Saturday, 14 March 2020

ಸಾಲಿಗ್ರಾಮ (Saligrama)

ಲೇಖಕರು: ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)ಸಾಲಿಗ್ರಾಮದ ಆರ್ಷದೃಷ್ಟಿಕೋಣ: ಪ್ರಕೃತಿಯು ಅನೇಕ ವೈಚಿತ್ರ್ಯದಿಂದ ಕೂಡಿದೆ. ಇಲ್ಲಿರುವ ವಸ್ತುಗಳು ನೋಡಲು ಒಂದೇ ತರಹ ಕಂಡರೂ ಅವುಗಳ ಆಂತರ್ಯ ವೈವಿಧ್ಯವೇ. ಒಂದೇ ತಾಯಿಯಿಂದ ಒಂದೇ ಸಮಯದಲ್ಲಿ ಹುಟ್ಟಿದ ಅವಳಿ ಮಕ್ಕಳ ಸ್ವರೂಪ ಸ್ವಭಾವ ಭಿನ್ನವಾಗಿದೆ. ಬೆಕ್ಕಿನ ನಾಲ್ಕು ಮರಿಗಳಲ್ಲಿ ನಾಲ್ಕರ ಸ್ವಭಾವ ವರ್ಣ ಚೇಷ್ಟೆ ಎಲ್ಲವೂ ಭಿನ್ನವೇ. ಮಾವು ಎಂಬ ಜಾತಿಯ ಮರ ಒಂದೇ ಆದರೂ ಒಂದೊಂದು ಮಾವಿನಲ್ಲಿ ಬಿಡುವ ಹಣ್ಣಿನ ರುಚಿ ಭಿನ್ನವೇ. ಒಂದೇ ಬಗೆಯ ಭೂಮಿಯಲ್ಲಿ ಬೆಳೆಯುವ ಸಸ್ಯಗಳಲ್ಲಿ ವೈವಿಧ್ಯ ಸಹಜ.

ಪ್ರಕೃತಿಯ ವೈಚಿತ್ರ್ಯ ಹೇಳಿತೀರದು. ಪ್ರಸ್ತುತ ನಾವು 'ಸಾಲಿಗ್ರಾಮ' ಅಥವಾ 'ಶಾಲಗ್ರಾಮ' ಎಂಬ ಒಂದು ಪವಿತ್ರವೂ ಪೂಜ್ಯವೂ ಸಾಧಕನ ತಾರಕವೂ ಆದ ವಸ್ತುವಿನ ಬಗೆಗೆ ತಿಳಿಯುವ ಮನಸ್ಸು ನಮ್ಮದು. ಇಲ್ಲಿ ನಮ್ಮ ಋಷಿಗಳ ನೋಟ ಏನು? ಎಂಬುದು ಗಣನೀಯ.


ದೃಷ್ಟಿಭೇದದಿಂದ ದೃಶ್ಯದಲ್ಲಿ ಭೇದ. ಸಾಲಿಗ್ರಾಮ ಎಂಬುದು ಸಾಮಾನ್ಯದೃಷ್ಟಿಯಿಂದ ಒಂದು ಶಿಲೆ. ಇದು ಒಂದು ಬಗೆಯ ಕಲ್ಲು. ಕೃಷ್ಣವರ್ಣದಿಂದ ಕೂಡಿದ್ದು ನಾನಾ ಬಗೆಯ ಆಕಾರ ನಾನಾ ಬಗೆಯ ಗಾತ್ರ ವಿವಿಧ ಅಳತೆ ವಿವಿಧ  ಆಕೃತಿ ತಂಪಾದ ಸ್ಪರ್ಷಗುಣ.

