Wednesday, August 12, 2020

ರುಕ್ಮಿಣಿಯ ಶರಣಾಗತಿ-ನಮ್ಮ ಆದರ್ಶ (Rukminiya Saranagati-Namma adarsha)


ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ : lekhana@ayvm.in)



ಒಮ್ಮೆ ಶ್ರೀಕೃಷ್ಣನು ರುಕ್ಮಿಣಿಗೆ ಹೀಗೆ ಹೇಳುತ್ತಾನೆ -"ರಾಜಕುಮಾರಿ, ಐಶ್ವರ್ಯದಲ್ಲಿ, ಶ್ರೀಮಂತಿಕೆಯಲ್ಲಿ, ಬಲದಲ್ಲಿ ನನಗಿಂತ ಹೆಚ್ಚು ಪ್ರಭಾವಿಗಳಾದ ಹಲವಾರು ರಾಜರು ನಿನ್ನನ್ನು ವಿವಾಹವಾಗಲು ಬಯಸಿದ್ದರು. ನಿನ್ನ ಪಾಲಕರೂ ಸಹ ನಿನ್ನನ್ನು ಶಿಶುಪಾಲನಂತಹ ಪ್ರತಿಷ್ಠಿತನಾದ ರಾಜನಿಗೆ ಮದುವೆ ಮಾಡಿಕೊಡಲು ಒಪ್ಪಿ ವಾಗ್ದಾನವನ್ನೂ ಮಾಡಿದ್ದರು. ಆದರೂ ದುಡುಕಿ ನೀನು ನನ್ನನ್ನು ವರಿಸಿಬಿಟ್ಟೆ. ನಾನು ನಿನಗೆ ಸಮಾನನಲ್ಲ. ನಾವು ಶತ್ರುಗಳಿಗೆ ಹೆದರಿ ಸಮುದ್ರದಲ್ಲಿ ಮನೆ ಮಾಡಿಕೊಂಡಿದ್ದೇವೆ. ಬಲಿಷ್ಟರೊಡನೆ ವೈರ. ರಾಜನೂ ನಾನಲ್ಲ. ನನ್ನ ಮಾರ್ಗ ಅಸ್ಪಷ್ಟ, ಬಡವ ಮತ್ತು ಸದಾ ಬಡವರನ್ನೇ ಪ್ರೀತಿಸುವವನು. ಸಂಸಾರದ ಲಾಲಸೆಯಿಲ್ಲದ ಉದಾಸೀನನೂ ಆಗಿದ್ದೇನೆ. ದರಿದ್ರರಾದ ಭಿಕ್ಷುಗಳಿಂದ ಸ್ತುತಿಸಲ್ಪಡುವವನು. ಇಂತಹವನನ್ನು ದೂರದೃಷ್ಟಿಯಿಲ್ಲದೆ ಬಯಸಿ ಮದುವೆಯಾಗಿಬಿಟ್ಟೆ. ಇನ್ನೂ ಕಾಲ ಮಿಂಚಿಲ್ಲ. ನಿನ್ನ ಯೋಗ್ಯತೆಗೆ ತಕ್ಕ ಶ್ರೀಮಂತ ಕ್ಷತ್ರಿಯ ಕುಮಾರನನ್ನು ನೀನು ವರಿಸಬಹುದು" ಎಂದುಬಿಟ್ಟ.

