ಲೇಖಕರು: ಶ್ರೀಮತಿ ಮೈಥಿಲೀ ರಾಘವನ್
ವ್ಯವಹಾರದಲ್ಲಿ 'ಕೋಪಕ್ಕೆ ಧೂಪಹಾಕುವುದು' ಎಂಬುದಾಗಿ ಧೂಪವೆಂಬ ಪದವು 'ಹೆಚ್ಚಿಸುವುದು' ಎಂಬರ್ಥದಲ್ಲಿ ಬಳಕೆಯಾಗುತ್ತಿದೆ. ಆದರೆ ಧೂಪ ಎನ್ನುವುದು ಶಮನಗೊಳಿಸುವ, ಪ್ರಸನ್ನತೆಯನ್ನುಂಟುಮಾಡುವ ಪದಾರ್ಥ. ಇಂತಹ ಪದಾರ್ಥವನ್ನು ಅಗ್ನಿಗೆ ಸೇರಿಸಿ ಅದರಿಂದ ಹೊರಬರುವ ಧೂಮವನ್ನು ಭಗವಂತನಿಗೆ ಅರ್ಪಿಸುವುದು ಧೂಪ-ಉಪಚಾರವೆನಿಸಿಕೊಳ್ಳುತ್ತದೆ. ಇಂದ್ರಿಯ, ಮನಸ್ಸು ಬುದ್ಧಿಗಳು ಮೇಲ್ಮುಖವಾಗಿ ಸಂಚಾರವನ್ನು ಮಾಡಲು ಪುಷ್ಟಿಯನ್ನು ಕೊಟ್ಟು, ಏಕಾಗ್ರತೆಯನ್ನೂ, ಮನಃಪ್ರಸನ್ನತೆಯನ್ನೂ, ಧಾತುಪ್ರಸನ್ನತೆಯನ್ನೂ ಉಂಟುಮಾಡುವ ಸುಗಂಧಪದಾರ್ಥಗಳು, ಓಷಧಿ, ವನಸ್ಪತಿಗಳು ಭಗವಂತನಿಗೆ ಧೂಪೋಪಚಾರವನ್ನು ಮಾಡಲು ಪ್ರಶಸ್ತವಾದವು. ಶ್ರೀಗಂಧ, ದಶಾಂಗ ಮತ್ತು ಗುಗ್ಗುಳವು ಈ ಉಪಚಾರಕ್ಕೆ ಶ್ರೇಷ್ಠವೆಂಬುದಾಗಿ ಗುರುತಿಸಲ್ಪಟ್ಟಿವೆ.
ಶ್ರೀರಂಗಮಹಾಗುರುಗಳು 'ಅಗ್ನಿಯಲ್ಲಿ ಪದಾರ್ಥಗಳನ್ನು ಕೆಳಗಡೆ ಹಾಕಿದರೂ ಹೊಗೆಯು ಮೇಲ್ಮುಖವಾಗಿಯೇ ಹೋಗುತ್ತದೆ. ಅದರಂತೆಯೇ ನಮ್ಮ ಮನಸ್ಸೂ ಕೂಡ ಬ್ರಹ್ಮಭಾವಕ್ಕೆ ಏರುವಂತಾಗಲಿ ಎಂಬ ಪ್ರಾರ್ಥನೆಯೊಂದಿಗೆ ಧೂಪಸಮರ್ಪಣೆಯಾಗಬೇಕು' ಎಂಬ ಆದೇಶವನ್ನು ನೀಡಿದ್ದರು.
'ಈ ಪೂಜಾಕಾರ್ಯಕ್ಕೆ ಬರುವ ವಿಘ್ನಗಳನ್ನು ದೂರಮಾಡು' ಎಂಬ ಅರ್ಥವನ್ನು ಕೊಡುವ ಮಂತ್ರವನ್ನೂ, 'ದಶಾಂಗ, ಗುಗ್ಗುಳ- ಈ ಪದಾರ್ಥಗಳನ್ನು ನಿನಗೆ ಅರ್ಪಿಸುತ್ತೇನೆ. ಸ್ವೀಕರಿಸಿ ನನ್ನನ್ನು ಕಾಪಾಡು' ಎಂಬರ್ಥದ ಶ್ಲೋಕವನ್ನೂ ಹೇಳಿ ಪ್ರಾರ್ಥಿಸುವ ಕ್ರಮವುಂಟು. 'ನಿನ್ನ ಸೇವೆಯಿಂದ ನಿನ್ನನ್ನು ತೃಪ್ತಿಗೊಳಿಸುವೆ. ಇವುಗಳನ್ನಿತ್ತ ವನಸ್ಪತಿ-ವೃಕ್ಷಗಳೂ ಧನ್ಯತೆಯನ್ನು ಪಡೆಯಲಿ' ಎಂಬ ಭಾವವನ್ನೂ, ಪದಾರ್ಥದ ಮೂಲಕ್ಷೇತ್ರಕ್ಕೆ, ಅದನ್ನು ಪೂಜೆಗೆ ಒದಗಿಸಿಕೊಟ್ಟವರಿಗೆ ಮತ್ತು ಪೂಜೆಯನ್ನು ಮಾಡುವವರಿಗೆ ಎಲ್ಲರಿಗೂ ಮಂಗಳವನ್ನು ಕೋರುವ ಮನೋವೈಶಾಲ್ಯವನ್ನೂ ಪ್ರತಿಫಲಿಸುತ್ತದೆ ಈ ಶ್ಲೋಕ. ಶ್ಲೋಕ-ಮಂತ್ರಗಳು ಗೊತ್ತಿಲ್ಲದವರು ಈ ಭಾವವನ್ನು ಮನಸ್ಸಿನಲ್ಲಿ ತುಂಬಿಕೊಂಡು ಸಮರ್ಪಿಸಿದರೂ ಅಷ್ಟೇ ಫಲವೆಂಬುದು ಜ್ಞಾನಿಗಳು ಸೂಚಿಸಿರುವ ಕ್ರಮ.
