Sunday, March 15, 2020

ಮಂಗಲನೀರಾಜನದೊಂದಿಗೆ ಮಂಗಲಮೂರ್ತಿಯ ದರ್ಶನ (Mangalanirajanadondige Mangalamurthiya Darshana)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)
  
ದೇವರಿಗೆ ಮಾಡುವ ದೀಪಾರತಿಯು ಮಂಗಲಾರತಿಯೆನಿಸಿಕೊಳ್ಳುತ್ತದೆ. 'ಮಂಗಂ ಲಾತೀತಿ ಮಂಗಲಂ' -ಮಂಗಲ ಎಂದರೆ ಸುಖವನ್ನು, ಆನಂದವನ್ನು ಕೊಡುವುದು. ದೇವರ ಪೂಜೆಯಲ್ಲಿ ಎರಡು ಬಾರಿ ದೀಪಾರತಿಯನ್ನು ಮಾಡುವ ಪದ್ಧತಿ ಇದೆ. ಧೂಪಸಮರ್ಪಣೆಯ ನಂತರ ಮೂರು ಬತ್ತಿಗಳನ್ನು ಸೇರಿಸಿ ತುಪ್ಪದಲ್ಲಿ ಅದ್ದಿ ಮಾಡುವ ಆರತಿ ಪೂರ್ವನೀರಾಜನ. ನೈವೇದ್ಯದ ನಂತರ ಮಾಡುವುದು ಉತ್ತರನೀರಾಜನ ಅಥವ ಮಹಾಮಂಗಲಾರತಿ. 

ದೀಪಾರತಿಮಾಡುವಾಗ ಪ್ರದಕ್ಷಿಣಾಕಾರವಾಗಿ ಸುತ್ತುತ್ತ ಭಗವಂತನನ್ನು ಪಾದಾದಿಕೇಶಪರ್ಯಂತ ದರ್ಶನಮಾಡಿಸಬೇಕು. ಮಂಗಲಮಯವಾದ ದೀಪದ ಪ್ರಕಾಶದಲ್ಲಿ ಭಗವಂತನ ಶ್ರೀಮೂರ್ತಿಯನ್ನು ದರ್ಶನಮಾಡಿ ನಂತರ ಅದನ್ನು ಹೃದಯದಲ್ಲಿಯೂ ತುಂಬಿಕೊಳ್ಳಬೇಕು. ಹೀಗಾದಲ್ಲಿ ಇದು ನಿಜಕ್ಕೂ ಸುಖವನ್ನೂ ಆನಂದವನ್ನೂ ನೀಡುವ 'ಮಂಗಲ'ಆರತಿಯಾಗುತ್ತದೆ.

