Monday, March 30, 2020

ಲೋಕದ ಭಾಗ್ಯ-ಶ್ರೀ ಶಂಕರಭಗವತ್ಪಾದರು (Lokada Bhagya-Sree Sankharabhagavatpadaru)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
 

ಶಂಕರಾವತಾರ-ಜನನ ಮತ್ತು ಬಾಲ್ಯ ;
ಸುಮಾರು ಹದಿಮೂರು ಶತಕಗಳ ಹಿಂದಿನ ಮಾತು. ಒಬ್ಬ ಮಹಾಸಂನ್ಯಾಸಿಯ ಆವಿರ್ಭಾವ ನಮ್ಮೀ ಪವಿತ್ರ ಭೂಮಿಯಲ್ಲಿ ಸಂಪನ್ನವಾಯಿತು. ಹುಟ್ಟಿದ್ದು ಕೇರಳದ ಕಾಲಡಿಯಲ್ಲಿ. ಆರ್ಯಾಂಬಾ ಶಿವಗುರು ದಂಪತಿಗಳ ಪ್ರಾರ್ಥನೆಯ ಫಲಶ್ರುತಿಯಾಗಿ ವೈಶಾಖ ಶುದ್ಧ ಪಂಚಮಿಯಂದು ಅವತಾರ ಗ್ರಹಣ. ಶಿವನ ವರಪ್ರಸಾದದಿಂದ ಜನಿಸಿದ್ದರಿಂದ ಶಂಕರನೆಂದೇ ನಾಮಕರಣ. ತೇಜಸ್ವೀ ಬಾಲಕ. ೩ನೇ ವಯಸ್ಸಿನಲ್ಲೇ ಪಿತೃವಿಯೋಗ. ಅಷ್ಟು ಚಿಕ್ಕ ವಯಸ್ಸಿನಲ್ಲೇ ತಾಯಿಗೆ" ಸಮಾಧಾನ-ಆತ್ಮ ಅಮರ. ಶರೀರ ಇಂದಲ್ಲ ನಾಳೆ ಬಿದ್ದುಹೊಗುವುದೇ" ಎಂಬುದಾಗಿ. ೫ ನೆಯ ವಯಸ್ಸಿಗೆ ಶಂಕರನಿಗೆ ಬ್ರಹ್ಮೋಪದೇಶ. ಗುರುಕುಲವಾಸ. ೮ ನೆಯ ವಯಸ್ಸಿನಲ್ಲಿ ನಾಲ್ಕು ವೇದಗಳು, ಎಲ್ಲ ಶಾಸ್ತ್ರಗಳು ಕಂಟಸ್ಥ . ಆ ಗುರುಕುಲದಲ್ಲಿ ಕಲಿಯುವುದೇನೂ ಉಳಿಯಲಿಲ್ಲ. ಮನೆಗೆ ಬಂದು ವೇದಾಧ್ಯಯನ-ಬ್ರಹ್ಮಚರ್ಯ ಪಾಲನೆ ಮತ್ತು ಮಾತೃಸೇವೆ ಇವು ಶಂಕರನ ಕೈಂಕರ್ಯವಾದವು. ಕೇವಲ ೮ ವರ್ಷದ ಜೀವನದಲ್ಲಿ ಕಲ್ಪನೆ ಮಾಡಲಾಗದ ಸಾಧನೆ. 

ಸಂನ್ಯಾಸ ;
ಬಾಲಕ ಶಂಕರನ ಮನಸ್ಸಿನಲ್ಲಿ ತಾನು ಮಾಡಬೇಕಾದ ಕೆಲಸದ ಅಗಾಧ ಪರ್ವತವೇ ಎದುರಿಗಿತ್ತು. ಅದಕ್ಕಾಗಿ ಎಲ್ಲವನ್ನೂ ತೊರೆದು ಸಂನ್ಯಾಸಿಯಾಗುವುದು ಅನಿವಾರ್ಯವಾಗಿತ್ತು. ಆದರೆ ತಾಯಿಯ ಅನುಮತಿ ಇಲ್ಲದೇ ಅದು ಸಾಧ್ಯವಿರಲಿಲ್ಲ. ನಿಯತಿಯೇ ತನ್ನ ಕಾರ್ಯಕ್ಕಾಗಿ ಒಂದು ಅವಕಾಶವನ್ನು ಕಲ್ಪಿಸಿತು. ಪುರ್ಣಾನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಸಳೆಯೊಂದು ಶಂಕರನ ಕಾಲನ್ನು ಹಿಡಿದೆಳೆಯಲು, ಶಂಕರನು- ದಡದಲ್ಲಿದ್ದ ತಾಯಿಯನ್ನು ಕುರಿತು- "ಅಮ್ಮಾ, ಈ ಮೊಸಳೆ ನನ್ನ ಜೀವನವನ್ನು ಮುಗಿಸುತ್ತಿದೆ. ನಾನು ಸಂನ್ಯಾಸಿಯಾಗಲು ನೀನು ಅಪ್ಪಣೆ ಕೊಡುವಿಯಾದರೆ ಜೀವಂತವಾಗಿ ಬರಬಲ್ಲೆ" ಎಂದನು. ಮಾತೃ ಹೃದಯ. ಮಗ ಬದುಕಿದರೆ ಸಾಕು, ಬೇರೆ ಉಪಾಯವಿಲ್ಲ. ಅನುಮತಿ ನೀಡಿದಳು. 

