Saturday, August 29, 2020

ಕ್ಷಾಂತಿ (ಆತ್ಮಗುಣ) Khsanti (Athmaguna)

ಲೇಖಕರು: ವಿದ್ವಾನ್ ನರಸಿಂಹ ಭಟ್ಟ

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರತಿದಿನ ಬೆಳಿಗ್ಗೆ ಏಳುತ್ತಿದ್ದಂತೆ ನಾವು 'ಸಮುದ್ರವಸನೇ ದೇವಿ!' ಎಂದು ಭೂತಾಯಿಯನ್ನು ನಮಸ್ಕರಿಸುತ್ತಾ, ನಾನು ಮಾಡುವ ಪಾದಸ್ಪರ್ಶವನ್ನು ಕ್ಷಮಿಸು ಎಂದು ಪ್ರಾರ್ಥಿಸಿಕೊಳ್ಳುತ್ತೇವೆ. ಭೂತಾಯಿಯ ಕ್ಷಮೆ ಅದೆಂಥಾದ್ದು! ಹಾಗೇ ಪ್ರತಿದಿನ ಭಗವಂತನನ್ನು ಪೂಜಿಸಿ ಕೊನೆಯಲ್ಲಿ 'ಸರ್ವಾಪರಾಧಾನ್ ಕ್ಷಮಸ್ವ' ಎಂದು ಬೇಡಿಕೊಳ್ಳುತ್ತೇವೆ. ಭಗವಂತ ತಾನೆ ನಮ್ಮ ಎಲ್ಲಾ ತಪ್ಪುಗಳನ್ನು ಮನ್ನಿಸಬಲ್ಲ! ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣನು ಶಿಶುಪಾಲನೆಂಬ ದುಷ್ಟನ ನೂರು ಅಪರಾಧಗಳನ್ನು ಮನ್ನಿಸುತ್ತಾನೆ ಎಂಬ ಕಥೆಯನ್ನು ಕೇಳುತ್ತೇವೆ. ಮಕ್ಕಳು ಮಾಡುವ ತಪ್ಪುಗಳನ್ನು ತಂದೆತಾಯಿಯರು ಗುರುಹಿರಿಯರು ಸಹಿಸಿಕೊಳ್ಳುತ್ತಾರೆ. ಕ್ಷಾಂತಿ ಎಂದರೇನು?

ಕ್ಷಾಂತಿ ಎಂಬ ಶಬ್ದಕ್ಕೆ ಕ್ಷಮೆ, ಸಹನೆ, ಮರ್ಷ, ಯೋಗ್ಯತೆ, ಸಾಮರ್ಥ್ಯ ಎಂಬೆಲ್ಲಾ ಅರ್ಥಗಳಿವೆ. ಸಾಮಾನ್ಯವಾಗಿ ಇತರರು ಮಾಡುವ ತಪ್ಪನ್ನು ಸಹಿಸಿಕೊಳ್ಳುವುದು ಕ್ಷಾಂತಿ ಎನಿಸಿಕೊಳ್ಳುತ್ತದೆ. ತಪ್ಪಿಗೆ ಶಿಕ್ಷೆ ಕೊಡಬೇಕು, ಅಥವಾ ತಪ್ಪನ್ನು ಮಾಡದಂತೆ ತಿಳಿಹೇಳಬೇಕು- ಅದನ್ನು ಬಿಟ್ಟು ತಪ್ಪನ್ನು ಸಹಿಸುವುದು, ಮನ್ನಿಸುವುದು ಮೂರ್ಖತನವಲ್ಲವೇ? ಎಂಬ ಪ್ರಶ್ನೆ ಬರುತ್ತದೆ. ನಿಜ. ಬೇರೆಯವರು ತಪ್ಪು ಮಾಡಿದಾಗ ಅದನ್ನು ಮನ್ನಿಸುವುದು ಮೂರ್ಖತನವಲ್ಲ, ಅದು ಕ್ಷಮಿಸುವವನ ದೊಡ್ಡತನ. ತಪ್ಪು ಮಾಡಿದರೂ ತಾನು ಉದ್ವೇಗಕ್ಕೆ ಒಳಗಾಗದೆ ಸಾವಧಾನವಾಗಿ ಸಮಯವನ್ನು ಕಾದು ಅದನ್ನು ಸರಿಪಡಿಸುವುದು ಸಜ್ಜನಿಕೆ. ಪ್ರತಿಯೊಬ್ಬನೂ ತಪ್ಪನ್ನು ಮಾಡುತ್ತಾನೆ. ಮನ್ನಿಸುವ ಸ್ವಭಾವದವನಿದ್ದಾಗ ಅವನ ಪ್ರಭಾವದಿಂದ ಯಾವಾಗ ತನ್ನ ತಪ್ಪನ್ನು ತಾನೇ ಅರ್ಥಮಾಡಿಕೊಳ್ಳುತ್ತಾನೋ ಅವನು ಬೇಗ ಎತ್ತರಕ್ಕೇರುತ್ತಾನೆ. ಬೇರೆಯವರು ನಮ್ಮನ್ನು ಮನ್ನಿಸಿದಾಗ ಅದು ನಮ್ಮನ್ನು ತಿದ್ದಿಕೊಳ್ಳಲು ಇರುವ ಅವಕಾಶವೇ ಸರಿ.. ಯಾವಾಗ ತಿಳಿಯದೇ ಅಥವಾ ಅನಿವಾರ್ಯವಾಗಿ ಅಪರಾಧವನ್ನು ಮಾಡುತ್ತಾನೋ ಅಲ್ಲಿ ಮಾತ್ರ ಕ್ಷಮೆಯೇ ಹೊರತು, ತಿಳಿದು ಮತ್ತೆ ಮತ್ತೆ ತಪ್ಪನ್ನು ಮಾಡಿದಾಗ ಅಲ್ಲಿ ದಂಡನೆಯೇ ಕ್ಷಮೆ. ದಂಡಿಸುವ ಸಾಮರ್ಥ್ಯ ಇದ್ದಾಗಲೂ ದಂಡಿಸದೆ ಸಹಿಸಿಕೊಂಡರೆ ಅದನ್ನು  ಸಹನೆ ಎನ್ನಬೇಕು; ಅದು ಹೇಡಿತನವಲ್ಲ. ಮಹಾಭಾರತದಲ್ಲಿ ಶಿಶುಪಾಲನಿಗೆ ಶ್ರೀಕೃಷ್ಣನು ಅನುಗ್ರಹಿಸಿದ ಕ್ಷಮೆ ಸ್ತುತ್ಯವಾದುದು.

