Sunday, August 16, 2020

ಆರ್ಯಸಂಸ್ಕೃತಿ ದರ್ಶನ - 6 (Arya Samskruti Darshana - 6)

ಸ್ವಾತಂತ್ರ್ಯ –ಸ್ವರಾಜ್ಯ
ಲೇಖಕರು: ಶ್ರೀವಿಜಯಾನಂದಕಂದಇಂದು ಲೋಕದಲ್ಲಿ "ಸ್ವಾತಂತ್ರ್ಯ"ವನ್ನು ಅಪೇಕ್ಷಿಸಿದವರಾರು? ಪ್ರತಿಯೊಬ್ಬನೂ ತಾನು ಸ್ವತಂತ್ರವಾಗಿರಲು ಅಪೇಕ್ಷಿಸುತ್ತಾನೆ. ಹಾಗೆಯೇ ಅನೇಕ ದೇಶಗಳು ಸ್ವಾತಂತ್ರ್ಯಕ್ಕಾಗಿ ದೊಡ್ಡ  ಹೋರಾಟವನ್ನೇ ನಡೆಸಿವೆ. ಅಂತೆಯೇ ನಮ್ಮ ದೇಶವೂ ಸಹ ನೂರಾರು ವರ್ಷಗಳ ಪಾರತಂತ್ರ್ಯದಲ್ಲಿದ್ದು ನರಳಿ, ಈ ನಾಡಿನ ಅಸಂಖ್ಯಾತ ದೇಶಭಕ್ತರ ಸಾಹಸ ಮತ್ತು ಬಲಿದಾನಗಳ ಫಲವಾಗಿ, ಅನೇಕ ಹೋರಾಟಗಳ ನಂತರ ಈಗ್ಗೆ ೩೬ ವರ್ಷಗಳ ಹಿಂದೆ "ಸ್ವಾತಂತ್ರ್ಯ"ವನ್ನು ಗಳಿಸಿತು ಎಂಬುದನ್ನು ಎಲ್ಲರೂ ಬಲ್ಲರು. ಹೀಗೆ ಗಳಿಸಿದ   ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಯಾವ ದೇಶ ತಾನೇ ಸಿದ್ಧವಿದೆ? ಯಾವ ವ್ಯಕ್ತಿಯು ತಾನೇ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಇಷ್ಟಪಡುತ್ತಾನೆ? ನಾವು  ಸ್ವತಂತ್ರರಾಗಿರಬೇಕೆಂದು ಮಕ್ಕಳಿಂದ ಹಿಡಿದು ಅತಿ ವೃದ್ಧರವರೆಗೂ ಎಲ್ಲರೂ ಅಪೇಕ್ಷಿಸುವುದನ್ನು ನೋಡಿದ್ದೇವೆ.

ಹೀಗಿದ್ದೂ ಸ್ವತಂತ್ರ ಮತ್ತು ಸ್ವಾತಂತ್ರ್ಯಗಳ ನಿಜವಾದ ಅರ್ಥ ನಮಗಾಗಿದೆಯೇ? ಎಂಬುದನ್ನು ವಿಚಾರಮಾಡಬೇಕಾಗಿದೆ.ನಮ್ಮ ದೇಶ ಸ್ವಾತಂತ್ರ್ಯವನ್ನು ಗಳಿಸಿ ೩೬ ವರ್ಷಗಳಾದರೂ "ಸ್ವಾತಂತ್ರ್ಯ" ವೆಂದರೇನು? ಎಂಬ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಬಲ್ಲವಾಗಿದ್ದೇವೆಯೇ? ಎಂದು ಯೋಚಿಸಬೇಕಾಗಿದೆ. ಅನೇಕ ವಿದ್ಯಾರ್ಥಿಗಳನ್ನು, ವಿದ್ಯಾವಂತರೆನಿಸಿಕೊಂಡವರನ್ನೂ, ಈ ಬಗ್ಗೆ ಪ್ರಶ್ನಿಸಿದಾಗ, ಮತ್ತೊಬ್ಬರ ಅಂಕಿತಕ್ಕೆ ಒಳಪಡದೆ, ನಮಗೆ ಸರಿತೋರಿದಂತೆ, ನಾವು ನಡೆದುಕೊಳ್ಳುವ ವಾತಾವರಣವಿದ್ದಲ್ಲಿ, ಅದೇ ಸ್ವಾತಂತ್ರ್ಯ-ಎಂಬ ಉತ್ತರ ಬರುವುದನ್ನು ಎಲ್ಲರೂ ಗಮನಿಸಬಹುದು. ಹೀಗಾದಲ್ಲಿ "ಸ್ವಾತಂತ್ರ್ಯ"ವೆಂದರೆ "ಸ್ವೇಚ್ಛಾಪ್ರವರ್ತನೆ" ಎಂದರ್ಥವೇ? ಎಂಬ ಸಂಶಯ ಮೂಡುತ್ತದೆ. ನಾವು ಮತ್ತೊಬ್ಬರನ್ನು ಕೇಳಬೇಕಾಗಿಲ್ಲ. ನಾವು ಏನು ಮಾಡಲೂ ಸ್ವತಂತ್ರರು –ಎಂಬ ಭಾವನೆ ಇತ್ತೀಚೆಗೆ ನಮ್ಮ ದೇಶದ ಎಲ್ಲೆಡೆಯಲ್ಲಿಯೂ ಸರ್ವವ್ಯಾಪಿಯಾಗಿ ಹಬ್ಬಿರುವುದನ್ನು ಕಾಣುತ್ತಿದ್ದೇವೆ.

