Monday, March 16, 2020

ಬಾಳ ಬಾಗಿಲಲ್ಲಿ ದೇವರಥ ! (Bala Bagilalli Devaratha!)

ಲೇಖಕರು:  ಶ್ರೀಮತಿ ಸುಮೇಧಾ
(ಪ್ರತಿಕ್ರಿಯಿಸಿರಿ : lekhana@ayvm.in)


ತ್ಮೀಯರ ಮನೆಗೆ ಭೇಟಿ ನೀಡಿ ಕುಶಲ ವಿಚಾರಿಸುವಂತೆ, ಅವರನ್ನೂ ನಮ್ಮ ಮನೆಗೆ ಕರೆಯಬೇಕೆಂಬ ಹಂಬಲ ಸಹಜ. ಮನೆಯಲ್ಲಿ ವಿಶೇಷ ಸಮಾರಂಭಗಳಿದ್ದರಂತೂ ಅವರನ್ನು ಬರಲೇಬೇಕೆಂದು ಒತ್ತಾಯ ಮಾಡುತ್ತೇವೆ. ಆತ್ಮೀಯರನ್ನು ಆಹ್ವಾನಿಸಿದಾಗ ಕಾರಣಾಂತರದಿಂದ ಅವರಿಗೆ ಸಮಾರಂಭಕ್ಕೆ ಆಗಮಿಸಲು ಸಾಧ್ಯವಾಗದೆ ಇರುವ ಸನ್ನಿವೇಶ. ಆದರೆ ಆಹ್ವಾನದ ಹಿಂದಿರುವ ಪ್ರೀತಿಯನ್ನು ಮನ್ನಿಸಿ ಒಂದು ಯುಕ್ತಿಯನ್ನು ಹುಡುಕುತ್ತಾರೆ. ಆತ್ಮೀಯರಾದ ಮನೆ ಯಜಮಾನರು ತನ್ನ ಮಗನನ್ನು ಸಮಾರಂಭಕ್ಕೆ ಕಳುಹಿಸಿಕೊಡುತ್ತಾರೆ. ಇಲ್ಲಿ ಮಗನು ತಂದೆಯ ಪ್ರತಿನಿಧಿಯಾಗಿ ಅಲ್ಲಿಗೆ ಹೋಗುತ್ತಾನೆ. ಆಗ ಅಲ್ಲಿ ತಂದೆಗೆ ಮಾಡಬೇಕಾದ ಮರ್ಯಾದೆ, ತೋರಿಸಬೇಕಾದ್ದ ಸ್ನೇಹ ಗೌರವಗಳನ್ನು ತಂದೆಯೇ ಬಂದಿರುವಂತೆ ಮಗನಿಗೆ ಅರ್ಪಿಸುತ್ತೇವೆ. ನಮ್ಮನ್ನು ಕೃತಾರ್ಥರೆಂದು ಭಾವಿಸುತ್ತೇವೆ.   