ಅದೇ ಒಬ್ಬ 'ಜಿಯಾಲಜಿಸ್ಟ್' ಕೈಗೆ ಕೊಟ್ಟರೆ 'ಇದು ಒಂದು ಬಗೆಯ ಕಲ್ಲು' ಎಂದಷ್ಟೇ ಹೇಳುತ್ತಾನೆ. ಹಾಗಾಗಿ ಪಾಮರರಿಂದ ಹಿಡಿದು ಪಂಡಿತರವರೆಗೆ ಸಾಮಾನ್ಯವಾಗಿ ತಿಳಿಯುವುದು 'ಒಂದು ಕಲ್ಲು' ಎಂಬುದಾಗಿ ಅಷ್ಟೆ. ಆದರೆ ನಮ್ಮ ಋಷಿಗಳ ನೋಟ ಇನ್ನೂ ಆಳಕ್ಕಿದೆ.

ಋಷಿಹೃದಯಸಂವೇದ್ಯ ಶ್ರೀರಂಗ ಮಹಾಗುರುಗಳು ಈ ಸಾಲಿಗ್ರಾಮದ ಬಗೆಗೆ ಕೊಟ್ಟ ನೋಟ ಇನ್ನೂ ವಿಸ್ಮಯ. 'ವಿದ್ವಾನೇವ ವಿಜಾನಾತಿ' ಎಂಬಂತೆ ಋಷಿಹೃದಯವನ್ನು ಋಷಿ ತಾನೇ ತಿಳಿಯಬಲ್ಲ. ಇದರ ಬಲದಿಂದ ನಾನು ಸಾಲಗ್ರಾಮದ ವಿಷಯವನ್ನು ವಿವರಿಸುವ ಪ್ರಯತ್ನ ಮಾಡುವೆ.

ಋಷಿಗಳು ಈ ಸಾಲಿಗ್ರಾಮವನ್ನು ಕೇವಲ ಕಲ್ಲಾಗಿ ಕಾಣಲಿಲ್ಲ. ಇದೊಂದು ಪೂಜಾಯೋಗ್ಯವಾದ ವಸ್ತು. ಶ್ರದ್ಧೆಯಿಂದ ಪೂಜಿಸಿದರವನ್ನು ಉದ್ದರಿಸುವ ಸಾಧನ. ಇದರ ಹಿರಿಮೆ ಏನು? ಮಹಿಮೆ ಏನು ? ಇದರ ಆಳ ಅಗಲವೇನು ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು.

ಋಷಿಗಳು ತಮ್ಮ ಕಠಿಣವಾದ ತಪಸ್ಸಿನ ಬಲದಿಂದ ಯಾವ ವಿಷಯವನ್ನು ಕಂಡುಹಿಡಿದು ತಮ್ಮ ಮುಂದಿನ ಪೀಳಿಗೆಗೂ ಅದು ಉಪಯೋಗವಾಗಲಿ ಎಂಬ ಕಾರುಣ್ಯದಿಂದ ನಮಗೆ ಬಳುವಳಿಯಾಗಿ ಕೊಟ್ಟರೋ ಅಂತಹ ಅತ್ಯಂತ ಶ್ರೇಷ್ಠವಾದ ಆಸ್ತಿ ಈ ಸಾಲಿಗ್ರಾಮ.

ಈ ಸೃಷ್ಟಿಯ ಪ್ರತಿಯೊಂದು ವಸ್ತುವಿನಲ್ಲೂ ಸ್ಥೂಲ ಸೂಕ್ಷ್ಮ ಪರ ಗಳೆಂಬ ಮೂರು ಸ್ತರಗಳಿರುತ್ತವೆ. ಅಂತೆಯೆ ನೋಡುವ ನೋಟದಲ್ಲೂ ಸ್ಥೂಲ ಸೂಕ್ಷ್ಮ ಪರ ಗಳೆಂಬ ಮೂರು ಬಗೆ. ವಸ್ತುವಿಗೆ ಅನುಗುಣವಾದ ನೋಟವಿದ್ದರೆ ಈ ಮೂರರ ಅರಿವು ಸ್ಪಷ್ಟವಾಗಿ ಆಗುತ್ತದೆ.

