Sunday, August 23, 2020

ಆರ್ಯಸಂಸ್ಕೃತಿ ದರ್ಶನ - 7 (Arya Samskruti Darshana - 7)

ತ್ರಿವೇಣಿ (ಜಡೆ)
ಲೇಖಕರು:ಡಾ|| ಎಸ್.ವಿ.ಚಾಮು

  

ಸ್ವಭಾವದಿಂದಲೇ ಶೃಂಗಾರಪ್ರಿಯರಾದ ಸ್ತ್ರೀಯರಿಗೆ ಸಮೃದ್ಧವಾದ ಕಪ್ಪಾದ ತಲೆಗೂದಲಿಗಿಂತ ಪ್ರಿಯವಾದ ವಸ್ತು ಬೇರೊಂದಿರಲಾರದು. ಅನಾದಿಕಾಲದಿಂದ ಅದು ನಮ್ಮ ದೇಶದಲ್ಲಿಸ್ತ್ರೀಯರ ಸೌಂದರ್ಯ, ಯೌವನ ಮತ್ತು ಭೋಗಗಳ ಕುರುಹಾಗಿರುತ್ತದೆ. ಕೇಶಪ್ರಸಾಧನವು ಅವರ ವಿಶೇಷವಾದ ಆಸಕ್ತಿಗೆ ವಿಷಯವಾಗಿರುತ್ತದೆ. ನಮ್ಮ ಪುರಾತನ ಕಾವ್ಯ, ಶಿಲ್ಪ ಮತ್ತು ವರ್ಣಚಿತ್ರಗಳು ಭಾರತ ದೇಶದ ಮಹಿಳೆಯರು ಅದರ ಬಗ್ಗೆ ಹೊಂದಿದ್ದ ಆದರಾಭಿಮಾನಗಳನ್ನು ಸುಂದರವಾಗಿ ಚಿತ್ರಿಸುತ್ತವೆ.

ಈಗಲೂ ಪರಂಪರಾಗತವಾಗಿ ಬಂದ ವಿಧಾನದಲ್ಲಿ ಕೇಶಾಲಂಕಾರ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿಯೇ ಇದೆ. ಆದರೂ ಈಚೆಗೆ ಹಲವು ವರ್ಷಗಳಿಂದ ಪರಂಪರೆಗೆ ವಿರೋಧವಾದ ರೀತಿಯಲ್ಲಿ ಸ್ತ್ರೀಯರು ತಮ್ಮ ಕೇಶಗಳನ್ನು ಧರಿಸುವ ಹೊಸ ಹೊಸ ಪ್ರಥೆಗಳು ಆರಂಭವಾಗಿ ಸಮಾಜದಲ್ಲಿ ಶೀಘ್ರವಾಗಿ ಹರಡುತ್ತಿರುವುದನ್ನು ನೋಡುತ್ತೇವೆ. ಕೂದಲುಗಳನ್ನು ಬಗೆ ಬಗೆಯಾದ ರೀತಿಗಳಲ್ಲಿ ಕತ್ತರಿಸಿಕೊಂಡು ಅಲಂಕಾರ ಮಾಡಿಕೊಳ್ಳುವುದು ರೂಢಿಗೆ ಬರುತ್ತಿದೆ.

