Wednesday, March 18, 2020

ನಿತ್ಯತೃಪ್ತನಿಗೆ ನೈವೇದ್ಯ ಸಮರ್ಪಣೆ (Nityatruptanige Naivedya Samarpane)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)
ಗಂಧ-ಪುಷ್ಪ-ಧೂಪ-ದೀಪ-ಅರ್ಚನೆಗಳನಂತರ ಭಗವಂತನಿಗೆ ನೈವೇದ್ಯ ಸಮರ್ಪಣೆ. ನಿತ್ಯತೃಪ್ತನಾಗಿ, ಅವಾಪ್ತಸಮಸ್ತಕಾಮನಾಗಿರುವ ಭಗವಂತನಿಗೆ ನಾವು ಆಹಾರ ನೀಡುವುದರ ಔಚಿತ್ಯವೇನು? ನೈವೇದ್ಯವು ಭಗವಂತನು ತಿನ್ನುವುದಕ್ಕಾಗಿ ಅಲ್ಲ. ಹಾಗೇನಾದರೂ ನೈವೇದ್ಯವನ್ನೆಲ್ಲಾ ಭಗವಂತನೇ ಭಕ್ಷಿಸಿಬಿಡುವುದಾದರೆ ಎಷ್ಟುಮಂದಿ ಇಂತಹ ಸಮರ್ಪಣೆಗೆ ಸಿದ್ಧರಾದಾರು?! ಕೆಲವು ಭಕ್ತೋತ್ತಮರು ಆರ್ದ್ರವಾದ ಮನಸ್ಸಿನಿಂದ ಸಮರ್ಪಿಸಿ ಬೇಡಿದಾಗ ಭಗವಂತನು ನಿಜವಾಗಿಯೇ ನೈವೇದ್ಯವನ್ನು ಭಕ್ಷಿಸಿದ ಕಥೆಗಳೂ ಇಲ್ಲದಿಲ್ಲ. ಆದರೆ ಇದು ಸಾಮಾನ್ಯ ನಿಯಮವಲ್ಲ.

'ನೈವೇದ್ಯ' ಎಂದರೆ ನಿವೇದನ ಮಾಡುವುದು. 'ಭಗವಂತ, ನೀನೇ ಕರುಣಿಸಿದ ಪದಾರ್ಥಗಳಿವು' ಎಂಬುದಾಗಿ ಅವನಲ್ಲಿ ಅರಿಕೆಮಾಡಿಕೊಳ್ಳುವುದು, ತನ್ಮೂಲಕ 'ಎಲ್ಲ ಪದಾರ್ಥಗಳ ಉಗಮವೂ, ಸ್ವಾಮಿಯೂ ಅವನೇ ಆಗಿದ್ದಾನೆ' ಎಂಬ ಸತ್ರ್ಯಾರ್ಥವನ್ನು ನೆನಪಿಸಿಕೊಳ್ಳುವುದೇ ನೈವೇದ್ಯ ಸಮರ್ಪಣೆಯ ಕ್ರಿಯೆ. ನೈವೇದ್ಯ ಪದಾರ್ಥಗಳಿಗೆ ಬಾಹ್ಯಶುದ್ಧಿ, ಅಂತಃಶುದ್ಧಿ ಎರಡೂ ಸೇರಿರಬೇಕಾದದ್ದು ಅತ್ಯಾವಶ್ಯಕ.

ನೈವೇದ್ಯ ಸಂದರ್ಭದಲ್ಲಿ ಪದಾರ್ಥದ ಮೇಲೆ ಇತರರ ದೃಷ್ಟಿ ಬೀಳಬಾರದು. ದೇವಾಲಯಗಳಲ್ಲಿ ನೈವೇದ್ಯಮಾಡುವಾಗ ತೆರೆಯನ್ನು ಹಿಡಿದು ಮರೆಮಾಡುವುದುಂಟು. ಮನೆಗಳಲ್ಲಿ ಇತರರು ಆ ಸಂದರ್ಭದಲ್ಲಿ ಪೂಜಾಗೃಹದಿಂದ ಹೊರಬರುವ ರೂಢಿಯಿದೆ. ಪೂಜೆಯನ್ನು ಮಾಡುವವನೂ ಸಹ ತನ್ನ ಭೌತಿಕದೃಷ್ಟಿಯನ್ನು ಪದಾರ್ಥಗಳ ಮೇಲೆ ಹರಿಸದೆ ಕಣ್ಣುಮುಚ್ಚಿ 'ಭಗವತ್ಸಮರ್ಪಿತವಾಗಲಿ' ಎಂಬ ಭಾವನೆಯನ್ನು ಯಥಾಶಕ್ತಿ ಕೂಡಿಸಿಕೊಂಡು ನೈವೇದ್ಯಮಾಡಬೇಕು. 'ನನಗೆ ಪ್ರಿಯವಾದ ಪದಾರ್ಥ'ವೆಂಬ ಭಾವನೆ ತಲೆದೋರದೆ ಎಚ್ಚರಿಕೆಯಿಂದಿರಬೇಕು.
     
