Saturday, March 7, 2020

ಬ್ರಹ್ಮಚರ್ಯ ಮುಪ್ಪಿನಲ್ಲೊ ಮೊಳಕೆಯಲ್ಲೋ ? (Brahmacarya muppinallo molakeyallo ?)

ಲೇಖಕರು:  ಡಾ || ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)

ಪೌರಾಣಿಕ ಕಥೆಗಳನು ಟಿವಿನಲ್ಲಿ ನೋಡಿದರೆ ಬ್ರಹ್ಮಚಾರೀ ಅಂದಕೂಡಲೇ ಕಾಡು-ಆಶ್ರಮಗಳಲ್ಲಿ ವಾಸ, ಕಠೋರ ಪರಿಶ್ರಮ, ಗುರುಸೇವೆ , ಭಿಕ್ಷೆ,  ವೇದ-ಮಂತ್ರಗಳ ಅಧ್ಯಯನ ಮಾಡುತ್ತಿರುವ ಹುಡುಗರ ಚಿತ್ರಣ ಸಾಮಾನ್ಯವಾಗಿ ಮೂಡುವುದು. ಸಣ್ಣ ವಯಸ್ಸಿನಲ್ಲಿ ಇದೇನು ಶೋಷಣೆ ! ತಂದೆ-ತಾಯಿಯರಿಂದ ಬೇರ್ಪಡಿಸಿ ಕಠೋರವಾದ ಜೀವನ ನಡೆಸಲು ಹೊರದೂಡುವುದು ಕ್ರೌರ್ಯದ ಪರಮಾವಧಿ.'ವಯಸ್ಸಾದ ಮೇಲೆ ರಾಮ ಕೃಷ್ಣ ಅಂತ ಇರೋದು ತಪ್ಪಿದ್ದಲ್ಲ. ಈ ವಯಸ್ಸಿನಲ್ಲಿದೆಲ್ಲ ಯಾಕಪ್ಪ ಬೇಕಿತ್ತು' ಎಂಬುದು ಸಹಜ ಪ್ರತಿಕ್ರಿಯೆ.          

ಯಾವುದೇ ಸಸಿಯನ್ನು ಬೆಳೆದ ಮೇಲೆ ಬಗ್ಗಿಸಲಾರೆವು. ಮಡಿಕೆಯ ಆಕಾರ ಒಣಗಿದ ಮೇಲೆ ಬದಲಾಯಿಸಲು ಸಾಧ್ಯವಿಲ್ಲ.  ಈ ಮಾತುಗಳು ಪ್ರಸಿಧ್ಧವಾಗಿದ್ದರೂ ಇಡೀ ಜೀವನ ಮೋಜು ಗಮ್ಮತ್ತಿನಲ್ಲಿ ಕಳೆದು ರಿಟೈರ್ ಆದಮೇಲೆ ಜಪ, ತಪ, ಭಜನೆ ಅಂತ ಮಾಡೋವ್ರು ನೋಡುತ್ತಲೇ ಇದ್ದೇವಲ್ಲ ಎಂಬ ಸಂಶಯ ಹುಟ್ಟುವುದು ಸಹಜವಷ್ಟೇ. 

ಇಲ್ಲಿ ಜಪ, ತಪಾದಿಗಳಿಂದ ಆಗ ಬೇಕಾದದ್ದು ಏನು ಎಂಬ ಅರಿವು ಅವಶ್ಯ. ಜಪ ತಪಾದಿಗಳು ಸಾಧನವಷ್ಟೇ. ನಮ್ಮೊಳಗಿನ ಚೈತನ್ಯವನ್ನು ಕಾಣುವುದೇ ಗುರಿ. ಕೊನೆಯ ಕಾಲದಲ್ಲಿ ಎಲ್ಲರೂ ಹುಡುಕುವ ನೆಮ್ಮದಿ ಶಾಂತಿ ಸಾರ್ಥಕತೆ, ಆ ಒಳ ಅನುಭವದಿಂದ ಮಾತ್ರ ಬರತಕ್ಕದ್ದು. ಅದು ಫಲಿಸಬೇಕಾದರೆ ನಮ್ಮ ಮೈ-ಮನಗಳು ಚೆನ್ನಾಗಿ ತಪದ ತಾಪದಲ್ಲಿ ಬೆಂದು ಪಾಕವಾಗಬೇಕು. ಇದು ಮುಪ್ಪಿನಲ್ಲಿ ಪ್ರಾರಂಭಿಸಿ ಸಾಧ್ಯವಾಗುವುದಿಲ್ಲ.  ನೂರಾರು ವಾಹನಗಳು ಚಲಿಸುವ ರಸ್ತೆಯ ನಡುವೆ ಸೈಕಲ್ ಕಲಿಯುವುದು ಅಸಾಧ್ಯ. ಖಾಲಿ ಮೈದಾನದಲ್ಲೇ ಕಲಿಯಬೇಕು. ಅಂತೆಯೇ ಒಳ ಬ್ಯಾಲೆನ್ಸ್ ಕಲಿಯಬೇಕಾದರೆ ಸಂಸಾರದ ಸುಖ-ದುಃಖ ಕಷ್ಟ-ಕಾರ್ಪಣ್ಯಗಳೆಂಬ ಟ್ರಾಫಿಕ್ ನಡುವೆ ಕಲಿಯಲು ಅಸಾಧ್ಯ . ಅದರ ಸೋಂಕಿಲ್ಲದ ಮುಗ್ಧವಾದ ಬಾಲ್ಯದಲ್ಲಿ ಕಲಿಯುವುದು ಸುಲಭ. ಒಬ್ಬ ಸಂಯಮಿ ಜ್ಞಾನಿಯಾದ ಗುರುವಿನ ಆಶ್ರಯ ಬೇಕು. ಉಳಿದಂತೆ ಆಶ್ರಮ, ಗುರುಸೇವೆ ಮಂತ್ರ, ಯಜ್ಞ ಮುಂತಾದವೆಲ್ಲ ಕುಶಲನಾದ ಗುರುವು ಉಪಯೋಗಿಸುವ ಸಾಧನಗಳಷ್ಟೇ ಎಂದು ಶ್ರೀರಂಗ ಮಹಾಗುರುಗಳು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದರು.

ಸೂಚನೆ: 07/03/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.