ಈ ವ್ಯತ್ಯಾಸಗಳುಂಟಾಗಲು ಕಾರಣವೇನು ಎಂಬ ಪ್ರಶ್ನೆ ಬರುತ್ತದೆ. ಅವುಗಳಲ್ಲಿ ತರ್ಕ, ಸೌಂದರ್ಯ, ಔಚಿತ್ಯ ಅಥವಾ ದೃಷ್ಟಿಗಳನ್ನು ಹುಡುಕ ಹೋಗುವುದು ಪ್ರಾಯಃ ದಡ್ಡತನದ ಕೆಲಸವೆಂದು ನಮಗೆ ತೋರುತ್ತದೆ. ಆದರೂ ಈ ಬಗ್ಗೆ ಯೋಚನೆ ಮಾಡಿದಾಗ ಪರಸಂಸ್ಕೃತಿಯೊಡನೆ ಸಾಂಕರ್ಯ, ಸ್ವಸಂಸ್ಕೃತಿಯಲ್ಲಿ ಅನಾದರಣೆ, ಯೋಚನೆ ಮಾಡದೆ ಬೇರೆಯವರನ್ನು ಅನುಕರಣೆ ಮಾಡುವುದು, ಸಿನೇಮಾ ಮತ್ತು ಜಾಹಿರಾತುಗಳ ಪ್ರಭಾವ, ಸ್ವೇಚ್ಛಾ ಪ್ರವೃತ್ತಿ, ಸ್ತ್ರೀಯರಿಗೆ ಆರಾಮದ ಅಭಾವ ಮುಂತಾದ ಅನೇಕ ಕಾರಣಗಳು ಮನಸ್ಸಿಗೆ ಬರುತ್ತವೆ.

ಕಾರಣಗಳು ಏನಾದರೂ ಇರಲಿ, ಕೇಶಗಳನ್ನು ಕತ್ತರಿಸಿಕೊಡಿದ್ದರಿಂದ ನಮ್ಮ ಸ್ತ್ರೀಯರು ತಮ್ಮ ಪ್ರಾಚೀನವಾದ ಸಂಸ್ಕೃತಿಯಿಂದ ದೂರ ಸರಿಯುವುದರಲ್ಲಿ ಒಂದು ದೊಡ್ಡ ಹೆಜ್ಜೆಯಿಟ್ಟಂತೆ ಎಂಬುದರಲ್ಲಿ ಯಾವ ಸಂದೇಹವೂ ಇರುವುದಿಲ್ಲ. ಏಕೆಂದರೆ ನಮ್ಮ ಪರಂಪರಾಗತವಾದ ಕೇಶಧಾರಣೆಯ ವಿಧಾನದಲ್ಲಿ ಸೌಂದರ್ಯ ದೃಷ್ಟಿ ಮಾತ್ರವಲ್ಲದೆ ಆಳವಾದ ಸಾಂಸ್ಕೃತಿಕ ಅರ್ಥವೂ ಸಹ ಇರುತ್ತದೆ. ಅದು ಸೌಂದರ್ಯಕ್ಕೆ ಪೋಷಕವಾಗಿದೆಯೆಂಬುದರಲ್ಲಿ ಯಾವ ಸಂದೇಹವೂ ಇರಲಾರದು. ಜೊತೆಗೆ ಎಲ್ಲ ವಿಧವಾದ ಸೌಂದರ್ಯಗಳಿಗೂ ಮೂಲವಾದ ಆತ್ಮಸೌಂದರ್ಯವನ್ನು ಸ್ತ್ರೀಯರಿಗೆ ಪ್ರದಾನ ಮಾಡಲು ಅದು ಸಮರ್ಥವಾಗಿರುತ್ತದೆ. ಆತ್ಮಸೌಂದರ್ಯವನ್ನು ಹೊರ ತರದೆ ಕೇವಲ ಶರೀರದ ಶೃಂಗಾರದಲ್ಲಿಯೇ ಪರ್ಯಾವಸಾನವಾಗುವ ಅಲಂಕಾರದ ವಿಷಯದಲ್ಲಿ ನಮ್ಮ ಪೂರ್ವಜರು ಉತ್ಸಾಹಿಗಳಾಗಿರಲಿಲ್ಲ ಎಂಬ ಅಂಶವನ್ನು ಈ ಸಂದರ್ಭದಲ್ಲಿ ನಾವು ನೆನೆಸಿಕೊಳ್ಳ ಬಹುದು. ವಾಸ್ತವದಲ್ಲಿ ತ್ರಿವೇಣೀಯು ಆತ್ಮಸೌಂದರ್ಯವನ್ನು ಹೊರತರುವ ಕೇಶಾಲಂಕಾರ. ಅದರ ಅರ್ಥವನ್ನು ಕುರಿತು ಮುಂದೆ ಒಂದು ಸಂಗ್ರಹವಾದ ವಿಶ್ಲೇಷಣೆಯನ್ನು ಮಾಡಬಯಸುತ್ತೇವೆ.