ಗುರುವಿನಿಂದ ದೀಕ್ಷೆ ; 
ಅಂದಿನಿಂದ ಪ್ರಾರಂಭ. ಶಂಕರನ ಪರಿವ್ರಾಜಕ ಬದುಕು. ಕಾಲ್ನಡಿಗೆಯಲ್ಲಿ ನರ್ಮದಾ ತೀರದ ಗೋವಿಂದಭಗವತ್ಪಾದರಲ್ಲಿಗೆ ಪ್ರಯಾಣ. ಈ ತೇಜಸ್ವೀ ಬಾಲಕನಿಗೆ ಗೋವಿಂದ ಗುರುಗಳು ವಿಧ್ಯುಕ್ತವಾಗಿ ಸನ್ಯಾಸ ನೀಡಿ ನಾಲ್ಕೂ ವೇದಗಳಿಂದ ಮಹಾ ವಾಕ್ಯಗಳನ್ನು ಅನುಭವ ಸಹಿತವಾಗಿ ಉಪದೇಶಿಸಿದರು. ಋಗ್ವೇದದಿಂದ-"ಪ್ರಜ್ಞಾನಂ ಬ್ರಹ್ಮ"-ಪ್ರಜ್ಞಾನವು ಬ್ರಹ್ಮವೇ ಆಗಿದೆ. ಯಜುರ್ವೆದದಿಂದ- ಅಹಂ ಬ್ರಹ್ಮಾಸ್ಮಿ"-ನಾನು ಬ್ರಹ್ಮವೇ ಆಗಿದ್ದೇನೆ, ಸಾಮವೇದದಿಂದ-ತತ್ತ್ವಮಸಿ-ಆ ಬ್ರಹ್ಮವು ನೀನೇ ಆಗಿದ್ದೀ ಮತ್ತು ಅಥರ್ವವೇದದಿಂದ-ಅಯಮಾತ್ಮಾ ಬ್ರಹ್ಮ-ಈ ಆತ್ಮವು ಬ್ರಹ್ಮವೇ. ಈ ಉಪದೇಶವು ಕೇವಲ ಶಾಸ್ತ್ರ ಪುಸ್ತಕದ ವಾಕ್ಯಗಳನ್ನು ಉರು ಹೊಡೆದುದಲ್ಲ. ಒಳಗಿನ ಬ್ರಹ್ಮಾನುಭವದಿಂದ ತುಂಬಿ ಹೊರಗೆ ತುಳುಕಿದ ಆನಂದಾನುಭವ. ಶಂಕರರಿಗೆ ಈ ಉಪದೇಶವಾದೊಡನೆ ಮೂರುದಿನಗಳ ಕಾಲ ಬಾಹ್ಯ ಪ್ರಜ್ಞೆಯೇ ಇಲ್ಲದೇ ಸಮಾಧಿಯ ಅನುಭವಾಗಿತ್ತಂತೆ. 

