Thursday, March 19, 2020

ಯೋಗ ಭೋಗ ಸಮನ್ವಯ (Yoga Bhoga Samanvaya)

ಲೇಖಕರು: ಶ್ರೀ ರಾಜಗೋಪಾಲನ್
(ಮಿಂಚ್ಅಂಚೆ  lekhana@ayvm.in)


ನುಷ್ಯ ಎಲ್ಲ ಕೆಲಸ ಮಾಡುವುದು, ತನ್ನ ಸುಖಕ್ಕಾಗಿ. ಆ ಸುಖವನ್ನು ತನ್ನ ಇಂದ್ರಿಯಗಳ ಮೂಲಕವಷ್ಟೇ ಆತ ಅನುಭವಿಸಬಹುದು. ಕಣ್ಣಿಗೆ ನೋಟ, ಮೂಗಿಗೆ ಗಂಧ….ಇತ್ಯಾದಿ ಒಂದೊಂದು ಇಂದ್ರಿಯಕ್ಕೂ ಒಂದೊಂದು ವಿಷಯ ಬೇಕು. ಆಶ್ಚರ್ಯವೆಂದರೆ ಇಂದ್ರಿಯಗಳಿಗೆ ಬೇಕಾದ್ದನ್ನು ಕೊಟ್ಟಮೇಲೂ ತನಗಿನ್ನೂ ಪೂರ್ಣತೆ ಸಿಕ್ಕಿಲ್ಲವೆಂಬ ತುಡಿತ ಮನುಷ್ಯನನ್ನು ಕೆಲವೊಮ್ಮೆ ಬಾಧಿಸುತ್ತದೆ.

ನಮ್ಮ ದೇಶದ ದಾರ್ಶನಿಕರು ಹಾಗೂ ವೇದಾಂತಿಗಳು ಈ ಸಮಸ್ಯೆಗೆ ತಮ್ಮ ವಿಶಿಷ್ಟವಾದ ನೋಟವನ್ನು ಪರಿಹಾರದ ರೂಪದಲ್ಲಿ ಕೊಟ್ಟಿದ್ದಾರೆ. ಎಲ್ಲೋ ಹುಟ್ಟಿದ ನದಿ, ಸಮುದ್ರವನ್ನು ಸೇರುವವರೆಗೂ ತನ್ನ ಧಾವಂತವನ್ನು ಮುಂದುವರೆಸುವಂತೆ, ಮನುಷ್ಯನೂ ಕೂಡ ತನಗರಿವಿಲ್ಲದಂತೆಯೇ, ತನ್ನ ಮೂಲನೆಲೆಯಾದ ಭಗವಂತನನ್ನು ಸೇರುವವರೆಗೂ ಒಂದು ತುಡಿತವನ್ನು ಅನುಭವಿಸುತ್ತಲೇ ಇರುತ್ತಾನೆ. ಒಮ್ಮೆ ತನ್ನ ವಿಶ್ರಾಂತಿಧಾಮವನ್ನು ಕಂಡುಕೊಂಡಾಗಲಷ್ಟೆ ಮನುಷ್ಯ ಪೂರ್ಣತೃಪ್ತನಾಗಬಲ್ಲ ಎನ್ನುತ್ತಾರೆ, ದಾರ್ಶನಿಕರು. ರೋಗವೇನೆಂದು ಪತ್ತೆಯಾಗದೆ ಇದ್ದಾಗ ವೈದ್ಯನೇ ರೋಗಿಯ ಮೇಲೆ ಬೇರೆ ಬೇರೆ ಔಷಧಗಳನ್ನು ಪ್ರಯೋಗ ಮಾಡುತ್ತಿರುವಂತೆ, ಒಬ್ಬ ಜೀವಿಯು ಪೂರ್ಣಸುಖದ ತಾಣವನ್ನು ವಿಧವಿಧವಾಗಿ ಅರಸುತ್ತಲೇ ಇರುತ್ತಾನೆ; ಈ ಸಮಸ್ಯೆಗೆ ಪರಿಹಾರ, ದೇವದರ್ಶನ ಒಂದೇ ಎನ್ನುವ ವೇದಾಂತಿಗಳಲ್ಲಿ ಕೆಲವರು, ಲೌಕಿಕ ಭೋಗವನ್ನು ಬಿಟ್ಟ ಹೊರತು ಪಾರಲೌಕಿಕವಾದ ಭಗವಂತ ಸಿಗಲಾರ ಎಂದು ಎಚ್ಚರಿಸುತ್ತಲೇ ಬಂದಿದ್ದಾರೆ.