ತಾಯಿ ತಂದೆಗಳು ಹೇಳಿದಂತೆ ಮಕ್ಕಳು ನಡೆಯಬೇಕಾಗಿಲ್ಲ.  ವಿದ್ಯಾರ್ಥಿಗಳು ಅಧ್ಯಾಪಕರ ಉಪದೇಶವನ್ನು ಕೇಳಬೇಕಾಗಿಲ್ಲ. ಹಿರಿಯ ಅಧಿಕಾರಿಯ ಆದೇಶವನ್ನು ಸಂಸ್ಥೆಯ ಇತರ ನೌಕರರು ಪಾಲಿಸಬೇಕಾಗಿಲ್ಲ. ಪ್ರತಿಯೊಬ್ಬರೂ ತಮ ತಮಗೆ  ಸರಿಕಂಡಂತೆ ನಡೆದುಕೊಳ್ಳಬಹುದು- ಎಂಬ ಭಾವನೆ ಇಂದು ದೇಶದಲ್ಲಿ ಮೂಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇಂತಹ ಭಾವನೆ ಮತ್ತು ನಡವಳಿಕೆಯಿಂದ ದೇಶಕ್ಕಾಗಲೀ, ಸಮಾಜಕ್ಕಾಗಲೀ, ಕುಟುಂಬಕ್ಕಾಗಲೀ, ವ್ಯಕ್ತಿಗೇ ಆಗಲಿ ಏನಾದರೂ ಉಪಕಾರವಾದೀತೆ? ಇಂತಹ ಭಾವನೆ ಮತ್ತು ನಡವಳಿಕೆಗಳನ್ನು ಪ್ರಗತಿಯ ಲಕ್ಷಣವೆನ್ನಬಹುದೆ? ಎಂದು ಬುದ್ಧಿಯುಳ್ಳವರು ವಿಚಾರ ಮಾಡಬೇಕಾಗಿದೆ.

