ಲೇಖಕರು: ಶ್ರೀ ನರಸಿಂಹ ಭಟ್ಟ
ಯಥಾ ಕಂದುಕಪಾತೇನ ಉತ್ಪತತಿ ಆರ್ಯಃ ಪತನ್ನಪಿ |
ತಥಾ ತು ಅನಾರ್ಯಃ ಪತತಿ ಮೃತ್ಪಿಂಡಪತನಂ ಯಥಾ || -ಸುಭಾಷಿತ ನೀತಿಶತಕ ೮೩
ಅರ್ಥ-
ಹೇಗೆ ಒಂದು ಚೆಂಡು ಕೆಳಗೆ ಬಿದ್ದರೂ ಮತ್ತೆ ಪುಟಿದು ಮೇಲಕ್ಕೆ ಚಿಮ್ಮುತ್ತದೆಯೋ ಹಾಗೆಯೇ ಆರ್ಯನಾದ ಸತ್ಪುರುಷ. ಹೇಗೆ ಮಣ್ಣಿನ ಮುದ್ದೆಯು ಕೆಳಕ್ಕೆ ಬಿದ್ದರೆ ಮತ್ತೆ ಮೇಲಕ್ಕೆ ಏಳಲು ಸಾಧ್ಯವಿಲ್ಲವೋ ಅಂತಯೇ ಅನಾರ್ಯನಾದ ದುಷ್ಟ.
ವಿವರಣೆ-
ಇಲ್ಲಿ ಎರಡು ಬಗೆಯ ಮನುಷ್ಯರು ಇದ್ದಾರೆ, 'ಆರ್ಯ' ಮತ್ತು 'ಅನಾರ್ಯ' ಎಂದು. ಕರ್ತವ್ಯವನ್ನು ಮಾಡುವವನು, ಅಕರ್ತವ್ಯವನ್ನು ಮಾಡದವನು, ಪ್ರಕೃತವಾದದ್ದನ್ನು ಮಾಡುವವನಿಗೆ 'ಆರ್ಯ' ಎಂದು ಕರೆಯುತ್ತಾರೆ. ಇದಕ್ಕೆ ವಿರುದ್ಧಸ್ವಭಾವ ಉಳ್ಳವನು 'ಅನಾರ್ಯ'ನಾಗುತ್ತಾನೆ. ಪ್ರಕೃತಿಕ್ಷೇತ್ರದಲ್ಲಿ ಇಳಿದವನಿಗೆ ಪ್ರತಿಯೊಬ್ಬರಿಗೂ ಕಷ್ಟಗಳು ಬರುವುದು ಸಹಜ. ಎಂತಹ ಜ್ಞಾನಿಯಾದವನಿಗೂ ಅದು ತಪ್ಪಿದ್ದಲ್ಲ , ಎಂದರೆ ಸಾಮಾನ್ಯರ ಪಾಡೇನು!. ಒಳ್ಳೆಯ ನಡೆ-ನುಡಿ-ಆಚಾರ-ವಿಚಾರವನ್ನು ಪಾಲಿಸುವವನಿಗೂ ಕೂಡಾ ಕೆಲವೊಮ್ಮೆ ಕಷ್ಟ ಸಂಕಷ್ಟಗಳು ಬಂದು ಕುಸಿದು ಜೀವನದಲ್ಲಿ ಪಡಬಾರದ ಪಾಡನ್ನು ಅನುಭವಿಸಿ ಮತ್ತೆ ಏಳುವುದೇ ಕಷ್ಟ ಎಂಬ ಪರಿಸ್ಥಿತಿಗೆ ಬರುತ್ತಾನೆ. ಆದರೂ ಮುಂದೊಮ್ಮೆ ಮತ್ತೆ ಜೀವನದಲ್ಲಿ ಮೇಲೆದ್ದು ಸಂತೋಷವನ್ನು ಹೊಂದುವನು. ಚೆಂಡು ಕೆಳಕ್ಕೆ ಬಿದ್ದರೂ ಮತ್ತೆ ಮೇಲಕ್ಕೆ ಪುಟಿದೇಳುವುದು. ಚೆಂಡು ಹಗುರವಾಗಿದೆ. ಹಾಗಾಗಿ ಅದು ಭೂಮಿಯ ಆಕರ್ಷಣೆಗೆ ಒಳಪಡದೇ ಮೇಲಕ್ಕೆ ಏಳುತ್ತದೆ. ಸಜ್ಜನನಾದವನು ಯಾವುದೇ ಆಸೆ ಆಮಿಷಕ್ಕೆ ಆಕರ್ಷಿತನಾಗದೇ ಜೀವನದಲ್ಲಿ ಉತ್ಕರ್ಷವನ್ನು ಪಡೆಯುತ್ತಾನೆ. ಅದೇ ಮಣ್ಣಿನ ಮುದ್ದೆ ಭಾರವಾಗಿರುವುದರಿಂದ ಒಮ್ಮೆ ಬಿದ್ದರೆ ಮತ್ತೆ ಏಳಲು ಆಗುವುದೇ ಇಲ್ಲ. ಅಂತೆಯೇ ಕೆಟ್ಟ ಮನುಷ್ಯನು ಒಮ್ಮೆ ಜೀವನದಲ್ಲಿ ಕಷ್ಟಕ್ಕೆ ಸಿಲುಕಿ ಕೆಳಕ್ಕೆ ಬಿದ್ದರೆ ಮತ್ತೆ ಕಷ್ಟದಿಂದ ಪಾರಾಗಲು ಸಾಧ್ಯವೇ ಇಲ್ಲ. ಸಜ್ಜನನು ತಾನು ಮಾಡಿದ ಸತ್ಕಾರ್ಯದಿಂದ ಪಾಪವನ್ನೆಲ್ಲಾ ತೊಳೆದುಕೊಂಡು ಹಗುರನಾಗಿ ಎತ್ತರದ ಸ್ಥಾನಕ್ಕೆ ಏರುತ್ತಾನೆ. ದುರ್ಜನನು ತಾನು ಮಾಡಿದ ದುಷ್ಕೃತ್ಯದ ಫಲವಾಗಿ ಪಾಪಿಷ್ಠನಾಗಿ ಭಾರನಾಗಿ ಇಲ್ಲೇ ಕೆಳಗೆ ಬಿದ್ದು ನರಳುತ್ತಾನೆ. ಪುಣ್ಯ=ಲಘು, ಪಾಪ=ಗುರು.