ಇತರರು ತನಗೆ ತೊಂದರೆಯನ್ನುಂಟು ಮಾಡಿದಾಗ ತಿರುಗಿ ನಾವು ತೊಂದರೆಯನ್ನುಂಟುಮಾಡದೇ ಇರುವುದು ಸಹನೆ. ಕೆಲವೊಮ್ಮೆ ಬೇರೆಯವರು ನಮಗೆ ನೋವನ್ನುಂಟುಮಾಡಿದಾಗ ಅವರ ಮೇಲೆ ಕೋಪವು ಬರುತ್ತದೆ. ಇನ್ನೂ ಮಿತಿಮೀರಿದಾಗ ಕೈಗೆ ದೊಣ್ಣೆಯೂ ಬರಬಹುದು. ಶಕ್ತಿ ಇರುವವನಾದರೆ ಪ್ರತೀಕಾರದ ಇಚ್ಚೆಯನ್ನುತೀರಿಸಿಕೊಳ್ಳಬಹುದು. ಆದರೆ ಅಶಕ್ತನಾದವನು "ಕೈಯ್ಯಲ್ಲಾಗದವನು ಮೈಯ್ಯೆಲ್ಲಾ ಪರಚಿಕೊಂಡ" ಎಂಬಂತೆ ಪ್ರತಿರೋಧ ಮಾಡದಿರಬಹುದು. ಅದು ಸಹನೆ ಅಲ್ಲ.  ಈ ಬಗ್ಗೆ  ಶ್ರೀರಂಗಮಹಾಗುರುಗಳ ಬಳಿ ಅವರ ಶಿಷ್ಯಶ್ರೇಷ್ಠರಾದ ಶ್ರೀಶ್ರೀರಂಗಪ್ರಿಯಮಹಾಸ್ವಾಮಿಗಳು ಪ್ರಶ್ನೆಯನ್ನು ಮಾಡಿದರಂತೆ- "ಒಬ್ಬ ವ್ಯಕ್ತಿಯ ವಿಷಯದಲ್ಲಿ ಮನಸ್ಸಿನಲ್ಲಿ ಕೋಪವುಂಟಾಗುತ್ತದೆ. ಅನಂತರ ಅವನನ್ನು ಪ್ರಹರಿಸುವಷ್ಟು ಕೋಪಬರುತ್ತದೆ. ಹಾಗಾದರೆ ಹೊರಗಡೆ ಪ್ರಹಾರ ಮಾಡದಿದ್ದರೂ ಮಾನಸಿಕವಾಗಿ ಮಾಡಿದಂತಾಯಿತು. ಆದ್ದರಿಂದ ಈ ಮಾನಸಿಕವಾದ ಕಾರ್ಯದಿಂದ ಪಾಪವುಂಟೇ? ಇಲ್ಲವೇ? ಪೂರ್ಣವಾದ ಪ್ರಹಾರ ಪಾಪವುಂಟೇ?" ಎಂದು. ಆಗ ಅವರು ಕೊಟ್ಟ ಉತ್ತರ " ಬರಿಯ ಮಾನಸಿಕ ಕಾರ್ಯದಿಂದ ಅಷ್ಟು ಪಾಪವಿಲ್ಲ, ಮನಸ್ಸಿನಲ್ಲುಂಟಾಗಿ ಹೊರಗಡೆಯೂ ಮಾಡಿದರೆ ಆ ಪಾಪದ ಪ್ರಮಾಣ ಹೆಚ್ಚು. ಆದ್ದರಿಂದ ಒಳಗಡೆ ವೇಗ ಉಂಟಾದರೂ ಹೊರಗಡೆ ತೋರಿಸಬಾರದು. ಒಳಗಡೆಯೂ ವೇಗ ಉಂಟಾಗದಂತೆ ಇರುವುದು ಉತ್ತಮ ಕಲ್ಪ" ಎಂದು.  ಮನೋವೇಗವನ್ನು ತಡೆಯುವುದೇ ಕ್ಷಮಾ.

ಸೂಚನೆ: 29/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.