Wednesday, March 4, 2020

ಭಗವಂತನಿಗೆ ಪತ್ರೆಗಳಿಂದ ಪೂಜೆ (Bhagavantanige Patregalinda Pooje)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)



ಭಗವಂತನ ಪೂಜೆಗೆ ಪುಷ್ಪಗಳಲ್ಲದೆ ಕೆಲವು ಪತ್ರಗಳನ್ನು ಉಪ್ಯೋಗಿಸುವುದುಂಟು. ಅದರಲ್ಲಿ ತುಲಸಿ, ಬಿಲ್ವ ಹಾಗೂ ಗರಿಕೆಹುಲ್ಲು ಪ್ರಸಿದ್ಧವಾದವು.
ತುಲಸಿ: ತುಲಸಿ ಎಂಬ ಪದಕ್ಕೆ 'ನಿಸ್ಸಮಾನವಾದದ್ದು' ಎಂದರ್ಥ. ಭಗವತ್ಭಾವವನ್ನು ತುಂಬುವ ಸಾಮರ್ಥ್ಯದಲ್ಲಿ ಇದಕ್ಕೆ ಸಮನಾದ ಬೇರೊಂದು ವಸ್ತುವಿಲ್ಲ. ಇದರ ಸ್ಪರ್ಶ-ಗಂಧಗಳು ಬ್ರಹ್ಮಭಾವಕ್ಕೇರಿಸಲು ಸಮರ್ಥವಾಗಿವೆ. ಆದಕಾರಣಾದಿಂದಲೇ ಇದು ಅತ್ಯಂತ ಪವಿತ್ರವಾದ ವಸ್ತುವಾಗಿ ಪರಿಗಣಿಸಲ್ಪಡುತ್ತದೆ. ಇದನ್ನು ಮೈಲಿಗೆಯಿಲ್ಲದೆ, ಶುಚಿಯಾಗಿ ಸ್ನಾನಮಾಡಿಯೇ ಆಹರಣಮಾಡಬೇಕೆಂಬ ನಿಯಮವಿದೆ. ಇದೆಷ್ಟು ಶಕ್ತಿಯುತವಾದದ್ದೆಂದರೆ ಇತರ ಪುಷ್ಪಗಳಂತೆ ಇದಕ್ಕೆ ನಿರ್ಮಾಲ್ಯದೋಷವಿಲ್ಲ. ಒಮ್ಮೆ ಪೂಜೆಗೆ ಬಳಸಿದ್ದನ್ನು ಮತ್ತೊಂಮೆ ತೊಳೆದು ಉಪಯೋಗಿಸಬಹುದು. ಒಣಗಿದ ತುಳಸಿಯೂ ಪೂಜಾಯೋಗ್ಯವೆ. ಅದೂ ಸಿಗದಿದ್ದಾಗ ತುಲಸಿಕಾಷ್ಠವನ್ನೋ ಅಥವಾ ಅದರ ಪಾತಿಯ ಮೃತ್ತಿಕೆಯನ್ನೋ ಉಪಯೋಗಿಸಬಹುದೆಂಬ ನಿಯಮವು ಇದರ ಪಾವಿತ್ರ್ಯತೆಯ ಪರಮಾವಧಿಯನ್ನು ಸೂಚಿಸುತ್ತದೆ.

ತುಲಸಿಯನ್ನು ಅಮೃತದಿಂದ ಹುಟ್ಟಿ(ಅಂದರೆ ಅಮೃತಭಾವವನ್ನು ತುಂಬುವ ಧರ್ಮವುಳ್ಳ), ಕೇಶವನಿಗೆ ಪ್ರಿಯಳಾಗಿರುವ ಎಲೈ ತುಲಸಿಯೇ, ಕೇಶವನ ಆರಾಧನೆಗಾಗಿ ನಿನ್ನನ್ನು ಆಹರಣ ಮಾಡುತ್ತೇನೆ, ಕ್ಷಮಿಸು ನನ್ನನ್ನು, ಎಂಬರ್ಥವನ್ನುಳ್ಳ ಶ್ಲೋಕದಿಂದ ಪ್ರಾರ್ಥನೆಯನ್ನು ಮಾಡಿಯೇ ಆಹರಣಮಾಡಬೇಕೆಂಬ ನಿಯಮವಿದೆ. ಅದನ್ನು ಗಿಡದಿಂದ ಬಿಡಿಸುವಾಗ ಒಂದೊಂದೇ ಎಲೆಯನ್ನಾಗಿ ಬಿಡಿಸಬಾರದು. ೪ಎಲೆಗಳಿಂದ ಕೂಡಿದ ಗುಂಪೇ ಒಂದು'ದಳ' ಎಂಬುದಾಗಿ ವ್ಯವಹರಿಸಲ್ಪಡುತ್ತದೆ.