ನಿವೇದನೆಗೆ ಪದಾರ್ಥವನ್ನು ನೀರಿನಿಂದ ಶುದ್ಧಗೊಳಿಸಿದ ಜಾಗದಲ್ಲಿಟ್ಟು, ಶುದ್ಧವಾದ ಮನೋಭಾವದಿಂದಲೂ, ಮಂತ್ರಗಳಿಂದಲೂ ಪದಾರ್ಥವನ್ನು ಪ್ರೋಕ್ಷಿಸಿ ತದನಂತರ ಸಮರ್ಪಿಸಬೇಕು. ಹೀಗೆ ಅರ್ಪಿತವಾದ ಪದಾರ್ಥವು ಅವನ ಪ್ರಸನ್ನತೆಯಿಂದ ಕೂಡಿ 'ಪ್ರಸಾದ'ವೆನಿಸಿಕೊಳ್ಳುತ್ತದೆ. ಪ್ರಸಾದವನ್ನು ಪ್ರಸಾದಬುದ್ಧಿಯಿಂದ ಸ್ವೀಕಾರಮಾಡಿದರೆ ಅದು ನಮ್ಮ ಪ್ರಸನ್ನತೆಗೆ, ತಾಪಶಮನಕ್ಕೆ, ಪಾಪಪರಿಹಾರಕ್ಕೆ ಕಾರಣವಾಗುತ್ತದೆ. ಮನೋ-ಬುದ್ಧಿಗಳನ್ನು ಭಗವಂತನೆಡೆಗೆ ಸಾಗಿಸುತ್ತದೆ.

ಆಹಾರಗಳೆಲ್ಲವೂ ನೈವೇದ್ಯಕ್ಕೆ ಯೋಗ್ಯವೇ ಆದರೂ ಬೇರೆಬೇರೆ ದೇವತೆಗಳಿಗೆ ಬೇರೆಬೇರೆ ಆಹಾರಗಳು ಪ್ರಿಯ ಎಂಬುದಾಗಿ ಶಾಸ್ತ್ರಗಳು ಸಾರುತ್ತವೆ-ಗಣೇಶನಿಗೆ ಕಡುಬು, ಹಯಗ್ರೀವದೇವರಿಗೆ ಕಡಲೆ ಇತ್ಯಾದಿ. ಹಾಗಾದರೆ ದೇವತೆಗಳಿಗೂ ನಮ್ಮಂತೆ ನಾಲಿಗೆಯ ಚಾಪಲ್ಯವೇ? ಎಂಬ ಸಂಶಯ ಏಳುವುದು ಸಹಜ. ಶ್ರೀರಂಗಮಹಾಗುರುಗಳು ಈ ಬಗೆಗೆ ನೀಡಿದ ವಿವರಣೆ: "ಎಲ್ಲ ದೇವತೆಗಳೂ ನಮ್ಮ ಶರೀರದಲ್ಲಿನ ಬೇರೆ ಬೇರೆ ಕೇಂದ್ರಗಳಲ್ಲಿ ವಿರಾಜಮಾನರಾಗಿದ್ದಾರೆ. ಮನಸ್ಸು-ಪ್ರಾಣಗಳು ಆಯಾ ಕೇಂದ್ರಗಳನ್ನು ಮುಟ್ಟಿದಾಗ ಮಾತ್ರ ಆಯಾ ದೇವತಾದರ್ಶನವಾಗುವುದು. ಆದ್ದರಿಂದ ಯಾವ ಆಹಾರ ಪದಾರ್ಥ/ಪದಾರ್ಥಗಳ ಯೋಗ ಯಾವ ದೇವತಾಕೇಂದ್ರವನ್ನು ತೆರೆಯುತ್ತದೆ, ಯಾವ ದೇವತಾಭಾವಕ್ಕೆ ಪೋಷಕವಾಗುತ್ತದೆಂಬ ವಿಜ್ಞಾನವನ್ನರಿತ ಮಹರ್ಷಿಗಳು ಅದಕ್ಕನುಗುಣವಾಗಿ ನೈವೇದ್ಯವನ್ನು ವಿಧಿಸಿದ್ದಾರೆ".

ಅನುಕೂಲವಿದ್ದಾಗ ಆಯಾ ದೇವತೆಗಳಿಗೆ ಪ್ರಿಯವಾದ ಆಹಾರಗಳನ್ನು ನಿವೇದಿಸಬಹುದು. ಅದಿಲ್ಲದಿದ್ದಾಗ ನಮ್ಮಲ್ಲಿ ಯಾವುದಿದೆಯೋ ಅದನ್ನೇ ಅರ್ಪಿಸಬಹುದು. ಇಲ್ಲಿ ಭಗವದರ್ಪಣ ಬುದ್ಧಿ-ಮನೋಭಾವಗಳಿಗೇ ಪ್ರಾಧಾನ್ಯ.  

ದೇವರ ಪೂಜೆಯಲ್ಲಿ ನಿವೇದಿತವಾದ ಪ್ರಸಾದಗಳು ಮಾತ್ರವೆ ಸೇವನೆಗೆ ಯೋಗ್ಯ. ಪೂಜೆಗೆ ಅವಕಾಶವಿಲ್ಲದಿದ್ದಾಗ ಎಲೆಗೆಬಂದ ಪದಾರ್ಥವನ್ನು ಮಾನಸಿಕವಾಗಿಯಾದರೂ ಭಗವದರ್ಪಣ ಮಾಡಿ ಸ್ವೀಕರಿಸಬೇಕೆಂಬುದು ಜ್ಞಾನಿಗಳ ಆದೇಶ. ಅದರಿಂದಲೇ ನಮಗೆ ಶ್ರೇಯಸ್ಸು-ಪ್ರೇಯಸ್ಸುಗಳೆರಡೂ ಸಿದ್ಧಿಸುವುವು.    

ಸೂಚನೆ: 17/03/2020 ರಂದು ಈ ಲೇಖನ  ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.