Thursday, March 26, 2020

ಶ್ರೀರಾಮರ ಧೈರ್ಯವು ನಮಗೆ ಆದರ್ಶ (Sriramara Dhairyavu Namage Adarsa)

ಲೇಖಕರು: ಡಾ|| ನಂಜನಗೂಡು ಸುರೇಶ್ 
(ಪ್ರತಿಕ್ರಿಯಿಸಿರಿ lekhana@ayvm.in)



ಲೋಕದಲ್ಲಿ ಆದರ್ಶಪುರುಷನ ಲಕ್ಷಣಗಳನ್ನು ಹೊಂದಿರುವ ಶ್ರೀರಾಮನ ಬಗ್ಗೆ ವಾಲ್ಮೀಕಿಗಳಿಗೆ ತಿಳಿಸಿಕೊಡುತ್ತಾ ನಾರದಮಹರ್ಷಿಗಳು ಶ್ರೀರಾಮನನ್ನು ಪ್ರಕೃತಿಯಲ್ಲಿರುವ ಸಮುದ್ರ, ಪರ್ವತ, ಪೃಥ್ವಿ, ಚಂದ್ರ ಮುಂತಾದವುಗಳಿಗೆ ಹೋಲಿಸುತ್ತಾ ಆ ವಸ್ತುಗಳ ಶ್ರೇಷ್ಠತೆಯನ್ನು ವಿಶದಪಡಿಸುತ್ತಾರೆ. ಮಾನವನ ಜೀವನವು ಸಮರಸದಿಂದ ಕೂಡಿರುವುದಾಗಿದೆ. ನಾವು ಯಾವಾಗಲೂ ಸುಖವನ್ನೇ ಬಯಸುವುವವರಾದರೂ ನಮಗೆ ಇಷ್ಟವಿಲ್ಲದಿದ್ದರೂ ದುಃಖವೂ ಅನಿವಾರ್ಯವೇ.  ಸುಖ ಬಂದಾಗ ಹಿಗ್ಗುವುದು ದುಃಖ ಬಂದಾಗ ಕುಗ್ಗುವುದೂ ಆಗುತ್ತದೆ. ಇಂತಹ ಸಂದರ್ಭದಲ್ಲಿ ಮಾನವನು ಹೇಗೆ ನಡೆದುಕೊಳ್ಳಬೇಕೆಂದು ಪ್ರಕೃತಿಯಲ್ಲಿರುವ ವಸ್ತುಗಳು ನಮಗೆ ತಿಳಿಸಿಕೊಡುತ್ತವೆ. ಉದಾಹರಣೆಗೆ ಪರ್ವತವನ್ನು ತೆಗೆದುಕೊಳ್ಳೋಣ. ಮಳೆಯಾಗಲೀ, ಬಿಸಿಲಾಗಲೀ, ಚಳಿಯಾಗಲೀ, ಸಿಡಿಲಾಗಲೀ, ಕಾಡ್ಗಿಚ್ಚಾಗಲೀ, ಬಿರುಗಾಳಿಯಾಗಲೀ  ವರ್ಷ ಪರ್ಯಂತ ಪ್ರಕೃತಿಯಲ್ಲಿ ಆಗುವ ಈ ರೀತಿಯಾದ ಅನೇಕ ವೈಪರೀತ್ಯಗಳಿಂದ ಸತತವಾಗಿ ಪೀಡಿಸಲ್ಪಟ್ಟರೂ ಯಾವುದಕ್ಕೂ ಧೃತಿಗೆಡದೆ ತನ್ನ ತನವನ್ನು ಬಿಟ್ಟುಕೊಡದೆ ಪರ್ವತವು ನಿಶ್ಚಲವಾಗಿರುತ್ತದೆ. 

