Thursday, March 12, 2020

ಕಳ್ಳತನವು ಪಾಪವೇ? (Kaḷḷatanavu Papave ?)

ಲೇಖಕರು: ಶ್ರೀ ತಾರೋಡಿ ಸುರೇಶ  
(ಪ್ರತಿಕ್ರಿಯಿಸಿರಿ : lekhana@ayvm.in) 

ಸ್ನೇಹಿತನೊಬ್ಬ ಕಳ್ಳತನಕ್ಕೆ ಸಂಬಂಧಿಸಿದ ಹಾಗೆ ತನ್ನ ವಾದವನ್ನು ಮಂಡಿಸಿದ. ಚೌರ್ಯವೇಕೆ ತಪ್ಪು? ಒಬ್ಬ ವ್ಯಕ್ತಿಗೆ ಒಂದು ವಸ್ತುವಿನ ಅಗತ್ಯವಿದೆ ಎಂದಿಟ್ಟುಕೊಳ್ಳಿ. ಅದು ಇನ್ನೊಬ್ಬರ ವಶದಲ್ಲಿದೆ. ಬೇಡಿದರೂ ಆ ಇನ್ನೊಬ್ಬ ವ್ಯಕ್ತಿಯು ಅದನ್ನು ಕೊಡುತ್ತಾನೆಂಬ ನಂಬಿಕೆ ಕಿಂಚಿತ್ತೂ ಇಲ್ಲ. ಹೀಗಿರುವಾಗ ಕಳ್ಳನಾದವನು ಆ ವಸ್ತುವಿನ ಒಡೆಯನ ಗಮನ ತಪ್ಪಿಸಿ ಅದನ್ನು ಅಪಹರಿಸುತ್ತಾನೆ. ಹಾಗೆ ಅಪಹರಿಸಿ ತನ್ನ ಅಪೇಕ್ಷೆಯನ್ನು ಈಡೇರಿಸಿಕೊಳ್ಳುತ್ತಾನೆ. ಕಳ್ಳನಿಗೆ ಬದುಕುವ ಹಕ್ಕಿಲ್ಲವೆ? ಅವನನ್ನು ಕಳ್ಳ ಎಂದು ಅನ್ಯರು ಅಪಮಾನಿಸುವುದಾದರೂ ಹೇಗೆ ಸರಿ? ವಾಸ್ತವಿಕವಾಗಿ ನಾವು ಅವನನ್ನು ಅನುಕಂಪದಿಂದ ನೋಡಬೇಕು. ಕಳ್ಳತನದ ಕಾರಣವನ್ನು ಅನ್ವೇಷಿಸಬೇಕು ಮತ್ತು ಅವನ ಸಮಸ್ಯೆಯನ್ನು ಪರಿಹರಿಸಬೇಕು.ಹೀಗೆ ನಮ್ಮ ಸ್ನೇಹಿತನ ವಾಗ್ಘರಿಯು ಹರಿಯಿತು. ಈ ವಿಷಯವನ್ನು ನಾವು ತಲಸ್ಪರ್ಷಿಯಾಗಿಯೇ ಚಿಂತಿಸುವ ಅಗತ್ಯ ಒದಗಿತು. ಸಾಮಾನ್ಯವಾಗಿ ಚೌರ್ಯವು ಪಾಪ ಎಂಬ ಭಾವ ಸ್ವಾಭಾವಿಕವಾದದ್ದು. ಆದರೆ ಮೌಲಿಕವಾಗಿ, ಕಳ್ಳತನವೆಂದರೇನು? ಎಂಬುದನ್ನೇ ಮೊದಲಿಗೆ ವಿಮರ್ಶಿಸಬೇಕಾಗುವುದು. ಯಾರದೋ ಧನವನ್ನೋ ಅಥವಾ ಬೆಲೆಬಾಳುವ ವಸ್ತುವನ್ನೋ ಅವರ ಅನುಮತಿಯಿಲ್ಲದೆ ಅಥವಾ ಅರಿವಿಗೆ ಬಾರದಂತೆ ಅಪಹರಿಸುವುದು ಕಳ್ಳತನ ಎಂಬುದನ್ನು ಎಲ್ಲರೂ ಒಪ್ಪುತ್ತೇವೆ. ಆದರೆ ಈ ಕ್ರಿಯೆ ಕಳ್ಳನ ಮೇಲೆ ಮಾಡುವ ಪರಿಣಾಮವೇನು? ಕಳ್ಳತನವು ದೇಶದ ಕಾನೂನಿಗೆ ವಿರುದ್ಧವಾದುದು. ಆದ್ದರಿಂದ ಸಿಕ್ಕಿಬಿದ್ದರೆ ಶಿಕ್ಷೆಗೆ ಒಳಗಾಗುತ್ತಾನೆ. ಸಮಾಜದ ವ್ಯವಸ್ಥೆಯನ್ನು ಕೆಡಿಸುವುದರಿಂದ ಸಮಾಜವೂ ಅವನನ್ನು ಧಿಃಖರಿಸುತ್ತದೆ.