ವಿಷ್ಣುಪೂಜೆಗೆ ಉಪಯೋಗಿಸುವ ತುಲಸಿಯು ನಾಲ್ಕುದಳಗಳಿಂದಿರಬೇಕು. ಇದು ಜೀವನದ ನಾಲಕ್ಕನೆಯ ಅವಸ್ಥೆಯಾದ ತುರೀಯವನ್ನೂ, ನಾಲ್ಕು ಪುರುಷಾರ್ಥಗಳನ್ನೂ ಒದಗಿಸುವ, ಯೋಗ-ಭೋಗಗಳೆರಡನ್ನೂ ಕರುಣಿಸುವ ಪವಿತ್ರವಾದ ವಸ್ತು ಎಂಬುದರ ಸೂಚಕವಾಗಿದೆ. ತುಲಸೀಕಾಷ್ಠದಿಂದ ತಯಾರಿಸಲ್ಪಟ್ಟ ಮಣಿಮಾಲೆಯು ಶ್ರೀವೈಷ್ಣವರಲ್ಲಿ ಜಪ-ಧ್ಯಾನಾದಿಗಳಿಗೆ ಪ್ರಶಸ್ತವಾದದ್ದು.

  

ಬಿಲ್ವ: ಶ್ರೀರಂಗಮಹಾಗುರುಗಳು 'ಶಿವಲಿಂಗವು ಹೇಗೆ ತ್ರಿಮೂರ್ತ್ಯಾತ್ಮಕವಾಗಿದೆಯೋ ಅಂತೆಯೇ ಬಿಲ್ವಪತ್ರದಲ್ಲಿಯೂ ತ್ರಿಮೂರ್ತ್ಯಾತ್ಮಕವಾದ ಧರ್ಮವಿದೆ' ಎಂದು ಸೂಚಿಸಿದ್ದರು. ಬಿಲ್ವಪತ್ರವನ್ನೂ ಒಂದೊಂದು ಎಲೆಯಾಗಿ ಬಿಡಿಸದೆ ಮೂರು ಎಲೆಗಳಗುಂಪಾಗಿಯೇ ಬಿಡಿಸಬೇಕು. 'ಏಕಬಿಲ್ವಂ ಶಿವಾರ್ಪಣಾಂ' ಎನ್ನುವಾಗ ಮೂರರಗುಂಪೇ 'ಏಕಬಿಲ್ವ'ವಾಗುತ್ತದೆ.

ಶರೀರದಲ್ಲಿ ಪಿತ್ತ ಹಾಗೂ ತಾಪಗಳು ಸಮಾಧಿಸ್ಥಿತಿಗೆ ಭಂಗವನ್ನುಂಟುಮಾಡುತ್ತವೆ. ಬಿಲ್ವಪತ್ರೆಯು ಇವೆರಡನ್ನೂ ದೂರಮಾಡಿ ಧಾತುಸಾಮ್ಯವನ್ನೂ, ಧಾತುಪ್ರಸನ್ನತೆಯನ್ನೂ ಉಂಟುಮಾಡಿ ಭಗವದ್ಭಾವಕ್ಕೆ ಪುಷ್ಟಿಯನ್ನು ನೀಡುತ್ತದೆ. ಬಿಲ್ವಫಲವೂ ಸಹ ಈ ಧರ್ಮದಿಂದ ಕೂಡಿದೆ. ಪೂಜೆಯಲ್ಲಿ ಶಿವಲಿಂಗದ ಮೇಲೆ ಬಿಲ್ವದ ಪತ್ರೆ-ಕಾಯಿಗಳೆರಡನ್ನೂ ಅರ್ಪಿಸಬಹುದು.

ಗರಿಕೆ: ಗರಿಕೆಹೂವು ಗಣೇಶನಪೂಜೆಗೆ ಪ್ರಶಸ್ತ. ಗರಿಕೆಯ ಹುಲ್ಲು ಗಣೇಶ ಹಾಗೂ ಹಯಗ್ರೀವದೇವರ ಪೂಜೆಗೆ ವಿಶೇಷವಾದದ್ದು. ಗರಿಕೆಯ ಹುಲ್ಲನ್ನು ಹೋಮಕ್ಕೆ ಸಮರ್ಪಿಸಿದಾಗ ಅದರ ಗಂಧವು ದೇಹದಲ್ಲಿ ಅಲ್ಪಾಯುಸ್ಸನ್ನುಂಟುಮಾಡುವ ಕೇಂದ್ರಗಳನ್ನು ಮುಚ್ಚಿ, ದೀರ್ಘಾಯುಸ್ಸನ್ನು ಕೊಡುವ ಕೇಂದ್ರಗಳನ್ನು ತೆರೆಯುತ್ತದೆ.

ಹೀಗೆ ವಿವಿಧ ಪತ್ರ-ಪುಷ್ಪಗಳ ವೈಶಿಷ್ಟ್ಯವನ್ನು ಪತ್ತೆಮಾಡಿ ವಿವಿಧ ದೇವತೆಗಳ ಪೂಜಾಕಲ್ಪದಲ್ಲಿ ಅವುಗಳಿಗೆ ಸ್ಥಾನವನ್ನು ಕೊಟ್ಟ ಮಹರ್ಷಿಗಳಿಗೆ, ಅವರ ವಿಜ್ಞಾನಕ್ಕೆ ನಮೋನಮಃ |  


ಸೂಚನೆ: 03/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.