ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)
ಶಂಕರಭಗವತ್ಪಾದರು ಗಂಗಾತೀರದಲ್ಲಿ ಶಿಷ್ಯರೊಡನೆ ಸ್ನಾನಕ್ಕಾಗಿ ಹೋಗುತ್ತಿದ್ದಾಗ ಎದುರಿಗೆ ಚಂಡಾಳನೊಬ್ಬ ನಾಲ್ಕು ನಾಯಿಗಳ ಜೊತೆ ಅತಿ ಮಲಿನವಾದ ಬಟ್ಟೆಗಳನ್ನು ಧರಿಸಿ ದಾರಿಗೆ ಎದುರಾಗಿ ಬಂದನು. ಶಂಕರರು ಅವನ ವೇಷ, ಮಲಿನವಾದ ಬಟ್ಟೆಗಳು ಎಲ್ಲವನ್ನೂ ನೋಡಿ ಸ್ವಲ್ಪ ಅಸಹ್ಯವಾಗಿ, ಲೇ ಚಂಡಾಳ, ದೂರಸರಿ ಎನ್ನುತ್ತಾರೆ. ಚಂಡಾಳನಾದರೋ ಇವರನ್ನು ನೋಡಿ ನಗುತ್ತಾನೆ. ಶಂಕರರು ತುಸು ಆಶ್ಚರ್ಯದಿಂದಲೇ ಮತ್ತೊಮ್ಮೆ ದೂರಸರಿ ಎನ್ನುತ್ತಾರೆ. ಆಗ ಚಂಡಾಲನ ಮುಖದಿಂದ ಹೊರಡುವ ಮಾತುಗಳಿವು- "ಎಲೈ ಯತಿಯೇ, ನಿನಗಿನ್ನೂ ಭ್ರಮೆ ಹೋಗಿಲ್ಲವೇ? ದೂರ ಸರಿ ಎಂದುದು ಯಾವುದಕ್ಕೆ? ದೇಹಕ್ಕೆ ಹೇಳಿದ್ದರೆ, ಅದು ಜಡ. ಅದು ಇದ್ದಲ್ಲಿಂದ ಸರಿಯಲಾರದು. ಒಳಗಿರುವ ಆತ್ಮಕ್ಕೆ ಹೇಳುತ್ತಿರುವಿಯಾದರೆ, ಅದು ಸರ್ವಾಂತರ್ಯಾಮಿ. ಅದು ಎಲ್ಲಿಂದ ಎಲ್ಲಿಗೆ ಸರಿಯಬೇಕು?" ಎಂತಹ ಮನೋಜ್ಞವಾದ ಪ್ರಶ್ನೆ! ಜೀವನದ ಪರಮ ಸತ್ಯವು ಚಂಡಾಲನ ಬಾಯಿಂದ! ಒಡನೆಯೇ ಶಂಕರರು- ಎಂತಹ ಸತ್ಯವನ್ನು ಹೇಳಿದೆ! ಬ್ರಹ್ಮಜ್ಞನಲ್ಲದೇ ಈ ಮಾತನ್ನು ಆಡಲು ಸಾಧ್ಯವಾಗದು. ನಿಜ, ಬ್ರಹ್ಮಜ್ಞಾನಿಯಾದವನು, ಬ್ರಾಹ್ಮಣನಿರಲಿ, ಚಂಡಾಳನಿರಲಿ ನನ್ನ ಗುರುವೆಂದೇ ಭಾವಿಸುವೆ ಎಂದು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಚಂಡಾಳ ರೂಪದಿಂದ ಬಂದ ವಿಶ್ವೇಶ್ವರನು ನಾಲ್ಕು ನಾಯಿಗಳ ಜಾಗದಲ್ಲಿ ನಾಲ್ಕು ವೇದಗಳನ್ನು ಹಿಡಿದು ಶಂಕರ ಭಗವತ್ಪಾದರಿಗೆ ದರ್ಶನ ಕೊಟ್ಟನು ಎಂದು ಆಚಾರ್ಯರ ಜೀವನಗಾಥೆಯಲ್ಲಿ ಬರುವ ಒಂದು ಮಾರ್ಮಿಕವಾದ ಘಟನೆ ಇದು.