ಆಧುನಿಕ ವಿಜ್ಞಾನವು ಕೂದಲನ್ನು ಚರ್ಮದಿಂದ ಹುಟ್ಟುವ ಒಂದು ತಂತು ಎಂದು ವರ್ಣಿಸುತ್ತದೆ. ಆದರೆ ಅದರ ಮೂಲ ಚರ್ಮದಲ್ಲಿಯೇ ಸೀಮಿತವಾಗುವುದಿಲ್ಲ. ನಮಗೆ ಪರಿಚಿತವಾದಂತೆ ಕೂದಲು ಮನುಷ್ಯರಲ್ಲಿ ಉಂಟಾಗಬಹುದಾದ ಶೋಕ, ಭಯ, ಕ್ರೋಧ, ಕಾಮ ಮುಂತಾದ ಭಾವನೆಗಳೆಲ್ಲದರೊಡನೆಯು  ನಿಕಟವಾಗಿ ಸಂಬಂಧಿಸಿರುತ್ತದೆ. ನಮಗೆ ಸ್ಪಷ್ಟವಾಗಿ ಗೋಚರವಾಗದಿದ್ದರೂ, ನಮ್ಮಲ್ಲಿ ಉಂಟಾಗುವ ಭಾವೋದ್ರೇಕಗಳೆಲ್ಲವೂ ಕೂದಲಿನ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ. ಹಾಗೆಯೇ ಕೂದಲೂ ಸಹ ಮನಸ್ಸಿನ ಮೇಲೆ ತನ್ನ ಗಾಢವಾದ ಪ್ರಭಾವವನ್ನು ಬೀರುತ್ತದೆ. ಚೆನ್ನಾಗಿ ಬಾಚಿ, ತೈಲ ಇತ್ಯಾದಿಗಳಿಂದ ಸಂಸ್ಕರಿಸಿದ ಕೂದಲು ಮನಸ್ಸಿನಲ್ಲಿ ಸಮಾಧಾನ, ಸಂತೋಷ, ಉತ್ಸಾಹ ಇತ್ಯಾದಿಗಳನ್ನು ಉಂಟುಮಾಡುತ್ತದೆ. ಅದೇ ಕೆದರಿದ ಹಾಗೂ ಸಂಸ್ಕರಿಸದ ಕೂದಲು ಮನಸ್ಸಿನ ಮೇಲೆ ತದ್ವಿರುದ್ಧವಾದ ಪರಿಣಾಮವನ್ನುಂಟು ಮಾಡುತ್ತದೆ. ಉದಾಹರಣೆಗೆ ಕೆದರಿದ ಕೂದಲಗಳು ನಮ್ಮ ದೇಶದಲ್ಲಿ ಬಹಳ ಹಿಂದಿನಿಂದ ಶೋಕದ ಸಂಕೇತವಾಗಿ ಪರಿಗಣಿಸಲ್ಪಟ್ಟಿರುತ್ತವೆ.