ಮನುಷ್ಯನಿಗಾದರೋ, ಇಂದ್ರಿಯಗಳ ಸೆಳೆತ ಪ್ರಕೃತಿ ಸಹಜವಾದದ್ದೇ. ಇವುಗಳನ್ನು ಆತ ಬಿಡಲಾರ. ಯತ್ನಪೂರ್ವಕವಾಗಿ ಬಿಡಲು ಹೋದರೆ, ವಿಶ್ವಾಮಿತ್ರಾದಿ ಋಷಿಗಳು ತೀವ್ರ ತಪಸ್ಸನ್ನು ಮಾಡುತ್ತಿದ್ದಾಗ, ಕಾಮಕ್ಕೋ ಕ್ರೋಧಕ್ಕೋ ವಶರಾದಂತೆ, ಕಷ್ಟಕ್ಕೆ ತುತ್ತಾಗುತ್ತಾನಷ್ಟೇ. ಅಧ್ಯಾತ್ಮ ಮಾರ್ಗದಲ್ಲಿ ಸಾಗುವ ಸಾಧಕನಿಗೆ, ಇಂದ್ರಿಯಗಳಿಗೆ ಬೇಕಾದ್ದನ್ನು ಕೊಡದಿರಲಾರದ ಚಿಂತೆ ಒಂದು ಕಡೆ; ಭೋಗವನ್ನು ಬಿಡಲಾಗಲಿಲ್ಲವಲ್ಲ ಎಂಬ ದುಃಖ ಮತ್ತೊಂದು ಕಡೆ, ಎಳೆಯುತ್ತದೆ.

ಇಂದ್ರಿಯಗಳ ಸ್ವಭಾವವನ್ನು ಬಲ್ಲ ಮಹಾತ್ಮರು "ಇಂದ್ರಿಯಗಳಿಗೆ ವಿಷಯಗಳನ್ನು ಕೊಡದಿರಲು ಯತ್ನಿಸಬೇಡಿ; ಇಂದ್ರಿಯಗಳಿಗೆ ಅವು ತಡೆಯುವಷ್ಟು ಭಗವದ್ವಿಷಯವನ್ನು ಕೊಟ್ಟು ಪಳಗಿಸಿ" ಎಂದಿದ್ದಾರೆ.
ಶ್ರೀ ಕುಲಶೇಖರ ಆಳ್ವಾರರು ತಮ್ಮ ಮುಕುಂದಮಾಲಾ ಸ್ತೋತ್ರದಲ್ಲಿ ಹೀಗೆಂದಿದ್ದಾರೆ-- 

"ಜಿಹ್ವೇ ಕೀರ್ತಯ ಕೇಶವಂ ಮುರರಿಪುಂ ಚೇತೋ ಭಜ ಶ್ರೀಧರಂ 
ಪಾಣಿ ದ್ವಂದ್ವ ಸಮರ್ಚಯ ಅಚ್ಯುತ ಕಥಾಃ ಶ್ರೋತ್ರದ್ವಯ ತ್ವಂ ಶೃಣು 
ಕೃಷ್ಣಂ ಲೋಕಯ  ಲೋಚನದ್ವಯ ಹರೇರ್ಗಚ್ಚ್ಛಾಂಘ್ರಿಯುಗ್ಮಾಲಯಂ 
ಜಿಘ್ರ ಘ್ರಾಣ ಮುಕುಂದಪಾದತುಲಸೀಂ ಮೂರ್ಧನ್ ನಮಾಧೋಕ್ಷಜಂ"