ನಮಗೆ ಕೊಟ್ಟಿರುವ ಯಾವುದೇ ವಸ್ತುವಾದರೂ ಅದರ ಬೆಲೆ ಏನು ? ಎಂದು ತಿಳಿದು ನೋಡಿದಾಗ ಮಾತ್ರ  ಆ ವಸ್ತುವಿನಲ್ಲಿ ವಿಶ್ವಾಸ ಮೂಡುತ್ತದೆ. ಅದಿಲ್ಲವಾದರೆ ಅದರಿಂದ ಬರುವ ಅರಿವು ಅಲ್ಪಸ್ಚಲ್ಪವಾಗಿ ಮೂಢ ಅಥವಾ ಅವಿಶ್ವಾಸದ ಮನಸ್ಸು ಬೆಳೆಯಲು ಕಾರಣವಾಗುತ್ತದೆ. ಅಂತೆಯೇ ಸಾಲಿಗ್ರಾಮವು ಕೂಡ.

ಯಾವುದೇ ವಸ್ತುವಿನ ಬೆಲೆಯು ಅದು ಕೊಡುವ ಫಲಿತಾಂಶ ಮೇಲೆ ನಿರ್ಧಾರಿತವಾಗುತ್ತದೆ. ಇಲ್ಲೂ ಋಷಿಗಳು ಕೊಟ್ಟ ನೋಟದಿಂದ ಮಾತ್ರ ಪರಿಪೂರ್ಣತೆಯನ್ನು ನಿರ್ಧರಿಸಲು ಸಾಧ್ಯ. ಋಷಿಗಳ ನೋಟ ಕಣ್ಣಿಗೆ ಕಾಣುವದಷ್ಟು ಮಾತ್ರ ಅಲ್ಲ. ಅಥವಾ ಕಿವಿಗೆ ಕೇಳುವುದಷ್ಟಲ್ಲ.

ನಮ್ಮ ಐದು ಇಂದ್ರಿಯಗಳಿಂದ ಅನುಭವಕ್ಕೆ ಬರುವ ವಿಷಯ ಶಬ್ದ ಸ್ಪರ್ಶ ರೂಪ ರಸ ಗಂಧ ಎಂದು. ಇದು ಭೌತಿಕಕ್ಷೇತ್ರ. ಇನ್ನು ಮನಸ್ಸಿನಿಂದ ಮಾತ್ರ ಗೋಚರಿಸುವ ಕ್ಷೇತ್ರ ದೈವಿಕಕ್ಷೇತ್ರ. ಇವೆರಡಕ್ಕೂ ಮೀರಿದ ಕ್ಷೇತ್ರವೇ ಆಧ್ಯಾತ್ಮಿಕಕ್ಷೇತ್ರ.

ಯಾವುದೇ ವಸ್ತುವೂ ಭೌತಿಕ, ದೈವಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಏನೆಲ್ಲಾ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಅನುಸರಿಸಿ ಆ ವಸ್ತುವಿನ ಬೆಲೆ ನಿರ್ಧಾರವಾಗುತ್ತದೆ. ಪ್ರಕೃತ ಸಾಲಿಗ್ರಾಮವು ಈ ಮೂರು ಕ್ಷೇತ್ರಗಳ ಮೇಲೆ ಪರಿಣಾಮವನ್ನು ಅಗಾಧವಾಗಿ ಬೀರುತ್ತದೆ.

ಯಾವುದೇ ವಸ್ತುವೂ ಈ ಮೂರೂ ಕ್ಷೇತ್ರಗಳಲ್ಲಿ ಯಾವೆಲ್ಲಾ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ತಿಳಿಯಲು ಅದಕ್ಕೆ ಪ್ರಯೋಗದ ಆವಶ್ಯಕತೆ ಇರುತ್ತದೆ. ಯಾವುದೋ ಪಂಕ್ತಿಯನ್ನು ಆಧಾರವಾಗಿಟ್ಟುಕೊಂಡು ವಿಷಯವನ್ನು ತಿಳಿಯಲು ಸಾಧ್ಯವಿಲ್ಲ.

ಸೂಚನೆ: 14/03/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages