ಇಂತಹ ವಸ್ತುಗಳೇ ಅವು. ಅವುಗಳನ್ನು ಮುಟ್ಟಿದಾಗ ಗ್ರಹಣದ ಮೊದಲಿದ್ದ ಸಹಜವಾದ ನಾಡೀಗತಿಗಳುಂಟಾಗುವುವು, ಈ ಮರ್ಮವಿರುವುದರಿಂದಲೇ ಸ್ನಾನಮಾಡಿ, ಅದೂ ತಣ್ಣೀರಿನಲ್ಲಿ ಸ್ನಾನಮಾಡಿ, ದನದ ಕೊಂಬಿಗೆ ಕಬ್ಬಿ ಣ ಸಿಕ್ಕಿಸಿ, ಗರ್ಭ ವಿಕಾರವೇರ್ಪಡದಂತೆ ಗರ್ಭಿಣಿಯರಿಗೆ ಕಬ್ಬಿಣ ಕೊಡಿ ಎಂಬ  ಆಚರಣೆಗಳನ್ನು  ತಂದಿರುವುದು ಕಂಡುಬರುತ್ತದೆ. ಭೌತಿಕವಾದ ಈ ಅಂಶಗಳ ಜೊತೆಗೆ ಈ ಗ್ರಹಣವು ಶರೀರದಲ್ಲಿ ಸುಪ್ತವಾದ ಹಲವು ದೈವೀ ಕೇಂದ್ರಗಳಲ್ಲಿ ಸಂಚರಿಸಲು ಅನುಗುಣವಾದ ಸ್ಥಿತಿಯನ್ನುಂಟು ಮಾಡುವುದರಿಂದ, ಇದನ್ನು ಪುಣ್ಯಕಾಲವೆಂದು ಕರೆದು ಜಪ, ಧ್ಯಾನ ಮೊದಲಾದವುಗಳಿಗೆ ಇದನ್ನು ಬಳಸಿಕೊಳ್ಳುವ ಸನ್ನಿವೇಶವೂ ಇಲ್ಲಿದೆ.
ನಿಸರ್ಗದ ಸಹಜ ಘಟನೆಯಾದ ಗ್ರಹಣವನ್ನೂ, ಅದರ ಪರಿಣಾಮವನ್ನೂ, ನೈಜವಾಗಿ ಅಳೆದು ಆ ಅರಿವಿನ ಆಧಾರದ ಮೇಲೆಯೇ ಮೂಡಿಬಂದಿರುವ ಆಚರಣೆಗಳೂ ಉಂಟು  ಎಂಬುದನ್ನು ಈ ಪ್ರಯೋಗಗಳು ದೃಢಪಡಿಸುತ್ತವೆ.  ಅರಿವಿನಿಂದ ತಂದಿರುವ ಆಚರಣೆಗಳ ನಡುವೆ ತಿಳುವಳಿತೆಯಿಲ್ಲದ ಜನಗಳಿಂದ ಬಂದ ಹಲವಾರು ಆಚರಣೆಗಳೂ ಸೇರಿ ಹೋಗಿರಬಹದು. ಈ ಸಂದರ್ಭದ ಎಲ್ಲಾ ಆಚರಣೆಗಳನ್ನೂ ಸರಿ ಎಂದು ನಾವು ಒಪ್ಪಲಾಗದಿದ್ದ ರೂ, ಬಹು ಪ್ರಮುಖವಾಗಿ ದೇಶವ್ಯಾಪಿಯಾಗಿ ಉಳಿದಿರುವ ಸ್ನಾನ, ಜಪ,  ಉಪವಾಸ, ತರ್ಪಣ, ದಾನ ಆ ಕಾಲದಲ್ಲಿ ಬಳಸುವ ದರ್ಭೆ, ಕಬ್ಬಿಣ ಮೊದಲಾದ ವಸ್ತುಗಳ ಉಪಯೋಗ ,ಇವುಗಳು ಅರಿವಿನಿಂದ ತಂದ ಆಚರಣೆಗಳೆಂಬ ಅಂಶವನ್ನು ಅಲ್ಲಗಳೆಯಲಾಗುವುದಿಲ್ಲ.

ನಿಸರ್ಗವನ್ನು ಅಳೆದು, ಅರಿತು, ಅದಕ್ಕೆ ಹೊಂದುವ ಆಚರಣೆಗಳನ್ನು ತಂದ  ಜ್ಞಾನಿಗಳೂ ವಿಜ್ಞಾನಿಗಳೂ ಈ ಸಂದರ್ಭದಲ್ಲಿ ಅಭಿನಂದನಾರ್ಹರು. ಅಂತೆಯೇ ಅವರು ತಂದ ಆಚರಣೆಗಳು ಕಾಲ,  ಪ್ರಕೃತಿ ದೋಷಗಳಿಂದ ಮರೆಯಾದರೂ, ಪ್ರಯೋಗ ಪುರಸ್ಸರವಾಗಿ ಅದನ್ನು ಎತ್ತಿ ಹಿಡಿದು ನಿಜವನ್ನು ಬಯಲಿಗೆಳೆದ ಶ್ರೀರಂಗಮಹಾಗುವಿನ ನೆನಪು ಹೃದಯವನ್ನು ತುಂಬುತ್ತಿದೆ. ಅವನು ಬಯಲಿಗೆಳೆದ ಸತ್ಯದ ನೆಲೆಯೇ ಈ ಬಡ ಲೇಖಕನಿಗೆ ಜೀವ ತುಂಬಿದ  ಚೈತನ್ಯದ ನೆಲೆ, ಎಂಬುದನ್ನು ನೆನಪಿಗೆ ತಂದುಕೊಳ್ಳುತ್ತಾ ಈ  ಲೇಖನವನ್ನು ಸತ್ಯವಸ್ತುವಿನ ಪದತಲದಲ್ಲಿ ಅರ್ಪಿಸುತ್ತೇನೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಜುಲೈ1986 ರಲ್ಲಿ  ಪ್ರಕಟವಾಗಿದೆ.