ಅದ್ವೈತ ಸಿದ್ಧಾಂತ :
ಭಾರತೀಯ ಪರಂಪರೆಯಲ್ಲಿ ಅದ್ವೈತಸಿದ್ಧಾಂತವು ಬಹಳ ಪ್ರಮುಖವಾದ ಸ್ಥಾನವನ್ನು ಅಲಂಕರಿಸುತ್ತದೆ. ಉಪನಿಷತ್ತಿನ ಈ ಸತ್ಯವನ್ನು ಶಂಕರಭಗವತ್ಪಾದರು ತಮ್ಮ ಕಾಲದೇಶಕ್ಕನುಗುಣವಾಗಿ ಸಮರ್ಥವಾಗಿ ಪುನಃ ಪ್ರತಿಷ್ಠಾಪಿಸಿ ಲೋಕೋಪಕಾರ ಮಾಡಿದ್ದಾರೆ. ಬಹಳ ಸಂಕ್ಷಿಪ್ತತಮವಾಗಿ ಆ ಸತ್ಯದ ಕೆಲವು ಹೊಳಹುಗಳನ್ನು ನೋಡೋಣ. 

ಬ್ರಹ್ಮ ಸತ್ಯ-ಜಗತ್ತು ಮಿಥ್ಯೆ: 
ಬ್ರಹ್ಮವೊಂದೇ ಸತ್ಯ. ಜಗತ್ತು ಮಿಥ್ಯೆ: ಹೇಗೆ ವಿದ್ಯುಚ್ಚಕ್ತಿಯಿಂದಲೇ ನಮ್ಮ fan, TV, ರುಬ್ಬುವ ಯಂತ್ರ, ಎಲ್ಲವೂ ಕೆಲಸ ಮಾಡುತ್ತಿವೆ. ಆ ವಿದ್ಯುತ್ತಿನ ಸಂಚಾರ ನಿಂತಾಗ ಎಲ್ಲವೂ ನಿಂತುಹೊಗುತ್ತವೆಯಲ್ಲವೇ?. ಇವು ಬೇರೆ ಬೇರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಯಾವ ಒಂದು ಶಕ್ತಿ ಇಲ್ಲವಾದಾಗ ಎಲ್ಲವೂ ಅಸ್ತಿತ್ವಹೀನವಾಗಿಬಿಡುತ್ತವೆ. ಹಾಗೆಯೇ ಬ್ರಹ್ಮವೊಂದೇ ನಿತ್ಯ ಶಾಶ್ವತವಾಗಿರುವುದು. ಅದರ ಕಾರಣದಿಂದಲೇ ಎಲ್ಲವಕ್ಕೂ ಅಸ್ತಿತ್ವ ಬಂದಂತೆ ಇರುವುದು. ಆದರೆ ಅಸ್ತಿತ್ವ ಎಂದೆಂದಿಗೂ ಇರುವುದಾದರೆ ಅದು ಬ್ರಹ್ಮವೊಂದಕ್ಕೆ ಮಾತ್ರ.ಉಳಿದೆಲ್ಲವೂ ಇಂದು ಇದೆ, ನಾಳೆ ಇಲ್ಲ, ಈ ಕ್ಷಣಕ್ಕೆ ಇದೆ ಮುಂದೆ ಕಾಣದು. ಜಗತ್ತು ಪರಿವರ್ತನ ಶೀಲ. ನಿತ್ಯ ಶಾಶ್ವತವಲ್ಲ. ಎಂದೇ ಮಿಥ್ಯೆ ಎಂದಿರುವುದು. ಅದರ ಅಸ್ತಿತ್ವವೂ ಹಿಂಬದಿಯ ಬ್ರಹ್ಮವೇ ಆಗಿದೆ. 