ಇಲ್ಲಿ ಏಳಬಹುದಾದ ಒಂದು ಸಂಶಯವೆಂದರೆ, ಭಗವಂತನಿಗಾಗಿ ಧೂಪವನ್ನು ಸಿದ್ಧಪಡಿಸಿದಾಗ ಅದರ ವಾಸನೆ ನಮ್ಮ ಮೂಗಿಗೂಬರುವುದರಿಂದ ಅದನ್ನು ಭಗವತ್ಸಮರ್ಪಣೆ ಮಾಡಿದರೆ ಅಪಚಾರವಾಗುವುದಿಲ್ಲವೆ? ಇದಕ್ಕೆ ಶ್ರೀರಂಗಪ್ರಿಯಸ್ವಾಮಿಗಳ ಉತ್ತರ - ನಾವು ಉಪಯೋಗಿಸಿದ ಶೇಷವನ್ನು ಭಗವಂತನಿಗೆ ಅರ್ಪಿಸಬಾರದೆಂಬ ಭಾವನೆಯು ಸರಿಯಾಗಿದೆ. ಅಂತೆಯೇ ಧೂಪದ ಹೊಗೆಯು ಎದುರಾಳಿಯ ಮೂಗಿಗೆ ಬರುವುದೂ ಸಹಜವೇ ಆಗಿದೆ. ಪೂಜಿಸುವವನು ಜ್ಞಾನಿಯೇ ಆಗಿರುವಪಕ್ಷದಲ್ಲಿ ಆತನು ದೇವಭಾವದಲ್ಲೇ ಮುಳುಗಿ ಪೂಜಿಸುವುದರಿಂದ ಅವನು ಘ್ರಾಣೇಂದ್ರಿಯದಮೂಲಕ ಆಘ್ರಾಣಿಸುವ ಸುವಾಸನೆಯು ಒಳಗಿರುವ ಇಂದ್ರಿಯಾಧೀಶನನ್ನೇ ತಲುಪುತ್ತದೆ. ಆದ್ದರಿಂದ ದೋಷದ ಪ್ರಶ್ನೆಯೇ ಇಲ್ಲ. ಇನ್ನು, ಸಾಮಾನ್ಯರು ಮಾಡುವ ಪೂಜೆಯಲ್ಲಿ ಆಘ್ರಾಣಮಾಡಿದ್ದು 'ಚೆನ್ನಾಗಿದೆ'ಯೆಂದು ಅನುಭವಿಸಿ ಅದನ್ನು ಸಮರ್ಪಣೆ ಮಾಡುವುದು ಅಪಚಾರವೇ ಆಗುತ್ತದೆ. ಆದರೆ ಆಕಸ್ಮಿಕವಾಗಿ ಗಾಳಿಯಲ್ಲಿ ಮೂಗಿಗೆ ಪ್ರವೇಶಮಾಡಿಬಿಟ್ಟರೆ ಆಗ 'ಕೃಷ್ಣಾರ್ಪಣ' ಎಂದುಕೊಂಡರೆ ದೋಷವಾಗುವುದಿಲ್ಲ.
ಹೊರಗಡೆಯಲ್ಲಿ ಗಾಳಿಯು ಧೂಮವನ್ನು ಮೇಲಕ್ಕೆ ಒಯ್ಯುವಂತೆ ಧೂಮವನ್ನು ಒಳಕ್ಕೆ ಎಳೆದುಕೊಂಡಾಗ ಒಳಗಿರುವ ಪ್ರಾಣಮಾರುತವು ನಮ್ಮ ಭಾವನೆಗಳನ್ನು ಮೇಲಕ್ಕೆ ಪ್ರಾಣೇಶನಾದ ಪರಂಜ್ಯೋತಿಯಕಡೆಗೆ ಎಳೆಯುತ್ತದೆ. ಈ ಭಾವವನ್ನು ಒಳಗೂ ಹೊರಗೂ ತುಂಬಿಕೊಂಡು ಪೂಜೆಯನ್ನು ಮಾಡಿ ಭಗವಂತನಲ್ಲಿ ಮನೋಲಯಮಾಡುವುದೇ ಧೂಪೋಪಚಾರದ ಉದ್ದೇಶವಾಗಿದೆ.