Saturday, August 22, 2020

ದಯಾ (ಆತ್ಮಗುಣ) ದಯಾ ಸರ್ವಭೂತೇಷು (Daya - Athmaguna, Daya - Sarvabhutesu)

ಲೇಖಕರು: ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


ದಯಾ ಎಂಬ ಪದಕ್ಕೆ ಕೃಪಾ, ಅನುಕಂಪಾ, ಕಾರುಣ್ಯ, ಘೃಣಾ ಎಂಬೆಲ್ಲಾ ಪರ್ಯಾಯಪದಗಳಿವೆ. ಪ್ರಾಣಿ, ಪಶು, ಪಕ್ಷಿ, ಗಿಡ, ಮರಗಳು ನಮ್ಮಂತೆ ಬದುಕಬೇಕು. ಅವಕ್ಕೂ ಈ ಪ್ರಪಂಚದಲ್ಲಿ ಬದುಕುವ ಹಕ್ಕು ಇದೆ. ಅವುಗಳ ಬದುಕಿನ ಹಕ್ಕನ್ನು ಕಸಿದುಕೊಳ್ಳಬಾರದು. ಭಯವನ್ನು ಬಿಟ್ಟು ಸ್ವಚ್ಛಂದವಾಗಿ ಅವು ವಿಹರಿಸಬೇಕು. ಇದರಿಂದ ಪ್ರಕೃತಿಯಲ್ಲಿ ಸಮತೋಲನ ಉಂಟಾಗುತ್ತದೆ. ಜೊತೆಗೂಡಿ ಬಾಳುವ ಸ್ಥಿತಿ ನಿರ್ಮಾಣವಾಗಬೇಕು ಎನ್ನುವ ಮನಸ್ಸಿನ ಭಾವನೆಯನ್ನೇ 'ದಯಾ' ಎಂಬುದಾಗಿ ಕರೆಯಲಾಗುತ್ತದೆ. ಈ ಭಾವನೆಗಳು ಇದ್ದಾಗ ಮತ್ತೊಬ್ಬರಿಗೆ ತೊಂದರೆ ಕೊಡುವುದಾಗಲಿ, ಹಿಂಸೆಯಾಗಲಿ, ಬಲಾತ್ಕಾರವಾಗಲಿ ಸಂಭವಿಸುವುದಿಲ್ಲ. ಯಾರಾದರೂ ಇಂತಹ ಕಷ್ಟದಲ್ಲಿದ್ದರೆ ಸಂರಕ್ಷಿಸಬೇಕೆಂಬ ಬಯಕೆ ಸಹಜವಾಗಿ ಮೂಡುತ್ತದೆ. ಇದನ್ನೆ 'ಅನುಕಂಪಾ' ಎಂದು ಕರೆಯುತ್ತಾರೆ. ನಮಗೆ ಬೇರೆಯವರಿಂದ ಹಿಂಸೆಯಾದರೆ ಅದರಿಂದ ನಾವು ಹೇಗೆ ವ್ಯಥೆಪಡುತ್ತೇವೋ ಹಾಗೆ ನಮ್ಮಿಂದ ಇನ್ನೊಂದು ಜೀವಿಗೆ ಹಿಂಸೆಯಾದಾಗ ಅದೂ ವ್ಯಥೆಪಡುತ್ತದೆ ಎಂದು  ನಮ್ಮ ಮನಸ್ಸು ಕರಗುತ್ತದೆ. ಇಂತಹ ಅವಸ್ಥೆಯನ್ನೇ  'ದಯಾ' ಎಂದರು. ಭಗವಂತನ ದಯೆ, ಹಿರಿಯರ ಅನುಕಂಪ ನಮ್ಮ ಮೇಲೆ ಸದಾ ಇರಲಿ ಎಂದು ನಾವು ಸದಾ ಆಶಿಸುತ್ತೇವೆ. ಆದ್ದರಿಂದ ಇದು ಅತ್ಯಂತ ಶ್ರೇಷ್ಠವಾದ ಗುಣ.