ಅಹಂ ಬ್ರಹ್ಮಾಸ್ಮಿ: 
ನಾನು ಎನ್ನುವುದಕ್ಕೆ ವಿಷಯ ಬ್ರಹ್ಮವೇ. ಉದಾಹರಣೆಗೆ ನಮ್ಮ ಅಂಗಾಂಗಗಳು ನಾವೇ? ಇಲ್ಲ . ನನ್ನ ಕೈ, ನನ್ನ ಕಾಲು, ನನ್ನ ಹೃದಯ ಹೀಗೆಲ್ಲ ಹೇಳುವಾಗ ನಾನು ಎನ್ನುವುದು ಇದೆಲ್ಲದರಿಂದ ಹೊರತಾದ, ಇದೆಲ್ಲದಕ್ಕೂ ಚೈತನ್ಯವನ್ನು ಹರಿಸುತ್ತಿರುವ ಬ್ರಹ್ಮವನ್ನೇ ಅಲ್ಲಿ ನಿರ್ದೇಶಿಸುತ್ತಿರುವುದು. ನಮಗೇ ಗೊತ್ತಿಲ್ಲದೇ ಇದು ನಮ್ಮ ನಿತ್ಯದ ನಡೆಯಾಗಿದೆ, ಒಂದು ಮಂಜುಗಡ್ಡೆ ತನ್ನ ಪೂರ್ವಸ್ಥಿತಿಯನ್ನು ನೆನೆದು ನಾನು ನೀರಾಗಿದ್ದೆ ಎಂದರೆ ಒಪ್ಪಬೇಕಲ್ಲವೇ? ನೀರೇ ಇಲ್ಲದೇ ಮಂಜುಗಡ್ಡೆ ಇಲ್ಲ. ಎಲ್ಲದರ ಹಿಂಬದಿ ಬೆಳಗುತ್ತಿರುವ ಮಹಾ ಚೈತನ್ಯವೇ ಬ್ರಹ್ಮ. ಅದಿಲ್ಲದೇ ವಿಶ್ವವೇ ಇಲ್ಲ. ನೀರಿನಲ್ಲಿ ಕರಗಿದ ಉಪ್ಪು ನೀರನ್ನೆಲ್ಲಾ ವ್ಯಾಪಿಸಿರುವಂತೆ ಬ್ರಹ್ಮವು ಸರ್ವವ್ಯಾಪಿ. ನೀರಿನಲ್ಲಿರುವ ಉಪ್ಪನ್ನು ಅನುಭವದಿಂದಲೇ ತಿಳಿಯುವಂತೆ ಬ್ರಹ್ಮವನ್ನೂ ಅನುಭವದಿಂದಲೇ ಅರಿಯಬೇಕಾಗಿದೆ. ನಾನು ಬ್ರಹ್ಮವೇ ಆಗಿರುವೆ ಎಂಬ ಮಾತು ನಿಜವಾದ ಬ್ರಹ್ಮಾನುಭವದಿಂದ ಹೇಳಿದ್ದೇ ಹೊರತು, ಕೇವಲ ಶಾಸ್ತ್ರವಾಕ್ಯವನ್ನು ಉಲ್ಲೇಖಿಸಲಲ್ಲ. ಸಮುದ್ರವನ್ನು ನೋಡಿ "ಆಹಾ ಅಪಾರವಾದ ಸಮುದ್ರ" ಎನ್ನುವುದಕ್ಕೂ ಸಮುದ್ರವನ್ನೇ ನೋಡದೇ ಯಾರೋ ಬರೆದ ಅದೇ ವಾಕ್ಯವನ್ನು ಓದುವುದಕ್ಕೂ ಬಹಳ ವ್ಯತ್ಯಾಸವಿದೆ . ಶಂಕರಭಗವತ್ಪಾದರು ಹೀಗೆ ಯಾವ ಅನುಭವದ ನೆಲೆಯನ್ನು ಏರಿದರೆ ಬ್ರಹ್ಮವೊಂದೇ ಎಂಬ ಸತ್ಯದ ಅರಿವಾಗುವುದೋ ತಪಸ್ಯೆಯಿಂದ ಅಂತಹ ಅದ್ವೈತ ಸ್ಥಾನಕ್ಕೆ ಏರಿ ಮೊಳಗಿದ ಸತ್ಯವಾಕ್ಯವದು ಎಂಬುದನ್ನು ನಾವು ಮರೆಯಬಾರದು. ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು- ಜಾತ್ರೆಯಲ್ಲಿ ಸಕ್ಕರೆ ಅಚ್ಚಿನ ಅನೇಕ ಆಕಾರಗಳ ಗೊಂಬೆಗಳನ್ನು ಮಾರಾಟಕ್ಕಿಟ್ಟಿರುತ್ತಾರೆ. ಮಕ್ಕಳು –ನನಗೆ ಹುಲಿ ಬೇಕು, ನನಗೆ ಮೀನು ಬೇಕು, ಸಿಂಹ ಬೇಕು ಎಂದೆಲ್ಲಾ ಹೊರ ಆಕಾರವನ್ನು ನೋಡಿ ಕೇಳುತ್ತವೆ. ಆದರೆ ಅವರಿಗೆ ತಂದೆಯಾದವನು ಕಣ್ಣು ಮುಚ್ಚಲು ಹೇಳಿ ಸಕ್ಕರೆ ಅಚ್ಚಿನ ಹುಲಿಯನ್ನೋ, ಸಿಂಹವನ್ನೋ ಬಾಯಲ್ಲಿ ಇಟ್ಟು ಹೇಗಿದೆ ಎಂದರೆ ಮಗು ಸಿಹಿ ಎಂದಿಷ್ಟೇ ಹೇಳಬೇಕಲ್ಲವೇ? ಹೀಗೆಯೇ ಭೇದಗಳನ್ನು ಗ್ರಹಿಸುವ ಈ ಕಣ್ಣುಗಳನ್ನು ಮುಚ್ಚಿ, ಅಭೇದವನ್ನು ಅನುಭವಿಸುವ ಕಣ್ಣನ್ನು ತೆರೆದರೆ ಬ್ರಹ್ಮವೊಂದೇ ಕಾಣುತ್ತದೆ ಎಂಬುದು ಶಂಕರಾಚಾರ್ಯರ ಅನುಭವದ ಮಾತು. ಅದನ್ನು ಆ ಸಮಾಧಿ ಸ್ಥಿತಿಯ ಅನುಭವದಿಂದಲೇ ಹೇಳಬೇಕೇ ವಿನಃ ನಾವಿದ್ದ ಲೌಕಿಕ ಪ್ರಪಂಚದ ಅರಿವಷ್ಟನ್ನೇ ಇಟ್ಟುಕೊಂಡು ಎಲ್ಲವೂ ಬ್ರಹ್ಮವೇ ಎಂದರೆ ಅದು ಕಲಿತ ಮಾತಾಗುತ್ತದೆ ಅಷ್ಟೇ. ಬ್ರಹ್ಮವೆನ್ನುವುದು ಎಂದೆಂದಿಗೂ ಇರುವ ಸತ್ಯ. ವಸ್ತುಸ್ಥಿತಿ. ಅಂತಹ ಬ್ರಹ್ಮಾನುಭವದ ಅಡಿಗಲ್ಲಿನ ಮೇಲೆ ಈ ದೇಶದ ಸಂಸ್ಕೃತಿ ಸೌಧವನ್ನು ಕಟ್ಟುವ ಗುರುತರವಾದ ಜವಾಬ್ದಾರಿಯನ್ನು ಹೊತ್ತು ಶಂಕರರು ಅಲ್ಲಿಂದ ಹೊರಟು ದೇಶದ ಎಲ್ಲೆಡೆ ಸಂಚರಿಸಿ ಜಾಗೃತಿಯನ್ನು ಮೂಡಿಸಿದರು.

ಗ್ರಂಥಸೇವೆ ; 
ಜೀವಿಗಳೆಲ್ಲರೂ ಆ ಅನುಭವವನ್ನು ಪಡೆಯುವಂತಾಗಲು ಅವರ ಪ್ರಕೃತಿ ಅದಕ್ಕೆ ಸಜ್ಜಾಗಬೇಕು, ಶುದ್ಧವಾಗಬೇಕು. ಬ್ರಹ್ಮದ ವಿಸ್ಮರಣೆಯಾಗಿ ಎಲ್ಲರೂ ದುಃಖ ದೈನ್ಯಗಳಿಂದ ನರಳುವುದಾಗಬಾರದು.ಹಾಗಾಗಲು ಶಂಕರರು ದೇಶದುದ್ದಕ್ಕೂ ಸಂಚರಿಸಿ ಸಮಾಜದಲ್ಲಿನ ಕಾಲುಷ್ಯವನ್ನು ತೊಳೆಯುವ ಪ್ರಯತ್ನ ಮಾಡಿದರು. ನಾವಿರುವ ಸ್ಥಿತಿಯಿಂದ ನಮ್ಮನ್ನು ಮೇಲೆತ್ತಬೇಕಲ್ಲವೇ? ಅದಕ್ಕಾಗಿ ನೂರಾರು ಸ್ತೋತ್ರ ಸಾಹಿತ್ಯವನ್ನು ರಚಿಸಿ ಸಾಮಾನ್ಯರೂ ಅದರ ಪಾರಾಯಣದಿಂದ ಪ್ರಕೃತಿ ಶುದ್ಧವಾಗಿ ಅಸಾಮಾನ್ಯವಾದ ಅನುಭವದ ನೆಲೆಗೆ ತಲುಪಲು ಸಹಾಯವಾಗುವಂತೆ ಮಾಡಿದರು. ಈ ದೇಶದ ವಿದ್ವಾಂಸರ ವೇದಾಂತವೆಲ್ಲ ಬರಿಯ ವಾದಾಂತದಲ್ಲಿ ಕೊನೆಗೊಳ್ಳುವುದನ್ನು ನೋಡಿ ಮರುಗಿ ಅವರೆಲ್ಲರಿಗೂ ಅನುಭವದ ಸುಧೆಯನ್ನು ಉಣಬಡಿಸುವಂತಹ ವಿವೇಕ ಚೂಡಾಮಣಿ, ಗೀತಾ ಭಾಷ್ಯ, ಉಪನಿಷತ್ ಭಾಷ್ಯ, ಬ್ರಹ್ಮ ಸೂತ್ರ ಭಾಷ್ಯಗಳಂತಹ ಉದ್ಗ್ರಂಥಗಳನ್ನು ರಚಿಸಿ ಉಪಕರಿಸಿದರು. " ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತಿ ಎಂಬಂತೆ ಎಲ್ಲ ಕರ್ಮಗಳೂ ಜ್ಞಾನದಲ್ಲೇ ಹೋಗಿ ನಿಲ್ಲುವಂತಾದಾಗಲೇ ಅವುಗಳ ಸಾರ್ಥಕ್ಯ ಎಂಬ ಗೀತಾಚಾರ್ಯನ ಮಾತುಗಳನ್ನು ಎಲ್ಲರ ಮನಮುಟ್ಟುವಂತೆ ಉಪದೇಶಿಸಿದರು. ಸಮಾಜ ಸುಧಾರಣೆ. ಬುದ್ಧನ ಸರಳವಾದ ಉಪದೇಶಗಳನ್ನು ತಮ್ಮ ಮನಸ್ಸಿಗೆ ಬಂದಂತೆ ವ್ಯಾಖ್ಯಾನಿಸಿ ನಾಸ್ತಿಕತೆಯನ್ನು ಹರಡಿ ಸನಾತನ ಧರ್ಮವನ್ನು ಈ ನಾಡಿನಿಂದ ಬುಡಮೇಲು ಮಾಡುವ ಪ್ರಯತ್ನದಲ್ಲಿದ್ದ ತಥಾಕಥಿತ ಬೌದ್ಧ ರನ್ನು ಅವರದೇ ವರಸೆಯಿಂದ ಪರಾಭವಗೊಳಿಸಿ, ಅತ್ಯಂತ ಪ್ರೀತಿಯಿಂದ ಅವರಿಗೆಲ್ಲ ನಿಜವನ್ನು ಮುಟ್ಟಿಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದರು. ಅಂದಿನ ನಮ್ಮ ದೇಶದ ಪರಿಸ್ಥಿತಿ ಬಹಳ ಚಿಂತಾಜನಕ. ಚಿಕ್ಕ ಚಿಕ್ಕ ರಾಜ್ಯಗಳು, ಒಳಜಗಳ ಇತ್ಯಾದಿ ರಾಜಕೀಯ ಸಮಸ್ಯೆಯಾದರೆ ಧಾರ್ಮಿಕವಾಗಿ ಕಾಪಾಲಿಕರು, ತಾಂತ್ರಿಕರು, ಶಾಕ್ತರು, ಶೈವರು, ವೈಷ್ಣವರು, ಪಾಶುಪತರು, ಭೈರವರು, ಜೈನರು, ಬೌದ್ಧರು, ಚಾರ್ವಾಕರು ಹೀಗೆ ಪರಸ್ಪರ ಹೊಂದಾಣಿಕೆ ಇಲ್ಲದೇ ತಮ್ಮ ತಮ್ಮ ಮತಗಳೇ ಶ್ರೇಷ್ಠ ಎಂಬ ಮತಾಂಧತೆಯ ಆಚರಣೆಗಳಲ್ಲಿಯೇ ಮಗ್ನರಾಗಿ ಎಲ್ಲವೂ ಭಗವಂತನ ಪ್ರಾಪ್ತಿಗಾಗಿ ಎನ್ನುವ ವಿಷಯವನ್ನೇ ಕೈಬಿಟ್ಟು ಕುಳಿತ ಗೊಂದಲದ ವಾತಾವರಣದಲ್ಲಿ ಶಂಕರರು ಎಲ್ಲರನ್ನೂ ಒಗ್ಗೂಡಿಸಿ ಸನಾತನ ಧರ್ಮದಲ್ಲಿ ಎಲ್ಲದಕ್ಕೂ ಸಮನ್ವಯತೆ ಇರುವುದನ್ನು ತೋರಿಸಿ ಧರ್ಮಧ್ವಜವನ್ನು ಎತ್ತಿ ಹಿಡಿದರು. ಪ್ರಯೋಜನವಿಲ್ಲದೇ ಕರ್ಮಗಳನ್ನು ಆಚರಿಸುವುದನ್ನು ಶಂಕರರು ಖಂಡಿಸಿದರು. ಕರ್ಮಗಳೆಲ್ಲವೂ ಬಂದಿರುವುದು ಜ್ಞಾನಾನುಭವಕ್ಕಾಗಿಯೇ. ಅದನ್ನು ಮರೆತು ಶುಷ್ಕವಾಗಿ ಯಾರೂ ಕರ್ಮಗಳನ್ನು ಆಚರಿಸುವಂತಾಗದೆ ಜೀವಂತವಾಗಿ ಬ್ರಹ್ಮನ ಅನುಭವ ಉಂಟಾಗಲು ಬೇಕಾದ ಕರ್ಮಾಚರಣೆಗೆ ಎಲ್ಲರನ್ನೂ ಪ್ರೇರಿಸಿದರು.