 "ಸ್ವಾತಂತ್ರ್ಯ" ವೆಂದರೆ ಕಟ್ಟುಪಾಡಿಲ್ಲದಿರುವುದು, ನಿಯಮರಾಹಿತ್ಯ ಎಂಬ ಅಭಿಪ್ರಾಯ ಸರ್ವಥಾ ಸರಿಯಲ್ಲ. "ಸ್ವಾತಂತ್ರ್ಯ-ಸ್ವರಾಜ್ಯ" ಎಂಬ ಪದಗಳಿಗೆ ನಮ್ಮದೇ ಆದ ಆಳ್ವಿಕೆ, ನಮ್ಮದೇ ಆದ ರಾಜ್ಯ ಎಂಬ ಅರ್ಥವಾಗುವುದೇನೋ ಸರಿ. ಅಂತೆಯೇ "ಸ್ವಾತಂತ್ರ್ಯ-ಸ್ವರಾಜ್ಯ" ಎಂದಾಗ ಕೂಲಿಗಾರರು ತಮ್ಮ ರಾಜ್ಯವೆಂದೂ, ರೈತರು ತಮ್ಮ ರಾಜ್ಯವೆಂದೂ, ವಿದ್ಯಾರ್ಥಿಗಳು ತಮ್ಮ ರಾಜ್ಯವೆಂದೂ ಮತ್ತೆ ಹಲವರು ಇವರೆಲ್ಲರನ್ನೂ ಸೇರಿಸಿ "ಕಿಸಾನ್, ಮಜದೂರ್, ಪ್ರಜಾರಾಜ್ಯ" ಎಂಬುದಾಗಿಯೂ ಮಾಡುವ ಘೋಷಣೆಗಳನ್ನು ಕೇಳುತ್ತಿದ್ದೇವೆ. ಹೀಗೆಯೇ ಇನ್ನು ಭಾಷಾವಾರು, ಜಾತಿವಾರು ದೃಷ್ಟಿಯಿಂದ ನೋಡಿದಾಗ, ಪ್ರತಿಯೊಂದು ಭಾಷೆಗೆ ಸೇರಿದ ಜನರು ಅಥವಾ ಪ್ರತಿಜಾತಿಗೆ ಸೇರಿದ ಜನರೂ ತಮ್ಮದೇ ಆದ ಸ್ವತಂತ್ರವಾದ ರಾಜ್ಯ ವ್ಯವಸ್ಥೆ ಇರಬೇಕು. ನಾವು ಮತ್ತೊಬ್ಬರ ಆಳ್ವಿಕೆಗೆ ಒಳಪಟ್ಟು ಇರಬಾರದು ಎಂಬ ಭಾವನೆ ತಲೆಯೆತ್ತುತ್ತಿರುವುದನ್ನು ನೋಡುತ್ತಿದ್ದೇವೆ. ಈ ವಿಚಿತ್ರ ಕಲ್ಪನೆಯ ಫಲವಾಗಿ "ಭಾರತೀಯರೆಲ್ಲರೂ ಒಂದು" ಎಂಬ ಏಕತೆಯ ಸದ್ಭಾವನೆ ಮಾಯವಾಗಿ, ಪಾಕಿಸ್ತಾನ, ಖಲೀಸ್ತಾನ, ದ್ರವಿಡಸ್ತಾನ ಘೋಷಣೆಗಳನ್ನು ಅದಕ್ಕಾಗಿ ಹೋರಾಟವನ್ನೂ, ಅದರ ಪರಿಣಾಮವಾಗಿ ಅಖಂಡ ಭಾರತದ ಕನಸು ಮಾಯವಾಗಿ ನಮ್ಮ ದೇಶವು ಹೋಳು ಹೋಳಾಗಿ ಹರಿದು ಹಂಚಿಹೋಗಿರುವುದನ್ನೂ, ಇನ್ನೂ ಹರಿದು ಹಂಚಿ ಹೋಗುವುದನ್ನೂ ಗಮನಿಸಬೇಕಾಗಿದೆ.

ಸ್ವಾತಂತ್ರ್ಯದ ಫಲವಾಗಿ ದೇಶದಲ್ಲಿ ವ್ಯವಸ್ಥೆ, ಏಕತೆ, ಸೌಖ್ಯ, ಶಾಂತಿಗಳು ಮೂಡಿ ಬರದೆ ಅವ್ಯವಸ್ಥೆ, ಅನೇಕತೆ, ಅಸೌಖ್ಯ, ಅಶಾಂತಿಗಳ ತವರುಮನೆಯಾಗುತ್ತಿದೆ ನಮ್ಮ ಭಾರತ ಭೂಮಿ. ಇದಕ್ಕೆ ಕಾರಣವೇನು? ಎಂದು ತಡವಾಗಿಯಾದರೂ ಈಗ ದೇಶದ ನಾಯಕರು ವಿಚಾರಮಾಡಬೇಕಾಗಿ ಬಂದಿದೆ. ಇದಕ್ಕೆ ಕಾರಣ ಸ್ವಾತಂತ್ರ್ಯ-ಸ್ವರಾಜ್ಯಗಳ ಸರಿಯಾದ ಅರ್ಥ ನಮ್ಮ ಮನಸ್ಸಿಗೆ ಬಾರದಿರುವುದೇ ಆಗಿದೆ. ಸ್ವಾತಂತ್ರ್ಯವೆಂದರೆ ಸ್ವೇಚ್ಛಾವರ್ತನೆ, ಕಟ್ಟುಪಾಡಿಲ್ಲದೆ ಇರುವಿಕೆ, ನಿಯಮರಾಹಿತ್ಯ ಎಂಬ ಅಭಿಪ್ರಾಯ ಸರ್ವಾತ್ಮನಾ ಸರಿ ಅಲ್ಲ.