ದಯೆಯ ಮುಂದಿನ ಪರಿಣಾಮವೇ ಅಹಿಂಸೆ. ಯಾರು ಅಹಿಂಸಾಧರ್ಮವನ್ನು ಪಾಲಿಸುತ್ತಾರೋ ಅವರ ಸುತ್ತಲೂ ವೈರತ್ವವು ದೂರವಾಗುವುದು. ಇದನ್ನೇ ಪಾತಂಜಲಯೋಗಸೂತ್ರದಲ್ಲಿ 'ಅಹಿಂಸಾ ಪ್ರತಿಷ್ಠಾಯಾಂ ತತ್ಸನ್ನಿಧೌ ವೈರತ್ಯಾಗಃ' ಎಂದು ಹೇಳಿದ್ದಾರೆ. ಇದನ್ನೇ ನಾವು ಪ್ರಾಚೀನಕಾಲದ ಋಷ್ಯಾಶ್ರಮಪ್ರದೇಶದಲ್ಲಿ ಕಾಣುತ್ತಿದ್ದೆವು. ಅಲ್ಲಿನ ಪರಿಸರವು ಯಜ್ಞಯಾಗಗಳಿಂದ ಪವಿತ್ರವಾಗಿರುತ್ತಿತ್ತು. ಇದರ ಪರಿಣಾಮವಾಗಿ ಸಹಜವೈರಿಗಳೂ ತಮ್ಮ ವೈರವನ್ನು ಬಿಟ್ಟು ಅನ್ಯೋನ್ಯವಾಗಿ ಬಾಳುತ್ತಿದ್ದವು.

ನಿಗ್ರಹವೂ ದಯೆಯೇ

ದುಷ್ಟರನ್ನು ಶಿಕ್ಷಿಸುವುದೂ 'ನಿಗ್ರಹದಯಾ' ಎನ್ನಬಹುದು. ದುಷ್ಟರ ವಿಷಯದಲ್ಲಿ ಅನುಕಂಪ ಸಲ್ಲದು. ಯಾರ ಕಾರಣದಿಂದ ದುಃಖ ಉಂಟಾಗುತ್ತದೆಯೋ ಅವರ ಮೇಲೆ ದಯೆಯು ಸರ್ವಥಾ ಒಳ್ಳೆಯದಲ್ಲ. ಇನ್ನೊಬ್ಬರಿಗೆ ಬೆಂಕಿಯನ್ನಿಡುವ, ವಿಷವನ್ನು ಕೊಡುವ, ಶಸ್ತ್ರಧಾರಿಯಾದ, ಹಣವನ್ನು ಅಪಹರಿಸಿದ, ಕ್ಷೇತ್ರ ಮತ್ತು ಪತ್ನಿ(ಸ್ತ್ರೀ)ಯನ್ನು ಅಪಹರಿಸಿದ ವ್ಯಕ್ತಿಯ ಮೇಲೆ ದಯೆಯನ್ನು ತೋರಲೇಬಾರದು. ಅಂತಹವರನ್ನು ವಿಚಾರಿಸದೇ ಸಾಯಿಸುವುದನ್ನು ದಯೆ ಎಂಬುದಾಗಿ ಹಿರಿಯರು ಹೇಳುತ್ತಾರೆ. ಅಂತಹವರಿಂದ ಆಗುವ ಅಪರಾಧವನ್ನು ತಡೆಯುವುದರಿಂದ, ಲೋಕಕ್ಕೆ ಕಲ್ಯಾಣವಾಗುವುದರಿಂದ ಅದು ದಯೆಯೇ. "ಭಗವಂತನು ಮಾಡುವ ನಿಗ್ರಹವೂ ಅವನ ಅನುಗ್ರಹವೇಪ್ಪ" ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಇದನ್ನೇ ಶ್ರೀರಾಮನು ಶಸ್ತ್ರಪಾಣಿಯಾದ ತಾಟಕೆಯನ್ನು 'ಸ್ತ್ರೀ' ಎಂದು ಪರಿಗಣಿಸದೇ 'ದಯೆಯನ್ನು ಬಾಣದ ಜೊತೆ ಬಿಟ್ಟನು' ಎಂಬುದಾಗಿ ಕಾಳಿದಾಸನು ತನ್ನ ರಘುವಂಶಕಾವ್ಯದಲ್ಲಿ ಮಾರ್ಮಿಕವಾಗಿ ಹೇಳುತ್ತಾನೆ.

