ಲೇಖಕರು: ಡಾ || ಮೋಹನ ರಾಘವನ್
ಬ್ರಹ್ಮಚರ್ಯ ಎಂಬುದು ಭಾರತರ ಜೀವನ ವ್ಯವಸ್ಥೆಯ ಮೊದಲನೆಯ ಹಂತ. ಮುಂಬರುವ ಸಂಸಾರದ ಸುಖ-ಭೋಗಗಳ ಮೊದಲು ಶಿಸ್ತು, ಸಂಯಮ ಸಾಧಿಸುವ ಕಾಲ. ಜೀವನದ ಗುರಿಯತ್ತ ಸಾಗಲು ಭದ್ರ ತಳಹದಿ ಹಾಕಿಕೊಡುವ ಘಟ್ಟವೇ ಬ್ರಹ್ಮಚರ್ಯ. ಯಾವುದಾ ಗುರಿ ಎಂಬ ಪ್ರಶ್ನೆ ಕಾಡುತ್ತೆ. ಈ ದೇಹ ಬಟ್ಟೆಯಂತೆ; 'ನಾನು' ಎನ್ನುವ ನಿಜವಾದ ಪದಾರ್ಥವೆಂದರೆ ನಮ್ಮೊಳಗಿನ ಚೈತನ್ಯ; ಈ ಚೈತನ್ಯದ ಅದ್ಭುತವಾದ ಆನಂದಭರಿತವಾದ ಸ್ವಾನುಭವ ಪಡೆಯುವುದೇ ಬ್ರಹ್ಮಚರ್ಯದ ಗುರಿ. ನಾವು ಊಹಿಸಿಲು ಸಾಧ್ಯವಾದ ತುಂಬಾ ದೊಡ್ಡ ಸುಖಕ್ಕಿಂತಲೂ ಕೋಟಿ ಕೋಟಿ ಪಾಲು ಆನಂದ ಕೊಡುವಂತದ್ದು ಇದೆಂಬುದು ಭಾರತದ ಋಷಿ-ಮುನಿಗಳ ಸ್ವಂತ ಅನುಭವ. ಆ ಗುರಿ ಮುಟ್ಟಲು ಇಂದ್ರಿಯಗಳ ಸಂಯಮ ಅವಶ್ಯ. ಚಿತ್ತದ ಅಲೆಗಳನ್ನು ಶಾಂತಗೊಳಿಸಬೇಕು.
ಇಂದು ಮೊಬೈಲೇ ನಮ್ಮ ಜೀವ; ಒಂದು ನಿಮಿಷ ಬಿಟ್ಟಿರಲಾರೆವು. ಮೊಬೈಲ್ ಎಲ್ಲಿಟ್ಟೆ ಎಂದು ಮರೆತುಹೋಯಿತು. ಹುಡುಕಲು ಮತ್ತೊಂದು ಫೋನ್ಇಂದ ಕರೆಮಾಡಿ ಎಲ್ಲಿ ಸದ್ದು ಬರುತ್ತೆ ಎಂದು ಮನೆಯಿಡೀ ಹುಡುಕುತ್ತೇವೆ. ಆದರೆ ಮೊಬೈಲ್ ವಾಲ್ಯೂಮ್ ತುಂಬಾ ಕಡಿಮೆ; ಮನೆಯಲ್ಲಾದರೋ ದೊಡ್ಡ ಸಮಾರಂಭ; ಭಾರೀ ಗಲಾಟೆ. ಮನೆಯಿಡೀ ಜನ, ಮಕ್ಕಳ ಕೂಗಾಟ. ಮೊಬೈಲ್ ಸದ್ದು ಹೇಗೆತಾನೇ ಕೆಳೀತು ? ಮೊಬೈಲ್ ಮನೇಲಿ ಇಲ್ಲವೇ ಇಲ್ಲ ಎಂದುಹೇಳುವರೂ ಉಂಟು. ನಮ್ಮ ಪರಿಸ್ಥಿತಿಯೂ ಇದೆ. ನಮ್ಮೊಳಗೆ ಇಂದ್ರಿಯಗಳ ಗಲಾಟೇ ಜೋರಾಗಿದೆ. ಆಲೋಚನೆಗಳು, ಆತಂಕಗಳು ಅಲೆಯಲೆಯಾಗಿ ಆವರಿಸುತ್ತಿದೆ. ಇದೆಲ್ಲದರ ನಡುವೆ 'ನಾನು' ಎಂಬ ನಿಜ ಚೈತನ್ಯವು ನಮ್ಮೊಳಗೇ ಮಾಡುತ್ತಿರುವ ನಾದ ಕೇಳಿಸುವುದು ಅಸಾಧ್ಯ. ಕೇಳದ ಕಾರಣದಿಂದ ಈ ದೇಹಬಿಟ್ಟು ಬೇರೆ ಚೈತನ್ಯಯವೇ ಇಲ್ಲವೆಂದು ಹೇಳುತ್ತಾರೆ. ಆ ನಾದ ಕೇಳಬೇಕಾದರೆ ಇಂದ್ರಿಯಗಳ ಗಲಾಟೆಯನ್ನು ಅಡಗಿಸಬೇಕು. ಬುಗ್ಗೆ-ಬುಗ್ಗೆಯಾಗಿ ಚಿಮ್ಮುವ ಯೋಚನೆ-ಆಲೋಚನೆಗಳನ್ನು ನೀಗಿಸಬೇಕು. ಆಗ ನಮ್ಮೊಳ ಚೈತನ್ಯ ಮಾಡುವ 'ಪ್ರಣವ' ನಾದವನ್ನು ಕೇಳಬಹುದು ಎಂದು ಹೇಳುತ್ತಿದ್ದರು ಶ್ರೀರಂಗ ಮಹಾಗುರುಗಳು. ಪರಬ್ರಹ್ಮವೆಂಬ ಆ ಒಳ ಚೈತನ್ಯವನ್ನು ಅನುಸರಿಸಿ ನಡೆಯುವುದೇ ಬ್ರಹ್ಮಚರ್ಯ.
ಸೂಚನೆ: 14/03/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.