ಎಲ್ಲದರ ಹಿಂಬದಿಯಲ್ಲಿ ಬೆಳಗುತ್ತಿರುವ, ಎಲ್ಲದರ ಅಸ್ತಿತ್ವಕ್ಕೆ ಕಾರಣವಾಗಿರುವ ಮಹಾ ಚೈತನ್ಯವೇ ಬ್ರಹ್ಮ. "ಜೀವನ ವಿಕಾಸ ನಡೆಯುತ್ತಿರುವಾಗ ದೇವನಿಂದ ಶಕ್ತಿ ಸಪ್ಲೈ ಆಗುವುದು. ಅದು ನಿಂತರೆ ಯಾವ ಕೆಲಸವೂ ಇಲ್ಲ. ಕರೆಂಟ್ ನಿಂತರೆ ರೇಡಿಯೋ, ಫ್ಯಾನ್ ಎಲ್ಲಾ ನಿಲ್ಲುತ್ತದೆ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ಪರಮ ಅದ್ವೈತದ ಸ್ಥಿತಿಯಲ್ಲಿ ಎಲ್ಲವೂ ಬ್ರಹ್ಮಮಯ. ಸರ್ವವ್ಯಾಪಿಯಾದ ಬ್ರಹ್ಮವು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದಾದರೂ ಹೇಗೆ? ಎಂಬುದರ ಅರಿವಿನ ಪರೀಕ್ಷೆ ಸ್ವಯಂ ವಿಶ್ವೇಶ್ವರನಿಂದಲೇ ಚಂಡಾಳ ರೂಪದಿಂದ ನಡೆಯಿತು. ಶಂಕರರು ಸತ್ಯಕ್ಕೆ ಶರಣಾದರು. ಅದರ ಪರಿಣಾಮವಾಗಿ ಮನೀಷಾ ಪಂಚಕವೆಂಬ ದಿಗ್ದರ್ಶಕವಾದ ಸ್ತೋತ್ರವನ್ನು ರಚಿಸಿ ಭಗವಂತನಿಗೆ ಸಮರ್ಪಿಸಿದರು. ಶಂಕರರ ಬೌದ್ಧಿಕ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ ಈ ಘಟನೆ. ಸತ್ಯದರ್ಶನ ಮಾಡಿಸಿದ (ಅಥವಾ ಶಂಕರರ ವಿಷಯದಲ್ಲಿ ಅದನ್ನು ಸ್ಮರಣೆಗೆ ತಂದ) ಚಂಡಾಳನನ್ನೂ ತನ್ನ ಗುರು ಎನ್ನಲು ಅವರು ಹಿಂಜರಿಯಲಿಲ್ಲ. ಒಳಗೆ ಬೆಳಗುವ ಸತ್ಯರೂಪಿ ಬ್ರಹ್ಮಕ್ಕೆ ಬೆಲೆ. ಅದರ ಅನುಭವದಲ್ಲಿ ಸುಖಿಸುವವನ ಹೊರವೇಷ ಹೇಗಾದರೂ ಇರಲಿ. ಅದು ಗೌಣವಾಗುತ್ತದೆ ಎಂಬ ಪಾಠವನ್ನು ಈ ಘಟನೆ ಸಾರುತ್ತಿದೆ.
ಶಂಕರಭಗವತ್ಪಾದರ ಜೀವನೋದ್ದೇಶ ಆ ಪರಮ ಸತ್ಯವನ್ನು ಪ್ರತಿಷ್ಠಾಪಿಸುವುದೇ ಆಗಿತ್ತು. ಎಂದೇ ಅವರ ಜೀವನ ಇಂತಹ ಉದ್ಬೋಧಕವಾದ ಅನೇಕ ಸನ್ನಿವೇಶಗಳಿಂದ ತುಂಬಿದೆ. ಎಲ್ಲವೂ ಸಾರ್ವಕಾಲಿಕ ಸತ್ಯದ ಅನಾವರಣ.ಎಲ್ಲಕಾಲಕ್ಕೂ ಪ್ರಸ್ತುತವೇ ಎಂಬುದನ್ನು ಮರೆಯದಿರೋಣ.