Sunday, March 1, 2020

ಯಾರು ಶ್ರೇಷ್ಠರು ? ( Yaru Srestharu?)

ಲೇಖಕರು:  ಡಾ || ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)


ಸನ್ಯಾಸಿಗಳೊಬ್ಬರು ಊರನ್ನು ಪ್ರವೇಶಿಸಿದರು. ಪ್ರಶಾಂತವಾದ ಮುಖಮಂಡಲ. ಕರುಣೆಯಿಂದ ಕೂಡಿದ ಮೃದುಮಧುರದೃಷ್ಟಿ ಅವರದು. ಆದರೆ ಅವರು ಯಾರಿಂದಲೂ ಏನನ್ನೂ ಬಯಸಿದವರಲ್ಲ. ಹೊಳೆಯಲ್ಲಿ ಸ್ನಾನಮಾಡಿ, ಆಹ್ನಿಕಗಳನ್ನು ಮುಗಿಸಿ ಮರದ ಕೆಳಗೆ ಕುಳಿತು ಕಣ್ಮುಚ್ಚಿದರು. ಮಧ್ಯಾಹ್ನವಾದರೂ ಕದಲದೆ ತಪದಲ್ಲಿ ಮುಳುಗಿದರು. ಪಕ್ಕದಲ್ಲೆ ಬೇಸಾಯಗಾರನೊಬ್ಬನು ವಾಸವಾಗಿದ್ದ. ಸಪರಿವಾರನಾಗಿ ಬಂದು ಭಕ್ತಿಶ್ರದ್ಧೆಗಳಿಂದ ಅವರಿಗೆ ನಮಸ್ಕರಿಸಿ ಫಲಾಹಾರಗಳನ್ನು ಸಮರ್ಪಿಸಿದ. ಸಾಧು ಕಣ್ತೆರೆದು ಒಮ್ಮೆ ಎಲ್ಲರನ್ನೂ ವೀಕ್ಷಿಸಿದರು. ಮತ್ತೆ ಕಣ್ಮುಚ್ಚಿ, ಎತ್ತಿದ ಹಸ್ತರಾಗಿ ಆಶೀರ್ವದಿಸಿದರು. ಒಂದೆರಡು ಹಣ್ಣುಗಳನ್ನು ಸ್ವೀಕರಿಸಿ, ಉಳಿದವನ್ನು ಆತನಿಗೆ ಹಿಂತಿರುಗಿಸಿದರು. ಧನ್ಯತೆಯಿಂದ ಕುಟುಂಬವು ಪ್ರಸಾದವನ್ನು ಸ್ವೀಕರಿಸಿದರು. ಅಂದಿನಿಂದ ಅವರು ಸನ್ಯಾಸಿಗಳ ಹೊಣೆಯನ್ನು ವಹಿಸಿ, ಅವರಿಗೆ ಗುಡಿಸಲನ್ನು ಕಟ್ಟಿಕೊಟ್ಟು ಅವರಿಗೆ ಬೇಕಾದ ಸಣ್ಣಪುಟ್ಟ ಸಹಾಯವನ್ನು ಮಾಡಿಕೊಡಲಾರಂಭಿಸದರು. ಇದನ್ನು ಕಂಡ ಊರಿನವರೀರ್ವರು ಮಾತನಾಡಿಕೊಂಡರು "ಜಗವನ್ನೇ ತ್ಯಜಿಸಿದ ಸನ್ಯಾಸಿಯಿವರು. ಬಂಧು-ಬಾಂಧವರು, ಮನೆ-ಮಠದ ಮೊಹವನ್ನು ಬಿಟ್ಟವನೇ ನಿಜವಾಗಲೂ ಶ್ರೇಷ್ಠ!". ಮತ್ತೋರ್ವ ಒಪ್ಪಲಿಲ್ಲ. "ಸನ್ಯಾಸಿ ಜಗವನ್ನು ಬಿಟ್ಟ ಸರಿ. ಆದರೆ ಗೃಹಸ್ಥನಿಂದಲೆ ಸನ್ಯಾಸಿಗಳು ಉಳಿಯಲು ಸಾಧ್ಯ. ಗೃಹಸ್ಥನೇ  ಸರ್ವಶ್ರೇಷ್ಠ!" ಎಂದನು. ಇಬ್ಬರ ವಾದ ಕೊನೆಗಾಣಲಿಲ್ಲ. ಸನ್ಯಾಸಿಗಳನ್ನೇ ಕೇಳಿಬಿಡೋಣವೆಂದು ನಿರ್ಧರಿಸಿ ಅವರ ಬಳಿ ಹೋದರು. ಅವರ ಪ್ರಶ್ನೆಯನ್ನು ಕೇಳಿದ ಸಾಧುಗಳು ಮುಗುಳು ನಗೆಯ ನಕ್ಕರು. "ಇವರಿಬ್ಬರೂ ಶ್ರೇಷ್ಠರು, ಆದರೆ ಇವರಿಬ್ಬರೂ ಗೌಣರು" ಎಂದರು. ಪ್ರಶ್ನಿಸಿದವರು ಇದೆಂತಹ ವಿಚಿತ್ರ ಉತ್ತರವೆಂದು ತಲೆಕೆರೆದುಕೊಂಡರು.

