Saturday, March 7, 2020

ಶೋಕ ಏಕೆ ? (Shoka Eke?)

ಲೇಖಕರು: ಶ್ರೀ ನರಸಿಂಹ ಭಟ್ಟ 
(ಪ್ರತಿಕ್ರಿಯಿಸಿರಿ lekhana@ayvm.in)


ಶೋಕೋ ನಾಶಯತೇ ಧೈರ್ಯಂ ಶೋಕೋ ನಾಶಯತೇ ಶ್ರುತಮ್ |
ಶೋಕೋ ನಾಶಯತೇ ಸರ್ವಂ ನಾಸ್ತಿ ಶೋಕಸಮೋ ರಿಪುಃ || ರಾಮಾಯಣ ೨.೬೨.೧೫

ಅರ್ಥ-ಶೋಕವು ಧೈರ್ಯವನ್ನು ನಾಶ ಮಾಡುತ್ತದೆ. ಶೋಕವು ಸಂಪಾದಿಸಿದ ಜ್ಞಾನವನ್ನು ನಾಶ ಮಾಡುತ್ತದೆ. ಶೋಕವು ಎಲ್ಲವನ್ನೂ ನಾಶ ಮಾಡುವುದರಿಂದ ಶೋಕಕ್ಕೆ ಸಮನಾದ ಶತ್ರುವಿಲ್ಲ.

ವಿವರಣೆ- ಶೋಕವೆಂದರೆ ಮನಸ್ಸಿನ ಒಂದು ಬಗೆಯ ವಿಕಾರ. ಮನಸ್ಸು ತನ್ನ ಯಥಾಸ್ಥಿತಿಯಲ್ಲಿ ಇಲ್ಲದಿರುವಿಕೆ. ಮನಸ್ಸಿಗೆ ಎರಡು ಬಗೆಯ ಗತಿಯಿದೆ. ಅದುವೇ ಹಿಮ್ಮುಖ ಮತ್ತು ಮುಮ್ಮುಖ ಎಂದು. ಇಂದ್ರಿಯಗಳ ಜೊತೆ ಇರುವುದು ಮುಮ್ಮುಖವಾದರೆ, ಇಂದ್ರಿಯಗಳ ಸಂಬಂಧವಿಲ್ಲದೇ ಕೇವಲ ಆತ್ಮದ ಅಥವಾ ಪರಮಾತ್ಮನ ಸಂಬಂಧವೇ ಹಿಮ್ಮುಖ. ಮನಸ್ಸು ಯಾವಾಗ ಇಂದ್ರಿಯಗಳ ಜೊತೆ ಇರುವುದೋ ಆಗ ಇಂದ್ರಿಯಕ್ಕೆ ಸಂಬಂಧಿಸಿದ ವಿಷಯದ ಅರಿವು ಉಂಟಾಗುವುದು. ಇಂತಹ ಕೆಲವು ವಿಷಯಗಳ ಅರಿವು ಮನಸ್ಸಿನ ಹಿಮ್ಮುಖವಾದ ನಡೆಗೆ ತೊಡಕನ್ನು ಉಂಟು ಮಾಡುತ್ತದೆ. ನಮ್ಮ ಇಂದ್ರಿಯಗಳಿಗೆ ಇಷ್ಟವಾದದ್ದು ಸಿಗದಿರುವಾಗ ಮನಸ್ಸು ಒಂದು ಬಗೆಯ ಖಿನ್ನತೆಯನ್ನು ಅನುಭವಿಸುತ್ತದೆ. ಇದಕ್ಕೆ ಶೋಕವೆಂದು ಕರೆಯುತ್ತಾರೆ. ಇಂತಹ ಶೋಕದಿಂದ ಆಗುವ ದುಷ್ಪರಿಣಾಮಗಳು ಏನೆಂಬುದನ್ನು ಈ ಸುಭಾಷಿತದಲ್ಲಿ ತಿಳಿಸಿದ್ದಾರೆ. ಮನಸ್ಸು ಒಂದೇ ವಿಷಯದಲ್ಲಿ ಸ್ಥಿರಗೊಳ್ಳುವಿಕೆಯನ್ನು ಧೈರ್ಯ ಎಂದು ಕರೆಯುತ್ತಾರೆ. ಮನಸ್ಸಿಗೆ ಶೋಕವು ಆವರಿಸಿದಾಗ ಮನಸ್ಸಿನ ಏಕಾಗ್ರತೆಯ ಗುಣ ನಾಶವಾಗುತ್ತದೆ. ಮನಸ್ಸು ಯಾವಾಗ ಏಕಾಗ್ರತೆಯನ್ನು ಕಳೆದುಕೊಳ್ಳುತ್ತದೆಯೋ ಆಗ ಮನಸ್ಸಿನ ಗ್ರಹಣಶಕ್ತಿ ಕುಂದುತ್ತದೆ. ಗ್ರಹಣಶಕ್ತಿ ಕುಂಠಿತವಾದರೆ ಧಾರಣಶಕ್ತಿಯು ತಾನಾಗಿಯೆ ನಶಿಸುತ್ತದೆ. ಹಾಗಾಗಿ ನಾವು ಸಂಪಾದಿಸಿದ ಜ್ಞಾನವು ನಾಶವಾಗುವುದು. ವ್ಯಕ್ತಿಗೆ ಯಾವಾಗ ಜ್ಞಾನವಿರುವುದಿಲ್ಲವೋ ಆಗ ವ್ಯಕ್ತಿಯ ಸರ್ವನಾಶ ಎಂದೇ ಅರ್ಥ. ಆದ್ದರಿಂದ ಶೋಕವು ಶತ್ರುವಿಗೆ ಸಮ. ಶತ್ರು ಹೇಗೆ ವ್ಯಕ್ತಿಯನ್ನು ನಾಶ ಮಾಡುವುದೋ ಅಂತೆಯೆ ಈ ಶೋಕರೂಪವಾದ ಶತ್ರುವು ವ್ಯಕ್ತಿತ್ವವನ್ನೇ ನಾಶಮಾಡುವುದು. ಆದ್ದರಿಂದ ಶೋಕವನ್ನು ಮಾಡಬಾರದು.

ಸೂಚನೆ:  07/03/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