ಒಂದೊಮ್ಮೆ ಯಾರಿಗೂ ತಿಳಿಯದಿದ್ದರೆ ತೊಂದರೆಯಿಲ್ಲವಲ್ಲ ಎನ್ನಬಹುದು. ಹೊರಗಡೆಯಿಂದ ವ್ಯತ್ಯಾಸ ಕಾಣದಿದ್ದರೂ ಅವನ ಆತ್ಮಸಾಕ್ಷಿಯೇ ಅವನನ್ನು ಚುಚ್ಚುತ್ತದೆ. ಆದರೆ ಅದೂ ಅಭ್ಯಾಸವಾಗಿಬಿಟ್ಟರೆ ಆತ್ಮಸಾಕ್ಷಿಯ ಧ್ವನಿಯೂ ಕಾಲಕ್ರಮದಲ್ಲಿ ಇಂಗಿಹೋಗುವುದು. ನಮ್ಮ ಸ್ನೇಹಿತರ ವಾದವನ್ನು ಗಮನಿಸಿದಾಗ ಕಳ್ಳತನವು ತಪ್ಪಲ್ಲವೆಂದೇ ಭಾವಿಸಬೇಕಾಗುವುದು. ಅಂತಹದ್ದೇ ತರ್ಕ ಅಥವಾ ದುಸ್ತರ್ಕಗಳಿಂದ ಕಳ್ಳನೂ ತನ್ನ ಕೃತ್ಯ ಸರಿಯೆಂದೇ ಭಾವಿಸುವ ಸಮಾಧಾನ ಮಾಡಿಕೊಳ್ಳುವ ಸಾಧ್ಯತೆ ಇದ್ದೇ ಇದೆ.
ಆದರೆ ಕಳ್ಳನಾದರೂ ನಿಷ್ಪಕ್ಷಭಾವದಿಂದ ಗಮನಿಸಿದರೆ ಕಳ್ಳತನವು ಸರಿಯಲ್ಲ ಎಂಬ ತೀರ್ಮಾನಕ್ಕೆ ಬರಲು ಅವಕಾಶವಿದೆ. ಅಪಹರಿಸಿದ ಸಂಪತ್ತನ್ನು ಕಳ್ಳನು ತನ್ನ ಮನೆಯಲ್ಲಿ ಸುರಕ್ಷಿತವಾಗಿಡುವನಷ್ಟೆ. ಆಗ ಇನ್ನೊಬ್ಬ ಕಳ್ಳನು ಈ ಸಂಪತ್ತನ್ನು ಕದಿಯಲು ಯತ್ನಿಸಿದರೆ ಮೊದಲ ಕಳ್ಳನು ಅದನ್ನು ಒಪ್ಪದೆ, ಕಳ್ಳ-ಕಳ್ಳ ಎಂದು ಕೂಗುತ್ತಾ ಹಿಡಿಯುತ್ತಾನೆ. ಆದ್ದರಿಂದ ಇಬ್ಬರೂ ಒಂದು ಒಪ್ಪಂದಕ್ಕೆ ಬರಬೇಕಾಗುತ್ತದೆ. ಇನ್ನುಮೇಲೆ ನಾವಿಬ್ಬರೂ ಕಳ್ಳತನ ಮಾಡುವುದು ಬೇಡ. ಇಬ್ಬರೂ ನ್ಯಾಯವಾಗಿ ಸಂಪಾದಿಸಿ ಬದುಕೋಣ ಎನ್ನಬೇಕಾಗುತ್ತದೆ. ಇದು ಮಾತ್ರವೇ ಸಾಮಾಜಿಕ ಬಾಳ್ವೆಯ ಅಡಿಗಲ್ಲಾಗಬಹುದು. ಇದರ ಜೊತೆಗೆ ಕಳ್ಳನು ಇನ್ನಾವ ಬಗೆಯಲ್ಲಾದರೂ ಶಿಕ್ಷೆಗೆ ಒಳಪಡುವ ಸಂಭವವಿದೆಯೇ? ಚೌರ್ಯವು ಸಂಪತ್ತನ್ನು ಹೆಚ್ಚಿಸುವ ಮಾರ್ಗವಲ್ಲ. ಹೊಸ ಸಂಪತ್ತನ್ನು ಕಳ್ಳನು ಸೃಷ್ಟಿಸುತ್ತಿಲ್ಲ, ಮತ್ತು ದೇಶದ ಸಂಪತ್ತನ್ನು ಹೆಚ್ಚಿಸುತ್ತಿಲ್ಲ. ಅವನು ಅನೈತಿಕವಾದ ಮಾರ್ಗದಿಂದ ಸಂಪತ್ತನ್ನು ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸುತ್ತಿದ್ದಾನೆ ಅಷ್ಟೆ. ಇದರಿಂದಾಗಿ ಸಾಮಾಜಿಕವಾದ ವ್ಯವಸ್ಥೆಯೂ ಕೆಡುತ್ತದೆ. ಜೊತೆಗೆ ಚೌರ್ಯವು ಅಪ್ರಾಮಾಣಿಕವಾದ ಕ್ರಿಯೆಯಾಗಿದ್ದು ಆತ್ಮದ್ರೋಹದ, ಆತ್ಮವಂಚನೆಯ ಪಾಪಕ್ಕೆ ಎಡೆ ಮಾಡುತ್ತದೆ.

ಕಳ್ಳತನವು ಇನ್ನೂ ಅನೇಕ ಕಾರಣಗಳಿಂದ ಪಾಪವಾಗುತ್ತದೆ. ಒಬ್ಬನು ತನ್ನ ಮನೆಯಲ್ಲಿ ಸತ್ಕಾರ್ಯಕ್ಕೆ ವಿನಿಯೋಗಿಸಲು ಒಂದು ವಸ್ತುವನ್ನಿಟ್ಟುಕೊಂಡಿರುತ್ತಾನೆ ಎಂದಿಟ್ಟುಕೊಳ್ಳಿ. ಕಳ್ಳನೊಬ್ಬ ಅದನ್ನು ಅಪಹರಿಸಿದ. ಆಗ ಯಾವ ಸದುದ್ದೇಶಕ್ಕಾಗಿ ಆ ವಸ್ತುವಿನ ಬಳಕೆ ಆಗಬೇಕಿತ್ತೋ ಅದು ತಪ್ಪಿತು. ಇದರಿಂದ ಒದಗಿದ ಧರ್ಮದ್ರೋಹದ ಪಾಪಕ್ಕೆ ಕಳ್ಳನು ಪಾತ್ರನಾಗಬೇಕಾಯಿತು. ಹಾಗೆಯೇ ಅನೇಕ ನಿರಪರಾಧಿಗಳ ಮೇಲೂ ಈ ಕಳ್ಳತನದ ಆರೋಪ ಬರಬಹುದು. ನ್ಯಾಯಾಲಯದಲ್ಲಿ ನಿರಪರಾಧಿಯು ಶಿಕ್ಷೆಗೂ ಒಳಗಾಗಬಹುದು. ಇಂತಹವುಗಳನ್ನು ನಾವು ಪ್ರತಿನಿತ್ಯವೂ ನೋಡುತ್ತಲೇ ಇದ್ದೇವೆ. ಈ ಪಾಪವು ನಿಜವಾದ ಕಳ್ಳನ ಕೊರಳಿಗೆ ಸುತ್ತಿಕೊಳ್ಳುವುದು.

