Saturday, March 21, 2020

ಶಾರ್ವರಿ ಯುಗಾದಿಯ ಸಂತಸ (Sharvari ugadiya Santasa)

ಲೇಖಕರು: ಡಾII ಯಶಸ್ವಿನೀ
ಆಯುರ್ವೇದ ವೈದ್ಯೆ
(ಪ್ರತಿಕ್ರಿಯಿಸಿರಿ lekhana@ayvm.in)ಯುಗಾದಿಹಬ್ಬ ಎಲ್ಲೆಲ್ಲೂ ಸಡಗರ, ಸಂಭ್ರಮ. ಕೆಲಸಕ್ಕೆ ರಜೆ ಇರುವ ದಿನ. ನವ ವಸ್ತ್ರ ಧರಿಸಿ,ಬಗೆ ಬಗೆ ಹೂವುಗಳಿಂದ ಭಗವಂತನ ಪೂಜೆಯ ಮಾಡಿ, ಬೇವು ಬೆಲ್ಲ ತಿಂದು ಪಂಚಾಂಗ ಶ್ರವಣ ಮಾಡಿ, ಹಬ್ಬದ ಅಡುಗೆಯ ಸವಿಯುವ ದಿನ. ವರ್ಷವಿಡೀ ಸಿಹಿ, ಕಹಿಯನ್ನು ಸಮವಾಗಿ ಕಾಣುತ್ತೇನೆ ಎಂಬ ಮನಸ್ಸಿನಲ್ಲಿ ವರ್ಷವನ್ನು ಆರಂಭಮಾಡುವ ದಿನ. ಇಂದು ಹೊಸ ಸಂಕಲ್ಪಗಳನ್ನು ಪ್ರಾರಂಭಿಸಲು ಯೋಗ್ಯವಾದ ದಿನ. ನಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ- ಇವತ್ತು ಬೇಗನೆ ಏಳು. ತಡವಾಗಿ ಎದ್ದರೆ ವರ್ಷವಿಡೀ ತಡವಾಗಿ ಏಳುತ್ತೀಯ ಎಂದು ಇವತ್ತು ಕೋಪ, ಹಠ ಮಾಡಬಾರದು, ಅಳಬಾರದು, ನಗುನಗುತ್ತಾ ಸಂತೋಷದಿಂದಿರು. ಆಗ ವರ್ಷವಿಡೀ ಸಂತೋಷದಿಂದ ಸಮಾಧಾನದಿಂದ ಇರುತ್ತೀಯ ಎಂದು. ಈ ವಿಚಾರಗಳು ಮನೆಮನೆಗಳಲ್ಲಿ ಸಂಸ್ಕಾರ ರೂಪದಲ್ಲಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರಗಳು.

ಈಗಿನ ಜೀವನಶೈಲಿಗೆ ಇವೆಲ್ಲವೂ ಕಾಲಬಾಹಿರ ವಿಷಯಗಳು ಎನ್ನಿಸಬಹುದು. ವರ್ಷದ ಮೊದಲ ರಜೆ. ರಜೆದಿನ ಹೊಸತಿಂಡಿ ಮನೆಕೆಲಸ ಅಂತ ಮತ್ತೆ ಆಯಾಸ ಮಾಡಿಕೊಳ್ಳುವುದಕ್ಕಿಂತ ಹಾಯಾಗಿ ಸ್ವಿಗ್ಗಿಯಲ್ಲಿ ಸುಗ್ಗಿಯ ಅಡುಗೆ ಆರ್ಡರ್ಮಾಡಬಹುದಲ್ಲ? ಎಂಬ ಯೋಚನೆ ಬರಬಹುದು. ಅಥವಾ ಫ್ಯಾಮಿಲಿ ಔಟಿಂಗ್ ಪ್ರವಾಸಕ್ಕೆ ಹೋಗಿ ಶ್ರಮವನ್ನು ಕಳೆದುಕೊಂಡು ಬರಬಹುದಲ್ಲ ಎಂಬ ಚಿಂತನೆಗಳೂ ಈಗ ಸಹಜವಾಗಿವೆ.ಈ ಹಬ್ಬದ ಪರಿಪೂರ್ಣ ಉಪಯೋಗ ಏನು? ಪ್ರಯೋಜನೆ ಏನು? ಎಂಬ ಶಿಕ್ಷಣ ಇಲ್ಲದಿರುವುದರಿಂದ ಈ ರೀತಿಯಾದ ಬಗೆ ಬಗೆ ಯೋಚನೆಗಳು ಸಹಜ. ಭಾರತೀಯರ ಹಬ್ಬಗಳು ಕ್ಯಾಲೆಂಡರ್ ದಿನಾಂಕ ಆಧಾರಿತ ಹಬ್ಬಗಳಲ್ಲ. ಪ್ರಕೃತಿಯಲ್ಲಿ, ಬ್ರಹ್ಮಾಂಡದಲ್ಲಿ ಒಂದು ನಿರ್ದಿಷ್ಟ ಬದಲಾವಣೆ ಉಂಟಾಗುತ್ತದೆ. ಗ್ರಹ, ತಿಥಿ, ಮಾಸ, ರಾಶಿ, ಋತುಗಳಲ್ಲಿ ಒಂದು ಯೋಗ ಉಂಟಾಗುತ್ತದೆ. ಅದನ್ನು ಪ್ರಮಾಣಿಸಿಯೂ ನೋಡಬಹುದು. ಅದೇ ಬದಲಾವಣೆ, ನಮ್ಮ ಪಿಂಡಾಂಡದಲ್ಲಿ (ದೇಹ)ಯೂ ಉಂಟಾಗುತ್ತದೆ. ಇದು ಋಷಿ ಮಹರ್ಷಿಗಳು ತಮ್ಮ ಅನುಭವದಿಂದ ನಮಗೆ ತಿಳಿಸಿಕೊಟ್ಟಿರುವ ವೈಜ್ಞಾನಿಕ ಸತ್ಯ. ಯುಗಾದಿ ಹಬ್ಬದಂದು ಪ್ರಕೃತಿಯಲ್ಲಿ ಹೊಸತನ-ಹೊಸ ಚಿಗುರುಗಳು ಮೊಳೆಯುವ ಕಾಲ. ಹೂವು ಬಿರಿಯುವ ಕಾಲ. ಎಲ್ಲಾ ಜೀವ ಜಂತುಗಳಲ್ಲಿಯೂ ನವನವೀನತೆಯು ಮೊಳೆಯುವ ಕಾಲ.