ಸ್ವಾತಂತ್ರ್ಯ-ಸ್ವರಾಜ್ಯ ಎಂದಾಗ ನಮ್ಮ ಆಡಳಿತ, ನಮ್ಮದೇ ಆದ ರಾಜ್ಯ ಎಂಬ ಅರ್ಥವು ಸರಿಯಾದರೂ, ಮುಂದಕ್ಕೆ ಸ್ವ-ನಾನು ಎಂಬುದರ ಅರ್ಥವನ್ನು ನಾವು ಮನಗಾಣಬೇಕಾಗಿದೆ. "ನಾನು" ಎಂದಾಗ, ದೇಹವಲ್ಲ, ಇಂದ್ರಿಯವಲ್ಲ, ಮನಸ್ಸಲ್ಲ, ಬುದ್ಧಿಯಲ್ಲ, ಇವೆಲ್ಲವನ್ನೂ ಆಳುತ್ತಿರುವ, ಎಲ್ಲಕ್ಕೂ ಚೈತನ್ಯವನ್ನು ನೀಡುತ್ತಿರುವ ಆ ಮಹಾಶಕ್ತಿ. ಅದನ್ನು ಯಾವ ಹೆಸರಿನಿಂದಾದರೂ ಕರೆಯಿರಿ. ಅದರ ಆಳ್ವಿಕೆಗೆ ಒಳಪಟ್ಟು, ದೇಹ, ಇಂದ್ರಿಯ, ಮನಸ್ಸು, ಬುದ್ಧಿ ಎಲ್ಲವೂ ನಡೆದುಕೊಂಡಾಗ ತಾನೇ ನಿಜವಾದ ಸೌಖ್ಯ-ಶಾಂತಿಗಳನ್ನು ಪಡೆಯಲು ಸಾಧ್ಯ. ಎಲ್ಲರ ಹೃದಯದಲ್ಲೂ  ಬೆಳುಗುತ್ತಿರುವ, ಜ್ಞಾನರೂಪನನ್ನು ಕಂಡು, ಅದಕ್ಕನುಗುಣವಾಗಿ ಆತ್ಮ ತಂತ್ರಕ್ಕೆ ಅನುಗುಣವಾಗಿ ನಡೆದುಕೊಳ್ಳುವವನೇ ನಿಜವಾದ ಸ್ವತಂತ್ರ. ಇಂತಹ ವ್ಯಕ್ತಿಗಳ ಮಾರ್ಗದರ್ಶನದಲ್ಲಿ, ವ್ಯವಸ್ಥಿತವಾದ ರಾಜ್ಯವೇ, ಸ್ವರಾಜ್ಯ. ಅದರ ಆದೇಶ-ಸಂದೇಶಗಳಂತೆ ನಾವು ನಡೆದುಕೊಂಡಲ್ಲಿ ತಾನೇ ವೈವಿಧ್ಯದಲ್ಲೂ ಏಕತೆಯನ್ನು ಕಂಡು, ಅದರ ಫಲವಾಗಿ ನಿಜವಾದ ಸೌಖ್ಯ-ಶಾಂತಿ ನೆಮ್ಮದಿಗಳನ್ನು ಪಡೆದುಕೊಳ್ಳಲು ಸಾಧ್ಯ. ಇಲ್ಲವಾದರೆ  ಅವ್ಯವಸ್ಥೆ, ಅಸೌಖ್ಯ, ಅಶಾಂತತೆಗಳ ತವರುಮನೆಯಾದೀತು. ಅಂತಾಗದಿರಲಿ ಎಂದು ಆಶಿಸೋಣ.

ನಮ್ಮ ಪ್ರಾಚೀನ ಮಹರ್ಷಿಗಳು ತಮ್ಮ ಜ್ಞಾನಭೂಮಿಕೆಯಲ್ಲಿ ಕಂಡ ಸ್ವಾತಂತ್ರ್ಯ-ಸ್ವರಾಜ್ಯಗಳ ನೈಜ ಚಿತ್ರಣವನ್ನು ನಮ್ಮ ಬುದ್ಧಿಭೂಮಿಕೆಯಲ್ಲೂ ಮೂಡುವಂತೆ ಮಾಡಿದ ಆ ಶ್ರೀರಂಗ ಮಹಾಗುರುವಿನ ಮಧುರಸ್ಮರಣೆಯೊಡನೆ ನಮ್ಮ ದೇಶವು  ಮತ್ತೆ ಅಂತಹ ನಿಜವಾದ "ಸ್ವಾತಂತ್ರ್ಯ-ಸ್ವರಾಜ್ಯ"ಗಳನ್ನು ಸಾಧಿಸುವಂತಾಗಲಿ ಎಂದು ಹಾರೈಸುತ್ತಾ, ಮೌನವಹಿಸುವೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೬ ಸಂಚಿಕೆ: ೦೩, ೧೯೮೪  ಜನವರಿ ತಿಂಗಳಲ್ಲಿ  ಪ್ರಕಟವಾಗಿದೆ.