Saturday, August 8, 2020

ಪರರಿಗೆ ತೊಂದರೆಯಾಗದಿರಲಿ (Pararige Tondareyagadirali)

ಲೇಖಕರು: ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಅಕೃತ್ವಾ ಪರಸಂತಾಪಮ್ ಅಗತ್ವಾ ಖಲನಮ್ರತಾಮ್ |
ಅನುತ್ಸೃಜ್ಯ ಸತಾಂ ಮಾರ್ಗಂ ಯತ್ಸ್ವಲ್ಪಮಪಿ ತದ್ಬಹು ||- ಸುಭಾಷಿತ

ಅರ್ಥ- ಬೇರೆಯವರಿಗೆ ತೊಂದರೆ ಕೊಡದೆ ದುಷ್ಟರಿಗೆ ಬಾಗದೆ ಸಜ್ಜನರ ಮಾರ್ಗವನ್ನು ಬಿಡದೆ ಇದು ಸ್ವಲ್ಪವೇ ಆದರೂ ಬಹುವಾಗಿ ನಿಲ್ಲುವುದು.

ವಿವರಣೆ - ಮಾಡುವ ಕೆಲಸ ಚಿಕ್ಕದಿರಬಹುದು ಅಥವ ನಿಧಾನಗತಿಯದ್ದಿರಬಹುದು ಆರಂಭ ಸ್ವಲ್ಪವೇ ಇರಬಹುದು. ಯಾವುದನ್ನು ನಿಧಾನವಾಗಿ ಸ್ವಲ್ಪವಾಗಿ ಮಾಡಿದರೂ ಅದರ ಫಲ ನಿರೀಕ್ಷೆಗೂ ಮೀರಿದ್ದಾಗಿರುತ್ತದೆಯೋ ಅದು ಮಾಡಲೇ ಬೇಕಾದದ್ದು. ಮತ್ತೊಬ್ಬರಿಗೆ ತೊಂದರೆ ಆಗದ ರೀತಿಯಲ್ಲಿ ಬದುಕಬೇಕು. ಕಾಯಿಕ ಮಾನಸಿಕ ವಾಚಿಕ ಎಂದು ತೊಂದರೆಯು ಮೂರು ಬಗೆಯಲ್ಲಿ ಇರುತ್ತದೆ. ಈ ಮೂರೂ ರೀತಿಯಿಂದಲೂ ನಮ್ಮಿಂದ ಮತ್ತೊಬ್ಬರಿಗೆ ಪೀಡೆ ಆಗದ ರೀತಿಯಲ್ಲಿ ಬದುಕುವುದನ್ನು ಕಲಿಯಬೇಕು. ಇನ್ನು ಯಾವುದೋ ಅಲ್ಪದ ಆಸೆಗಾಗಿ ಅಥವ ಯಾವುದೋ ಒತ್ತಡಕ್ಕೆ ಮಣಿದೊ ದುಷ್ಟರಿಗೆ ಬಾಗುವಂತಹ ಪರಿಸ್ಥಿತಿ ಬರುವುದುಂಟು. ಇಂತಹ ಅನಿವಾರ್ಯವೋ ಒತ್ತಡವೋ ಬರದ ರೀತಿಯಲ್ಲಿ ನಮ್ಮ ಜೀವನಕ್ರಮವನ್ನು ಇಟ್ಟುಕೊಳ್ಳಬೇಕು. ಮತ್ತು ಅತಿಮುಖ್ಯವಾದದ್ದು ಸಜ್ಜನರ ಮಾರ್ಗವನ್ನು ಬಿಡದೆ ಇರುವುದು.

ನಮ್ಮ ಬದುಕಿನಲ್ಲಿ ಸಜ್ಜನರ ನಡೆನುಡಿ ಆಚಾರವಿಚಾರಗಳು ಹಾಸುಹೊಕ್ಕಾಗಿರಬೇಕು. ಸತ್ ಎಂದರೆ ಪರಮಾತ್ಮವಸ್ತು. ಯಾರ ಬದುಕು ಭಗವಂತನ ಸಾಕ್ಷಾತ್ಕಾರಕ್ಕಾಗಿ ಅನವರತವೂ ತವಕಿಸುತ್ತಿರುವುದೋ ಅಂತವರನ್ನು 'ಸತ್+ಜನ=ಸಜ್ಜನ' ಎಂದು ಕರೆಯುತ್ತಾರೆ. ಸತ್ತ್ವಗುಣಕ್ಕೆ ಅದೀನವಲ್ಲದ ರಜಸ್ಸು ಮತ್ತು ತಮಸ್ಸು ಎಂಬ ಗುಣಗಳಿಂದ  ಬಿಡುಗಡೆ ಹೊಂದಿದವರೂ ತಪ್ಪಸ್ಸು ಜ್ಞಾನ ಇವುಗಳ ಬಲದಿಂದ ಯಾರಿಗೆ ಕಾಲತ್ರಯದಲ್ಲೂ ನಿರ್ಮಲವಾದ ಜ್ಞಾನವು ತಡೆಯಿಲ್ಲದೆ ಬರುತ್ತದೆಯೋ ಅಂತಹವರನ್ನು ಆಪ್ತರು ಶಿಷ್ಟರು ವಿಬುಧರು ಇತ್ಯಾದಿ ಪದಗಳಿಂದ ಕರೆಯುತ್ತಾರೆ. ಇವರು ಯಾವುದನ್ನು ಮಾಡುತ್ತಾರೋ ಅಂತಹ ಕರ್ಮಗಳು ಶುದ್ಧವಾಗಿರುತ್ತವೆ. ಇವರ ಮಾತುಗಳು ಸತ್ಯವೇ ಆಗಿರುತ್ತವೆ. ಇವರು ಮನಸ್ಸಿನಿಂದ ಚಿಂತಿಸಿದ್ದು ಯಾವುದೂ ಬೇರೆಯವರಿಗೆ ಕೇಡು ಆಗದು. ಇಂತವರು ಸಾಗಿದ ಮಾರ್ಗವನ್ನು ಸ್ವಲ್ಪ ಅನುಸರಿಸಿದರೂ ನಮ್ಮ ಬದುಕು ಬಂಗಾರವಾಗದಿರಲು ಸಂಶಯವೇ ಇಲ್ಲ. ಆಗ ದುಷ್ಟರಿಗೆ ಬಾಗುವ ಅನಿವಾರ್ಯವಾಗಲಿ ಒತ್ತಡವಾಗಲಿ ಬರದು. ಮತ್ತು ಬೇರೆಯವರ ದುಃಖವನ್ನು ನೋಡಿ ಮರುಗದಿರಲು ಹೇಗೆ ಸಾಧ್ಯ ಅಲ್ಲವೇ?.

ಸೂಚನೆ: 08/08/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.