ಲೇಖಕರು: ಶ್ರೀಮತಿ ಮೈಥಿಲೀ ರಾಘವನ್
ಭಾರತೀಯಮಹರ್ಷಿಗಳು ತಪೋಬಲದಿಂದ ತಮ್ಮೊಳಗೆ ಬೆಳಗುವ ದೈವೀ ಸಾಮ್ರಾಜ್ಯ - ಆತ್ಮಸಾಮ್ರಾಜ್ಯಗಳನ್ನು ಕಂಡು ನಲಿದರು. ತಾವು ಅನುಭವಿಸಿದ ಶಾಂತಿ ಸಮೃದ್ಧಿಯನ್ನು ಲೋಕವೆಲ್ಲವೂ ಅನುಭವಿಸಿ ನಲಿದಾಡಲೆಂಬ ಕರುಣೆ-ಹೆಬ್ಬಯಕೆಗಳಿಂದ ಅತ್ತಕಡೆಗೆ ಲೋಕವನ್ನು ಸೆಳೆಯುವಂತೆ ಜೀವನ ಕ್ರಮವನ್ನು ರೂಪಿಸಿದರು.
ಮಹರ್ಷಿಗಳ ಪೂಜಾಪದ್ಧತಿಯು ಅವರ ಜೀವನಕ್ರಮದ ಅತಿಪ್ರಮುಖ ಅಂಗವಾಗಿದೆ. ಜೀವ-ದೇವರ ನಡುವಿನ ಸೇತುವೆಯಾಗುವಂತೆ ರೂಪಿತವಾಗಿರುವ ಈ ಕ್ರಮವು ಮಹರ್ಷಿಗಳ ಮೇಧಾವಿಲಾಸವನ್ನು ಲೋಕಕ್ಕೆ ಸಾರುವಂತಿದೆ. ಮಹರ್ಷಿಗಳು ಸೃಷ್ಟಿಯ ಪದಾರ್ಥಗಳಮೇಲೆ ತಮ್ಮ ದೃಷ್ಟಿಯನ್ನು ಹರಿಸಿ ಅವುಗಳ ಗುಣಧರ್ಮಗಳನ್ನು ಗುರುತಿಸಿ, ತಮ್ಮ ಉದ್ದೇಶಕ್ಕೆ ಪೂರಕವಾಗುವಂತೆ ಅವುಗಳನ್ನು ಬಳಸಿಕೊಂಡಿರುವುದು ಅವರ ಪ್ರತಿಭೆಗೊಂದು ನಿದರ್ಶನ. ಭೌತಿಕ-ದೈವಿಕ-ಆಧ್ಯಾತ್ಮಿಕ ಮೂರುಕ್ಷೇತ್ರಗಳಿಗೂ ಒಂದು ಕೊಂಡಿಯಾಗುವಂತೆ ಮಂತ್ರ(ಸ್ತೋತ್ರ)-ತಂತ್ರ-ಕ್ರಿಯಾಕಲಾಪಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಅತ್ತ ಸಾಗಲು ಬೇಕಾದ ಮನಸ್ಥಿತಿಯನ್ನು ಹೊಂದಿಸುವ ಒಳ-ಹೊರ ಸಿದ್ಧತೆಗಳನ್ನೂ ಸಹ ಋಷಿಗಳು ನಿರ್ದೇಶಿಸಿದ್ದಾರೆ.
ಜ್ಞಾನಿಯಾದವನು ತನ್ನ ದೇಹವೆಂಬ ದೇವಾಲಯದೊಳಗೆ ಭಗವಂತನನ್ನು ಅನುಭವಿಸಿ ಅದರಿಂದಾದ ಆನಂದದೊಂದಿಗೆ ಹೊರದೇವಾಲಯಗಳಲ್ಲಿ ಅರ್ಚಕನಾಗಿ ಪೂಜಿಸಿದಾಗ ಆತನು 'ಅರ್ಚಕಸ್ಸ ಹರಿಃಸಾಕ್ಷಾತ್' ಎಂಬಂತೆ ಅತ್ಯಂತ ಪೂಜ್ಯನಾಗುತ್ತಾನೆ. ಆತನು ಮಾಡುವ ಪೂಜೆ, ಮಾಡಿಸುವ ದೇವರದರ್ಶನ, ನೀಡುವ ಪ್ರಸಾದ ಮುಂತಾದವುಗಳ ಮೂಲಕ ಆತನು ತಾನುಪಡೆದ ಕಷ್ಟಸಾಧ್ಯವಾದ ಫಲವನ್ನು ಇತರರು ಸುಲಭವಾಗಿ ಪಡೆಯುವಂತೆ ವಿತರಣೆಮಾಡುವ ಯೋಜನೆ ಋಷಿಪ್ರಣೀತ ಕಲ್ಪದಲ್ಲಡಗಿದೆ.