ಆ ರೀತಿ ಭಾವೋದ್ರೇಕದಿಂದ ಕೂದಲುಗಳಲ್ಲಿ ಪರಿವರ್ತನೆಯುಂಟಾಗಲು ಅವು ಭಾವವಹವಾದ ಹೃದಯನಾಡಿಗಳೊಡನೆ ಸಂಬಂಧ ಹೊಂದಿರುವುದೇ   ಕಾರಣವಾಗಿದೆ. ಈ ನಾಡಿಗಳಲ್ಲಿ ಉಂಟಾಗುವ ಕಾಮ, ಕ್ರೋಧ, ಸಂತೋಷ ಮುಂತಾದ ಭಾವಗಳೆಲ್ಲವೂ ತಂತಿಯ ಮೇಲೆ ಹರಿಯುವ ವಿದ್ಯುತ್ತಿನಂತೆ ಕೂದಲುಗಳ ಮೂಲಕ ಕೊನೆಗೊಳ್ಳುತ್ತವೆಯೆಂದು ಹೇಳಬಹುದು. ಶರೀರವನ್ನು ತಾಳಿನಿಂದ ತುದಿಯವರಿಗೆ ವ್ಯಾಪಿಸಿರುವ ಭಾವವಾಹಿಯಾದ ನರತಂತುಗಳೆಲ್ಲವೂ ಪುರಾತನ ಭಾರತೀಯರ ದೃಷ್ಟಿಯಲ್ಲಿ  ಇಡಾ ಮತ್ತು ಪಿಂಗಳಾ ಎಂಬ ಎರಡು ನಾಡಿಗಳಿಂದ ಉತ್ಪನ್ನವಾಗುತ್ತವೆ. ಅವುಗಳಲ್ಲಿ ಇಡಾ ನಾಡಿಯ ಶಾಖೋಪಶಾಖೆಗಳು ಶರೀರದ ಎಡಭಾಗವನ್ನೂ ಮತ್ತು ಪಿಂಗಳಾ ನಾಡಿಯ  ಶಾಖೋಪಶಾಖೆಗಳು ಶರೀರದಬಲಭಾಗವನ್ನೂ ವ್ಯಾಪಿಸಿಕೊಂಡು ಅವುಗಳಲ್ಲಿ ನಡೆಯುವ ವ್ಯಾಪಾರಗಳೆಲ್ಲಕ್ಕೂ ಕಾರಣವಾಗುತ್ತವೆ ಎಂಬುದು ಅವರ ತೀರ್ಮಾನ. ಈ ಎರಡು ನಾಡಿಗಳೇ ಜೀವನದಲ್ಲಿ ತೋರಿಬರುವ ಧರ್ಮ, ಅಧರ್ಮ, ಪುಣ್ಯ ಪಾಪ, ಸುಖದುಃಖ ಮುಂತಾದ ಎಲ್ಲ ವಿಧವಾದ ಸ್ಥಿತಿಗತಿಗಳನ್ನೂ ಮತ್ತು ಅನುಭವಗಳನ್ನೂ ಉಂಟುಮಾಡಲು ಕಾರಣವಾಗುತ್ತವೆ. ಮನುಷ್ಯರಲ್ಲಿ ಪರ್ಯಾಯವಾಗಿ ಉಂಟಾಗುವ ಮಾನಸಿಕವಾದ ಏರಿತಗಳೆಲ್ಲಕ್ಕೂ ಈ ನಾಡಿಗಳೇ ಮೂಲ, ಅವೆರಡು ಚಕ್ರಗಳ ಮೇಲೆಯೇ ಜೀವನ ರಥವು ಉರುಳತ್ತದೆ. ಈ ಎರಡು ಪಕ್ಷಗಳೇ ಜೀವನ ಪಕ್ಷಿಯನ್ನು ಚೈತನ್ಯಮಯವಾದ ಆಕಾಶದಲ್ಲಿ ವಹಿಸುತ್ತವೆ. ಒಂದು ಮಾತಿನಲ್ಲಿ ಹೇಳಬಹುದಾದರೆ ಧರ್ಮ, ಅರ್ಥ ಮತ್ತು ಕಾಮಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಕ್ಕೂ ಈ ಎರಡು ನಾಡಿಗಳೇ ಆಶ್ರಯ.

