Saturday, March 14, 2020

ಕೇವಲ ನಾಮೋಚ್ಚಾರಣೆ ಸಾಕೆ ! (Kevala Namocharane sake !)

ಲೇಖಕರು: ವಾದಿರಾಜ್. ಪ್ರಸನ್ನ
(ಪ್ರತಿಕ್ರಿಯಿಸಿರಿ lekhana@ayvm.in)
ಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಮಾರ್ಗವು ಸುಲಭದ ದಾರಿಯೆಂಬ ನಂಬಿಕೆ ನಮ್ಮಲ್ಲಿದೆ . ಭಕ್ತಿಮಾರ್ಗಕ್ಕೆ ಕುರಿತಂತೆ ವಿಷ್ಣುಭಕ್ತರಿಗೆ ಪ್ರಿಯನಾದ ಅಜಾಮಿಳನ ಕತೆಯನ್ನು ಗಮನಿಸೋಣ. ಕಾನ್ಯಕುಬ್ಜದೇಶದಲ್ಲಿ ಅಜಾಮಿಳನೆಂಬ ಸಂಸ್ಕಾರವಂತನಾದ ಬ್ರಾಹ್ಮಣನಿದ್ದ. ಒಮ್ಮೆ ದಾಸಿಯನ್ನು ನೋಡಿ ಅವಳಲ್ಲೇ ಅನುರಕ್ತನಾಗಿ ಪತ್ನಿಯಂತೆ ವ್ಯವಹರಿಸುತ್ತಿದ್ದ. ಅಜಾಮಿಳನಿಗೆ ಹತ್ತು ಮಕ್ಕಳು. ಅದರಲ್ಲೂ ಕೊನೆಯವನಾದ ನಾರಾಯಣನ ಮೇಲೆ ಅತೀವ ಪ್ರೀತಿ. ಈ ಕಾನ್ಯಕುಬ್ಜ ದೇಶವು ಚೌರ್ಯ, ವಂಚನೆ, ಜೂಜಾಟ ಇತ್ಯಾದಿ ದುಷ್ಟವೃತ್ತಿಗಳಿಗೆ ಸುಪ್ರಸಿದ್ದವಾಗಿತ್ತು. ಅಜಾಮಿಳನು ಯಾವಾಗಲೂ ಇವುಗಳಲ್ಲೇ ತೊಡಗಿದ್ದ. ಅಜಾಮಿಳನು ಎಂಬತ್ತೈ ದನೆಯ ವಯಸ್ಸಿನಲ್ಲಿಯೂ ಇದೇ ವೃತ್ತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಮೃತ್ಯುವು ಒದಗಿತು. ಮೃತ್ಯುಪಾಶವನ್ನು ಹಿಡಿದು ಭಯಂಕರವೂ, ವಿಕಾರವೂಆದ ರೂಪವುಳ್ಳ ಮೂವರು ಯಮದೂತರು ಕಾಣಿಸಿಕೊಳ್ಳುವರು. ಒಡನೆಯೇ 'ನಾರಾಯಣ' ಎಂದು ತನ್ನ ಮಗನ ಹೆಸರನ್ನು ಕೂಗಿದ. ಆ ಹೆಸರನ್ನು ಕೂಗಿದೊಡನೆಯೇ ದಿವ್ಯ-ಭವ್ಯವಾದ, ಆಕರ್ಷಕ ರೂಪದ ವಿಷ್ಣುದೂತರು ಮುಂದೆ ಬರುವರು, ವಿಷ್ಣುದೂತರಿಗೂ, ಯಮದೂತರಿಗೂ ಸಂಭಾಷಣೆಯಾಗಿ ವಿಷ್ಣುದೂತರು, ಯಮದೂತರನ್ನು ಓಡಿಸಿ, ಅಜಾಮಿಳನನ್ನು ವೈಕುಂಠಕ್ಕೆ ಕರೆದುಕೊಂಡು ಹೋದರೆಂಬ ಕಥೆಯು ಲೋಕದಲ್ಲಿ ಸುಪ್ರಸಿದ್ಧವಾಗಿದೆ.

ಆದರೆ ಶ್ರೀಮದ್ಭಾಗವತದಲ್ಲಿ ಇನ್ನೂ ಹೆಚ್ಚಿನ ವಿವರಗಳಿವೆ. ಈ ಕಥೆಗೆ ಒಂದು ತಾತ್ವಿಕ ಹಿನ್ನೆಲೆಯಿದೆ. ಮೂವರು ಯಮದೂತರು ಬಂದದ್ದು 'ಮನಸ್ಸಿನ ಕ್ಷೇತ್ರ, ಮಾತಿನ ಕ್ಷೇತ್ರ ಮತ್ತು ಕೃತಿಯ ಕ್ಷೇತ್ರಗಳಲ್ಲಿ ನೀನು ಪುಷ್ಕಳವಾಗಿ ಮಾಡಿದ ಪಾಪಗಳಿಗೆ ಶಿಕ್ಷೆಯನ್ನು ಅನುಭವಿಸುತ್ತೀಯೆ' ಎನ್ನುವುದನ್ನು ಸೂಚಿಸುವುದಕ್ಕಾಗಿ. ಇವನ ಹತ್ತುಮಕ್ಕಳು ಎಂದರೆ ಹತ್ತು ಇಂದ್ರಿಯಗಳು, ಅದರಲ್ಲಿ ಹತ್ತನೆಯ ಇಂದ್ರಿಯದ ಪ್ರತೀಕವಾದ ನಾರಾಯಣನೆಂಬ ಪ್ರಿಯಪುತ್ರನನ್ನು ಅಜಾಮಿಳನು ಅಂತ್ಯಕಾಲದಲ್ಲಿ ಕರೆದಿದ್ದು.