ಇದನ್ನೆಲ್ಲ ಸರಿ ಎಂದಿಟ್ಟುಕೊಂಡರೂ ಹೀಗೆ ಆಗದಂತೆ ನೋಡಿಕೊಳ್ಳುವ ಹೊಣೆ ಸರ್ಕಾರದ್ದಲ್ಲವೇ?  ನಿಜ: ಸರ್ಕಾರ, ಸಮಾಜ ಮತ್ತು ಪ್ರತಿ ವ್ಯಕ್ತಿಯ ಪಾತ್ರವೂ ಇದರಲ್ಲಿದೆ. ಎಲ್ಲರೂ ಸೇರಿ ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಚೆನ್ನಾಗಿ ವಿಮರ್ಶಿಸಿ ಸೂಕ್ತ ವ್ಯವಸ್ಥೆಯನ್ನು ತರಬೇಕು. ಶಾಸ್ತ್ರಗಳಲ್ಲಿಯೂ ಒಂದು ದಿನದ ಊಟವನ್ನು ಕದ್ದವನಿಗೆ ಶಿಕ್ಷೆಯನ್ನು ಹೇಳಿಲ್ಲ. ಆದರೆ ಸುವರ್ಣವನ್ನು ಕದ್ದವನಿಗೆ ತೀವ್ರತರವಾದ ಶಿಕ್ಷೆಯನ್ನು ವಿಧಿಸಿದೆ. ದೇವಾಲಯದ ಅಥವಾ ರಾಷ್ಟ್ರದ ಸಂಪತ್ತನ್ನು ಅಪಹರಿಸಿದವನಿಗೆ ಕಠೋರವಾದ ದಂಡವನ್ನು ವಿಧಿಸಿದೆ. ಏಕೆಂದರೆ ಸಾಮಾನ್ಯವಾಗಿ ಸುವರ್ಣವನ್ನು ಕದಿಯುವುದು ಯಾವುದೇ ಒಂದು ಆವಶ್ಯಕತೆಯನ್ನು ತೃಪ್ತಿಪಡಿಸಿಕೊಳ್ಳಲು ಆಗಿರುವುದಿಲ್ಲ. ಅದು  ಧನಸಂಗ್ರಹದ ಉದ್ದೇಶದಿಂದ ಕೂಡಿರುವುದೇ ಹೆಚ್ಚು. ಈ ಹಿನ್ನೆಲೆಯಲ್ಲಿ ಶ್ರೀರಂಗಮಹಾಗುರುಗಳು "ಕಳ್ಳತನವು ಸಂಶಯಾತೀತವಾಗಿ ಅಪರಾಧವಪ್ಪ" ಎಂದು ಘೋಶಿಸಿದ್ದರು. ಇವೆಲ್ಲಾ ಸರ್ವೇಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹದ್ದೇ. ಆದರೆ ಶಾಸ್ತ್ರಗಳು ಇನ್ನು ಕೆಲವು ತೀಕ್ಷ್ಣವಾದ ಚೌರ್ಯಗಳನ್ನು ಉಲ್ಲೇಖಿಸುತ್ತವೆ. ಇವುಗಳನ್ನು ಬಹುಗಂಭೀರವಾದ ಅಪರಾಧಗಳೆಂದೂ, ಪಾಪಕೃತ್ಯಗಳೆಂದೂ ಅವು ಎಚ್ಚರಿಸಿವೆ.

