ಅಪ್ರಮತ್ತಶ್ಚ ಯೋ ರಾಜಾ ಸರ್ವಜ್ಞೋ ವಿಜಿತೇಂದ್ರಿಯಃ |
ಕೃತಜ್ಞೋ ಧರ್ಮಶೀಲಶ್ಚ ಸ ರಾಜಾ ತಿಷ್ಠತೇ ಚಿರಮ್ || - ರಾಮಾಯಣ-೩.೩೩.೨೦
ಅರ್ಥ-ಯಾವ ರಾಜನು ಅಪ್ರಮತ್ತನೂ, ಎಲ್ಲವನ್ನೂ ತಿಳಿದವನೂ, ಇಂದ್ರಿಯಸಂಯಮ ಉಳ್ಳವನೂ, ಮಾಡಿದ ಉಪಕಾರದ ಸ್ಮರಣೆ ಉಳ್ಳವನೂ, ಧರ್ಮದಲ್ಲಿ ಸದಾ ತನ್ನ ಮನಸ್ಸನ್ನು ನಿಲ್ಲಿಸಿಸದವನೂ ಆಗಿರುವನೋ, ಅಂತಹ ರಾಜನು (ಅವನ ಹೆಸರು) ಶಾಶ್ವತವಾಗಿ ಉಳಿಯುವನು.
ವಿವರಣೆ- ಯಾವನ ಮನಸ್ಸು ತನ್ನ ನಿಯಂತ್ರಣದಲ್ಲಿ ಇರುವುದಿಲ್ಲವೋ ಅಂದರೆ ಯಾವುದೋವಿಷಯದ ಸೆಳೆತದಿಂದ ತನ್ನ ಅಸ್ತಿತ್ವವನ್ನೇ ತಿಳಿಯದವನಾಗುವನೋ ಅಂತಹ ಸ್ಥಿತಿಯನ್ನು ಪ್ರಮತ್ತತೆ ಎಂದು ಕರೆಯುತ್ತಾರೆ. ಇದಕ್ಕೆ ವಿರುದ್ಧವಾದ ಮನಸ್ಸನ್ನೆ ಅಪ್ರಮತ್ತತೆ ಎನ್ನಬಹುದು. ರಾಜನಾದವ ಬಾಹ್ಯ ವಿಷಯಗಳಿಂದ ನಿಯಂತ್ರಿತನಾಗದೇ ವಸ್ತುಗಳೇ ತನ್ನ ಮನಸ್ಸಿನ ನಿಯಂತ್ರಣದಲ್ಲಿರುವಂತೆ ಇರಬೇಕು. ಮನಸ್ಸು ನಿಯಂತ್ರಣದಲ್ಲಿದ್ದರೆ ಇಂದ್ರಿಯಗಳ ಮೇಲೆ ಹತೋಟಿಯನ್ನು ಸುಲಭವಾಗಿ ಸಾಧಿಸಬಹುದು. ಯಾವನ ಮನಸ್ಸು ಮತ್ತು ಇಂದ್ರಿಯ ಹತೋಟಿಯಲ್ಲಿರುವುದೋ ಅಂತಹವನಿಗೆ ತನ್ನ ಆಪತ್ತಿನಲ್ಲಿ ಸಹಕರಿಸಿದವರ ಬಗ್ಗೆ ಕೃತಜ್ಞತೆಉಂಟಾಗುವುದು ಸಹಜವಷ್ಟೆ. ಇಂತವನು ಧರ್ಮದಲ್ಲಿ ತನ್ನ ಮನಸ್ಸನ್ನು ನಿಲ್ಲಿಸುವುದೂ ಅಷ್ಟೇ ಸುಲಭ. ಅಂದರೆ ದೇವರಲ್ಲಿ ಮತ್ತು ದೇವರಿಗೆ ಸಂಬಂಧಿಸಿದ ಆಚಾರ-ವಿಚಾರ-ನಡೆ-ನುಡಿಗಳಲ್ಲೂ ಮನಸ್ಸು ಸಹಜವಾಗಿ ಹರಿಯುತ್ತದೆ. ಇಂತಹ ರಾಜನು
ಎಲ್ಲೆಲ್ಲೂ ಯಾವಾಗಲೂ ವಿರಾಜಿಸುವುದರಲ್ಲಿ ಸಂಶಯವಿಲ್ಲ.