ಈ ಕತೆಯ ಬಗ್ಗೆ ಶ್ರೀರಂಗ ಮಹಾಗುರುಗಳು ಕೊಟ್ಟ ನೋಟ ಸ್ಮರಣೀಯವಾದದ್ದು, ಅಜಾಮಿಳನ ಕತೆಯನ್ನು ಪೂರ್ತಿ ಓದಿ ಅರ್ಥ ಹೇಳಬೇಕಪ್ಪಾ. 'ಅಜಾಮಿಳನು ಹಿಂದೆ ಸದಾಚಾರಸಂಪನ್ನನು ಭಗವದ್ಭಕ್ತನೂ ಆಗಿದ್ದವನೇ. ಪರಮಾತ್ಮ ಎಂಬ ಅರ್ಥದಲ್ಲಿಯೇ ಭಾವಪೂರ್ಣವಾಗಿ 'ನಾರಾಯಣ' ಶಬ್ದವನ್ನು ಅನೇಕ ಬಾರಿ ಉಚ್ಛರಿಸಿದ್ದವನು. ಅನಂತರ ದುಷ್ಟದರ್ಶನ ಸಹವಾಸಗಳಿಂದ ದುಷ್ಟನಾಗಿ ಪಶುವಿನಂತೆ ಜೀವನ ನಡೆಸಿದ. ಅವನು ಕೊನೆಗಾಲದಲ್ಲಿ ತನ್ನ ಮಗನನ್ನೇ 'ನಾರಾಯಣ' ಎಂದು ಕರೆದರೂ ಆ ಶಬ್ದದ  ಉಚ್ಚಾರಣೆಯು ಅವನಿಗೇ ಗೊತ್ತಿಲ್ಲದಂತೆ, ಅವನು ಹಿಂದೆ ಯಾವ ಅರ್ಥದಲ್ಲಿ ಭಾವಪೂರ್ಣವಾಗಿ ಉಚ್ಛರಿಸುತ್ತಿದ್ದನೋ ಅದೇ ರೀತಿಯಾಗಿ "ನಾರಾಯಣ" ಶಬ್ದವು ಉಚ್ಚರಿಸಲ್ಪಟ್ಟು ಅವನನ್ನು ಪರಮಾರ್ಥ ಸ್ಥಾನದಲ್ಲಿಯೇ ಕೂರಿಸಿತು. ಆಗ ಅವನಿಗೆ ವಿಷ್ಣುದೂತರ ದರ್ಶನವಾಯಿತು. ತನ್ನ ಪಾಪಗಳಿಗಾಗಿ ಪಶ್ಚಾತ್ತಾಪಗೊಂಡು ಗಂಗಾತೀರದಲ್ಲಿ ತಪಸ್ಸುಮಾಡಿ ಯೋಗಸಮಾಧಿಯನ್ನು ಆಶ್ರಯಿಸಿದಾಗ ಅವನಿಗೆ ವೈಕುಂಠ ಪ್ರಾಪ್ತಿಯಾಯಿತು.

'ನಾರಾಯಣ ಶಬ್ದವನ್ನು ಯಾರು ಉಚ್ಚರಿಸಿದರೂ ಅದರಿಂದ ಒಳ್ಳೆಯದು'. ಹೇಗಾದರೂ 'ನಾರಾಯಣ' ಶಬ್ದವನ್ನುಉಚ್ಚರಿಸುವ ರೂಢಿಯಿದ್ದರೆ ಒಂದಲ್ಲ ಒಂದು ದಿವಸ ಅದರ ನಿಜವಾದ ಅರ್ಥವನ್ನು ತಿಳಿಯುವ ಮತ್ತು ಸಾಧನೆ ಮಾಡುವ ಯೋಗವು ಬರುವ ಸಂದರ್ಭ ಇರುವುದರಿಂದ ಅದಕ್ಕೆ ಹಾಗೆ ಮಹಾಮಹಿಮೆಯನ್ನು ಹೇಳಿದೆ.

ಅಜಾಮಿಳನಂತೆ ಧ್ಯಾನವನ್ನು ಸರಿಯಾಗಿ ಮಾಡಿದ್ದರೆ ಆ ಸ್ಮರಣೆಯಿಂದ ಕೂಡಿದ ಭಗವಂತನ ನಾಮೋಚ್ಚರಣೆಯು ನಮ್ಮನ್ನು ಕಾಪಾಡಿಯೇ ಕಾಪಾಡುತ್ತದೆ.

ಸೂಚನೆ: 14/03/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