ಇತ್ತೀಚಿನರವರಾದ ಮಹಾತ್ಮರೊಬ್ಬರು "ಪ್ರಕೃತಿಯಿಂದ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಅದ್ದಕ್ಕಿಂತ ಹೆಚ್ಚು ನಿಸರ್ಗವನ್ನು ಬರಿದಾಗಿಸಬಾರದು. ಧನವನ್ನೋ, ವಸ್ತುಗಳನ್ನೋ ಅಗತ್ಯವನ್ನು ಮೀರಿ ಯಾವನು ಬಳಸುತ್ತಾನೆಯೋ ಅವನೂ ಕಳ್ಳನೇ" ಎಂದು ನುಡಿದಿದ್ದಾರೆ. ವಸ್ತುಗಳು ಅದರಲ್ಲಿಯೂ ಆಹಾರಪದಾರ್ಥಗಳನ್ನು ಅವಶ್ಯಕತೆಯನ್ನು ಮೀರಿ ಸೇವಿಸಬಾರದು ಹಾಗೆಯೇ ವ್ಯರ್ಥಗೊಳಿಸಬಾರದು. ಹೆಚ್ಚಾಗಿ ಉಳಿದಿದ್ದರೆ ಅದನ್ನು ದಾನ ಹಾಗೂ ಧರ್ಮಕಾರ್ಯಗಳಿಗೆ ಬಳಸಬೇಕು.

ಗೀತೆಯಲ್ಲಿ ಒಂದು ಮಾತು ಬರುತ್ತದೆ. "ನಮ್ಮ ಸಂಪತ್ತೆಲ್ಲವೂ ದೇವತೆಗಳ ಅನುಗ್ರಹದಿಂದ ಲಭ್ಯವಾದದ್ದು. ಅವರಿಗೆ ಸಮರ್ಪಿಸದೆ ಯಾರು ಕೇವಲ ತನಗಾಗಿ ಅವುಗಳನ್ನು ಸೇವಿಸುತ್ತಾನೆಯೋ ಅವನೂ ಕಳ್ಳನೇ ಸರಿ". ಇಂತಹ ಮೌಲಿಕವಾದ ಕಳ್ಳತನವನ್ನು ಯಾರೂ ಮಾಡಬಾರದು. ತನಗೆ ಯಾರಿಂದ ಅನುಗ್ರಹಿಸಲ್ಪಟ್ಟಿತೋ ಅಂತಹ ಶಕ್ತಿಗಳಿಗೆ ನಿವೇದಿಸಿ ವಿನಿಯೋಗಿಸುವವನು ನಿಜಕ್ಕೂ ಸಾತ್ವಿಕನೇ. ಆದರೆ ನಮ್ಮ ನಾಸ್ತಿಕವರ್ಗದವರು ಇದು ದೇವತೆಗಳಿಂದ ಕರುಣಿಸಲ್ಪಟ್ಟದ್ದು ಎನ್ನುವುದನ್ನು ಒಪ್ಪುವುದಿಲ್ಲ. ಇವೆಲ್ಲ ನಮ್ಮ ಬುದ್ಧಿಶಕ್ತಿಯಿಂದ ಮತ್ತು ಪರಿಶ್ರಮದಿಂದ ದೊರಕಿವೆ. ಆದ್ದರಿಂದ ದೇವತೆಗಳಿಗೆ ನಾವು ಕೃತಜ್ಞತೆಯನ್ನು ಏಕೆ ತೋರಿಸಬೇಕು? ಎಂದು ಅವರು ಪ್ರಶ್ನಿಸುತ್ತಾರೆ. ಅವರು ಹೇಳುತ್ತಿರುವ ವಿಷಯವನ್ನು ಅಲ್ಲಗಳೆಯುವಂತಿಲ್ಲ. ಆದರೆ ಮನುಷ್ಯಪ್ರಯತ್ನವು ಕೇವಲ ಭಾಗಶಃವಾದದ್ದು. ನಿಸರ್ಗದಲ್ಲಿರುವ, ಗಾಳಿ, ನೀರು, ನೆಲ, ಅಗ್ನಿ, ಔಷಧಿ ಇಂತಹ ಮೂಲಭೂತ ತತ್ವಗಳನ್ನು