ಸಹಜವೂ ಚಿರಪರಿಚಿತವೂ ಆದ ಈ ಸಂಗತಿ ರಥೋತ್ಸವಗಳ ಅಂತರಾರ್ಥವನ್ನು ತಿಳಿಸುತ್ತದೆ. ದೇವಾಲಯದ ಗರ್ಭಗುಡಿಗೆ ಹೋಗಿ ನಿತ್ಯ ಪೂಜೆ ಸಲ್ಲಿಸುತ್ತಿದ್ದರೂ, ಭಗವಂತನನ್ನು ಮನೆಗೆ ಕರೆತರಬೇಕೆಂಬ ಬೇಡಿಕೆಗೆ ನೀಡಿದ ವರವೇ ರಥೋತ್ಸವ. ಆದ್ದರಿಂದಲೇ ಉತ್ಸವ ಮೂರುತಿಗಳನ್ನು ಭಾರತದ ಮಹರ್ಷಿಗಳು ರೂಪಿಸಿಕೊಟ್ಟಿದ್ದಾರೆ. ಮೂಲಮೂರ್ತಿಯ ಪ್ರತಿನಿಧಿಯಾಗಿ ಉತ್ಸವ ಮೂರ್ತಿಗಳನ್ನು ಪ್ರತಿ ದೇವಸ್ಥಾನದಲ್ಲೂ ಆರಾಧಿಸುತ್ತಾರೆ. ರಥೋತ್ಸವದಲ್ಲಿ ಮೆರವಣಿಸುತ್ತಾರೆ. ಆ ಮೂಲ ದೇವನು ತನ್ನ ಅನುಗ್ರಹವನ್ನು ತನ್ನ ಉತ್ಸವಮೂರ್ತಿಯ ಮೂಲಕ ಭಕ್ತರಿಗೆ ಕರುಣಿಸುತ್ತಾನೆ.  ಹಾಗೆ ಭಕ್ತಸಮೂಹದ ಭಾವವು ಸಾಕ್ಷಾತ್ ಮೂಲದೇವನಿಗೆ ಅರ್ಪಿತವಾಗುತ್ತದೆ. ಉತ್ಸವ ಎಂದರೆ ಮೇಲೆತ್ತುವ ಯಜ್ಞ. ಮೇಲಕ್ಕೆ ಅಥವಾ ಮೂಲಕ್ಕೆ ಅಂದರೆ ಪರಮಾತ್ಮ ಬೆಳಕಿನ ಸಾಕ್ಷಾತ್ಕಾರ, ದರ್ಶನ. ಅದನ್ನು ತಲುಪಲು ರಥ-ಉತ್ಸವಗಳು ಒಂದು ಮುಖ್ಯ ಸಾಧನ. ರಥಬೀದಿಯಲ್ಲು ಹಾಗು ಮನೆ ಮನೆಯಲ್ಲೂ ವಿಧವಿಧವಾದ ರಂಗವಲ್ಲಿ. ಈ ರಂಗವಲ್ಲಿಗಳು ನಮ್ಮ ಜೀವನದ ಬಳ್ಳಿಗಳಂತೆ ಬಾಗಿ ಸ್ವಾಮಿಯ ಸ್ವಾಗತಕ್ಕೆ ತತ್ಪರವಾಗಿರುತ್ತವೆ. ರಥಬರುವ ಬೀದಿ ಉದ್ದಕ್ಕೂ ದೀಪಮಾಲೆಗಳ ಅಲಂಕಾರಗಳು. ತಮ್ಮ ಮನೆಗೆ ಭಗವಂತನೇ ಆಗಮಿಸುತ್ತಿರುವನೆಂದು ಮನ ಮುಟ್ಟುವಂತೆ ವೈಭವೋಪೇತವಾಗಿ ಭಗವಂತನನ್ನು ಬರಮಾಡಿಕೊಳ್ಳುತ್ತಾರೆ. ಭಗವನ್ನಾಮ ಜಯಘೋಷ, ವೇದಘೋಷ, ವಾದ್ಯವೃಂದಗಳು, ಸಾಂಸ್ಕೃತಿಕ ಗಾಯನ, ನೃತ್ಯಗಳು, ನಂದಿಕೋಲು, ಡೊಲ್ಲುಕುಣಿತ, ಇತರ ನಾನಾ ಉಪಚಾರಗಳ ಮಧ್ಯದಲ್ಲಿ ದೇವರ ರಥವು ರಾರಾಜಿಸುತ್ತದೆ. ಪ್ರತಿ ಮನೆಯಲ್ಲೂ ದೇವರಿಗೆ ಫಲಪುಷ್ಪ ಸಮರ್ಪಣೆ, ಮಂಗಳಾರತಿಯನ್ನು ಮಾಡುತ್ತಾರೆ. ಭಕ್ತರಿಗೆ ದರ್ಶನವಿತ್ತು, ಪೂಜೆ ಸ್ವೀಕರಿಸಿ ಉತ್ಸವದೇವರು ಮೂಲಸ್ಥಾನ ಸೇರುತ್ತಾರೆ. ಎಲ್ಲರ ಮನಸ್ಸು ವಾಕ್ಕು ಭಗವನ್ಮಯವಾಗಿ ಒಗ್ಗೂಡಿ ಸಂಭ್ರಮದಿಂದ ರಥವನ್ನು ಎಳೆಯುತ್ತಾರೆ. ಈ ರಥವನ್ನು ಎಳೆಯುವಾಗ ನಮ್ಮ ನಮ್ಮ ಮನೋರಥಗಳನ್ನು ಎಳೆಯದೆ, ಭಗವತ್ಸಂಕಲ್ಪದ ರಥಕ್ಕೆ ನಮ್ಮನ್ನು ಕೊಟ್ಟುಕೊಳ್ಳಬೇಕೆಂಬ ಉತ್ಸವದ ಮರ್ಮವನ್ನು ಶ್ರೀರಂಗ ಮಹಾಗುರುಗಳು ತಿಳಿಸುತ್ತಿದ್ದರು.

ದೇವಾಲಯದಂತೆಯೇ, ರಥವೂ  ನಮ್ಮ ಶರೀರದ  ಪ್ರತಿಕೃತಿಯೇ ಆಗಿದೆ. ಶರೀರವೆಂಬ ರಥದಲ್ಲಿ ವಿರಾಜಿಸುವ ರಥಿ – ಪರಮಪುರುಷ. ಚಕ್ರಗಳು ಪಾದದಂತೆ. ಹೃದಯಸ್ಥಾನದಲ್ಲಿ ದೇವರ ವಿಗ್ರಹಕ್ಕೆ ಮಂಟಪ, ಗೋಪುರದಲ್ಲಿ ಸೋಮ ಸೂರ್ಯಾಗ್ನಿ ಮಂಡಲಗಳು, ಶಿರದ ಉತ್ತುಂಗ ತುಂಗದಲಿ ಪ್ರಣವಾಕ್ಷರವು ವಿರಾಜಿಸುತ್ತದೆ. ಭಗವಂತ ಕರುಣಿಸಿರುವ ಈ ದೇಹರಥವನ್ನು ಭಗವರ್ದ್ರಥ ಮಾಡಿಕೊಳ್ಳಬೇಕ್ಕಾದ್ದು ನಮ್ಮ ಕರ್ತವ್ಯ.

ಸೂಚನೆ: 16/03/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಲ್ಲಿ ಪ್ರಕಟವಾಗಿದೆ.