ಗಂಧ-ಪುಷ್ಪ-ಧೂಪ-ದೀಪ-ನೈವೇದ್ಯ ಮುಂತಾದ ಪ್ರತಿಯೊಂದು ಪೂಜಾಂಗವೂ ಜೀವಿಯನ್ನು ಭಗವಂತನೆಡೆ ಸೆಳೆಯುವ ಯೋಜನೆಯಿಂದಲೇ ರೂಪಿಸಲ್ಪಟ್ಟಿದೆ. ಪೂಜಾದ್ರವ್ಯಗಳ ಆಯ್ಕೆ, ಅವುಗಳನ್ನು ಬಳಸಬೇಕಾದ ಕ್ರಮ ಎಲ್ಲೆಡೆಯಲ್ಲೂ ಮಹರ್ಷಿಗಳ ವೈಜ್ಞಾನಿಕಮನೋಧರ್ಮವು ಹರಿದಿರುವುದನ್ನು ಮಹರ್ಷಿಹೃದಯವೇದ್ಯರಾದ ಶ್ರೀರಂಗಮಹಾಗುರುಗಳು ಎತ್ತಿತೋರಿಸಿದ್ದಾರೆ. ಉದಾಹರಣೆಗೆ, ದೇವರ ಅಭಿಷೇಕ ತೀರ್ಥಕ್ಕೆ ಕೇಸರಿ, ಏಲಕ್ಕಿ, ಪಚ್ಚಕರ್ಪೂರ, ಲವಂಗ ಮುಂತಾದ ಪರಿಕರಗಳನ್ನು ಸೇರಿಸುವ ಪದ್ಧತಿಯಿದೆ. ಈ ದ್ರವ್ಯಗಳ ಪ್ರತ್ಯೇಕಧರ್ಮ ಹಾಗೂ ಒಟ್ಟು ಸೇರಿದಾಗ ಕೂಡಿಬರುವ ಪರಿಣಾಮಗಳನ್ನು ನಾಡೀಪರಿಜ್ಞಾನದಿಂದ ನಿಖರವಾಗಿ ಅಳೆದ ಶ್ರೀರಂಗಮಹಾಗುರುಗಳು ಅವುಗಳ ಸ್ಪರ್ಶ-ಆಘ್ರಾಣ-ಸೇವನೆಗಳು ಮನಸ್ಸು-ಪ್ರಾಣಗಳನ್ನು ಒಳಾಮುಖವಾಗಿ ಸೆಳೆಯುತ್ತವೆ ಎಂಬುದನ್ನು ಸುಸ್ಪಷ್ಟವಾಗಿ ನಿರೂಪಿಸಿದರು.
ಅಂತೆಯೇ ಯಾವ ದ್ರವ್ಯಗಳ ಗಂಧ-ಸ್ಪರ್ಶ-ಸೇವನೆಗಳು ನಮ್ಮೊಳಗಿನ ಯಾವ ದೇವತಾಕೇಂದ್ರವನ್ನು ತೆರೆಯಬಲ್ಲವು ಎಂಬುದನ್ನು ಮಹರ್ಷಿಗಳ ಕುಶಾಗ್ರಮತಿಯು ಗುರುತಿಸಿಕೊಂಡಿತ್ತು. ಈ ಅರಿವಿನ ಆಧಾರದ ಮೇಲೆ ಬೇರೆಬೇರೆ ದೇವತೆಗಳ ಸಾಕ್ಷಾತ್ಕಾರಕ್ಕೆ ಪೋಷಕವಾಗುವ ದ್ರವ್ಯಗಳನ್ನು ಆಯಾ ದೇವತೆಗಳಿಗೆ 'ಪ್ರಿಯ' ಎಂಬುದಾಗಿ ಸೂಚಿಸಿ ಅವರ ಪೂಜೆಗೆ ಅವುಗಳನ್ನು ವಿಧಿಸಿದ್ದಾರೆ. ಶ್ರೀರಂಗಮಹಾಗುರುಗಳು ನೀಡಿರುವ ಈ ವಿವರಣೆಯು 'ದೇವತೆಗಳಿಗೂ ನಮ್ಮಂತೆ ಇಷ್ಟ-ಅನಿಷ್ಟಗಳುಂಟೇ? ನಾಲಿಗೆಯ ಚಾಪಲ್ಯವುಂಟೇ?' ಎಂಬ ಸಂಶಯಗಳನ್ನು ಪರಿಹರಿಸುತ್ತದೆ.
ಸಾರಾಂಶವಾಗಿ ಹೇಳುವುದಾದರೆ ಮಹರ್ಷಿಗಳ ಪೂಜಾಪದ್ಧತಿಯು ಅತ್ಯಂತ ವೈಜ್ಞಾನಿಕವಾಗಿದ್ದು ನಿಜಕ್ಕೂ ಜೀವ-ದೇವರ ನಡುವಿನ ಸೇತುವೆಯೇ ಆಗಿದೆ. ಜೊತೆಗೆ ಪೂಜೆಗೆ ಒದಗಿಬರುವ ಸೃಷ್ಟಿಯಲ್ಲಿನ ಪದಾರ್ಥಗಳಿಗೂ ಧನ್ಯತೆಯನ್ನು ಕೊಡುವ ಅತ್ಯುತ್ತಮ ಕಲ್ಪವಾಗಿದೆ. ಈ ಕರ್ಮದ ಮರ್ಮವರಿತು ಆಚರಿಸಿ ದೇವನ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸೋಣ. ಇಂತಹ ಅದ್ಭುತ ಕೊಡುಗೆಯನ್ನು ಅನುಗ್ರಹಿಸಿದ ಮಹರ್ಷಿಗಳಿಗೆ ನಮ್ಮ ಅನಂತಾನಂತ ಪ್ರಣಾಮಗಳು ಅರ್ಪಿತವಾಗಲಿ.