ಯುಗದ ಆದಿಯ ದಿನವಾದ ಇಂದು ಚೈತ್ರ ಮಾಸಕ್ಕೆ ಪ್ರಥಮ ತಿಥಿ. ಪ್ರಥಮ ಋತುವಿಗೆ, ಹೊಸ ಶಾರ್ವರಿ ಸಂವತ್ಸರಕ್ಕೆ ಪ್ರಥಮ ದಿನ. ಯುಗಾದಿಯ ಆಚರಣೆ - ಪ್ರಾತ:ಕಾಲದಲ್ಲಿ ಎಳ್ಳೆಣ್ಣೆಯಿಂದ "ಅಭ್ಯಂಗ" ಮಾಡಿಕೊಳ್ಳಬೇಕು. ಪ್ರತಿದಿನವೂ ಅಭ್ಯಂಗವನ್ನು ಆಚರಿಸಬೇಕು. ಅದು ಮುಪ್ಪು, ಆಯಾಸ, ವಾತದ ದೋಷಗಳನ್ನು ನಿವಾರಣೆ ಮಾಡುವುದು. ದೃಷ್ಟಿಪಾಟವವನ್ನು ಕೂಡುವುದು. ಭೋಗಪ್ರದವಾದ ಆಚರಣೆಯಾದರೂ ಯೋಗಕ್ಕೆ ಅನುಕೂಲಕರ ಈ ಅಭ್ಯಂಗ. ದೇಹ, ಇಂದ್ರಿಯ ಮನಸ್ಸನ್ನು ಹಗುರಗೊಳಿ"ಪುಷ್ಟಿ" ಆಯಸ್ಸು, ನಿದ್ರೆಯ ಸೌಖ್ಯನ್ನುಂಟುಮಾಡುವುದು. ಎಂದು ಆಯುರ್ವೇದವು ಹೇಳುತ್ತದೆ.ಯುಗಾದಿ ದಿನದಂದು ಸಂಕಲ್ಪಪೂರ್ವಕವಾಗಿ ಈ ಆಭ್ಯಂಗವನ್ನು ಕೈಗೊಂಡರೆ, ನಿತ್ಯವೂ ಅಭ್ಯಂಗವನ್ನು ಆಚರಿಸುವಂತಾಗುತ್ತದೆ ಇಂದಿನ ದಿನ ಪ್ರಜಾಪತಿ/ಕಾಲಪುರುಷನನ್ನು ಪೂಜಿಸಬೇಕು.ನಿನ್ನ ದೇಹವಾಗಿರುವ ಈ ಕಾಲದಲ್ಲಿ ಪರ್ವಸ್ಥಾನಗಳನ್ನು ಅರಿತು ಅವುಗಳನ್ನು ಅರ್ಥವತ್ತಾಗಿ ಆಚರಿಸಿ ಕಾಲವನ್ನೇ ದಾಟಿ ನಿನ್ನನ್ನು ಸೇರುವ ಸಾಧನೆಗಾಗಿ ಸಂಸಾರಸಾಗರದಿಂದ ಮುಕ್ತರಾಗುವಂತೆ ಮಾಡು ಎಂಬ ಅರಿಕೆಯನ್ನು ಇಡುವುದು ಉಚಿತವಾಗಿದೆ. ಪಂಚಾಗ ಶ್ರವಣ: ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳ ಜ್ಞಾನದೊಡನೆಯೇ ಪ್ರತಿದಿನ ವ್ಯವಹರಿಸಬೇಕು.ಇಂದಿನ ದಿನದ ಪಂಚಾಂಗದ ಜೊತೆಗೆ, ಇಡೀ ಸಂವತ್ಸರದ ಪಂಚಾಂಗವನ್ನು, ಸಾಮಾನ್ಯವಾದ ಯೋಗವನ್ನು ಕೇಳಿ ತಿಳಿದರೆ ಅದಕ್ಕೆ ತಕ್ಕಂತೆ ವರ್ಷದ ಕಾರ್ಯಯೋಜನೆ ಹಾಕಿಕೊಳ್ಳಲು ಸಹಾಯವಾಗುವುದು ಎಂದು. ದಾನ: ಯುಗಾದಿಯ ಪರ್ವದಲ್ಲಿ ಸಾಮಾನ್ಯವಾದ ಅನ್ನದಾನಗಳ ಜೊತೆಗೆ, ವಿಶೇಷವಾಗಿ ಪಂಚಾಂಗ, ಮತ್ತು ವಸ್ತ್ರಭೂಷಣಗಳನ್ನು ದಾನಮಾಡಬೇಕಂತೆ. ವಸಂತ ಋತುವಿನಲ್ಲಿ ಉಷ್ಣತೆ ಹೆಚ್ಚು ಇರುವುದರಿಂದ ಅಂದು ನೀರಿನ ಪಾತ್ರೆಗಳನ್ನು, ದೇವಸ್ಥಾನಾದಿ ಜಾಗಗಳಲ್ಲಿ ಸಿಹಿನೀರು, ಮಜ್ಜಿಗೆ, ಪಾನಕ ಮುಂದಾದವುಗಳನ್ನು ದಾನ ಮಾಡುವುದು ಕಾಲೋಚಿತವಾದ ದಾನವೇ ಆಗುತ್ತದೆ. ನೈವೇದ್ಯ : ಇಂದು ಅರ್ಪಿಸಿ ಸೇವಿಸಬೇಕಾದ ವಿಶೇಷವಾದ ನೈವೇದ್ಯ "ಬೇವು". ಹೂವಿನೊಡನೆ ಕೂಡಿದ ಚಿಗುರಬೇವು, ವಸಂತ ಮಾಸದಲ್ಲಿ ಬಿಸಿಲಿನ ಬೇಗೆಗೆ ಕರಗುವ ಕಫ ಭಗವತ್ ಕಾರ್ಯಕ್ಕೆ ಅಡ್ಡಿಬಾರದಿರಲೆಂದು ಬೇವು ತಿನ್ನುವ ಪದ್ಧತಿ.