ಜೀಮೂತವಾಹನನ ಕಾರುಣ್ಯ

ಹರ್ಷಕವಿಯ 'ನಾಗಾನಂದ' ನಾಟಕ, ಕಾರುಣ್ಯರಸಕ್ಕೆ ಉತ್ತಮ ಉದಾಹರಣೆ. ಅಲ್ಲಿ- ಜೀಮೂತವಾಹನನು ವಿಹಾರಕ್ಕಾಗಿ ಸಮುದ್ರತೀರಕ್ಕೆ ಹೋಗುತ್ತಾನೆ. ಅಲ್ಲಿ ಸರ್ಪಗಳ ಅಸ್ಥಿಗಳನ್ನು ಕಂಡು ತನ್ನ ಮಿತ್ರನಾದ ಮಿತ್ರಾವಸುವನ್ನು ಕೇಳುತ್ತಾನೆ. ಆಗ ಮಿತ್ರನು, ಗರುಡ ಮತ್ತು ನಾಗಗಳ ಮಧ್ಯೆ ಆದ ಸಂಧಾನ ವಿಷಯವನ್ನು ಹೇಳುತ್ತಾನೆ. ಸಂಧಿಯ ಪ್ರಕಾರ ಪ್ರತಿದಿನ ಒಂದೊಂದು ನಾಗವನ್ನು ಗರುಡನಿಗೆ ಆಹಾರವಾಗಿ ನೀಡಬೇಕಾಗಿತ್ತು. ಇದನ್ನು ತಿಳಿದ ಜೀಮೂತವಾಹನನು ನಾಗಗಳನ್ನು ರಕ್ಷಿಸಬೇಕೆಂಬ ಕರುಣೆಯಿಂದ ತನ್ನ ದೇಹತ್ಯಾಗಮಾಡಲು ನಿರ್ಧರಿಸುತ್ತಾನೆ. ವೃದ್ಧ ನಾಗನ ಏಕಮಾತ್ರ ಪುತ್ರ ಶಂಖಚೂಡನ ಆಹಾರರೂಪವಾಗಿ ವಧ್ಯಶಿಲೆಗೆ ತಾನೇ ಹೋಗಿ ಜೀಮೂತವಾಹನನು ತನ್ನನ್ನು ಗರುಡನಿಗೆ ಸಮರ್ಪಿಸಿಕೊಳ್ಳುತ್ತಾನೆ.  ಭಕ್ಷಿಸುವ ವೇಳೆ ಆನಂದವನ್ನು ಅನುಭವಿಸುತ್ತಿರುವ ಈತನನ್ನು ಕಂಡು ಗರುಡನಿಗೆ ಆಶ್ಚರ್ಯವಾಗುತ್ತದೆ. ಆ ವೇಳೆ ದುರ್ಗಾಮಾತೆಯು ಪ್ರತ್ಯಕ್ಷಳಾಗಿ ಜೀಮೂತವಾಹನನನ್ನು ಸ್ಪರ್ಶಿಸಿ, ಜಲವನ್ನು ಪ್ರೋಕ್ಷಿಸಿ ಬದುಕಿಸುತ್ತಾಳೆ. 'ವಿದ್ಯಾಧರಚಕ್ರವರ್ತಿ' ಎಂಬ ಬಿರುದನ್ನು ಕೊಡುತ್ತಾಳೆ, ಗರುಡನು ಅಮೃತವರ್ಷಧಾರೆಯಿಂದ ಎಲ್ಲಾ ನಾಗಗಳನ್ನೂ ರಕ್ಷಿಸುತ್ತಾನೆ, ಇದು ಜೀಮೂತವಾಹನನ ಭೂತದಯೆ.  

ಸೂಚನೆ: 22/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.