(ನಾಲಗೆಯೇ, ಕೇಶವನನ್ನು ಕೀರ್ತಿಸು; ಮನವೇ,  ಮುರಾರಿಯನ್ನು ಭಜಿಸು. ಕೈಗಳಿರಾ, ಶ್ರೀಧರನನ್ನು ಅರ್ಚಿಸಿರಿ; ಕಿವಿಗಳೇ, ಅಚ್ಯುತನ ಕಥೆಯನ್ನು ಕೇಳಿರಿ; ಕಣ್ಣುಗಳೇ, ಕೃಷ್ಣನನ್ನು ನೋಡಿ; ಕಾಲುಗಳೇ, ಹರಿಯ ಆಲಯಕ್ಕೆ  ಹೋಗಿ;  ಮೂಗೇ, ಮುಕುಂದನ ಪಾದಗಳ ಮೇಲಿಟ್ಟ  ತುಳಸಿಯನ್ನು ಆಘ್ರಾಣಿಸು; ತಲೆಯೇ, ಭಗವಂತನನ್ನು ನಮಿಸು)

ಶ್ರೀರಂಗ ಮಹಾಗುರುಗಳು ಯಾವ ನೋಟವನ್ನು ಇಟ್ಟುಕೊಂಡು ಬಾಳಬೇಕು ಎಂಬ ಬಗ್ಗೆ ಹೀಗೆ ಎಚ್ಚರಿಸಿದ್ದಾರೆ - "ಲೋಕಕ್ಕೆ ಬಂದ ಮೇಲೆ ಭೋಗಕ್ಕೆ ದೂರವಾಗಬೇಡಿ. 'ಯಾವುದು ತಾನೇ ಶಾಶ್ವತ?' ಎಂಬ ಒಣಮಾತಿನಿಂದ ಎಲ್ಲಾ ವಿಷಯಗಳನ್ನೂ ತಳ್ಳಬೇಡಿ.  ಹಾಗೆ ಆಗುವುದಾದರೆ,  ಈಶ್ವರ ಈ ಸೃಷ್ಟಿಯಲ್ಲಿ ಕಣ್ಣು, ಕಿವಿ, ನಾಲಿಗೆ ಮೊದಲಾದ ಇಂದ್ರಿಯಗಳನ್ನೂ ಕೊಟ್ಟು ಅವುಗಳ ವಿಷಯವನ್ನೂ ಏಕೆ ಕೊಟ್ಟಿದ್ದಾನೆ?  ಆದ್ದರಿಂದ ಇಂದ್ರಿಯಕ್ಕೆ ವಿಷಯ ಬೇಡ ಎಂದುಕೊಳ್ಳಬೇಡಿ. ನಾನ್ಸೆನ್ಸ್(nonsense) ಆದ ವರ್ತನೆ ಬೇಡ.  ಆತ್ಮಹಾನಿಯಾಗದ ರೀತಿಯಲ್ಲಿ ವಿಷಯವನ್ನು ಕೊಡಿ".

ಹೀಗೆ ಐಹಿಕ ವಿಷಯಗಳ ಜೊತೆ ಜೊತೆಗೇ ಭಗವಂತನನ್ನೂ ಸೇರಿಸಿ ಕೊಡುತ್ತಿದ್ದರೆ, ಭಗವಂತನ ರುಚಿ ಹತ್ತಿ, ಇಹ -ಪರಗಳೆರಡನ್ನೂ ಸಮತೋಲನದಲ್ಲಿ ಇಟ್ಟುಕೊಂಡು ಪೂರ್ಣ ಜೀವನವನ್ನು ಜೀವಿಗಳು ನಡೆಸಲು ಕಲಿಯಬಲ್ಲರು.

ಸೂಚನೆ: 19/03/2020 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.