Monday, March 30, 2020

ಜ್ಞಾನಮಾರ್ಗದಲ್ಲಿ ನಡೆದ ಶಂಕರರೇ ಮಾರ್ಗದರ್ಶಿ (Jnanamargadalli Nadeda Shankararee Margadharsi)

ಲೇಖಕರು: ವಿದ್ವಾನ್ ಎನ್. ಎನ್. ಚಂದ್ರಶೇಖರ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರುತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಮ್| 
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್|| 

ನಾತನಭಾರತದ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರಗಳ ಆಕಾಶದಲ್ಲಿ ಬೆಳಗುತ್ತಿರುವ ಧ್ರುವತಾರೆ ಶ್ರೀಶಂಕರಾಚಾರ್ಯರು. ನಾಸ್ತಿಕರ- ಬುದ್ಧಿವಾದಿಗಳ ಸೋಗಲಾಡಿ ಮಾತುಗಳಿಗೆ ಮಾರು ಹೋಗಿ ಜನರು ಧರ್ಮಭ್ರಷ್ಟರೂ, ಕರ್ತವ್ಯಭ್ರಷ್ಟ್ರರೂ ಆಗುತ್ತಿದ್ದ ಸಂಧಿಕಾಲದಲ್ಲಿ 'ಶಂಕರ' ಸೂರ್ಯನ ಉದಯವಾಯಿತು. ಈ ಸೂರ್ಯನು ತನ್ನ ಪ್ರಖರಕಿರಣಗಳನ್ನು ಎಲ್ಲೆಡೆ ಪಸರಿಸಿ, ಜನರಲ್ಲಿ ಹುದುಗಿದ್ದ ಅಜ್ಞಾನಾಂಧಕಾರವನ್ನು ಕಳೆದನು. ಇಂತಹ ಆಚಾರ್ಯೇಂದ್ರರನ್ನು ಕುರಿತು ಯಥಾಮತಿ ನಾಲ್ಕು ಮಾತುಗಳನ್ನು ಬರೆಯಲು ಪ್ರಯತ್ನಿಸುತ್ತೇನೆ. ಆಚಾರ್ಯಶಂಕರರು ಅಲೌಕಿಕ ಮೇಧಾಸಂಪನ್ನ ವ್ಯಕ್ತಿಯಾಗಿದ್ದರು. ಇವರ ಲೋಕಾತೀತವಾದ ವಿದ್ವತ್ತು, ಮೇರುಪ್ರತಿಭೆ, ಶಾಸ್ತ್ರಪಾಂಡಿತ್ಯಗಳು ಎಲ್ಲರನ್ನೂ ಮುಗ್ಧರನ್ನಾಗಿಸುತ್ತಿತ್ತು. ಪಾರ್ವತಿಯನ್ನು ಕುರಿತು ಕಾಳಿದಾಸನು ಹೇಳುವ ಮಾತು— 'ಶರತ್ಕಾಲದಲ್ಲಿ ಹಂಸಪಕ್ಷಿಗಳು ಗಂಗಾನದಿಯಲ್ಲಿ ಸಹಜವಾಗಿ ಬಂದು ವಿಹರಿಸುವಂತೆ, ಸಂಜೆಯಾದೊಡನೆ ಮಹೌಷಧಿಗಳಲ್ಲಿ ಅವುಗಳ ಆತ್ಮಪ್ರಭೆಯು ಪ್ರಕಟಗೊಳ್ಳುವಂತೆ, ಪಾರ್ವತಿಯಲ್ಲಿ ಪೂರ್ವಜನ್ಮದಲ್ಲಿ ಗಳಿಸಿದ ಎಲ್ಲಾ ವಿದ್ಯೆಗಳೂ ಉಪದೇಶಕಾಲದಲ್ಲಿ ಪ್ರಕಟಗೊಂಡವು'. ಇದೇ ರೀತಿಯಲ್ಲಿ ಶಂಕರರು 

ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರವಿತ್| 
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್|| 