ದೀಪಾರತಿಯ ಪ್ರಕಾರಗಳು:
ಏಕದೀಪಾರತಿ, ಕುಂಭಾರತಿ, ಐದು, ನಾಲ್ಕು, ಹನ್ನೆರಡು, ಅರವತ್ತುನಾಲ್ಕು ಅಂತೆಯೇ ಸಹಸ್ರದೀಪಗಳಿಂದ ಆರತಿಯನ್ನು ಮಾಡುವುದೂ ಶಾಸ್ತ್ರಸಮ್ಮತವಾಗಿದೆ. ಈ ಸಂಖ್ಯೆಗಳು ತತ್ತ್ವಕ್ಕೆ ಸಂಬಂಧಪಟ್ಟು, ಒಳದರ್ಶನದ ಕಮಲದಳಗಳ ಪ್ರತಿನಿಧಿಯಾಗಿವೆ ಎಂಬುದು ಜ್ಞಾನಿಗಳಿಂದ ತಿಳಿದುಬರುವ ವಿಚಾರ. ಏಕಾರತಿಯು ಏಕಮಾತ್ರ ದೀಪವಾದ ಪರಮಾತ್ಮನ ಪ್ರತೀಕ. ಸಹಸ್ರದೀಪವೆಂಬುದು ಒಳಗಿನ ಸಹಸ್ರಾರಕಮಲವನ್ನು ನೆನಪಿಸುತ್ತದೆ. ವೃಕ್ಷಾರತಿಯೆಂಬುದು (ಒಂದರಮೇಲೊಂದರಂತೆ ಸಾಲುಗಳಿಂದಕೂಡಿದ್ದು, ಕೆಳಗಡೆಯದು ದೊಡ್ಡವೃತ್ತವಾಗಿಯೂ ಮೇಲೆಹೋದಂತೆ ಸಣ್ಣದಾಗುತ್ತಾ ಕೊನೆಗೆ ಒಂದೇ ದೀಪವಾಗಿರುವುದು) ಅಂತರಂಗದಲ್ಲಿ ಕಾಣುವ ಜ್ಯೋತಿಯ ಸಾಲಿನ ಪ್ರತೀಕ.  ಕುಂಭಾರತಿಯು ಕಂಠದಿಂದ ಮೇಲಿರುವ ಶಿರಸ್ಸನ್ನೂ ಅಲ್ಲಿ ಬೆಳಗುವ ಪರಮಾತ್ಮ ಜ್ಯೋತಿಯನ್ನೂ ಸೂಚಿಸುತ್ತದೆ.

ದೀಪಾರತಿಯ ಸಂದರ್ಭದಲ್ಲಿ ಮೂಲಜ್ಯೋತಿಯ ದರ್ಶನಾನುಭವದ ನೆನಪನ್ನು ಕೊಡುವ ಮಂತ್ರವನ್ನೂ, 'ನಿತ್ಯಸೂರಿಗಳು ತ್ರುಟಿಕಾಲವೂ ಎವೆಯಿಕ್ಕದೇ ದರ್ಶಿಸಿ ಆನಂದಿಸುವ ಪರಮಾತ್ಮಜ್ಯೋತಿ' ಎಂದು ಕೊಂಡಾಡುವ ಮಂತ್ರಗಳನ್ನೂ ಪಠಿಸುವ ರೂಢಿಯಿದೆ. ದೇವದೇವನಿಗೆ ಮಂಗಲಾಶಾಸನವನ್ನು ಮಾಡುವ ಶ್ಲೋಕಗಳ ಪಠನವೂ ರೂಢಿಯಲ್ಲಿದೆ. 

ದೇವರಿಗೆ ಕರ್ಪೂರಾರತಿಯನ್ನೂ ಮಾಡುವಾಗ ಒಳ್ಳೆಯ ಕರ್ಪೂರವಾದರೆ ಆರತಿಯಾದನಂತರ ತಟ್ಟೆಯಲ್ಲಿ ಸ್ವಲ್ಪವೂ ಕರೆ ಉಳಿಯುವುದಿಲ್ಲ. ಜೀವನು ಕರ್ಪೂರದಂತೆ ಪರಮಾತ್ಮನಿಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿ ಅವನಲ್ಲೇ ಲಯವಾಗಬೇಕೆನ್ನುವುದನ್ನು ಸೂಚಿಸುತ್ತದೆ ಕರ್ಪೂರಾರತಿ. 

ಹೀಗೆ ಮಹರ್ಷಿಗಳಿಂದ ಯೋಜಿತವಾಗಿರುವ ದೀಪೋಪಚಾರವೂ ಉಳಿದ ಉಪಚಾರಗಳಂತೆ ಜೀವಿಯನ್ನು ದೇವನಲ್ಲಿ ಸೇರಿಸುವ ಸೇತುವೆಯೇ ಆಗಿದೆ ಎಂದು ಶ್ರೀರಂಗಮಹಾಗುರುಗಳು ಅಪ್ಪಣೆಕೊಡಿಸಿದ್ದರು.

ಸೂಚನೆ: 14/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.