ಆದರೆ ಈ ಎಡ ಬಲದ ನಾಡಿಗಳೇ ಎಲ್ಲವೂ ಅಲ್ಲ. ಅವುಗಳನ್ನು ಮೀರಿಸಿರುವ ಮತ್ತು ಅವುಗಳಿಗೂ ಮೂಲವಾದ ಪರಮರಹಸ್ಯವಾದ, ಮಧ್ಯನಾಡಿಯಾದ ಸುಷುಮ್ನೆಯು ತಾನೆ ಜೀವನದ ಮೂಲ ನಾಡಿ. ಅದು ಜ್ಞಾನ ನಾಡಿಯೆಂದು ಕರೆಸಿಕೊಳ್ಳುತ್ತದೆ.ಅದರಲ್ಲಿಯೇ ಧ್ಯಾನಯೋಗದಿಂದ ಜ್ಞಾನಿಯಾದವನು ತನ್ನ ಬಾಳಿಗೆ ಮೂಲನಾದ , ಎಲ್ಲರ ಬಾಳಿಗೂ ಮೂಲನಾದ, ಅಧ್ಯಾತ್ಮ ದೀಪನಾದ, ಪರಮ ಪ್ರಭುವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಅದನ್ನು ಮುಟ್ಟಿದಾಗ ತಾನೆ, ಮನಸ್ಸಿಗೆ ಒಂದು ನೆಲೆ ಸಿಕ್ಕಿದಂತಾಗುತ್ತದೆ. ಅರಾಮ, ಶಾಂತಿ ಮತ್ತು ನೆಮ್ಮದಿಗಳುಂಟಾಗುತ್ತವೆ. ಅದರೊಡನೆ ಸಂಬಂಧವನ್ನು ಕಳೆದುಕೊಂಡಾಗ ಮನಸ್ಸು ಪ್ರಕೃತಿಯ ಶಕ್ತಿಗಳಿಗೆ ಸಿಕ್ಕಿ ಸಂಸ್ಮರಣ ಮಾಡುತ್ತಿರುತ್ತದೆ. ಅದರೊಡನೆ ಪುನಃ ಸಂಬಂಧವನ್ನು ಸ್ಥಾಪಿಸಿಕೊಂಡಾಗ ಮನಸ್ಸು ಸ್ವತಂತ್ರವಾಗುತ್ತದೆ.

ಆದುದರಿಂದ ಮನುಷ್ಯನು ಇಂದ್ರಿಯ ಜೀವನ ಮತ್ತು ಬುದ್ಧಿ  ಜೀವನಗಳನ್ನು ಎಷ್ಟು ಚೆನ್ನಾಗಿ ಮಾಡುತ್ತಿದ್ದರೂ ಸಹ, ತನ್ನ ಒಳಗಿರುವ ಜ್ಞಾನಮೂಲವನ್ನು ಸರ್ವಥಾ ಮರೆಯಬಾರದು. ಮರೆತರೆ ಅವನು ಶೋಕ ಮತ್ತು ವಿಷಾದಗಳಿಗೆ ಅವಶ್ಯವಾಗಿ ಈಡಾಗುತ್ತಾನೆ. ಅವನ  ಜೀವನವೇ ಶೂನ್ಯವಾಗುತ್ತದೆ. ಅವನು ದುಃಖಕ್ಕೆ ಸಿಕ್ಕಿಕೊಳ್ಳುತ್ತಾನೆ. ಅವನ ಜೀವನದಲ್ಲಿ ಯಾವುದೂ ನೆಟ್ಟಗಿರುವುದಿಲ್ಲ.

