Monday, March 2, 2020

ಕರ್ಮ ಬಂಧಕವೋ? ಮೋಚಕವೋ? (Karma Bandhakavo? Mochakavo ?)

ಲೇಖಕರು: ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


ಒಮ್ಮೆ ಒಬ್ಬನು ತನ್ನ ಸ್ನಾನವಾದ ಮೇಲೆ ಒದ್ದೆಯಾದ ಬಟ್ಟೆಯನ್ನು ಒಂದು ಮುಳ್ಳಿನ ಗಿಡಕ್ಕೆ ಒಣಗಲು ಹಾಕಿದ್ದ. ಮುಳ್ಳಿನ ಗಿಡ ಬಿಟ್ಟರೆ ಬಟ್ಟೆ ಒಣಹಾಕಲು ಬೇರೆ ಗಿಡವಿರಲಿಲ್ಲ. ಅಂತಹ ದುರ್ಭರವಾದ ಪ್ರದೇಶ. ಸ್ವಲ್ಪ ಹೊತ್ತಿನ ಅನಂತರ ಬಟ್ಟೆಯು ಒಣಗಿತು. ಬಟ್ಟೆಯನ್ನು ಗಿಡದಿಂದ ತೆಗೆಯಬೇಕು. ತೆಗೆಯುವಾಗ ಸ್ವಲ್ಪ ವ್ಯತ್ಯಾಸವಾದರೂ ಬಟ್ಟೆಯು ಹರಿದುಹೋಗುವ ಸಾಧ್ಯತೆ ಇರುತ್ತದೆ. ಬಟ್ಟೆ ಹರಿಯದಂತೆ ಜಾಗರೂಕನಾಗಿ ಮುಳ್ಳಿನ ಗಿಡದಿಂದ ತೆಗೆಯಬೇಕು. ಇಲ್ಲಿ ಬೇಕು ಒಂದು ಕುಶಲತೆ. ಈ ಸೃಷ್ಟಿಯೆಂಬುದೇ ಮುಳ್ಳಿನ ಗಿಡ. ಇಲ್ಲಿ ಹಾಕಿದ ಬಟ್ಟೆಯೇ ಈ ಮಾನವಶರೀರ. ಸಿಕ್ಕ ಈ ಉತ್ತಮ ಮಾನವಜನ್ಮವನ್ನು ಜಾಣ್ಮೆಯಿಂದ ಕಳೆಯಬೇಕು. ಸ್ವಲ್ಪ ವ್ಯತ್ಯಾಸವಾದ್ರೆ ಈ ಸಂಸಾರದಲ್ಲೇ 'ಪುನರಪಿ ಜನನಂ ಪುನರಪಿ ಮರಣಂ' ಎಂದು ಉರುಳಬೇಕಾಗುತ್ತದೆ.

ಪ್ರತಿಯೊಬ್ಬನೂ ಈ ಜನ್ಮವನ್ನು ಪಡೆಯಲು ಯಾವುದೋ ಕರ್ಮವೇ ಕಾರಣವಾಗಿರುತ್ತದೆ. ಹಾಗೆ ಈ ಜನ್ಮವನ್ನು ಸಾರ್ಥಕಪಡಿಸಿಕೊಂಡು ಮತ್ತೆ ಜನ್ಮವನ್ನು ಪಡೆಯದಂತೆ ಮುಕ್ತಿಯನ್ನೂ ಪಡೆಯಬೇಕಾಗಿದೆ. ಇವೆರಡಕ್ಕೂ ಬೇಕು ಕರ್ಮ. ಸಾಮಾನ್ಯರಿಗೂ ಪ್ರಾಜ್ಞರಿಗೂ ವ್ಯತ್ಯಾಸ ಬರುವುದೂ ಇಲ್ಲಿಯೇ! ಯಾವನು ಕರ್ಮವನ್ನು ಕುಶಲತೆಯಿಂದ ಮಾಡುವನೋ ಅವನು ಭವಬಂಧನದಿಂದ ಪಾರಾಗುತ್ತಾನೆ. ಇದನ್ನೆ "ಯೋಗಃ ಕರ್ಮಸು ಕೌಶಲಮ್"- ಕರ್ಮ ಕೌಶಲ್ಯವೇ ಯೋಗವೆಂದು ಗೀತಾಚಾರ್ಯನು ಸಾರಿದ್ದಾನೆ. ಹಾಗಾದರೆ ಯಾವುದು ಬಂಧಕ? ಯಾವುದು ಮೋಚಕ?