ಈ ಮಾತುಗಳು ರುಕ್ಮಿಣಿಯನ್ನು ಕಾಂತಿಹೀನಳಾಗಿ ಪ್ರಜ್ಞಾಹೀನಳಾಗಿ ಬೀಳುವಂತೆ ಮಾಡಿದವು. ಶ್ರೀಕೃಷ್ಣನೇ ಅವಳನ್ನು ಉಪಚರಿಸಿ ಎಚ್ಚರಿಸಿದನು. ಆಗಿನ ರುಕ್ಮಿಣಿಯ ಮಾತುಗಳು ಶರಣಾಗತಿಗೆ ಹಿಡಿದ ಕೈಗನ್ನಡಿ - "ಶ್ರೀಕೃಷ್ಣನೇ ನನ್ನ ಉಸಿರು. ನಿನ್ನ ಅನಿರೀಕ್ಷಿತವಾದ ಈ ಮಾತುಗಳಿಂದ ಉಸಿರೇ ನಿಂತುಹೋಯಿತು. ಆಗ ಪ್ರಜ್ಞಾಹೀನಳಾಗುವುದು ಸ್ವಾಭಾವಿಕವೇ. ಹೌದು ನಿನಗೆ ಸಮಾನಳು ನಾನಲ್ಲ. ತ್ರಿಗುಣಾತೀತನಾಗಿ ಸದಾ ಒಳಗಿನ ಆನಂದಸಾಗರದಲ್ಲಿ ರಮಿಸುವ ನೀನೆಲ್ಲಿ, ತ್ರಿಗುಣಾತ್ಮಕಳಾಗಿ ಪ್ರಕೃತಿಸ್ವರೂಪಿಣಿಯಾದ ನಾನೆಲ್ಲಿ? 
ಸತ್ವ-ರಜಸ್ಸು-ತಮಸ್ಸು 
ಎಂಬ ತ್ರಿಗುಣಸ್ವರೂಪಿಗಳಾದ ಶತ್ರುಗಳಿಗೆ ಹೆದರಿ ಅಂತಃಕರಣ ರೂಪವಾದ ಸಮುದ್ರದಲ್ಲಿ ಇರುವವನು ನೀನು. ಕಾಮಾದಿ ಅರಿಷಡ್ವರ್ಗಗಳೆಂಬ ಬಲಿಷ್ಟರೊಡನೆ ನಿನಗೆ ವೈರ ಸಹಜವಾಗಿದೆ. ರಾಜಪದವಿ ಇಲ್ಲವೆಂದ. ಹೌದು ಲೋಕವನ್ನೆಲ್ಲ ಬೆಳಗುವ ಆತ್ಮರಾಜ್ಯದ ಅಧಿಪತಿ ನೀನು. ಹೊರಗಿನ ರಾಜ ಪದವಿಯಿಂದ ನಿನಗೆ ಆಗಬೇಕಾದುದು ಏನಿದೆ? ನಿನ್ನ ಮಾರ್ಗ ನಿನಗೆಮಾತ್ರವೇ ಸ್ಪಷ್ಟ. ಋಷಿ ಮುನಿಗಳಿಗೂ ಸಹ ನಿನ್ನ ಲೀಲಾ ಮಾರ್ಗಗಳು ಅಸ್ಪಷ್ಟವಿರುವಾಗ ನಿನ್ನನ್ನು ಪೂರ್ತಿಯಾಗಿ ತಿಳಿದವರು ಯಾರಿದ್ದಾರೆ? ಇನ್ನು ಬಡತನ- ಹೌದು ನಿನ್ನನ್ನು ಬಿಟ್ಟು ಈ ಜಗತ್ತಿನಲ್ಲಿ ಪಡೆಯಬೇಕಾದುದು ಯಾವುದೂ ಇಲ್ಲ. ನೀನು ಸಿಕ್ಕಿದಮೇಲೆ ಇನ್ನಾವುದು ಬೇಕಾಗಿಲ್ಲವಾಗಿರುವುದರಿಂದ ಆ ಬಡತನ ಒಳ್ಳೆಯದೇ. ಜಗತ್ತಿಗೇ ಸ್ವಾಮಿಯಾದವನಿಗೆ ಧನಕನಕಗಳಿಂದ ಆಗಬೇಕಾದುದಾದರೂ ಏನು? ನಿನ್ನನ್ನು ಅಪೇಕ್ಷಿಸುವವರು ಹೊರ ಧನಕ್ಕೆ ಆಸೆಪಡುವುದೂ ಇಲ್ಲ. ಅಂತಹವರೇ ನಿನಗೆ ಪ್ರಿಯರು ಎಂಬುದೂ ಸಹಜವಾಗಿಯೇ ಇದೆ. ನೀನು ಆತ್ಮಕಾಮನು. ಭೌತಿಕ ಜಗತ್ತಿನ ವಿಷಯದಲ್ಲಿ ಉದಾಸೀನನಾಗಿರುವುದು ನಿನಗೆ ಸಹಜವಾದ ಸ್ವಭಾವವಾಗಿದೆ. ಪರಮ ಶಾಂತರಾದ, ಸದಾಕಾಲದಲ್ಲಿಯೂ ನಿನ್ನನ್ನೇ ತಮ್ಮೊಳಗೆ ಕಾಣುತ್ತಿರುವ ಭಿಕ್ಷುಗಳು ನಿನ್ನನ್ನು ಸ್ತುತಿಸುವುದು ಸಹಜವಾಗಿದೆ. ಅನ್ಯಥಾ ಶರಣಂ ನಾಸ್ತಿ ಎಂಬ ಜೀವನ ನಿಶ್ಚಯದಿಂದ ಅವರು ನಿನ್ನೆಡೆಗೆ ಧಾವಿಸಿಬರುತ್ತಾರೆ. ಹಾಗೆಯೇ ಶರಣಾಗತಳಾಗಿ ಅನನ್ಯ ಶರಣಳಾಗಿ ನಿನ್ನಲ್ಲಿಗೆ ಬಂದಿದ್ದೇನೆ. ನಿನ್ನ ಪದಕಮಲಗಳಲ್ಲಿ ಅನವರತವೂ ನನಗೆ ಆಶ್ರಯ ನೀಡು" ಎಂದು ಪ್ರಾರ್ಥಿಸುತ್ತಾಳೆ. "ಪರಮಾತ್ಮನನ್ನು ಎಲ್ಲಾ ಜೀವಗಳೂ ಪತ್ನಿಯು ಪತಿಯನ್ನು ಆಶ್ರಯಿಸುವಂತೆ ಆಶ್ರಯಿಸಬೇಕು" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.

ಶ್ರೀಕೃಷ್ಣನು ತನ್ನ ಬಗ್ಗೆ ಹೇಳಿಕೊಂಡ ಕುತ್ಸಿತ ಎನಿಸಬಹುದಾದ ವಿಷಯಗಳನ್ನೇ ತೆಗೆದುಕೊಂಡು ಅವನ ಅಂತರಂಗದ ನಿಜಸ್ವರೂಪವನ್ನು ಬಣ್ಣಿಸಿದ ರುಕ್ಮಿಣಿಯ ಜ್ಞಾನವೈಭವ, ಭಗವಂತನಲ್ಲಿ ಸರ್ವ ಶರಣಾಗತಿ ನಮಗೆಲ್ಲ ಆದರ್ಶವಲ್ಲವೇ?

ಸೂಚನೆ: 11/08/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.