ನಿಸ್ವಾರ್ಥವಾಗಿ ತನ್ನ ಧರ್ಮವನ್ನು ನಿರ್ವಹಿಸಿದವನೇ ಶ್ರೇಷ್ಠ!. ಯಾವ ಒಂದು ಕೆಲಸವನ್ನು ಮಾಡದಿದ್ದರೆ, ಪದಾರ್ಥದ ಅಸ್ತಿತ್ವವೇ ನಶಿಸುವುದೋ ಅದು ಧರ್ಮ. ಕಣ್ಣಿಗೆ ನೋಡುವ ಶಕ್ತಿ ನಶಿಸಿದರೆ, ಅದು ಕಣ್ಣಲ್ಲ, ಕೇಳದಿದ್ದರೆ ಕಿವಿಯಲ್ಲ. ಅಂತೆಯೇ ಪರಾತ್ಪರತತ್ತ್ವದಲ್ಲಿ ಸನ್ನ್ಯಸ್ಥವಾದ (ಮುಳುಗಿದ) ಮನಸ್ಸಿಲ್ಲದಿದ್ದರೆ, ಅವನು ಸನ್ಯಾಸಿಯಲ್ಲ. ಗೃಹವನ್ನು ಪೋಷಿಸದವನು ಗೃಹಸ್ಥನಲ್ಲ. ಬ್ರಹ್ಮವಸ್ತುವಿನಲ್ಲಿ ಮನಸ್ಸು ಚರಿಸದಿದ್ದರೆ, ಬ್ರಹ್ಮಚಾರಿಯಲ್ಲ. ಆದ್ದರಿಂದಲೇ ಆಯಾ ಕೃತ್ಯಗಳು ಅವರವರ ಧರ್ಮವೆಂದೆನಿಸಿಕೊಳ್ಳುತ್ತವೆ. ಬ್ರಹ್ಮಚರ್ಯದಲ್ಲಿ ಪಡೆದ ಬ್ರಹ್ಮಾನುಭವ, ಅದರ ಸೌಖ್ಯ ಸಂತೊಷಗಳು ಇತರರೂ ಪಡೆಯಲೆಂಬಾಶಯದೊಂದಿಗೆ ಕಾರ್ಯಪ್ರವೃತ್ತನಾಗುವನು ಗೃಹಸ್ಥ. ಅದಕ್ಕಾಗಿ  ಯೋಗ್ಯವಾದ ಸಂತಾನ ಪಡೆಯುವುದು, ಪೋಷಿಸಿ ಬೆಳೆಸುವುದು ಅವನ ಧರ್ಮ. ತನ್ನ ಮಕ್ಕಳು ಮಾತ್ರವಲ್ಲದೆ ಪಶು, ಪಕ್ಷಿ, ವೃಕ್ಷ-ವನಸ್ಪತಿಗಳೇ ಮೊದಲಾದ ಜಗತ್ತಿನ ಪ್ರತಿಯೊಂದು ಜೀವ, ಪಶು, ಪ್ರಾಣಿಯಲ್ಲೂ ಜಗನ್ಮಾತಾ ಪಿತೃಗಳಂತೆ ವರ್ತಿಸುವುದು ಅವನ ಸಹಜ ಸ್ವಭಾವ. ಜ್ಞಾನದ ಹಾದಿಯಲ್ಲಿ ನಡೆವ ಸನ್ಯಾಸಿಗಳು, ಬ್ರಹ್ಮಚಾರಿಗಳೇ ಮುಂತಾದವರಿಗೆ ಸೂಕ್ತ ಭರಣೆಯನ್ನು ನೀಡುವುದು ಅವನಿಗೆ ವಿಶೇಷ ತೃಪ್ತಿಯನ್ನುಂಟುಮಾಡುತ್ತದೆ. ಅಂತೆಯೇ ಜ್ಞಾನದಿಂದ ತುಂಬಿ ತುಳುಕುತ್ತಿರುವ, ಸನ್ನ್ಯಸ್ಥಮನಸ್ಕನಾದ ಸನ್ಯಾಸಿ-ಬೈರಾಗಿಯು, ಲೋಕವನ್ನು ತ್ಯಜಿಸಲೂ ಸಿದ್ಧನಾದವನು. ತನ್ನಲ್ಲಿರುವ ತಪ:ಫಲವನ್ನು ಆಶೀರ್ವಾದಗಳ ಮೂಲಕ ಉದಾರವಾಗಿ ವಿತರಿಸುವುದು ಸಹಜ ಸ್ವಭಾವ. ಆದ್ದರಿಂದಲೆ ಮೇಲಿನ ಕಥೆಯಲ್ಲಿ ಸ್ವಧರ್ಮವನ್ನು ಪಾಲಿಸಿದ್ದರಿಂದ ಸನ್ಯಾಸಿ-ಗೃಹಸ್ಥರಿಬ್ಬರೂ ಶ್ರೇಷ್ಠರು. ಆದರೆ ಅವರು ತಾವು ತಮ್ಮನ್ನು ಧರ್ಮದ ನಿರ್ವಾಹಕರಾಗಿ ನೊಡುತ್ತಿರುವುದರಿಂದ ಅವರಿಬ್ಬರಿಗಿಂತಲೂ ಸೃಷ್ಟಿ-ಸೃಷ್ಟೀಶನ ಧರ್ಮವೇ ಶ್ರೇಷ್ಥತಮ.

ಸೂಚನೆ: 1/03/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಯಲ್ಲಿ ಪ್ರಕಟವಾಗಿದೆ.