ಲೇಖಕರು: ಶ್ರೀಮತಿ ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)
'ವೇದಗಳ ಸಾರವಾಗಿರುವ ಪರಮಾತ್ಮಜ್ಯೋತಿ ಹೃದಯಕಮಲದ ಮಧ್ಯೆ ಬೆಳಗುತ್ತಿದೆ' ಎಂಬುದಾಗಿ ತಮ್ಮ ಅಂತರಂಗದ ಅನುಭವವನ್ನು ಸಾರುತ್ತಾರೆ ಶ್ರೀಶಂಕರರು. ಶ್ರೀಕೃಷ್ಣಜನನವಾದೊಡನೆ ದೇವಕೀದೇವಿಯು "ವಿಷ್ಣುಃ ಅಧ್ಯಾತ್ಮದೀಪಃ" ಎಂಬುದಾಗಿ ಆ ಶಿಶುವನ್ನು ತಾನು ನೋಡಿದ ರೀತಿಯನ್ನು ವರ್ಣಿಸುತ್ತಾಳೆ. ಆರ್ಷಸಾಹಿತ್ಯಗಳೂ ಸಹ ಭಗವಂತನನ್ನು ಜ್ಯೊತಿಸ್ವರೂಪನೆಂದೇ ವರ್ಣಿಸುತ್ತವೆ. ಹೀಗೆ ಸ್ವಯಂ ದೀಪರೂಪನೇ ಆಗಿರುವ ಭಗವಂತನ ಮುಂದೆ ದೀಪವನ್ನು ಬೆಳಗಿಸುವುದು, ದೀಪದಿಂದ ಆರತಿ-ಉಪಚಾರಗಳನ್ನು ಮಾಡುವುದರ ಔಚಿತ್ಯವೇನು ಎಂಬುದರ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ.
ದೀಪರೂಪನ ಪ್ರತಿನಿಧಿ:
ನಮ್ಮೊಳಗೆ ಬೆಳಗುವ ನಿಧಿಯಾದ ಪರಮಾತ್ಮದೀಪದ ಧರ್ಮಗಳನ್ನು ಬಹುಮಟ್ಟಿಗೆ ಹೊಂದಿರುವುದರಿಂದ ಹೊರದೀಪವು ಅದರ ಪ್ರತಿನಿಧಿಯೆನಿಸಿಕೊಳ್ಳುತ್ತದೆ. "ನಮ್ಮನ್ನೇ ನಾವು ಹೊರಗಡೆಯ ದರ್ಪಣದಲ್ಲಿ ನೋಡಲು ಇಚ್ಚಿಸುವಂತೆ ಮಹರ್ಷಿಗಳು ತಾವು ಒಳಗೆ ಕಂಡ ಜ್ಯೋತಿಯನ್ನು ಹೊರಗೆ ಪ್ರಕೃತಿದರ್ಪಣದಲ್ಲಿ ನೋಡಲಿಚ್ಚಿಸಿ ಅದಕ್ಕಾಗಿ ತಂದ ವ್ಯವಸ್ಥೆಯಿದು" ಎಂಬುದಾಗಿ ಶ್ರಿರಂಗಮಹಾಗುರುಗಳು ಅಪ್ಪಣೆಕೊಡಿಸಿದ್ದರು. ಭೂಪಟವನ್ನು ನೋಡಿ ಭೂಮಿಯ ಪರಿಚಯಪಡೆಯುವಂತೆ ಹೊರದೀಪದಿಂದ ಒಳದೀಪವನ್ನು ಪರಿಚಯಿಸಿ ಅತ್ತಕಡೆ ನಮ್ಮನ್ನು ಸೆಳೆಯುವ ಉಪಾಯವಿದು. ದೇಶಕ್ಕೆ ಸಲ್ಲುವ ಗೌರವವೇ ದೇಶದ ಪ್ರತಿನಿಧಿಯಾದ ಧ್ವಜಕ್ಕೂ ಸಲ್ಲುವಂತೆ ಪರಂಜ್ಯೋತಿಯಷ್ಟೇ ಗೌರವವನ್ನು ಹೊರದೀಪಕ್ಕೆ ಕೊಟ್ಟಿರುವರು ಮಹರ್ಷಿಗಳು. ಮಾನವಶರೀರದಲ್ಲಿನ ಬೆನ್ನುಮೂಳೆಯೇ ಒಂದು ಸ್ತಂಭವಾಗಿದೆ. ಅದರ ತುದಿಯಲ್ಲಿ ಬೆಳಗುತ್ತಿದೆ ಪರಮಾತ್ಮದೀಪ. ಇದರ ಹೊರನಕ್ಷೆಯೇ ಹೊರಗೆ ಉಪಯೋಗಿಸುವ ದೀಪಸ್ತಂಭ.
