Monday, March 23, 2020

ಆತ್ಮಸಾಧನೆಗೆ ಕಾಲಾವಕಾಶವಿದೆಯೇ ? (Atmasadhanege Kalavakasavideye ?)

ಲೇಖಕರು : ಶ್ರೀ ವಿದ್ವಾನ್ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ : lekhana@ayvm.in)


ಪ್ರತಿಯೊಬ್ಬ ಮಾನವನಿಗೂ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಆದರೆ ಏನನ್ನು ಸಾಧಿಸಬೇಕು? ಎಂಬ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ. ಇದಕ್ಕೆ ಭಾರತೀಯ ಮಹರ್ಷಿಗಳು ಸಂಕ್ಷಿಪ್ತವೂ ಸಮಾಧಾನಕರವೂ ಆದ ಉತ್ತರವನ್ನು ಕೊಟ್ಟಿದ್ದಾರೆ. "ಯಾವುದನ್ನು ಪಡೆದ ಮೇಲೆ ಇನ್ನಾವುದನ್ನೂ ಪಡೆಯುವಂತಹದ್ದು ಇರುವುದಿಲ್ಲವೋ ಅಂತಹದ್ದನ್ನು ಸಾಧಿಸಬೇಕು" ಎಂದು. ಹಾಗಾದರೆ ಅದಾವುದು? ಅದೇ ಆತ್ಮಲಾಭ. ಪ್ರತಿಯೊಬ್ಬರ ಒಳಗೂ ಭಗವಂತ ಇದ್ದಾನೆ. ಅಂತಹ ಭಗವಂತನನ್ನು ನೋಡಿದರೆ ಎಲ್ಲವನ್ನೂ ಸಾಧಿಸಿದಂತೆಯೇ. ಏಕೆಂದರೆ ಈ ಸೃಷ್ಟಿಯಲ್ಲಿ ಎಲ್ಲವೂ ಅವನೇ. ಎಲ್ಲದರಲ್ಲೂ ಅವನೇ. ಇಂತಹ ವಿಶಿಷ್ಟವಾದ ಅಸ್ತಿತ್ವವನ್ನು ನಾವು ನಮ್ಮಲ್ಲೇ, ಅಂದರೆ ನಮ್ಮ ಈ ಜನ್ಮದಲ್ಲೇ ನಮ್ಮ ಈ ಮಾನವಶರೀರದಲ್ಲೇ ಕಾಣಬೇಕು. ಇದು ಮಾನವಜನ್ಮದ ಪರಮೋದ್ದೇಶ. ಇದೇ ಸಾಧಿಸಲೇಬೇಕಾದದ್ದು. ಹಾಗಾದರೆ ಇದನ್ನು ಸಾಧಿಸಲು ಕಾಲಾವಕಾಶವೆಷ್ಟು?!

ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ನೂರು ವರ್ಷ ಆಯುಷ್ಯ ಎಂದಾದರೆ ಅವುಗಳಲ್ಲಿ ಅರ್ಧಭಾಗ ರಾತ್ರಿಯಾಗಿ ಕಳೆಯುತ್ತೇವೆ. ಇನ್ನು ಐವತ್ತರಲ್ಲಿ ಬಾಲ್ಯ ಮತ್ತು ವಾರ್ಧಕ್ಯ ಎಂಬ ಎರಡು ಅವಸ್ಥೆಗಳಲ್ಲೇ ಇಪ್ಪತ್ತು ವರ್ಷಗಳನ್ನು ಕಳೆಯುತ್ತೇವೆ. ಇನ್ನು ಕೆಲವು ವರ್ಷಗಳನ್ನು ರೋಗ, ಆಲಸ್ಯ, ಬೇಜವಾಬ್ದಾರಿ ಮೊದಲಾದವುಗಳಿಂದ ಕಳೆಯುತ್ತೇವೆ. ಅಂದರೆ ನಮಗೆ ಗಟ್ಟಿಯಾಗಿ ಸಿಗುವ ಕಾಲವೆಷ್ಟು? ಎಂದು ಯೋಚಿಸಿದರೆ ಭಯವಾಗುತ್ತದೆ. ನಮಗಿರುವ ಇಷ್ಟು ಅಲ್ಪಕಾಲವನ್ನು ಯಾವ ರೀತಿ ಬಳಸಿಕೊಳ್ಳಬೇಕು? ಎಂಬುದಕ್ಕೆ ನಮ್ಮ ಹಿರುಯರು ಉಪಾಯವನ್ನೂ ಹೇಳುತ್ತಾರೆ. "ಅಜರಾsಮರವತ್ಪ್ರಾಜ್ಞಃ ವಿದ್ಯಾಮರ್ಥಂಚ ಸಾಧಯೇತ್,ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್" ಎಂದು. 

ವಿದ್ಯೆ ಮತ್ತು ಧನವನ್ನು ಸಂಪಾದಿಸುವಾಗ ವೈರಾಗ್ಯ ಸಲ್ಲದು. ನಾನು ಮುಪ್ಪಿಲ್ಲದವನು, ಎಂದೆಂದಿಗೂ ಇರುವವನು ಎನ್ನುವ ಉತ್ಸಾಹದಿಂದ ಇವೆರಡನ್ನೂ ಸಂಪಾದಿಸಬೇಕು. ಆದರೆ ಜೊತೆಗೇ, ನಮ್ಮನ್ನು ಕರೆದೊಯ್ಯಲು ಯಮಭಟರು ಬಂದು ನಮ್ಮ ತಲೆಯ ಕೇಶರಾಶಿಗೆ ಕೈ ಹಾಕಿದ್ದಾರೆ. ಇನ್ನೇನು ಸ್ವಲ್ಪ ಹೊತ್ತಿನಲ್ಲೇ ನಮ್ಮ ಪ್ರಾಣವಿಯೋಗವಾಗುತ್ತದೆ ಎಂದು, ತ್ವರೆಯಿಂದ, ಜವಾಬ್ದಾರಿಯಿಂದ ಧರ್ಮಕಾರ್ಯವನ್ನು ಮಾಡಬೇಕು. ಕಾಲವು ಬಹಳ ಕಡಿಮೆ. ಆದರೆ ಸಾಧಿಸಬೇಕಾದದ್ದು ತುಂಬಾ ಇದೆ. ಇದ್ದ ಅಲ್ಪಕಾಲದಲ್ಲೇ ನಾವು ಭಗವಂತನನ್ನು ಕಾಣಲು ಪ್ರಯತ್ನಿಸಬೇಕು. ಇದರ ಜೊತೆಜೊತೆಯಲ್ಲೇ ನಮ್ಮ ಸಾಂಸಾರಿಕ ಜೀವನವನ್ನೂ ಸುಂದರವಾಗಿ ಸಾಗಿಸಬೇಕು. ಅಲ್ಲಿನ ಕರ್ತವ್ಯಕ್ಕೆ ಚ್ಯುತಿ ಇಲ್ಲದ ರೀತಿಯಲ್ಲಿ ನಮ್ಮ ಬಾಳಾಟವಿರಬೇಕು. "ಎಚ್ಚರದಲ್ಲಿ ತನ್ನ ಜೀವನಕ್ಕಾಗಿ ದುಡಿಯುತ್ತಾನೆ, ವಿಶ್ರಾಂತಿಗಾಗಿ ನಿದ್ರೆ ಮಾಡುತ್ತಾನೆ, ಮಧ್ಯೆ ಕನಸು ಕಾಣುವುದೂ ಉಂಟು, ಹೀಗೆ ಎಚ್ಚರ, ಕನಸು, ನಿದ್ರೆಗಳು ಹೇಗೆ ಜೀವನಿಗೆ ಸಹಜಸಿದ್ಧವಾದ ಹಕ್ಕೋ, ಹಾಗೆಯೇ ಸುಖವಾಗಿ ಭಗವಂತನ ಜೊತೆಯಲ್ಲಿರೋಣ ಎನ್ನುವುದೂ ಜೀವದ ಹಕ್ಕು" ಎಂಬ ಶ್ರೀರಂಗ ಮಹಾಗುರುಗಳ ವಾಣಿಯನ್ನು ಇಲ್ಲಿ ಸ್ಮರಿಸಬೇಕು. ಮೃತ್ಯು ಯಾವಾಗಲಾದರೂ ಬರಬಹುದು.ಎಂದೇ ಜೀವನದ ಪರಮ ಧ್ಯೇಯಕ್ಕಾಗಿ ಸಾಧನೆ ಮಾಡುವುದನ್ನು ಮುಂದೆ ಹಾಕದೇ ಒಡನೆಯೇ ಮಾಡೋಣ. ಅಲ್ಪಜೀವಿತಕಾಲದಲ್ಲಿ ಮಹತ್ತಾದುದನ್ನು ಸಾಧಿಸೋಣ.

ಸೂಚನೆ: 1/03/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.