Saturday, August 8, 2020

ಯಾರು ಈ ಪತಂಜಲಿ ಮಹರ್ಷಿಗಳು? (Yaru E Patannjali Maharshigalu?)

ಲೇಖಕರು : ಡಾII ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ವೈಕುಂಠದಲ್ಲೊಮ್ಮೆ ಪರಮಾತ್ಮ ಆದಿಶೇಷನ ಮೇಲೆ ಪವಡಿಸಿದನು. ಆತನ ಮುಖಮಂಡಲವೋ ಪ್ರಕಾಶಮಾನವಾಗಿತ್ತು. ಕಣ್ಣುಗಳು ಅರೆದೆರೆದು ತನ್ನ ಒಳ ಆನಂದದಲ್ಲಿ ತಲ್ಲೀನವಾಗಿದ್ದವು. ಬಲಕ್ಕೆ ಬಾಗಿ ಒರಗಿದ ಆ ಶಯನ ಮೂರ್ತಿಯು ವಿಸ್ತೀರ್ಣ ಹಾಲ್ಗಡಿಲಿನ ಸೂರ್ಯನಂತೆ ಪ್ರಜ್ವಲಿಸುತ್ತಿತ್ತು. ಎಂದೂ ಮಂದಹಾಸದಿಂದ ಕೂಡಿರುವ ಮುಖಭಾವ ಇಂದು ಎಂದಿಗಿಂತಲೂ ಹೆಚ್ಚಿನ ಒಂದು ಸಂತೋಷವನ್ನು ಸೂಸುತ್ತಿದ್ದಂತಿತ್ತು. ಆ ವಿಶೇಷ ಸಂತೋಷದಿಂದ ಹಿಗ್ಗಿದ ನಾರಾಯಣನ ಭಾರವು ಶೇಷನಿಂದಲೂ ಸಹಿಸಲಾರದಂತಾಯಿತು. ಆದಿಶೇಷನು ಇದರ ಕಾರಣವೇನೆಂದು ತನ್ನ ಸ್ವಾಮಿಯನ್ನು ಪ್ರಶ್ನಿಸಿದ. ನಾರಾಯಣ ಉತ್ತರಿಸಲಿಲ್ಲ. ಮತ್ತಷ್ಟು ಒಳಕ್ಕೆ ಮುಳುಗಿ ತನ್ನಒಳಗಿನ ಅನುಭವದಲ್ಲಿ ಮುಳುಗಿಯೇ ಇದ್ದ. ಕೊಂಚ ಕಾಲದನಂತರ " ನನ್ನ ಪ್ರಿಯ ಶೇಷ ! ಇಂದು ನಾನು ಆ ಶಿವ-ನಟರಾಜನ ಆನಂದ ತಾಂಡವವನ್ನು ನೋಡಿ ಅನುಭವಿಸುತ್ತಿದ್ದೇನೆ ! ಅವನ ಆನಂದ ಊರ್ಧ್ವ ತಾಂಡವ ನೋಡುತ್ತಾ, ಆ ಡಮರುಗದ ಧ್ವನಿ ಕೇಳುತ್ತಾ ಮೈಮರೆತಿದ್ದೆ ! ಎಂತಹ ಅದ್ಭುತವಿದು " ಎಂದನು. ಇದನ್ನು ಕೇಳಿದ ಆದಿಶೇಷನಿಗೆ ತಾನೂ ಆ ನೃತ್ಯದ ದರ್ಶನಮಾಡಬೇಕೆಂದು ಆಸೆ ಉಂಟಾಗಿ ಪತಂಜಲಿಯ ಅವತಾರವನ್ನು ಎತ್ತಿದನೆಂದು ಪ್ರತೀತಿ. ಪತಂಜಲಿ ಮಹರ್ಷಿಯಾಗಿ ಅವರು ನಿತ್ಯ ಚಿದಂಬರೇಶನಾದ ನಟರಾಜನ ಸೇವೆಯಲ್ಲಿದ್ದುಕೊಂಡು, ಆ ನಾಟ್ಯದ ಸೊಬಗನ್ನು ಅನುಭವಿಸಿದರು. ಯೋಗ-ವ್ಯಾಕರಣ-ಆಯುರ್ವೇದ ಶಾಸ್ತ್ರದ ಸಾರಭೂತವಾದ ಗ್ರಂಥಗಳನ್ನು ರಚಿಸಿದ ಪತಂಜಲಿಗಳನ್ನು ಇಂದೂ ನಾವು ಈ ಶ್ಲೋಕದಿಂದ ನಮಿಸುತ್ತೇವೆ.

ಯೋಗೇನ ಚಿತ್ತಸ್ಯ , ಪದೇನ ವಾಚಾಮ್, ಮಲಮ್ ಶರೀರಸ್ಯಚ ವೈದ್ಯಕೇನ
ಯೋಪಾಕರೋತ್ತಂ ಪ್ರವರಂ ಮುನೀನಾಮ್ ಪತಂಜಲಿಮ್ ಪ್ರಾಂಜಲಿರಾನತೋಸ್ಮಿ 
 
ಭಾರತದ ಪ್ರತಿಯೊಂದು ದೇವಾಲಯಕ್ಕೂ ಇಂತಹ ಸ್ಥಳಪುರಾಣಗಳು ಅನೇಕವಿರುತ್ತವೆ. ಅವು ಆ ದೇವತಾ ಮೂರ್ತಿಯ ರಹಸ್ಯ-ತತ್ತ್ವಗಳನ್ನೂ ಬೋಧಿಸುತ್ತವೆ. ಚಿದಂಬರವೆಂಬುದು ಯೋಗಿಯ ಹೃನ್ಮಧ್ಯ ಕ್ಷೇತ್ರ. ಒಳಗೊಳಗೇ ನಟರಾಜನ ನಾಟ್ಯವನ್ನು ದರ್ಶಿಸುವ ಸ್ಥಳ. ಆನಂದತಾಂಡವವನ್ನು ನೋಡಿ ಆನಂದತುಂದಿಲರಾಗಿ ಮುಳುಗಿ ಹೋಗುವ ಸ್ಥಳ. ನಟರಾಜನು ಸಾಕ್ಷಾತ್ ಯೋಗಮೂರ್ತಿ. ಋಷಿಗಳ ಅಂತರಂಗದ ಅನುಭವಕ್ಕೆ ಕಾರಣವಾದ ಯೋಗ ತತ್ತ್ವಗಳನ್ನೂ ಯೋಗದ ಮರ್ಮಗಳನ್ನೂ ಬಿಚ್ಚಿ ತೋರಿಸುವಂತಹ ಮೂರ್ತಿಯಾದುದರಿಂದ ಆತನನ್ನು ಯೋಗ-ಮೂರ್ತಿ, ಯೋಗೀಶ್ವರ ಎಂದು ಕರೆಯುತ್ತಾರೆ. ಯೋಗದ ಒಳ ಅನುಭವ ಪಡೆಯಬೇಕಾದರೆ, ಸರ್ಪದ ಆಕಾರದಲ್ಲಿರುವ ನಮ್ಮೊಳಗಿನ ಸುಪ್ತ-ಗುಪ್ತ ಶಕ್ತಿ ಕುಂಡಲಿನಿಯು ಜಾಗೃತಗೊಳ್ಳಬೇಕು. ಶಕ್ತಿಯು ಉಕ್ಕಿ, ಹಿಗ್ಗಿ ಚಕ್ಕನೆ  ಶಿರಸ್ಸಿನ ಸಹಸ್ರಾರಕ್ಕೆ ಆರೋಹಣಮಾಡುತ್ತಾ ಯೋಗಪ್ರಕ್ರಿಯೆಗಳು, ಅನುಭವಗಳನು ಉಂಟುಮಾಡುತ್ತದೆ. ಸಹಸ್ರಾರದಲ್ಲಿ, ಆ ಪರಮಪದನಾಥನ ಆಸನ-ಛತ್ರ ಸ್ಥಾನದಲ್ಲಿರುವ ಆದಿಶೇಷನು ಆರೋಹಣ ಮಾಡಿದ ಕುಂಡಲೀಸರ್ಪದ ಪ್ರತಿರೂಪವೇ ಸರಿ. ಚಿತ್ತದ ಶುದ್ಧಿಯನ್ನು ಸಾಧಿಸುವ ಯೋಗ ಶಾಸ್ತ್ರ, ವಾಕ್-ಶುದ್ಧಿಯನ್ನು ಉಂಟು ಮಾಡುವ ವ್ಯಾಕರಣ ಶಾಸ್ತ್ರ, ಶರೀರ ಶುದ್ಧಿಯನ್ನುಂಟುಮಾಡುವ ಆಯುರ್ವೇದ ಶಾಸ್ತ್ರ - ಈ ಮೂರರ ಹಿಂಬದಿಯಲ್ಲಿರುವುದೂ ಈ ಶಕ್ತಿಯ ಆಟವೇ. ಆದರಿಂದಲೇ ಮೂರು ಶಾಸ್ತ್ರಗಳ ರಚಯಿತ ಎಂದು ಪತಂಜಲಿ ಮಹರ್ಷಿಗಳನ್ನು ಕೊಂಡಾಡುತ್ತಾರೆ.  ಯೋಗಾಭ್ಯಾಸಿಗಳೂ, ಯೋಗಸಾಧಕರೆಲ್ಲರೂ  ಆದಿಶೇಷ -ಕುಂಡಲಿನಿಶಕ್ತಿಯ ವಿಶೇಷವಾದ ಕರುಣೆ ನಮ್ಮಮೇಲಿರಲೆಂದು ಅವರ ಪ್ರತಿರೂಪವಾದ  ಪತಂಜಲಿ ಮಹರ್ಷಿಗಳನ್ನು ಪ್ರಾರ್ಥಿಸೋಣ.

ಸೂಚನೆ: 08/08/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.