ತ್ರಿವೇಣಿಯು ಸೂಚಿಸುವುದು ಈ ಆದರ್ಶವನ್ನೇ. ಈ ಆದರ್ಶವು ಸಂಯಮಶೀಲರಾದ ಜನರಿಗೆ ಮಾತ್ರ ಸಾಧ್ಯ. ಅದು ಈ ಆದರ್ಶವನ್ನು ಸೂಚಿಸುವುದು ಮಾತ್ರವಲ್ಲದೆ ಮನಸ್ಸು ಮತ್ತು ಇಂದ್ರಿಯಗಳ ಮೇಲೆ ಹತೋಟಿಯನ್ನುಂಟುಮಾಡಿಕೊಳ್ಳುವ ಸಾಧನವೂ ಆಗಿರುತ್ತದೆ. ಅದರಲ್ಲಿ ಕೂದಲು ಎಡ, ಮಧ್ಯ ಮತ್ತು ಬಲ ಎಂಬ ಮೂರು ಭಾಗಳಾಗಿ ವಿಂಗಡಿಸಲ್ಪಟ್ತು ಒಂದು ಮತ್ತೊಂದರೊಡನೆ ಹೆಣೆಯಲ್ಪಡುತ್ತದೆ. ಎಡ, ಬಲದ ಭಾಗಗಳು ಮಧ್ಯದ ಭಾಗದೊಡನೆ ಹೆಣೆಯಲ್ಪಡುತ್ತದೆ. ಆಧಿಭೌತಿಕ (ಅರ್ಥ,ಕಾಮ) ಮತ್ತು  ಆಧಿದೈವಿಕ (ಧರ್ಮ) ಜೀವನಗಳನ್ನು ಆಧ್ಯಾತ್ಮಕದೊಡನೆ ಸೇರಿಸಿ ಹೆಣೆದು ಜೀವನಮಾಡಬೇಕೆಂದು ಸೂಚಿಸುವುದೇ ಅದರ ತಾತ್ಪರ್ಯ. ಆಗತಾನೆ ಜೀವನವು ಸಮರಸವಾಗಿರುತ್ತದೆ. ಇಲ್ಲದೆ ಇದ್ದರೆ ಏರುತಗ್ಗುಗಳಿಂದ ಕೂಡಿ ವಿಷಮವಾಗಿರುತ್ತದೆ, ಯಾವುದಾದರೂ ಒಂದು ಕಡೆಗೆ ವಾಲಿರುತ್ತದೆ ಎಂಬ ಗಹನವಾದ ತಥ್ಯವನ್ನು ಅದು ಹೇಳುತ್ತದೆ.

ಆದರೆ ತ್ರಿವೇಣಿಯು ಒಂದು ಕೃತಕವಾದ ಚಿಹ್ನೆಯಲ್ಲ. ಆ ರೀತಿ ಮೂರಾಗಿ ವಿಭಾಗಿಸುವ ಕೂದಲುಗಳು ಜೀವನದ ಮೂಲವಾದ ಮೂರು ನಾಡಿಗಳಿಂದಲೇ ಉಗಮಿಸುತ್ತವೆ. ಅವುಗಳನ್ನು ಸಂಯಮ (ಕಟ್ಟು) ಮಾಡುವುದರಿಂದ, ಅವು ಮನಸ್ಸಿನಮೇಲೆ ಸಹ ಸಂಯಮ ಪಡೆಯಲು ಸಹಾಯ ಮಾಡುತ್ತವೆ. ಮನಸ್ಸು ಸಮರಸವಾದ   ಜೀವನಮಾಡಲು ಸುಲಭವಾಗಿ ಹತೋಟಿಗೆ ಬರುತ್ತದೆ. ಅದು ಶಾರೀರಕ ಮರ್ಮಗಳನ್ನರಿತು ಕುಶಲತೆಯಿಂದ ಆತ್ಮಸೌಂದರ್ಯ ಅಥವಾ ಸಮರಸವಾದ ಜೀವನವನ್ನು ಹೇಳುವ ಹಾಗೂ ಅದಕ್ಕೆ ಸಹಾಯ ಮಾಡುವ ಅಲಂಕಾರ ವಿಧಾನವಾಗಿರುತ್ತದೆ.

ಈ ವಿವರಣೆಯು ದೂರಾನ್ವಯವಾದುದಲ್ಲ ಎಂಬುದನ್ನು ಮತ್ತೊಂದು ಪರಂಪರೆಯೂ ಸಿದ್ಧಮಾಡುತ್ತದೆ. ತ್ರಿವೇಣಿ ಎಂಬ ಪದಕ್ಕೆ ಗಂಗಾ, ಯಮುನಾ ಮತ್ತು ಸರಸ್ಚತಿಗಳು ಸೇರುವ ಜಾಗ (ಅರ್ಥಾತ್ ಪ್ರಯಾಗ) ಎಂಬ ಅರ್ಥವು ಇರುತ್ತದೆ. ಯೋಗದ ಪರಿಭಾಷೆಯಲ್ಲಿ ಈ ಗಂಗಾ, ಯಮುನಾ ಮತ್ತು ರಹಸ್ಯವಾಹಿನಿಯೆಂದು ಹೇಳುವ ಸರಸ್ವತೀ ನದಿಗಳು ಪಿಂಗಳಾ, ಇಡಾ ಮತ್ತು ಗೂಢವಾದ ಸುಷುಮ್ನಾ ನಾಡಿಗಳನ್ನೇ ಪ್ರತೀಕಿಸುವ ಪದಗಳಾಗಿರುತ್ತವೆ.