ಕೊಟ್ಟಿದ್ದು ಯಾರು?. ಕೊಟ್ಟವಳು ನಿಸರ್ಗಮಾತೆಯಲ್ಲವೇ. ನಾವು ಅವುಗಳನ್ನು ನಮ್ಮ ಅಗತ್ಯಕ್ಕನುಗುಣವಾಗಿ ಪರಿವರ್ತಿಸಿ ಬಳಸಿಕೊಂಡೆವು ಅಷ್ಟೆ. ಪರಿವರ್ತಿಸಲು ಬೇಕಾದ ಶ್ರಮ ಮಾತ್ರ ನಮ್ಮದು. ಉದಾಹರಣೆಗೆ, ನಿಸರ್ಗವು ದಯಪಾಲಿಸಿದ ಧಾನ್ಯಗಳನ್ನು, ನಿಸರ್ಗವೇ ನೀಡಿದ ನೀರು, ಗಾಳಿ, ಬೆಂಕಿ ಇತ್ಯಾದಿಗಳನ್ನು ಬಳಸಿ ನಮ್ಮ ಶ್ರಮದಿಂದ ಪಕ್ವಗೊಳಿಸಿಕೊಂಡಂತೆ. ಅದಕ್ಕಾಗಿ ಶ್ರಮಿಸುವ ದೇಹಶಕ್ತಿ, ಬುದ್ಧಿಶಕ್ತಿಗಳೂ ನಿಸರ್ಗದ ವರವೇ. ಇಂತಹ ನಿಸರ್ಗವನ್ನು ನಿಯಂತ್ರಿಸುತ್ತಿರುವ ದೈವೀಶಕ್ತಿಗಳನ್ನೇ ದೇವತೆಗಳು ಎಂದು ಕರೆಯಲಾಗಿದೆ. ಅದ್ದರಿಂದಲೇ ಅವರಿಗೆ ನಿವೇದಿಸದೆ ಬಳಸುವುದು ಕಳ್ಳತನವೇ ಆಗುತ್ತದೆ.

ಬ್ರಹ್ಮ ಜ್ಞಾನಿಗಳು ಇನ್ನೂ ಭಯಂಕರವಾದ ಚೌರ್ಯದ ಬಗ್ಗೆ ತಿಳಿಸುತ್ತಾರೆ. ಸಮಸ್ತ ಸೃಷ್ಟಿಗೂ ಬೀಜಪ್ರಾಯವಾಗಿ ಪರಮಾತ್ಮನಿದ್ದಾನೆ. ಅವನು ಜ್ಞಾನ, ಆನಂದ ಮತ್ತು ಅಮಲಸ್ವರೂಪನಾಗಿದ್ದಾನೆ ಎಂದು ಅವನನ್ನು ಸಾಕ್ಷಾತ್ಕರಿಸಿಕೊಂಡವರು ವರ್ಣಿಸುತ್ತಾರೆ. ಹಾಗೆ ಅವನನ್ನು ಕಂಡನುಭವಿಸದೆ, ನಮ್ಮ ಜೀವನವನ್ನು ಭರಿಸುವ ಮೂಲಶಕ್ತಿಯನ್ನು, ಮನಸ್ಸು ಎಂದಾಗಲೀ, ಇಂದ್ರಿಯಗಳು ಎಂಬುದಾಗಲೀ ಅಥವಾ ದೇಹ ಎಂಬುದಾಗಿ ಭಾವಿಸಿದರೆ ಅದು ಆತ್ಮಾಪಹಾರವಾಗುತ್ತದೆ. ಇದಕ್ಕಿಂತ ದೊಡ್ಡ ಚೌರ್ಯವಿಲ್ಲ. ಹಾಗೆಯೇ ಬೇರೆಲ್ಲ ಚೌರ್ಯಗಳಿಗೂ ಇದೇ ಮೂಲವಾಗಿರುತ್ತದೆ. ಇದನ್ನು ಯಾರೂ ಮಾಡಬಾರದು ಎಂದು ಬ್ರಹ್ಮಜ್ಞಾನಿಗಳು ಕರುಣೆಯಿಂದ ಎಚ್ಚರಿಸುತ್ತಲೇ ಇರುತ್ತಾರೆ.

ಸೂಚನೆ: 12/03/2020 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.