"ಯಜ್ಞಾರ್ಥಾತ್ ಕರ್ಮಣೋ ಅನ್ಯತ್ರ ಲೋಕೋಽಯಂ ಕರ್ಮಬಂಧನಃ (ಗೀತೆ) ಯಜ್ಞಕ್ಕೆ ಹೊರತಾದ ಕರ್ಮವೆಲ್ಲವನ್ನೂ ಬಂಧಕ ಎನ್ನುತ್ತಾರೆ. ಇಲ್ಲಿ ಯಜ್ಞ ಎಂದರೆ ಕೇವಲ ಬಾಹ್ಯವಾದ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸಲ್ಲ. ಇದೂ ಯಜ್ಞವೇ. ತ್ಯಾಗವನ್ನೇ ಯಾಗವೆಂದರು. ಈ ಸೃಷ್ಟಿಯಲ್ಲಿ ಇರುವುದೆಲ್ಲವೂ ಭಗವಂತನ ಸ್ವತ್ತು. ಇದು ನನ್ನದಲ್ಲ. ನಿನ್ನದಾದ ಈ ವಸ್ತುವನ್ನು ನನ್ನ ಉದ್ಧಾರಕ್ಕಾಗಿ ಬಳಸಿಕೊಳ್ಳುತ್ತಿದ್ದೇನೆ ಎಂಬ ಬುದ್ಧಿಯಿಂದ ಮಾಡುವ ಪ್ರತಿಯೊಂದು ಕೆಲಸವೂ ಯಾಗವೇ ಆಗುತ್ತದೆ.

ಭಗವಂತನ ಅನುಗ್ರಹವಾಗಿ ಬಂದ ಈ ಮಣ್ಣು, ನೀರು, ಅಗ್ನಿ,ಅನಿಲ,ಆಕಾಶ, ಕರಣ-ಕಳೇಬರಗಳನ್ನು ಅವನಿಗಾಗಿ ಬಳಸುತ್ತಿದ್ದೇನೆ ಎಂಬ ಭಾವವೇ ಯಾಗ. ಉಸಿರಾಟದಿಂದ ಹಿಡಿದು ಉಸಿರು ನಿಲ್ಲುವ ತನಕ ಈ ಭಾವದಿಂದ ಮಾಡುವ ಪ್ರತಿಯೊಂದು ಕ್ರಿಯೆಯೂ ಯಾಗವಾಗುತ್ತದೆ. ಆಗ ಯಾವ ಪದಾರ್ಥದ ಮೇಲೂ ನನ್ನದೆಂಬ ಅಂಟು ಇರುವುದಿಲ್ಲ.  ಅಂಟು ಇಲ್ಲದಿದ್ದಾಗ ಅಲ್ಲಿ ಶೋಕ ಮೋಹಾದಿಗಳೂ ಹುಟ್ಟಲಾರವು. ಅವನಿಗೆ ಪ್ರಪಂಚವೆಲ್ಲವೂ ಭಗವನ್ಮಯವಾಗಿ ಕಾಣುವುದು. ಆತ ಮಾಡುವ ಯಾವ ಕರ್ಮವೂ ಅವನನ್ನು ಬಂಧಿಸದು. ಅಲ್ಲದೇ ಹಾಗೆ ಮಾಡುವ ಕರ್ಮದಿಂದ ಪಾಪನಿವೃತ್ತಿಯಾಗಿ ಶುದ್ಧನಾಗುತ್ತಾನೆ. ಹೀಗೆ ಮಾಡಲು ಮುಳ್ಳಿನ ಗಿಡದಿಂದ ಬಟ್ಟೆಯನ್ನು ತೆಗೆದಂತೆ ಅತ್ಯಂತ ಜಾಗ್ರತೆಯಿಂದ ಕೆಲಸ ಮಾಡಬೇಕು. ಅದಿಲ್ಲದಿದ್ದರೆ ನಾವು ಮಾಡುವ ಕರ್ಮಗಳಿಂದಲೇ ಈ ಸಂಸಾರದಲ್ಲೇ ಮುಳುಗುತ್ತೇವೆ. ಹೀಗೆ ಅರಿತು ಭಗವತ್ಸಮರ್ಪಣೆಯಿಂದ ಮಾಡುವ ಕರ್ಮ ಮೋಚಕ. ತಿಳಿಯದೇ ಮಾಡುವುದು ಬಂಧಕ. ಇದನ್ನೇ ಶ್ರೀರಂಗಮಹಾಗುರುಗಳು "ಕರ್ಮವನ್ನು ಮರ್ಮವರಿತು ಆಚರಿಸೀಪ್ಪ" ಎಂದು ಹೇಳುತ್ತಿದ್ದರು. ಇಂತಹ ಮೋಚಕವಾದ ಕರ್ಮಗಳನ್ನು ನಾವು ಆಚರಿಸುವಂತಾಗಲಿ.

ಸೂಚನೆ: 2/03/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಯಲ್ಲಿ ಪ್ರಕಟವಾಗಿದೆ.