ಪುರಾತನ ಭಾರತೀಯರು ತಮ್ಮ ಅಂತರ್ದೃಷ್ಟಿಗೆ ಗೋಚರಿಸಿದ ಒಳಸತ್ಯಗಳನ್ನೇ ಕೇಶಾಲಂಕಾರದ ಮೂಲಕ ವ್ಯಕ್ತಪಡಿಸುತ್ತಾರೆಂಬುದಕ್ಕೆ ತ್ರಿವೇಣಿಗೆ ನಿಕಟವಾಗಿ ಸಂಬಂಧಿಸಿರುವ ಬೈತಲೆಯೂ ಒಂದು ಉದಾಹರಣೆ. ಪ್ರತಿಯೊಬ್ಬ ವಿವಾಹಿತ ಸ್ತ್ರೀಯೂ ಅವಶ್ಯವಾಗಿ ಬೈತಲೆಯನ್ನು ಮಾಡಿಕೊಳ್ಳಬೇಕೆಂಬ ವಿಧಿ ಇರುತ್ತದೆ. ತಲೆಯ ಕೂದಲನ್ನು ಮಧ್ಯದಲ್ಲಿ ಎರಡಾಗಿ ವಿಭಾಗ ಮಾಡಿದಾಗ ದ್ವಾದಶಾಂತ (ಹಣೆಯ ಮೇಲ್ಭಾಗ)ದಿಂದ ಕಲೆಯ ಮಧ್ಯ (ಬ್ರಹ್ಮ ರಂಧ್ರ)ದ ವರೆಗೆ ಉಂಟಾಗುವ ರೇಖೆಯೇ ಬೈತಲೆ. ಅದನ್ನು ಸೀಮಂತ ಎಂದು ಕರೆಯುವರು. ಅದನ್ನು ಮಾಡಿಕೊಳ್ಳುವುದು ಹಿಂದುಗಳಲ್ಲಿ ಆಸೇತು ಹಿಮಾಚಲದವರೆಗೆ ಇರುವ ಪದ್ಧತಿಯಾಗಿದೆ. ಆ ರೇಖೆಯು ಬಹಳ ಸಮೀಪವಾಗಿ ಜ್ಞಾನವನ್ನು ಹೊಂದುವ ಮಧ್ಯಮಾರ್ಗವನ್ನೇ ಪ್ರತೀಕಿಸುತ್ತದೆ. ಈ ರೇಖೆಯು ಐತರೇಯೋಪನಿಷತ್ತಿನಲ್ಲಿ ಬರುವ "ಏತದೇವ ಸೀಮಾನಂ ವಿದಾರ್ಯ ಏತಯಾದ್ವಾರಾ ಪ್ರಾಪದ್ಯತ| ಸೈಷಾ ವಿದೃತಿರ್ನಾಮ ದ್ವಾಃತದೇತನ್ನಾಂದನಂ||" (ಆ ಆತ್ಮನು ಈ ಸೀಮೆ (ಎಲ್ಲೆ)ಯನ್ನೇ ಸೀಳಿಕೊಂಡು ಈ ದ್ವಾರದಿಂದಲೇ ಪ್ರಕಟವಾದನು. ಈ ದ್ವಾರಕ್ಕೇ "ವಿದೃತಿ"  (ಸೀಳು) ಎಂದು ಹೆಸರು. ಇದೇ ಆನಂದವನ್ನು ಪಡೆಯುವ ದಾರಿ) ಎಂಬ ಮಾತಿಗೆ ಒಂದು ಬಾಹ್ಯರೂಪವನ್ನು ಕೊಡುತ್ತದೆ.  

