Monday, March 30, 2020

ಆದಿಕವಿಯ ರಸದೌತಣ (Adikaviya Rasadautana)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)



ತಣವೆಂದಾಕ್ಷಣ ನಮ್ಮ ಮನಸ್ಸಿಗೆ ಬರುವುದು ಬಾಯಲ್ಲಿ ನೀರೂರಿಸುವ, ವಿವಾಹ-ಉಪನಯನಗಳಲ್ಲಿ ಉಣಬಡಿಸುವ, ವಿವಿಧ ಭಕ್ಷ್ಯ-ಭೋಜ್ಯಗಳಿಂದ ಸಮೃದ್ಧವಾದ, ಮಧುರ-ಕ್ಷಾರ-ತಿಕ್ತ-ಕಟು-ಕಷಾಯ-ರೂಕ್ಷಗಳೆಂಬ ಷಡ್ರಸೋಪೇತವಾದ ಭೂರಿಭೋಜನ.  ಭೋಜನದಿಂದುಂಟಾಗುವ ಸೌಹಿತ್ಯವು ಇಂದ್ರಿಯತೃಪ್ತಿಯನ್ನೂ, ದೇಹಪೋಷಣೆಯನ್ನೂ, ಬುದ್ಧಿಮನಸ್ಸುಗಳ ಪೋಷಣೆಯನ್ನೂ ಮಾಡುವುದಲ್ಲದೇ ಅತೀಂದ್ರಿಯನಾದ ಆತ್ಮನಿಗೂ ತೃಪ್ತಿಯನ್ನುಂಟುಮಾಡುತ್ತದೆ.  ಶುದ್ಧಮನಸ್ಕರಿಂದ ತಯಾರಿಸಿ ಬಡಿಸಲ್ಪಟ್ಟ ಶುದ್ಧವಾದ ಆಹಾರಸೇವನೆಯಿಂದ  ಸತ್ತ್ವಶುದ್ಧಿಯೂ, ಅದರಿಂದ ಸ್ಮೃತಿಯಲ್ಲಿ ಧ್ರುವತ್ವವೂ ಉಂಟಾಗಿ, ಆ ಸ್ಮೃತಿಯನ್ನವಲಂಬಿಸಿದರೆ ಜೀವವನ್ನು ಸಂಸಾರದಲ್ಲಿ ಕಟ್ಟುಹಾಕಿರುವ ಎಲ್ಲಾ ಗಂಟುಗಳೂ ಬಿಚ್ಚಿಕೊಂಡು ಆತ್ಮಸಾಕ್ಷಾತ್ಕಾರವಾಗುತ್ತದೆಯೆಂದು ಛಾಂದೋಗ್ಯೋಪನಿಷತ್ತು ತಿಳಿಸಿಕೊಡುತ್ತದೆ. 

ಸದ್ಗೃಹಿಣಿಯಿಂದ ಬಡಿಸಲ್ಪಟ್ಟ ಔತಣಕ್ಕೇ ಆತ್ಮಸಾಕ್ಷಾತ್ಕಾರಮಾಡಿಸುವ ಯೋಗ್ಯತೆ ಇರಬೇಕಾದರೆ ಇನ್ನು ರಾಮರಸಾಯನವನ್ನು ಆಸ್ವಾದಿಸಿರುವ ಮಹಾಸದ್ಗೃಹಸ್ಥರಾದ ವಾಲ್ಮೀಕಿಗಳಿಂದ ಉಣಬಡಿಸುವ ಔತಣವು ಹೇಗಿರುತ್ತದೆಂಬುದನ್ನು ನೋಡೋಣ.

ಆತಿಥೇಯನು ಹೇಗೆ ತನ್ನ ಮನೆಗೆ ಬಂದ ಅತಿಥಿಗೂ ಆ ಅತಿಥಿಯನ್ನು ಹೊತ್ತುತಂದ ಕುದುರೆಗಳಿಗೂ ಷಡ್ರಸೋಪೇತವಾದ ಆಹಾರವನ್ನು ಉಣಬಡಿಸುವನೋ, ಹಾಗೆಯೇ ಆದಿಕವಿ ವಾಲ್ಮೀಕಿಗಳು ತಮ್ಮ ಕೃತಿಯಾದ ರಾಮಾಯಣದಲ್ಲಿ ಆತ್ಮಕ್ಕೂ ಹಾಗೂ ಇಂದ್ರಿಯಾಶ್ವಗಳಿಗೂ ಶೃಂಗಾರ-ವೀರ-ಕರುಣ-ಅದ್ಭುತ-ಹಾಸ್ಯ-ಭಯಾನಕ-ಬೀಭತ್ಸ-ರೌದ್ರ-ಶಾಂತಗಳೆಂಬ ನವರಸೋಪೇತವಾದ ಆಹಾರವನ್ನು ಉಣಬಡಿಸಿದ್ದಾರೆ. ಹೇಗೆ ನದಿಗಳೆಲ್ಲವೂ ಸಮುದ್ರದಲ್ಲಿ ಲಯಹೊಂದುತ್ತದೆಯೋ ಹಾಗೆಯೇ ಎಲ್ಲಾ ರಸಗಳೂ ಶಾಂತರಸದಲ್ಲಿ ಲಯಹೊಂದುತ್ತದೆ. ಪೂಜ್ಯರಾದ ಶ್ರೀರಂಗಮಹಾಗುರುಗಳು ನವರಸಗಳ ಬಗ್ಗೆ ವಿವರಣೆ ನೀಡುತ್ತಾ 'ಶಾಂತರಸವು ಶಾಶ್ವತವಾದದ್ದು.  ಆಕಾಶದಂತೆ ನಿರ್ಮಲ, ನಿರ್ವಿಕಾರ, ನಿರಂಜನ ಮತ್ತು ನಿರ್ಲೇಪರೂಪವುಳ್ಳದ್ದು.  ಇತರರಸಗಳು ಇದರ ಮುಂದೆ ಹಾದುಹೋಗುವ ಬಣ್ಣಬಣ್ಣದ ಮೋಡದ ಚಕ್ಕೆಗಳಂತೆ ಅಶಾಶ್ವತವಾದವು. ಚಿತ್ರಮಂದಿರದಲ್ಲಿರುವ ಪರದೆಯ ಸ್ಥಾನದಲ್ಲಿರುವುದೇ ಶಾಂತರಸ.  ಪರದೆಯ ಮೇಲೆ ಚಿತ್ರದಲ್ಲಿ ತೋರಿಬರುವ ನೀರು-ಬೆಂಕಿ-ಗಾಳಿ-ಬಣ್ಣಗಳೇ ಮೊದಲಾದವುಗಳ ಪ್ರಭಾವಕ್ಕೋ ಪರಿಣಾಮಕ್ಕೋ ಒಳಪಡದೇ ಹೇಗೆ ನಿರ್ಲಿಪ್ತವಾಗಿರುತ್ತದೆಯೋ ಹಾಗೆಯೇ ಆತ್ಮನ ಸ್ವರೂಪವೂ ಶಾಂತವೇ ಆಗಿರುತ್ತಾ ಜೀವನದಲ್ಲಿ ಬರುವ ಮತ್ತಾವ ರಸಗಳ ಪ್ರಭಾವಕ್ಕೂ ಒಳಪಡದೆ ತನ್ನ ತನದಲ್ಲಿಯೇ ನೆಲೆನಿಂತಿರುತ್ತದೆ' ಎಂಬ ವಿಷಯವನ್ನು ಮನವರಿಕೆ ಮಾಡಿಕೊಟ್ಟಿರುತ್ತಾರೆ.  ರಸಗಳ ಆಸ್ವಾದನೆಯು ದೇಹೇಂದ್ರಿಯಗಳನ್ನೆಲ್ಲಾ ವ್ಯಾಪಿಸಿ, ನಮ್ಮನ್ನು, 'ರಸೋ ವೈ ಸಃ' ಎಂದು ಉಪನಿಷತ್ತು ಹೇಳುವ, ರಸಪುರುಷನಲ್ಲಿ ಆ ಪರಮಾತ್ಮರಸದಲ್ಲಿ ಮುಳುಗಿಸಿ, ಪರಮಾತ್ಮನಲ್ಲಿ ನೆಲೆನಿಲ್ಲಿಸಬೇಕು.  ಆಗ ತಾನೇ ರಸಾಸ್ವಾದನೆಯ ಪೂರ್ಣಫಲ ದೊರೆತಂತಾಗುವುದು ?  ಆದಿಕವಿಗಳ ರಾಮಾಯಣವು ಈ ಮಾತಿಗೆ ದೃಷ್ಟಾಂತವಾಗಿದೆ ಎಂಬುದು ಅದನ್ನನುಭವಿಸಿದ ಅನುಭವಿಗಳ ಮಾತು. 

ಶ್ರೀರಾಮನನ್ನು ನವರಸನಾಯಕನನ್ನಾಗಿ ಚಿತ್ರಿಸಿ ರಚಿಸಿರುವ 'ಶೃಂಗಾರಂ ಕ್ಷಿತಿನಂದನಾವಿಹರಣೇ ---' ಎಂಬ ಶ್ರೀಮಚ್ಛಂಕರಭಗವತ್ಪಾದಾಚಾರ್ಯರ ಶ್ಲೋಕವು ಅತ್ಯಂತ ಜನಪ್ರಿಯವಾಗಿದೆ. ಈ ಶ್ಲೋಕವನ್ನವಲಂಬಿಸಿ ಶ್ರೀರಾಮಚಂದ್ರನ ಜೀವನದಲ್ಲಿ ಈ ರಸಗಳು ಹೇಗೆ ಅಭಿವ್ಯಕ್ತವಾಗಿದೆಯೆಂಬುದನ್ನು ವಿಶದಪಡಿಸುವ ಪ್ರಯತ್ನಮಾಡಲಾಗುವುದು.

ಸೂಚನೆ: 30/03/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.