ಚತುರಾಮ್ನಾಯ ಪೀಠಗಳು ; 
ಎಲ್ಲರೂ ಒಂದು ಸಂಸ್ಕೃತಿ ಸೂತ್ರದಲ್ಲಿ ಧರ್ಮ,ಅರ್ಥ,ಕಾಮ,ಮೋಕ್ಷಗಳೆಂಬ ಪುರುಷಾರ್ಥಗಳನ್ನು ಅನುಭವಿಸುತ್ತಾ, ನೆಮ್ಮದಿಯಿಂದ ಬಾಳುವಂತಾಗಲು ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿ ಅಲ್ಲಿ ಇಡೀ ಭಾರತೀಯ ಸಮಾಜದಲ್ಲಿ ನೈಜವಾದ ಜೀವನ ದೃಷ್ಟಿಯನ್ನು ಬೆಳೆಸುವ ಕಾರ್ಯ ನಿರಂತರವಾಗಿ ನಡೆಯುವಂತೆ ವ್ಯವಸ್ಥೆಗೊಳಿಸಿದರು. ಅದು ಚ್ಯುತಿ ಇಲ್ಲದಂತೆ ಸಾಗಲು ತಮ್ಮ ನಾಲ್ಕುಜನ ಜ್ಞಾನೀ ಶಿಷ್ಯರನ್ನು ಈ ನಾಲ್ಕೂ ಪೀಠಗಳಿಗೆ ನಿಯುಕ್ತಿಗೊಳಿಸಿದರು. ಶಂಕರ ಭಗವತ್ಪಾದರ ಜೀವನವನ್ನು ಇಷ್ಟು ಚಿಕ್ಕ ಲೇಖನದಲ್ಲಿ ಸೆರೆಹಿಡಿಯುವುದು ಸಾಧ್ಯವಿಲ್ಲದಮಾತು. ಆದರೂ ಶಂಕರ ಜಯಂತಿಯ ಪರ್ವದಿನದಂದು ಆ ಮಹಾಪುರುಷನ ಸವಿನೆನಪು ನಮ್ಮೆಲ್ಲರ ಜೀವನದ ಕೈದೀವಿಗೆಯಾಗಿ ಸದಾ ನಮ್ಮ ಜೊತೆಯಾಗಿರಲಿ ಎಂಬ ಆಶಯವಷ್ಟೇ ಈ ಕಿರು ಬರಹದ ಉದ್ದೇಶ. ಇಷ್ಟೆಲ್ಲಾ ಸಾಧನೆಗಳನ್ನು ಕೇವಲ ೩೨ ವರ್ಷದಲ್ಲಿ ಅದೂ ಕಾಲ್ನಡಿಗೆಯಲ್ಲಿ ಶಂಕರ ಭಗವತ್ಪಾದರು ಸಮರ್ಥವಾಗಿ ನಿರ್ವಹಿಸಿದರು ಎಂದರೆ ಅವರು ಎಂಟನೇ ಶತಮಾನದ ಅದ್ಭುತವಲ್ಲವೇ?

ಸೂಚನೆ: 30/03/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಮತ್ತು 02/04/2020 ರಂದು ವಿಶ್ವವಾಣಿಯ ಗುರುಪುರವಾಣಿ ಪ್ರಕಟವಾಗಿದೆ.