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ| 
ಸರ್ವಾರಿಷ್ಟವಿನಾಶಾಯ ನಿಂಬಕಂದಳಭಕ್ಷಣಂ||

ಹಿ ಬೇವು ತಿನ್ನುವುದರಿಂದ, ಹೃದಯಕ್ಕೆ ಖಿನ್ನತೆ ಉಂಟಾಗುತ್ತದೆ. ವಾತ ಪ್ರಕೋಪಕ್ಕೂ ಕಾರಣವಾಗುತ್ತದೆ. ಧಾತುಗಳಲ್ಲಿ ವೈಷಮ್ಯತೆ ಉಂಟುಮಾಡದಿರಲೆಂದು ಬೇವಿನೊಂದಿಗೆ ಬೆಲ್ಲ ಸೇರಿಸಿ ಭಕ್ಷಿಸುವ ಕ್ರಮ ಬಂದಿದೆ. 


ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳ ಶ್ರೀರಂಗಮಹಾಗುರುಗಳು ಯುಗಾದಿಯನ್ನು ಸತ್ಯಯುಗದ ಆದಿ ಎಂದು ನಿರ್ದೇಶಿಸಿದ್ದಾರೆ. ಕೆಲವರು ಚೈತ್ರ, ಶುದ್ಧ ಪ್ರತಿಪತ್ ಎಂದು ಆಚರಿಸುತ್ತಾರೆ. ಇನ್ನು ಕೆಲವರು ಮೇಷ, ಸಂಕ್ರಮಣದ ದಿವಸದಲ್ಲಿ ಯುಗಾದಿ ಆಚರಿಸುತ್ತಾರೆ. ಬ್ರಹ್ಮನು ಸೃಷ್ಟಿಸಿದ ದಿನದಂದು ಗ್ರಹ, ನಕ್ಷತ್ರಗಳೆಲ್ಲವೂ ಚಲಿಸಲು ಪ್ರಾರಂಭವಾಯಿತು. ಚಂದ್ರನ ಚಲನೆಯನ್ನೇ ಆಧರಿಸಿ, ಚಂದ್ರನನ್ನು ನಾವು ಪಕ್ಷದ ಗಣನೆಯ ಮೂಲಕ ಗಣನೆ ಮಾಡುತ್ತೇವೆ. ಚಂದ್ರನ ನಡೆಗೆ ಅನುಸಾರವಾಗಿ ಕಾಲ ಗಣನೆಮಾಡುವ ಗುಂಪು, ಚಾಂದ್ರಮಾನ ಯುಗಾದಿಯೆಂದು ಆಚರಿಸುತ್ತಾರೆ. ಅಂತೆಯೇ ಸೂರ್ಯನ ಚಲನೆಯನ್ನಾಧರಿಸಿ ಕಾಲ ಗಣನೆಯಿಡುವ ಗುಂಪು ಸೌರಮಾನ ಯುಗಾದಿ ಎಂದು ಆಚರಿಸುತ್ತಾರೆ. ಅವರದ್ದು ಸರಿ, ಇವರದ್ದು ತಪ್ಪು ಎಂಬ ಗೊಂದಲಕ್ಕೆ ಇಲ್ಲಿ ಪ್ರಶ್ನೆಯೇ ಇಲ್ಲ. ಎರಡೂ ಸಮಂಜಸ. ಅವರ ಪೂರ್ವಜರು ಯಾವ ರೀತಿಯಲ್ಲಿ ಆಚರಿಸಿಕೊಂಡು ಬಂದಿರುತ್ತಾರೋ ಆದಿನವೇ ಅವರಿಗೆ ಪ್ರಾಶಸ್ತ್ಯ. ಸೌರಮಾನ ಯುಗಾದಿಯನ್ನು "ಚಿತ್ರವಿಷು" ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಚಾಂದ್ರಮಾನ ಯುಗಾದಿಯನ್ನು "ಸಂವತ್ಸರ ಪ್ರತಿಪತ್" ಎಂಬುದಾಗಿ ಆಚರಿಸುತ್ತಾರೆ. ಈ ಕಾಲದಲ್ಲಿ ಹೊರಗಿನ ಸೂರ್ಯನು ರಾಶಿಯಲ್ಲಿ ಹೆಜ್ಜೆ ಹಾಕುತ್ತಿರುವಂತೆ ಸಮಕಾಲದಲ್ಲಿ ನಮ್ಮೊಳಗಿನ ಜೀವ ಸೂರ್ಯನು ಸುಷುಮ್ನೆಯ ಗ್ರಂಥಿಯೊಳಗೆ ಸಂಗಮ ಹೊಂದುತ್ತಾನೆ ಮತ್ತು ಸಮಾಧಿಯಲ್ಲಿ ಅವಗಾಹನೆ ಮಾಡಲು ತೊಡಗುತ್ತಾನೆ ಎಂಬುದು ಅನುಭವಿ ಜ್ಞಾನಿಗಳ ಮಾತು. ಆಗ ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಈ ಪರ್ವಕಾಲದ ಮಹಾಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ನಾಡೀ ವಿಜ್ಞಾನದಲ್ಲಿ ಒಳ್ಳೆಯ ಪರಿಚಯವುಳ್ಳವರಿಗೆ ಆ ಮಹತ್ವವನ್ನು ಪ್ರಾಯೋಗಿಕವಾಗಿಯೂ ತೋರಿಸಬಹುದು ಎಂಬುದನ್ನು ಶ್ರೀರಂಗಮಹಾಗುರುಗಳು ತಿಳಿಸುತ್ತಿದ್ದರು. ಹೀಗೆ ದೇವತಾನುಗ್ರಹದಿಂದಲೂ, ಪುರುಷಪ್ರಯತ್ನದಿಂದಲೂ ಧರ್ಮ, ಅರ್ಥ, ಕಾಮ, ಮೋಕ್ಷಗಳಾದ ಎಲ್ಲಾ ಪುರಷಾರ್ಥಗಳಸಾಧನೆಗೂ ಹೊಂದಿಕೆಯಾಗಿ ಮಹರ್ಷಿಗಳ ಅದ್ಭುತವಾದ ಕಾಲವಿಜ್ಞಾನಕ್ಕೆ "ಯುಗಾದಿಯ" ಆಚರಣೆಯೂ ಕೈಗನ್ನಡಿಯಾಗಿದೆ. ಈ ಪವಿತ್ರ ಸ್ಮರಣೆಯಲ್ಲಿ ನಾವೆಲ್ಲರೂ ಹಬ್ಬವನ್ನು ಆಚರಿಸುವಂತಾಗಲಿ.

ಸೂಚನೆ: 21/03/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.