ಈಗ ಶ್ರೀರಾಮನ ಜೀವನವನ್ನು ಗಮನಿಸೋಣ.  ಶ್ರೀರಾಮನಿಗೆ ಪಟ್ಟಾಭಿಷೇಕದ ಎಲ್ಲಾ ಸಿದ್ಧತೆಗಳೂ ನಡೆದಿದ್ದವು. ಶ್ರೀರಾಮ ಮರ್ಯಾದಾಪುರುಷೋತ್ತಮ. ಅವನೇನೂ ಅದಕ್ಕಾಗಿ ಹಂಬಲಿಸಿರಲಿಲ್ಲ. ತಾನಾಗಿಯೇ ಹುಡುಕಿಕೊಂಡು ಬಂದ ಭಾಗ್ಯ. ಮಂಥರೆಯ ದುರ್ಬೋಧನೆಗೆ ಮರುಳಾಗಿ, ವರಗಳೆರಡರ ನೆಪದಲ್ಲಿ ಶ್ರೀರಾಮನನ್ನು ಹದಿನಾಲ್ಕು ವರ್ಷ ವನವಾಸ ಮತ್ತು ತನ್ನ ಮಗನಿಗೆ ಪಟ್ಟಾಭಿಷೇಕವನ್ನು ದಶರಥನಿಂದ ಮಾಡಿಸಲು ಮುಂದಾಗಿದ್ದ ಕೈಕೇಯಿಯ ಮಾತನ್ನುಕೇಳಿ ಶ್ರೀರಾಮನು ಧೃತಿಗೆಡಲಿಲ್ಲ. ಸುಖದುಃಖಗಳನ್ನು, ಜಯಾಪಜಯಗಳನ್ನು, ಲಾಭಾಲಾಭಗಳನ್ನು, ನಿಂದಾಸ್ತುತಿಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞನಂತೆ, ಸ್ವೀಕರಿಸುತ್ತಾನೆ. ಮಹಾಕವಿಕಾಳಿದಾಸನು ತನ್ನ ರಘುವಂಶದಲ್ಲಿ ಈ ಸಂದರ್ಭವನ್ನು ವರ್ಣಿಸುವಾಗ 'ತಂದೆಯಿಂದ ಮೊದಲು ಕೊಡಲ್ಪಟ್ಟ ರಾಜ್ಯವನ್ನು ಅಳುತ್ತಾ ಸ್ವೀಕರಿಸಿದನು; ನಂತರ 'ವನಕ್ಕೆ ಹೋಗು' ಎಂಬ ಮಾತನ್ನು ಸಂತೋಷದಿಂದ ಸ್ವೀಕರಿಸಿದ'ನೆಂದು ಹೇಳುತ್ತಾನೆ. ಅಷ್ಟೇ ಅಲ್ಲದೆ, ಸಂಕೋಚದಿಂದಲೂ, ಕೊಟ್ಟಮಾತಿಗೆ ಕಟ್ಟುಬಿದ್ದು ಪ್ರೀತಿಪಾತ್ರನಾದ ಶ್ರೀರಾಮನನ್ನು ವನಕ್ಕೆ ಹೋಗೆಂದು ಹೇಳಲಾರದೇ ಪರಿತಪಿಸುತ್ತಿದ್ದ ತಂದೆ ದಶರಥನನ್ನು ಸತ್ಯವಾಕ್ಕಾಗಿಸಲು, ಕೈಕೇಯಿಯ ಆಣತಿಯಂತೆ ನಾರುಮಡಿಯನ್ನುಟ್ಟು ವನವಾಸಕ್ಕೆ  ಹೊರಟು ನಿಲ್ಲುತ್ತಾನೆ ಶ್ರೀರಾಮ. ಈ ಸನ್ನಿವೇಶವನ್ನು ಕವಿಕುಲಗುರುವು, 'ಮೊದಲು ಪಟ್ಟಾಭಿಷೇಕ್ಕಾಗಿ ಮಂಗಳಮಯವಾದ ಪೀತಾಂಬರವನ್ನು ಧರಿಸಿರುವಾಗಲೂ ಮತ್ತು ನಂತರ ವಲ್ಕಲವನ್ನುಟ್ಟು ಕಾಡಿಗೆ ಹೊರಟು ನಿಂತಾಗಲೂ ಶ್ರೀರಾಮನ ಸಮಾನವಾದ ಮುಖರಾಗವನ್ನು ಕಂಡು ಸಾಕೇತಪುರವಾಸಿಗಳು ವಿಸ್ಮಿತರಾದರು' ಎಂದು ವರ್ಣಿಸುತ್ತಾನೆ.  ಅಬ್ಬಾ! ಮಹಾತ್ಮರಲ್ಲಿ ಅದೆಂತಹ ಧೃತಿ ! ಸಂಪತ್ತು ಮತ್ತು ವಿಪತ್ತುಗಳಲ್ಲಿ ಮಹಾತ್ಮರು ಒಂದೇ ರೀತಿಯಲ್ಲಿರುವರೆಂಬ ಸುಭಾಷಿತಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಶ್ರೀರಾಮನನ್ನು ಸ್ಮರಿಸಬಹುದಾಗಿದೆ. 

ಜೀವನದಲ್ಲಿ ಬರುವ ಯಾವುದೇ ಅಸುಖಕರ ಸಂದರ್ಭದಲ್ಲಿಯೂ ಧೃತಿಗೆಡದೆ ಧರ್ಮಮಾರ್ಗದಿಂದ ಕಿಂಚಿತ್ತೂ ವಿಚಲಿತರಾಗದೇ ಪರ್ವತದಂತೆ ಧೀರರಾಗಿ, ಸ್ಥೈರ್ಯದಿಂದ ಕಷ್ಟಗಳನ್ನು ಎದುರಿಸಬೇಕೆಂಬುದಕ್ಕೆ ಶ್ರೀರಾಮನೇ ಆದರ್ಶ. ಆದ್ದರಿಂದಲೇ ಶ್ರೀರಾಮನನ್ನು ವರ್ಣಿಸುವಾಗ ನಾರದಮಹರ್ಷಿಗಳು 'ಧೈರ್ಯೇಣ ಹಿಮವಾನಿವ' ಎಂದಿದ್ದಾರೆ.

ಸೂಚನೆ: 24/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.