ಹಾಗಿರುವುದರಿಂದಲೇ ಕರ್ಮ, ಪೂಜೆ ಇತ್ಯಾದಿಗಳನ್ನು ಮಾಡುವಾಗ ತಲೆಕೆದರಿಕೊಂಡು ಇರಬಾರದು ಎಂಬ ಸಂಪ್ರದಾಯ ಬಂದಿರುತ್ತದೆ. ತಲೆ ಕೆದರಿಕೊಂಡಿದ್ದರೆ ಪೂಜೆಗೆ ಬೇಕಾದ ಸ್ಥಿತಿಯೇ ಮನಸ್ಸಿನಲ್ಲಿ ಉಂಟಾಗುವುದಿಲ್ಲ. ಕೂದಲನ್ನು ಕತ್ತರಿಸಿಕೊಳ್ಳುವುದು, ಕೆದರಿಕೊಳ್ಳುವುದು ಇತ್ಯಾದಿಗಳು ವಿಕ್ಷಿಪ್ತ ಚಿತ್ತತೆಯ , ಅಸಂಯಮದ ಕುರುಹುಗಳು. ಇಂದ್ರಿಯ ಮತ್ತು ಮನಸ್ಸಂಯಮಗಳಿಲ್ಲದ ವ್ಯಕ್ತಿಗಳಾಗಲಿ, ದೇಶಕ್ಕಾಗಲಿ ಪ್ರೇಮವಿಲ್ಲ. ಅದು ಅಸಂಸ್ಕೃತಿಯ ಕುರುಹು. ಅನಾರ್ಯರ ದಾರಿ.

ಕೂದಲಿನ ವಿಷಯವು ನಮ್ಮ ಜೀವನದಲ್ಲಿ ಒಂದು ದೊಡ್ದ ಕಲ್ಪವಾಗಿ ಪರಿಣಮಿಸಿದ್ದಿತು. ಆದರೆ ಇಂದು ಅದೆಲ್ಲವೂ ಕೀಳು ಮೇಲಾಗಿರುತ್ತದೆ. ಬಗೆ ಬಗೆಯ ಕಾರಣಗಳಿಂದ ನಾವು ಸಭ್ಯತೆಯಿಂದ ಅಸಭ್ಯತೆಯನ್ನು ಪ್ರವೇಶಿಸುತ್ತಿದ್ದೇವೆ. ಆ ರೀತಿ ಆಗುತ್ತಿರುವುದನ್ನು ವಿಚಾರದಿಂದ, ತಿಳಿವಳಿಕೆಯಿಂದ ತಡೆದು ಸಂಸ್ಕೃತಿಯ ಸವೆದ ದಾರಿಯಲ್ಲಿ ನಾವು ಹೋಗುವುದು ಉಚಿತವಾಗಿದೆ. ಇನ್ನೂ ಅದಕ್ಕೆ ಕಾಲ ಮೀರಿಲ್ಲ.
ಶ್ರೀಗುರುಭಗವಂತರು  "ಭಾರತೀಯರ ಉಡುಗೆತೊಡಿಗೆ, ಆಹಾರ ವಿಹಾರ, ವಿದ್ಯೆ, ಕಲೆ, ವಿಜ್ಞಾನ ಇತ್ಯಾದಿಗಳೆಲ್ಲವೂ ಅಷ್ಟಾಂಗಯೋಗದಿಂದ ಹಾಸುಹೊಕ್ಕಾಗಿ   ಹೆಣೆಯಲ್ಪಟ್ಟಿವೆ " ಎಂದು ಹೇಳುತ್ತಿದ್ದರು. ಈ ತ್ರಿವೇಣಿಯು ಅದಕ್ಕೆ ಒಂದು ಉತ್ತಮವಾದ ಉದಾಹರಣೆಯಾಗಿರುತ್ತದೆ

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೪ ಸಂಚಿಕೆ: ೦೩ ರಲ್ಲಿ  ಪ್ರಕಟವಾಗಿದೆ.