ತನ್ನ ಮೂವತ್ತೆರಡು ವರ್ಷಗಳ ಜೀವಿತಾವಧಿಯಲ್ಲಿ ವಿದ್ಯಾಧ್ಯಯನ, ಭಾಷ್ಯರಚನೆ, ಗ್ರಂಥರಚನೆ, ಸ್ತೋತ್ರರಚನೆ, ಲೋಕದರ್ಶನ, ಭಾರತಾದ್ಯಂತ ಸಂಚಾರ, ಧರ್ಮಸಂಸ್ಥಾಪನೆಗಾಗಿ ಆಮ್ನಾಯಪೀಠ ಸ್ಥಾಪನೆ- ಅಲ್ಲಿ ಶಿಷ್ಯರ ನಿಯುಕ್ತಿ, ಆ ಪರಂಪರೆ ಮುಂದುವರಿಯಲು ಬೇಕಾದ ದೃಢಸ್ಫೂರ್ತಿಪೂರಣ ಇತ್ಯಾದಿ ಅಲೌಕಿಕ ಕಾರ್ಯಗಳನ್ನು ಮಾಡಿ, ದೇಶಕ್ಕೆ ಹೊಸ ಚೈತನ್ಯವನ್ನು ತುಂಬಿದ ಮಹಾಸಂತ, ದೈವೀಪುರುಷ, ಪರಿವ್ರಾಜಕಾಚಾರ್ಯ ಶ್ರೀಶಂಕರಭಗವತ್ಪಾದರು. ಶ್ರೀಶಂಕರರು ತಮ್ಮ ಭಾಷ್ಯಗ್ರಂಥಗಳಲ್ಲಿ ಅದ್ವೈತವನ್ನು ಬೋಧಿಸಿದ್ದರೂ, ಸ್ವತಃ ಭಗವತ್ಸ್ವರೂಪರಾಗಿ, ಅದ್ವೈತಿಗಳಾಗಿ ಬೆಳಗುತ್ತಿದ್ದರೂ ಲೋಕಸಂಗ್ರಹಕ್ಕಾಗಿ ಭಕ್ತಿಮಾರ್ಗವನ್ನೂ, ಕರ್ಮಮಾರ್ಗವನ್ನೂ ಉಪಷ್ಟಂಭಕವಾಗಿ ಬೋಧಿಸಿದ್ದಾರೆ. ಬ್ರಹ್ಮನಿಂದ ಮೊದಲ್ಗೊಂಡು ಇರುವೆವರೆಗಿನ ಎಲ್ಲಾ ದೇಹಗಳಲ್ಲಿಯೂ ಹುದುಗಿರುವ ಆತ್ಮವಸ್ತುವನ್ನು ಯಥಾರ್ಥವಾಗಿ ಯಾವನು ಸರ್ವದಾ ಕಾಣುತ್ತಾನೋ, ಚಾಂಡಾಲನಿರಲಿ-ಬ್ರಾಹ್ಮಣನಿರಲಿ, ಅವನೇ ನನಗೆ ಗುರುಸಮಾನ ಎಂಬ ಸಹಜಭಾವ ಶಂಕರರದು. ಹೀಗೆ ಎಲ್ಲೆಲ್ಲಿಯೂ ಬ್ರಹ್ಮವನ್ನೇ ಕಾಣುವ ಸಮದರ್ಶಿ ಶಂಕರರು. ತಮ್ಮ ಆತ್ಮೋದ್ಧಾರವನ್ನು ಮಾತ್ರ ನೋಡದ ಶಂಕರರು ಲೋಕೋದ್ಧಾರಕ್ಕಾಗಿ ಶಾರದಾಪೀಠಗಳನ್ನು ಸ್ಥಾಪಿಸಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದರು. ಅಲ್ಲಲ್ಲಿ ದೇವಾಲಯಗಳನ್ನು ಶ್ರೀಚಕ್ರಗಳನ್ನು ಪ್ರತಿಷ್ಠಾಪಿಸಿ, ಲಲಿತಾದೇವಿಯ ಉಪಾಸನೆ ನಿರಂತರ ನಡೆಯುವಂತೆ ವ್ಯವಸ್ಥೆ ಮಾಡಿದರು. ತಾಯಿಗೆ ಸಮ್ಮತವಲ್ಲದ ಸಂನ್ಯಾಸಾಶ್ರಮವನ್ನು ವ್ಯಾಜಾಂತರದಿಂದ ಸ್ವೀಕರಿಸಿ, ಅವಳ ಅಂತ್ಯಕಾಲದಲ್ಲಿ ಸ್ಮರಿಸಿದಾಕ್ಷಣ ಒದಗಿ ಬಂದು, ಸಂನ್ಯಾಸಿಯಾದರೂ ತಾಯಿಯ ಅಂತ್ಯಕ್ರಿಯೆಯನ್ನು ಮಾಡಿ ಮಾತೃಭಕ್ತಿಯನ್ನು ಮೆರೆದವರು ಶಂಕರರು! ಲೋಕಪೂಜ್ಯ ಶ್ರೀ ಶಂಕರ ಭಾಗವದ್ಪದರು.

ಸೂಚನೆ: 30/03/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.