ಬೆಳಗಿಸುವ ಕ್ರಮ;
ಬತ್ತಿ-ಎಣ್ಣೆಗಳಿಗನುಗುಣವಾಗಿ ದೀಪಶಿಖೆಯ ವರ್ಣವಿರುವುದು. ಮಹರ್ಷಿಗಳ ವೈಜ್ಞಾನಿಕದೃಷ್ಟಿಯು ಅಂತರಂಗದ ದೀಪಶಿಖೆಯನ್ನು ಹೋಲುವಂತೆ ಹೊರದೀಪವು ಇರಲನುಗುಣವಾದ ಬತ್ತಿ, ಎಣ್ಣೆಗಳನ್ನು ಗುರುತಿಸಿತು. 'ಮೃಣಾಳಸೂತ್ರದಿಂದ ಮಾಡಿದ ಬತ್ತಿಯನ್ನು ನಿರ್ದಿಷ್ಟಪ್ರಮಾಣದ ಶಿಖೆಯನ್ನಿಟ್ಟು, ಅಂದೇ ಕಾಯಿಸಿದ ಹಸುವಿನ ತುಪ್ಪದಿಂದ ಬೆಳಗಿಸಿದಾಗ ಯೋಗಿಗೋಚರವಾದ ದೀಪಜ್ವಾಲೆಯು ಉಂಟಾಗುವುದು' ಎಂಬುದನ್ನು ಶ್ರೀರಂಗಮಹಾಗುರುಗಳು ತಿಳಿಸಿದ್ದಾರೆ.
ದೀಪಕ್ಕೆ ಹಸುವಿನ ತುಪ್ಪವನ್ನು ಬಳಸುವುದು ಉತ್ತಮಕಲ್ಪ. ಅದಿಲ್ಲದಿದ್ದರೆ ಎಳ್ಳೆಣ್ಣೆ ಮುಂತಾದ ಶಾಸ್ತ್ರೋಕ್ತವಾದ ಎಣ್ಣೆಗಳನ್ನು ಉಪಯೋಗಿಸಬಹುದು. ಮೂರು ಬತ್ತಿಗಳನ್ನು ಒಟ್ಟಿಗೆ ಹೊಸೆದು ಬತ್ತಿಮಾಡಿ ಉಪಯೋಗಿಸಬೇಕು. ತ್ರಿಗುಣಾತ್ಮಕವಾದ ಈ ಪ್ರಕೃತಿಯಲ್ಲಿ ಅಧ್ಯಾತ್ಮಸ್ನೇಹ(ಭಗವಂತನಸ್ನೇಹ)ವೆಂಬ ಜಿಡ್ಡು ಸೇರಿದಾಗ ಅಲ್ಲಿ ಪರಮಾತ್ಮದೀಪವು ಬೆಳಗುತ್ತದೆ ಎಂಬುದನ್ನು ಸಾರುತ್ತದೆ ಇಂತಹ ಹೊರದೀಪ. ಹೀಗೆ ತುಪ್ಪದಿಂದ ಬೆಳಗುವ ದೀಪವು ಹೊರಸೂಸುವ ಪರಿಮಳವು ಯೋಗಮಾರ್ಗಕ್ಕೆ ಪೋಷಕವಾಗಿ, ಪ್ರಾಣಗಳನ್ನು ಮೇಲ್ಮುಖವಾಗಿ ಏರಿಸುತ್ತದೆ. ದೀಪದರ್ಶನವೇ ಮಂಗಲಕರ, ಪೀಡಾಪರಿಹಾರಕ. 'ಮೃತ್ಯುವನ್ನು ದಾಟಿಸುವುದೇ ದೀಪಸೇವೆಯ ಫಲ' ಎಂಬುದಾಗಿ ಶಾಸ್ತ್ರಗಳು ಘೋಷಿಸುತ್ತವೆ.
ಹೊರಪೂಜೆಗೆ ಯಾವುದೇ ಅನುಕೂಲವಿಲ್ಲದಿದ್ದಾಗ ದೇವರಮುಂದೆ ಒಂದು ದೀಪವನ್ನು ಹಚ್ಚಿಟ್ಟರೆ ಸಾಕು ಎಂಬುದಾಗಿ ಪೂಜೆಯ ಸಂಕ್ಷಿಪ್ತರೂಪವನ್ನೂ ಜ್ಞಾನಿಗಳು ಸೂಚಿಸಿದ್ದಾರೆ. ನಮ್ಮ ಶ್ರೇಯಸ್ಸಿಗಾಗಿಯೇ ಯಥಾಶಕ್ತಿ ದೇವರಿಗೆ ದೀಪೋಪಚಾರವನ್ನು ಸಮರ್ಪಿಸಬೇಕಾಗಿದೆ.